ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಆಯೋಗ ರಚನೆಗೆ ವಿರೋಧ

Last Updated 3 ಜನವರಿ 2018, 9:16 IST
ಅಕ್ಷರ ಗಾತ್ರ

ಚಾಮರಾಜನಗರ: ರಾಷ್ಟ್ರೀಯ ವೈದ್ಯಕೀಯ ಆಯೋಗದ ರಚನೆ ವಿರೋಧಿಸಿ ಜಿಲ್ಲೆಯ ವಿವಿಧೆಡೆ ಮಂಗಳವಾರ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ಬಂದ್ ಮಾಡಿ ವೈದ್ಯರು ಪ್ರತಿಭಟನೆ ನಡೆಸಿದರು.

ನಗರದ ಜೆಎಸ್‌ಎಸ್‌ ಆಸ್ಪತ್ರೆ, ಬಸವರಾಜೇಂದ್ರ ಆಸ್ಪತ್ರೆ, ಕ್ಷೇಮಾ ಆಸ್ಪತ್ರೆ ಸೇರಿದಂತೆ ಕೊಳ್ಳೇಗಾಲ, ಗುಂಡ್ಲುಪೇಟೆಯಲ್ಲಿನ ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 6ರಿಂದಲೇ ಹೊರರೋಗಿಗಳ ವಿಭಾಗದ ಆರೋಗ್ಯ ಸೇವೆ ಸ್ಥಗಿತಗೊಳಿಸಲಾಗಿತ್ತು.

ವೈದ್ಯರ ಪ್ರತಿಭಟನೆ: ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಸಮಾವೇಶಗೊಂಡ ಭಾರತೀಯ ವೈದ್ಯಕೀಯ ಸಂಘದ ಸದಸ್ಯ ವೈದ್ಯರು ಹಾಗೂ ಸರ್ಕಾರಿ ವೈದಕೀಯ ಕಾಲೇಜಿನ ವಿದ್ಯಾರ್ಥಿಗಳು ಕಪ್ಪುಪಟ್ಟಿ ಧರಿಸಿಕೊಂಡು ಪ್ರತಿಭಟನೆ ನಡೆಸಿದರು. ಬಳಿಕ, ಜಿಲ್ಲಾಡಳಿತ ಭವನಕ್ಕೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರಿಗೆ ಮನವಿ ಸಲ್ಲಿಸಿದರು.

1956ರಲ್ಲಿ ಸ್ಥಾಪನೆಯಾದ ಭಾರತೀಯ ವೈದ್ಯಕೀಯ ಮಂಡಳಿ ಯನ್ನು ಮುಚ್ಚಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಜಾರಿಗೊಳಿಸುವ ಕಾಯ್ದೆಯನ್ನು ಸಂಸತ್‌ ಅಧಿವೇಶನದಲ್ಲಿ ಮಂಡಿಸಲಾಗುತ್ತಿದೆ. ಇದು ಅತ್ಯಂತ ದುರದೃಷ್ಪಕರ ಸಂಗತಿಯಾಗಿದ್ದು, ಕಾಯ್ದೆ ಜಾರಿಗೊಂಡ ದಿನ ವೈದ್ಯಕೀಯ ಕ್ಷೇತ್ರದ ಕರಾಳ ದಿನವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೈದ್ಯಕೀಯ ಶಿಕ್ಷಣದ ಗುಣಮಟ್ಟಕ್ಕೆ ಕೆಲವು ಕಾನೂನಾತ್ಮಕ ಬದಲಾವಣೆಗಳು ಬೇಕಾದರೆ ಹಾಲಿ ಇರುವ ವೈದ್ಯಕೀಯ ಮಂಡಳಿ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಬಹುದು. ಬದಲಿಗೆ ಮತ್ತೊಂದು ಕಾಯ್ದೆ ತರಲು ಹೊರಟಿರುವುದು ಸರಿಯಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರ ಶೇ 80ರಷ್ಟು ವೈದ್ಯಕೀಯ ಸೀಟುಗಳ ಶುಲ್ಕವನ್ನು ನಿಯಂತ್ರಿಸುವ ಹಕ್ಕು ಹೊಂದಿದೆ. ಕಾಯ್ದೆ ಜಾರಿಯಾದರೆ, ಈ ಪ್ರಮಾಣ ಶೇ 40ರಷ್ಟಕ್ಕೆ ಇಳಿಕೆಯಾಗಿ ಶೇ 60ರಷ್ಟು ವೈದ್ಯಕೀಯ ಸೀಟುಗಳ ಶುಲ್ಕ ನಿಗದಿಯ ಅವಕಾಶವನ್ನು ವೈದ್ಯಕೀಯ ಕಾಲೇಜುಗಳು ಪಡೆದುಕೊಳ್ಳುತ್ತವೆ. ಇದರಿಂದಾಗಿ ಮಕ್ಕಳನ್ನು ವೈದ್ಯರನ್ನಾಗಿ ಮಾಡಬೇಕೆಂಬ ಬಹುತೇಕ ಪೋಷಕರ ಆಸೆಗೆ ಪೆಟ್ಟು ಬೀಳುತ್ತದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಐಎಂಎ ಸಂಘದ ಅಧ್ಯಕ್ಷ ಡಾ.ಬಸವರಾಜೇಂದ್ರ, ನಿಕಟಪೂರ್ವ ಅಧ್ಯಕ್ಷ ಡಾ.ನಾಗಾರ್ಜುನ್, ಕಾರ್ಯದರ್ಶಿ ಡಾ. ಶ್ವೇತಾ, ಉಪಾಧ್ಯಕ್ಷ ಡಾ. ಮಹೇಶ್, ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಉಮೇಶ್ ಹಾಜರಿದ್ದರು.

ಕೊಳ್ಳೇಗಾಲದ ವರದಿ: ನಗರದ ಖಾಸಗಿ ಆಸ್ಪತ್ರೆಗಳಾದ ಆರ್.ಕೆ. ಆಸ್ಪತ್ರೆ, ಜನನಿ ಆಸ್ಪತ್ರೆ, ರವಿಕುಮಾರ್ ಆಸ್ಪತ್ರೆ, ಮುದ್ದುವೀರಪ್ಪ ಆಸ್ಪತ್ರೆ ಸೇರಿದಂತೆ ಎಲ್ಲ ಖಾಸಗಿ ಆಸ್ಪತ್ರೆಗಳ ಮುಷ್ಕರ ಯಶಸ್ವಿಯಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗದಲ್ಲಿ ಆರೋಗ್ಯ ಸೇವೆ ಸ್ಥಗಿತಗೊಳಿಸಿದರಿಂದ ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಜನ ಸಂದಣಿ ಹೆಚ್ಚಾಗಿತ್ತು.

ಕ್ಲಿನಿಕ್‌ಗಳು ಬಂದ್
ಯಳಂದೂರು: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಆಯೋಗ ರಚನೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿದ್ದ ಬಂದ್‌ಗೆ ಯಳಂದೂರು ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳವಾರ ಬೆಳಿಗ್ಗೆಯಿಂದಲೇ ಬಾಗಿಲು ಮುಚ್ಚುವ ಮೂಲಕ ಬಂದ್‌ಗೆ ಬೆಂಬಲ ಸೂಚಿಸಿದರು.

ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ಎಲ್ಲಾ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ ಬಂದ್ ಆಗಿತ್ತು. ಬಹುತೇಕ ಕ್ಲಿನಿಕ್‌ಗಳು ಮುಚ್ಚಿದ್ದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆ ಏರುಮುಖವಾಗಿತ್ತು. ಪಟ್ಟಣದಲ್ಲಿ ನೂರಾರು ರೋಗಿಗಳು ಸರದಿಯಲ್ಲಿ ನಿಂತು ಚಿಕಿತ್ಸೆಗಾಗಿ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT