ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಕರಕ್ಕೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

Last Updated 3 ಜನವರಿ 2018, 9:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಷ್ಟ್ರೀಯ ವೈದ್ಯ ಕೀಯ ಆಯೋಗ (ಎನ್‌.ಎಂ.ಸಿ) ಸ್ಥಾಪನೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐ.ಎಂ.ಎ) ಮಂಗಳವಾರ ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಐಎಂಎ ಕರ್ನಾಟಕ ಶಾಖೆ ಮುಷ್ಕರದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ಚಿಕಿತ್ಸಾ ವಿಭಾಗ (ಒಪಿಡಿ) ಬಂದ್ ಮಾಡಲು ನಿರ್ಧರಿಸಿತ್ತು. ಆದರೆ ಜಿಲ್ಲೆಯಲ್ಲಿ ಬಹುಪಾಲು ಆಸ್ಪತ್ರೆಗಳ ಒಪಿಡಿ ಮಂಗಳವಾರ ಎಂದಿನಂತೆ ಕಂಡು ಬಂದವು. ಮುಷ್ಕರಿಂದ ರೋಗಿಗಳಿಗೆ ತೊಂದರೆ ಉಂಟಾದ ವರದಿಯಾಗಿಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿನ ಚಿತ್ರಣ ಎಂದಿನಂತೆ ಕಂಡುಬಂತು.

ಮುಷ್ಕರದ ವೇಳೆ ಉಂಟಾಗಬಹು ದಾದ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ಸೂಚಿಸಲಾಗಿತ್ತು. ಐಎಂಎ ಜಿಲ್ಲಾ ಶಾಖೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಅವರಿಗೆ ಮನವಿ ಸಲ್ಲಿಸಿದರು.

ಉದ್ದೇಶಿತ ಮಸೂದೆಗೆ ವಿರೋಧ

ನಂತರ ಸುದ್ದಿಗೋಷ್ಠಿಯಲ್ಲಿ ಮಾ‌ತ ನಾಡಿದ ಐಎಂಎ ಜಿಲ್ಲಾ ಶಾಖೆ ಅಧ್ಯಕ್ಷ ಡಾ.ಎಂ.ವೆಂಕಟಾಚಲಪತಿ, ‘ಭಾರತೀಯ ವೈದ್ಯಕೀಯ ಮಂಡಳಿಯ (ಎಂ.ಸಿ.ಐ) ಜಾಗದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪಿಸುವ ಉದ್ದೇಶಿತ ಮಸೂದೆಗೆ ನಮ್ಮ ತೀವ್ರ ವಿರೋಧವಿದೆ. ಇದು ಅತ್ಯಂತ ದುರ ದೃಷ್ಟಕರ ಸಂಗತಿ. ಒಂದೊಮ್ಮೆ ಈ ಕಾಯ್ದೆ ಜಾರಿಗೆ ಬಂದರೆ ಅದರಿಂದ ವೈದ್ಯಕೀಯ ಕ್ಷೇತ್ರದ ಮೇಲೆ ದುಷ್ಪರಿ ಣಾಮ ಉಂಟಾಗಲಿದೆ’ ಎಂದರು.

‘ಕೆಲವರು ಮಾಡಿರಬಹುದಾದ ತಪ್ಪಿಗೆ ಒಂದು ಸಂಸ್ಥೆಯನ್ನೇ ಮುಚ್ಚಲು ಹೊರಟಿರುವುದು ಎಷ್ಟು ಸರಿ? ವೈದ್ಯಕೀಯ ಶಿಕ್ಷಣದ ಗುಣಮಟ್ಟದ ಉದ್ದೇಶವಿಟ್ಟು ಕೇಂದ್ರ ಇಂತಹ ನಿರ್ಧಾರ ಕೈಗೊಳ್ಳುತ್ತಿರುವುದೇ ಆದರೆ ಇದರ ಬದಲು ಎಂಸಿಐ ಕಾಯ್ದೆಗೆ ತಿದ್ದುಪಡಿ ತರಲಿ. ಅದನ್ನು ಬಿಟ್ಟು ಬೇರೊಂದು ಕಾಯ್ದೆ ಜಾರಿಗೆ ತರಲು ಹೊರಟಿರುವುದು ನೆಗಡಿ ಬೇಸತ್ತು ಮೂಗು ಕೊಯ್ದದಂತೆ ಆಗುತ್ತದೆ’ ಎಂದು ತಿಳಿಸಿದರು.

‘ಎನ್‌ಎಂಸಿಯ ಆಡಳಿತ ಮಂಡಳಿಯಲ್ಲಿ 64 ಸದಸ್ಯರು ಇರುತ್ತಾರೆ. ಈ ಪೈಕಿ 5 ಸದಸ್ಯರು ಮಾತ್ರ ವಿವಿಧ ವಿಭಾಗಗಳಿಂದ ಚುನಾಯಿತರಾಗುತ್ತಾರೆ. ಉಳಿದವರೆಲ್ಲರೂ ಕೇಂದ್ರ ಸರ್ಕಾರದ ನಾಮ ನಿರ್ದೇಶಿತ ಸದಸ್ಯರಾಗಿರುತ್ತಾರೆ. ಇದರಿಂದ ಎನ್‌ಎಂಸಿಯಲ್ಲಿ ಅಧಿಕಾರಶಾಹಿಗಳು ಹೆಚ್ಚಾಗಿ, ಆಡಳಿತ ಪಕ್ಷದ ಮಾತಿಗೆ ತಲೆಯಾಡಿಸುವ ಅಧಿಕಾರಿಗಳು ಮತ್ತು ಸದಸ್ಯರು ವೈದ್ಯಕೀಯ ಶಿಕ್ಷಣದ ಗುಣಮಟ್ಟ ಹಾಳು ಮಾಡುವ ಸಾಧ್ಯತೆ ಹೆಚ್ಚಾಗಿದೆ’ ಎಂದು ಆರೋಪಿಸಿದರು.

‘ಈಗಾಗಲೇ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಶೇ 80ರಷ್ಟು ಸೀಟುಗಳ ಶುಲ್ಕ ನಿಯಂತ್ರಿಸುವ ಅಧಿಕಾರವನ್ನು ರಾಜ್ಯ ಸರ್ಕಾರ ಹೊಂದಿದೆ. ಒಂದೊಮ್ಮೆ ಎನ್‌ಎಂಸಿ ಸ್ಥಾಪನೆಯಾದರೆ ಈ ಪ್ರಮಾಣ ಶೇ 40ಕ್ಕೆ ಇಳಿಕೆಯಾಗಲಿದೆ. ಜತೆಗೆ ಶೇ 60ರಷ್ಟು ಸೀಟುಗಳ ಶುಲ್ಕ ನಿಗದಿ ಅಧಿಕಾರ ಖಾಸಗಿ ಕಾಲೇಜುಗಳಿಗೆ ಸಿಗಲಿದೆ. ಇದರಿಂದ ಮಕ್ಕಳನ್ನು ವೈದ್ಯರನ್ನಾಗಿ ಮಾಡಬೇಕೆಂಬ ಪೋಷಕರ ಆಸೆಗೆ ಪೆಟ್ಟು ಬೀಳಲಿದೆ’ ಎಂದು ಹೇಳಿದರು.

‘ಎನ್‌ಎಂಸಿ ನಿಯಮಾವಳಿಗಳ ಪ್ರಕಾರ ಮುಂದಿನ ದಿನಗಳಲ್ಲಿ ಕೆಲವೇ ದಿನಗಳ ತರಬೇತಿ ಪಡೆದ ಇತರೆ ಪದ್ಧತಿಯ ವೈದ್ಯರೂ ಅಧಿಕೃತವಾಗಿ ಅಲೋಪತಿ ವೈದ್ಯಕೀಯ ಪದ್ಧತಿ ಅಳವಡಿಸಿಕೊಳ್ಳಲು ಅವಕಾಶ ಆಗಲಿದೆ. ಇದು ಅಪಾಯಕಾರಿ ಬೆಳವಣಿಗೆಯಾಗುತ್ತದೆ. ಅದರಿಂದ ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಪಕ್ಷಾತೀತವಾಗಿ ಎಲ್ಲ ರಾಜಕಾರಣಿಗಳು ಈ ಉದ್ದೇಶಿತ ಮಾರಕ ಕಾಯ್ದೆ ಜಾರಿಗೆ ಬರದಂತೆ ತಡೆಯಬೇಕು’ ಎಂದು ಒತ್ತಾಯಿಸಿದರು. ಐಎಂಎ ಜಿಲ್ಲಾ ಶಾಖೆ ಕಾರ್ಯದರ್ಶಿ ಡಾ.ವೈ.ಜೆ.ಸೌಮ್ಯಾ, ಖಜಾಂಚಿ ಡಾ.ಶರಣಬಸಪ್ಪ ಹಾಜರಿದ್ದರು.

* * 

ನೂತನ ಕಾಯ್ದೆಯು ವೈದ್ಯಕೀಯ ಶಿಕ್ಷಣದ ಗುಣ ಮಟ್ಟವನ್ನು ಪ್ರಪಾತಕ್ಕೆ ತಳ್ಳುತ್ತದೆ. ವೈದ್ಯಕೀಯ ವಿದ್ಯಾರ್ಥಿಗಳ ಮತ್ತು ವೈದ್ಯರ ಆತ್ಮವಿಶ್ವಾಸ ಕಿತ್ತುಕೊಳ್ಳುತ್ತದೆ ಡಾ.ಎಂ.ವೆಂಕಟಾಚಲಪತಿ ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT