ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಪಿಡಿ ಬಂದ್‌: ರೋಗಿಗಳಿಗೆ ತಟ್ಟದ ಬಿಸಿ

Last Updated 3 ಜನವರಿ 2018, 9:48 IST
ಅಕ್ಷರ ಗಾತ್ರ

ಗದಗ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌.ಎಂ.ಸಿ) ಸ್ಥಾಪನೆ ವಿರೋಧಿಸಿ ಜಿಲ್ಲೆಯಲ್ಲಿ ಮಂಗಳವಾರ ಖಾಸಗಿ ಆಸ್ಪತ್ರೆಗಳ ವೈದ್ಯರು ನಡೆಸಿದ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಮುಷ್ಕರದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದುದ್ದರಿಂದ ಮತ್ತು ಜಿಲ್ಲೆಯ ಬಹುತೇಕ ಜನ ಬಾದಾಮಿ ಬನಶಂಕರಿ ಹಾಗೂ ಎಲ್ಲಮ್ಮನಗುಡ್ಡದ ಜಾತ್ರೆಯಲ್ಲಿ ಭಾಗವಹಿಸಲು ತೆರಳಿದ್ದರಿಂದ ಮುಷ್ಕರದ ಕಾವು ಅಷ್ಟಾಗಿ ಕಂಡುಬರಲಿಲ್ಲ. ಗದಗ ಜಿಲ್ಲಾ ಆಸ್ಪತ್ರೆಯಲ್ಲೂ ಹೊರ ರೋಗಿಗಳ ದಟ್ಟಣೆ ಇರಲಿಲ್ಲ.

ಜಿಲ್ಲಾ ಕೇಂದ್ರ ಗದುಗಿನಲ್ಲೇ 50ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿದ್ದು, ಬಹುತೇಕ ಎಲ್ಲ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಚಿಕಿತ್ಸಾ ಸೌಲಭ್ಯ (ಒಪಿಡಿ) ಸ್ಥಗಿತಗೊಂಡಿದ್ದವು. ಗದಗ ಹೊರತುಪಡಿಸಿ ಇನ್ನುಳಿದ ತಾಲ್ಲೂಕು ಕೇಂದ್ರಗಳಲ್ಲಿ ವೈದ್ಯರ ಪ್ರತಿಭಟನೆಯ ಬಿಸಿ ಅಷ್ಟಾಗಿ ತಟ್ಟಲಿಲ್ಲ. ನರಗುಂದದಲ್ಲಿ ಬಹುತೇಕ ಖಾಸಗಿ ಆಸ್ಪತ್ರೆಗಳ ವೈದ್ಯರು ಭಾರತೀಯ ವೈದ್ಯಕೀಯ ಸಂಘಕ್ಕೆ (ಐ.ಎಂ.ಎ) ಬೆಂಬಲ ನೀಡದೆ ಮುಷ್ಕರದಿಂದ ಹೊರಗುಳಿದರು.

ಹೀಗಾಗಿ, ಅಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಲಿಲ್ಲ. ಲಕ್ಷ್ಮೇಶ್ವರ, ಮುಂಡರಗಿ, ರೋಣದಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ಬಾಗಿಲು ತೆರೆದಿದ್ದವು. ಹೀಗಾಗಿ ಹೊರರೋಗಿಗಳಿಗೆ ಯಾವುದೇ ರೀತಿಯ ಸಮಸ್ಯೆಗಳಾಗಲಿಲ್ಲ. ಕೆಲವೆಡೆ ಖಾಸಗಿ ಸ್ಕ್ಯಾನಿಂಗ್‌, ರಕ್ತನಿಧಿ, ಎಕ್ಸ್‌ರೇ, ರಕ್ತ ಪರೀಕ್ಷೆ ಕೇಂದ್ರಗಳು ಕಾರ್ಯನಿರ್ವಹಿಸಿದವು.

ಒಪಿಡಿ ಸ್ಥಗಿತಗೊಂಡಿದ್ದರೂ, ತುರ್ತು ವೈದ್ಯಕೀಯ ಸೇವೆ ಅಗತ್ಯ ಇದ್ದ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳ ವೈದ್ಯರು ಚಿಕಿತ್ಸೆ ನೀಡಿದರು. ಗದುಗಿನ ಖಾಸಗಿ ಆಸ್ಪತ್ರೆಗಳಿಗೆ ಹುಲಕೋಟಿ, ಡಂಬಳ, ಬಳಗಾನೂರು, ಮಲ್ಲಸಮುದ್ರ ಸೇರಿ ಗ್ರಾಮಾಂತರ ಪ್ರದೇಶಗಳಿಂದ ಬಂದಿದ್ದ ಕೆಲವರು, ಖಾಸಗಿ ಆಸ್ಪತ್ರೆಗಳು ಬಾಗಿಲು ಹಾಕಿರುವುದನ್ನು ಕಂಡು, ನಂತರ ಜಿಲ್ಲಾ ಕೇಂದ್ರದಿಂದ 5 ಕಿ.ಮೀ ದೂರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡರು.

‘ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ದಟ್ಟಣೆ ಎಂದಿಗಿಂತ ಕಡಿಮೆ ಇತ್ತು. ಯಾವುದೇ ರೀತಿಯ ಸಮಸ್ಯೆ ಎದುರಾಗಿಲ್ಲ. ತುರ್ತು ವೈದ್ಯಕೀಯ ಸೇವೆ ಒದಗಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದೆವು. ವೈದ್ಯರು, ಸಿಬ್ಬಂದಿಗೆ ರಜೆ ತೆಗೆದುಕೊಳ್ಳದೆ, ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು’ ಎಂದು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಮ್ಸ್‌) ನಿರ್ದೇಶಕ ಪಿ.ಎಸ್‌.ಭೂಸರೆಡ್ಡಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಭಾಗಶಃ ಬಂದ್

ನರಗುಂದ: ಭಾರತೀಯ ವೈದ್ಯಕೀಯ ಸಂಘ (ಐ.ಎಂ.ಎ) ಕರೆ ನೀಡಿದ್ದ ಮುಷ್ಕರಕ್ಕೆ ನರಗುಂದ ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಖಾಸಗಿ ವೈದ್ಯರಿಂದ ಪೂರ್ಣ ಬೆಂಬಲ ವ್ಯಕ್ತವಾಗಿಲ್ಲ. ಕೆಲವು ಆಸ್ಪತ್ರೆಗಳು ಮುಚ್ಚಿದ್ದರೆ, ಇನ್ನು ಕೆಲವು ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

‘ಈಗ ನಡೆಯುತ್ತಿರುವ ಮುಷ್ಕರವು ದೊಡ್ಡ ದೊಡ್ಡ ನರ್ಸಿಂಗ್‌ ಹೋಂಗಳಿಗೆ ಸೌಲಭ್ಯ ಪಡೆದುಕೊಳ್ಳುವುದಕ್ಕಾಗಿ ನಡೆಯುತ್ತಿದೆ. ಇದಕ್ಕೆ ನಮ್ಮ ಬೆಂಬ ಇಲ್ಲ’ ಎಂದು ವೈದ್ಯಕೀಯ ಸಂಘದ ತಾಲ್ಲೂಕು ಘಟಕದ ಸಹ ಕಾರ್ಯದರ್ಶಿ ಬಿಎಎಂಎಸ್‌ ವೈದ್ಯ ಎಂ.ಬಿ.ಹಿರೇಮಠ ಪ್ರತಿಕ್ರಿಯಿಸಿದರು.

ತಾಲ್ಲೂಕು ಆಡಳಿತಕ್ಕೆ ಮನವಿ

ರೋಣ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಸ್ಥಾಪನೆ ವಿರೋಧಿಸಿ ರೋಣ ಪಟ್ಟಣದ ಖಾಸಗಿ ವೈದ್ಯರ ಸಂಘದ ಸದಸ್ಯರು ಮಂಗಳವಾರ ಉಪ ತಹಶೀಲ್ದಾರ್‌ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

‘ಭಾರತೀಯ ವೈದ್ಯಕೀಯ ಪರಿಷತ್ತನ್ನು (ಎಂ.ಸಿ.ಐ) ರದ್ದುಗೊಳಿಸಿ, ‘ಎನ್ಎಂಸಿ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಇದು ಅತ್ಯಂತ ದುರದೃಷ್ಟಕರ. ಕಾಯ್ದೆ ಜಾರಿಗೆ ಬಂದರೆ ಅದು ಇಡೀ ವೈದ್ಯಕೀಯ ಕ್ಷೇತ್ರದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ನಾಮ ನಿರ್ದೇಶಿತ ಸದಸ್ಯರು ವೈದ್ಯಕೀಯ ಶಿಕ್ಷಣ ಗುಣಮಟ್ಟವನ್ನು ಹಾಳು ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ನೆಗಡಿ ಆದರೆ, ಮೂಗು ಕೊಯ್ಯುವ ಬದಲು, ‘ಎಂ.ಸಿ.ಐ’ ಬಲಪಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ಡಾ.ಎಸ್.ಬಿ.ಲಕ್ಕೋಳ ಹೇಳಿದರು.

ಡಾ.ಎಲ್.ಆರ್.ರೆಡ್ಡರ ಮಾತನಾಡಿ, ‘ಈ ವಿಚಾರವನ್ನು ಸಾರ್ವಜನಿಕರ ಹಿತದೃಷ್ಠಿಯಿಂದ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಆಯೋಗ ಸ್ಥಾಪನೆ ಮಾಡಬಾರದು’ ಎಂದು ಆಗ್ರಹಿಸಿದರು. ಆರ್.ಜಿ.ಮಲ್ಲಾಪುರ, ಎಲ್.ಡಿ.ಬಾಕಳೆ, ಎಸ್.ಎ.ನೀರಲಗಿ, ಸಿ.ವಿ.ಮಾಳಗಿ, ಜಿ.ಕೆ.ಕಾಳೆ ಇದ್ದರು.

ಬನಶಂಕರಿ ಜಾತ್ರೆ ಪರಿಣಾಮ; ರೋಗಿಗಳ ಸಂಖ್ಯೆ ಇಳಿಮುಖ

ಮಂಗಳವಾರ ಜಿಲ್ಲೆಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂತು. ಇದಕ್ಕೆ ಪ್ರಮುಖ ಕಾರಣ ಉತ್ತರ ಕರ್ನಾಟಕದ ಪ್ರಸಿದ್ಧ ಬಾದಾಮಿ ಬನಶಂಕರಿ ಜಾತ್ರೆ. ಬನದ ಹುಣ್ಣಿಮೆ ದಿನ ನಡೆಯುವ ಬನಶಂಕರಿ ತೇರಿನಲ್ಲಿ ಭಾಗವಹಿಸಲು ಜಿಲ್ಲೆಯಿಂದ ಸಾವಿರಾರು ಜನರು ಅಲ್ಲಿಗೆ ತೆರಳಿದ್ದರು. ‘ಹೀಗಾಗಿ ಮಂಗಳವಾರ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸಂಖ್ಯೆ ತೀರಾ ಕಡಿಮೆ ಇತ್ತು. ಒತ್ತಡ ಇರಲಿಲ್ಲ’ ಎಂದು ‘ಐಎಂಎ’ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಪಿ.ಡಿ. ತೋಟದ ಹೇಳಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ದಿನ ಸರಾಸರಿ 500ರಿಂದ 600 ಜನರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ. ಆದರೆ, ಮಂಗಳವಾರ ಈ ಸಂಖ್ಯೆ ನಿತ್ಯದ ಸರಾಸರಿಗಿಂತ ಕಡಿಮೆ ಇತ್ತು’ ಎಂದು ‘ಜಿಮ್ಸ್‌’ ನಿರ್ದೇಶಕ ಪಿ.ಎಸ್‌. ಭೂಸರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ‘ಒಪಿಡಿ’ ಸೌಲಭ್ಯ<br/>ವನ್ನು ಸಂಜೆ 6ರ ತನಕ ವಿಸ್ತರಿಸಲಾಗಿತ್ತು. ದಟ್ಟಣೆ ಇರಲಿಲ್ಲ. 400 ಜನ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದರು
ಪಿ.ಎಸ್‌.ಭೂಸರೆಡ್ಡಿ
ಜಿಮ್ಸ್‌ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT