ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ರಾಜ್ಯಮಟ್ಟದ ಪಶುಮೇಳ

Last Updated 3 ಜನವರಿ 2018, 9:54 IST
ಅಕ್ಷರ ಗಾತ್ರ

ಅರಕಲಗೂಡು: ಪಟ್ಟಣದಲ್ಲಿ ಜ. 4ರಂದು ನಡೆಯುವ ರಾಜ್ಯಮಟ್ಟದ ಪ್ರಥಮ ಪಶುಮೇಳ ಹಾಗೂ ಇದರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಿರುವ ಕಾರಣ ಸಿದ್ದತೆಗಳು ಭರದಿಂದ ಸಾಗಿದೆ.

ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಪಶುಮೇಳ ನಡೆಯುತ್ತಿದ್ದು, ಕ್ರೀಡಾಂಗಣದಲ್ಲಿ ಭರದಿಂದ ಸಿದ್ಧತೆ ನಡೆದಿವೆ. ವಿವಿಧ ಜಿಲ್ಲೆಗಳು, ನೆರೆ ರಾಜ್ಯಗಳಿಂದಲೂ ವಿವಿಧ ತಳಿಗಳ ಜಾನುವಾರು ಬರುವ ನಿರೀಕ್ಷೆಯಿದೆ.

ಹಸು, ಹೋರಿ, ಎಮ್ಮೆ, ಕೋಣ, ಕುರಿ, ಮೇಕೆ, ಹಂದಿ, ಮೊಲ ಮುಂತಾದ ವಿವಿಧ ಸಾಕುಪ್ರಾಣಿಗಳ ಪ್ರದರ್ಶನ ಏರ್ಪಡಿಸಿದ್ದು ಇದರ ಜೊತೆಗೆ ವೈಜ್ಞಾನಿಕ ಸಾಕಣೆ, ಹೈನು ರಾಸುಗಳಲ್ಲಿ ಶುದ್ಧಹಾಲಿನ ಉತ್ಪಾದನೆ, ಸಂಸ್ಕರಣೆ, ಮಾರಾಟ, ಮೌಲ್ಯ ವರ್ಧನೆ, ಜಾನುವಾರುಗಳ ಆರೋಗ್ಯ ಸಂರಕ್ಷಣೆ, ಮೇವಿನ ಬೆಳೆಗಳು ಮತ್ತು ನಿರ್ವಹಣೆ ಕುರಿತು ಮಾಹಿತಿ ನೀಡಲಾಗುವುದು.

ಅಲ್ಲದೆ, ಕೃಷಿಕರು ತಜ್ಞರೊಂದಿಗೆ ಸಂವಾದ ನಡೆಸಲು ಅವಕಾಶವಿದೆ. ರೈತರು ತಾವು ಸಾಕಣೆ ಮಾಡಲು ಬಯಸುವ ತಳಿಗಳ ಪಶುಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳಿಂದ ರೈತರಿಗೆ ದೊರಕುವ ಸೌಲಭ್ಯಗಳ ಕುರಿತು ಪ್ರದರ್ಶನ ಮತ್ತು ಮಾಹಿತಿ ನೀಡುವ ಸಂಗಡ ರೈತರಿಗೆ ಹಾಲು ಕರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಸ್ಪರ್ಧೆಯ ಪ್ರಥಮ ಸ್ಥಾನ ವಿಜೇತರಿಗೆ ₹ 1 ಲಕ್ಷ, ದ್ವಿತೀಯ ಬಹುಮಾನವಾಗಿ ₹ 75 ಸಾವಿರ, ತೃತೀಯ ಬಹುಮಾನವಾಗಿ ₹ 50 ಸಾವಿರ ಹಾಗೂ ₹ 25ಸಾವಿರ ಸಮಾಧಾನಕರ ಬಹುಮಾನವಿದೆ. ಮಿಶ್ರತಳಿ ಹಾಗೂ ದೇಶಿ ತಳಿಗಳ ಕರುಗಳು, ಜಾನುವಾರುಗಳ ಹಾಗೂ ಶ್ವಾನ ಪ್ರದರ್ಶನವೂ ನಡೆಯಲಿದೆ.

ರಾಸುಗಳ ಪ್ರದರ್ಶನಕ್ಕಾಗಿ 200 ಸ್ಟಾಲ್‌ ತೆರೆಯಲಾಗಿದೆ. ಮೇವು, ದಿನದ 24 ಗಂಟೆ ವಿದ್ಯುತ್, ಕುಡಿಯುವ ನೀರು, ಪಶುಗಳಿಗೆ ಹಾಗೂ ಜನರಿಗೆ ವೈದ್ಯಕೀಯ ಸೌಲಭ್ಯ ಇದ್ದು, ಪಶುಗಳೊಂದಿಗೆ ಬರುವ ರೈತರಿಗೆ ತಂಗಲು ಸ್ಥಳಾವಕಾಶ,ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ.

ಮೇಳ ವೀಕ್ಷಿಸಲು ಬರುವ ರೈತರಿಗೆ ಬೆಳಿಗ್ಗೆ ಹಾಲು, ಮಧ್ಯಾಹ್ನ ಮಜ್ಜಿಗೆ, ಸಂಜೆ ಮೊಟ್ಟೆ ವಿತರಿಸಲಾಗುವುದು. ಕುಸ್ತಿ ಪಂದ್ಯ, ಗೀತಗಾಯನ ಕಾರ್ಯಕ್ರಮಗಳೂ ಇರಲಿವೆ. ಮೂರು ದಿನ ನಡೆಯುವ ಮೇಳದ ಉಸ್ತುವಾರಿಯನ್ನು ಸಚಿವ ಎ.ಮಂಜು ಹೊಂದಿದ್ದು, ಸಚಿವರಾದ ವಿನಯ್‌ ಕುಲಕರ್ಣಿ, ಎಚ್‌.ಎಂ.ರೇವಣ್ಣ, ಪ್ರಿಯಾಂಕ್‌ ಖರ್ಗೆ ಅವರು ಸಮಾರಂಭದಲ್ಲಿ ಭಾಗವಹಿಸುವರು.

* * 

ಹೈನುಗಾರಿಗೆ ಮತ್ತು ಪಶುಸಾಕಣೆ ಲಾಭದಾಯಕ ಉದ್ಯಮವಾಗಿ ಬೆಳೆಯುತ್ತಿದೆ,. ಈ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿ ಒದಗಿಸಿ ಅಭಿವೃದ್ಧಿಗೆ ಉತ್ತೇಜಿಸುವುದು ಇದರ ಉದ್ದೇಶ
ಎ.ಮಂಜು ಪಶುಸಂಗೋಪನೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT