ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡುಕರ ತಾಣ ಈಶ್ವರನಗರ ಉದ್ಯಾನ?

Last Updated 3 ಜನವರಿ 2018, 10:00 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ನಮ್ಮ ವಾರ್ಡ್‌ನಲ್ಲಿ ಸ್ವಚ್ಛತೆ ಇದೆ. ಉತ್ತಮ ರಸ್ತೆ, ಚರಂಡಿಗಳೂ ಇವೆ. ಆದರೆ, ವಾರ್ಡ್‌ನಲ್ಲಿರುವ ಉದ್ಯಾನ ಅವ್ಯವಸ್ಥೆಯ ತಾಣವಾಗಿದೆ. ಅಲ್ಲಿ ಹಂದಿಗಳು, ಕುಡುಕರ ಹಾವಳಿ ಹೆಚ್ಚಾಗಿದೆ’ ಇದು ಪಟ್ಟಣದ ಹಳೇ ಮಾಗೋಡ ರಸ್ತೆಯ ಈಶ್ವರನಗರ ಉದ್ಯಾನ ಕುರಿತು 31ನೇ ವಾರ್ಡ್‌ನ ನಿವಾಸಿಗಳು ಹೇಳುವ ಮಾತುಗಳು.

ಬೆಳವಿಗಿ ಆಸ್ಪತ್ರೆಯಿಂದ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿರವ ಈ ಉದ್ಯಾನದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆ. ಉದ್ಯಾನವು ಕಲ್ಲು–ಮಣ್ಣಿನ ಗುಡ್ಡೆ, ಜಾಲಿ ಮುಳ್ಳಿನಿಂದ ಆವೃತವಾಗಿದೆ. ರಾತ್ರಿ ಹೊತ್ತು ಅನೈತಿಕ ಚಟುವಟಿಕೆ ಮತ್ತು ಕುಡುಕರ ಹಾವಳಿ ಹೆಚ್ಚಿದೆ ಎಂದು ಪ್ರಕಾಶಗೌಡ ಪಾಟೀಲ ದೂರುತ್ತಾರೆ.

‘ಚಳಿಗಾಲವಾದ್ದರಿಂದ ಸಂಜೆ ಬೇಗ ಕತ್ತಲು ಆವರಿಸುತ್ತದೆ. ಬೆಳಿಗ್ಗೆ 6.30 ತನಕವೂ ಕತ್ತಲೆ ಇರುತ್ತದೆ. ಬೆಳಗಿನ ಜಾವ ಮತ್ತು ಸಂಜೆ ವಾಯು ವಿಹಾರಕ್ಕೆ ಹೋಗುವ ಮಹಿಳೆಯರು ಉದ್ಯಾನದ ಬಳಿ ಜೀವ ಕೈಲಿ ಹಿಡಿದುಕೊಂಡು ಹೋಗುವಂತಾಗಿದೆ. ಈಚೆಗೆ ಕಳ್ಳರ ಕಾಟ ಹೆಚ್ಚಾಗಿದೆ’ ಎಂದು ಶಿವು ಯಲವದಹಳ್ಳಿ ತಿಳಿಸಿದರು.

ಹೆಸರಿಗಷ್ಟೇ ಗಿಡ: ವಲಯ ಅರಣ್ಯ ಇಲಾಖೆಯಿಂದ 2012ರಲ್ಲಿ 0.6 ಕಿಮೀ ವಿಸ್ತೀರ್ಣದಲ್ಲಿ ಬೇವು, ಹೊಂಗೆ, ಬಂಗಾಳಿ, ಹುಣಸೆ, ಕಾಡು ಬದಾಮಿ, ಗುಲ್‌ಮೊಹರ್‌ ಸೇರಿದಂತೆ 1,200 ವಿವಿಧ ಜಾತಿಯ ಸಸಿಗಳನ್ನು ನೆಟ್ಟು ನೆಡುತೋಪು ಮಾಡಲಾಗಿದೆ ಎಂದು ಅರಣ್ಯ ಇಲಾಖೆಯಿಂದ ಬೋರ್ಡ್‌ ಹಾಕಲಾಗಿದೆ. ಆದರೆ, ಉದ್ಯಾನದ ತುಂಬೆಲ್ಲ ತುಂಬಿರುವುದು ಜಾಲಿ ಮುಳ್ಳು, ಪಾರ್ಥೇನಿಯಂ ಮಾತ್ರ. ಆಳೆತ್ತರ ಬೆಳೆದಿರುವ ಪಾರ್ಥೇನಿಯಂನಲ್ಲಿಯೇ ಮಕ್ಕಳು ಆಟವಾಡುತ್ತಾರೆ. ಅದರಿಂದ ಹಲವರಿಗೆ ಕೆರೆತ ಉಂಟಾದ ಪ್ರಕರಣಗಳೂ ವರದಿಯಾಗಿವೆ.

ನಾಮಕರಣಕ್ಕಾಗಿ ಒಲವು: ಈ ಉದ್ಯಾನಕ್ಕೆ ಭಗತ್‌ಸಿಂಗ್‌ ಹೆಸರು ನಾಮಕರಣ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹ. ಈ ಸಂಬಂಧ ಸ್ಥಳೀಯ ನಿವಾಸಿಗಳು ಸಭೆ ಸೇರಿ ಸರ್ವಾನುಮತದ ನಿರ್ಣಯ ಕೈಗೊಂಡು ರವಾನಿಸಿದ್ದರು. ಆದರೆ, ಈಗಲೂ ನಾಮಕರಣ ಆಗಿಲ್ಲ.

ವಿಳಾಸ ಹೇಳುವುದೇ ಸಮಸ್ಯೆ: ‘ವಾರ್ಡ್‌ನ ರಸ್ತೆಗಳಿಗೆ ಹೆಸರಿಲ್ಲ.ಹೀಗಾಗಿ ವಿಳಾಸ ಹೇಳಲು ಇಲ್ಲಿನ ನಿವಾಸಿಗಳು ಪರದಾಡುತ್ತಾರೆ. ಉದ್ಯಾನ ಅಭಿವೃದ್ಧಿ ಪಡಿಸಿ ಅದಕ್ಕೆ ಭಗತ್‌ಸಿಂಗ್‌ ಉದ್ಯಾನ ಎಂದು ನಾಮಕರಣ ಮಾಡಿದರೆ, ವಿಳಾಸ ಹೇಳಲು ನೆರವಾಗಬಹುದು’ ಎನ್ನುತ್ತಾರೆ ಪ್ರಕಾಶಗೌಡ ಪಾಟೀಲ.

* * 

ಈಶ್ವರನಗರ ಉದ್ಯಾನಕ್ಕೆ ಭಗತ್‌ಸಿಂಗ್ ಹೆಸರಿಡಬೇಕು. ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಹಾಗೂ ನಗರಸಭೆಗೆ ಮನವಿ ಮಾಡಿದ್ದೇವೆ
ಪ್ರಕಾಶಗೌಡ ಪಾಟೀಲ
ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT