ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲೂರಿನಲ್ಲಿ ಅಕ್ರಮ ಗಣಿಗಾರಿಕೆ ಆರೋಪ

Last Updated 3 ಜನವರಿ 2018, 10:12 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಸಮೀಪದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು ಗ್ರಾಮದಲ್ಲಿ ಪರವಾನಗಿ ಪಡೆಯದ ಜಾಗದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ದೂರಿನ ಮೇರೆಗೆ ಮಂಗಳವಾರ ಬೆಳಿಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಪರಿಸರ ಮಾಲಿನ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಕಲ್ಲೂರು ಗ್ರಾಮದಲ್ಲಿ ಸ್ಕಂದ ಗ್ರಾನೈಟ್ ಎಂಬ ಹೆಸರಿನಲ್ಲಿ ಸರ್ವೆ ನಂಬರ್‌ 81/4ರ 12 ಎಕರೆ ಜಾಗದಲ್ಲಿ ಕೇವಲ 2 ಎಕರೆಗೆ ಮಾತ್ರ ಗಣಿಗಾರಿಕೆ ಮಾಡಲು ಅನುಮತಿ ದೊರೆತ್ತಿದೆ. ಆದರೆ, 5 ಎಕರೆಗಿಂತ ಹೆಚ್ಚು ಜಾಗದಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂದು ಈಚೆಗೆ ನಡೆದ ಕೊಡಗರಹಳ್ಳಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆರೋಪಿಸಿದ್ದರು.

ಅಲ್ಲದೇ ಪಕ್ಕದಲ್ಲಿರುವ ಬಸವೇಶ್ವರ ದೇವಸ್ಥಾನಕ್ಕೆ ಸೇರಿದ ಸರ್ವೆ ನಂಬರ್‌ 80ರ ಜಾಗವನ್ನು ಸಹ ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು.

ಮನವಿ ಸ್ವೀಕರಿಸಿದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ಬಾಸ್ ಅವರು, ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದರು.

ಅದರಂತೆ ಮಂಗಳವಾರ ಬೆಳಿಗ್ಗೆ ಸೋಮವಾರಪೇಟೆ ತಹಶೀಲ್ದಾರ್‌ ಮಹೇಶ್, ಕಂದಾಯ ಪರಿವೀಕ್ಷಕ ಶಿವಪ್ಪ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾದ ನಾಗೇಂದ್ರ ಪ್ರಸಾದ್, ರೇಶ್ಮಾ, ಸರ್ವೇ ಅಧಿಕಾರಿ ಮಾಗಡಿ ಕೆಂಪೆಗೌಡ ಸ್ಥಳಕ್ಕೆ ಭೇಟಿ ನೀಡಿ ಸರ್ವೆ ನಡೆಸಿ ಪರಿಶೀಲಿಸಿದರು.

ನಂತರ ಪ್ರತಿಕ್ರಿಯಿಸಿದ ಮಹೇಶ್, ಗ್ರಾಮಸ್ಥರ ದೂರಿನ ಅನ್ವಯ ಸ್ಥಳದ ಸರ್ವೆ ನಡೆದಿದೆ. ಇಲಾಖೆ ಗುರುತಿಸಿರುವ ಜಾಗದಲ್ಲಿಯೇ ಗಣಿಗಾರಿಕೆ ನಡೆಯುತ್ತಿದೆ. ದೇವಸ್ಥಾನಕ್ಕೆ ಸಂಬಂಧಿಸಿದ ಜಾಗವನ್ನು ಅತಿಕ್ರಮಣ ಮಾಡಿರುವ ಯಾವುದೇ ಮಾಹಿತಿ ಇಲ್ಲ. ವರದಿಯನ್ನು ಜಿಲ್ಲಾಧಿಕಾರಿಗೆ ನೀಡಲಾಗುವುದು ಎಂದರು.

ತರಾಟೆ ತೆಗೆದುಕೊಂಡ ಗ್ರಾಮಸ್ಥರು: ಗಣಿಗಾರಿಕೆ ನಡೆಯುತ್ತಿದ್ದ ಸ್ಥಳವನ್ನು ಪರಿಶೀಲಿಸಿ ವಾಪಸಾಗುತ್ತಿದ್ದ ತಹಶೀಲ್ದಾರ್‌ ವಾಹನವನ್ನು ತಡೆಹಿಡಿದ ಬಸವೇಶ್ವರ ದೇವಸ್ಥಾನದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು, ‘ನಾವು ನೀಡಿರುವ ದಾಖಲೆಯನ್ನು ಪರಿಶೀಲಿಸಿ, ದೇವಾಲಯದ ಜಾಗವನ್ನು ಅತಿಕ್ರಮಣ ಮಾಡಿದ್ದಾರೆ.
ಕೂಡಲೇ ನ್ಯಾಯ ಒದಗಿಸಬೇಕು. ಜಂಟಿ ಸರ್ವೆ ಮಾಡಿಸಿ’ ಎಂದು ಪಟ್ಟುಹಿಡಿದರು.

ಬಸವೇಸ್ವರ ದೇವಸ್ಥಾನ ಸಮಿತಿಯ ಪದಾಧಿಕಾರಿ ಎಂ.ಎನ್.ನಾಣಯ್ಯ, ‘ಅನೇಕ ಬಾರಿ ಸಂಬಂಧಿಸಿದ ಇಲಾಖೆಗಳಿಗೆ ಪತ್ರ ಬರೆದು ದೂರು ನೀಡಲಾಗಿದ್ದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ದೇವಾಲಯದ ಬೇಲಿಯನ್ನು ಕಡಿದು ಹಾಕಿ, ಜಾಗ ಅತಿಕ್ರಮಣ ಮಾಡಲಾಗಿದೆ’ ಎಂದರು. ಕೊಡಗರಹಳ್ಳಿ ಗ್ರಾ.ಪಂ.ಅಧ್ಯಕ್ಷ ಅಬ್ಬಾಸ್, ಗ್ರಾಮಸ್ಥರಾದ ಕೆ.ಜಿ.ಲಿಂಗರಾಜು, ತಿಮ್ಮಯ್ಯ, ದೇವಸ್ಥಾನದ ಟ್ರಸ್ಟಿಗಳು ಇತರರು ಇದ್ದರು.

* *

ಇಲಾಖೆ ಗುರುತಿಸಿರುವ ಜಾಗದಲ್ಲಿಯೇ ಗಣಿಗಾರಿಕೆ ನಡೆಯುತ್ತಿದೆ. ದೇವಸ್ಥಾನಕ್ಕೆ ಸಂಬಂಧಿಸಿದ ಜಾಗವನ್ನು ಅತಿಕ್ರಮಣ ಮಾಡಿರುವ ಯಾವುದೇ ಮಾಹಿತಿ ಇಲ್ಲ.
ಮಹೇಶ್‌, ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT