ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕರೆಯ ಆತಿಥ್ಯಕ್ಕೆ ಕರೆದಿಹನು ಗವಿಸಿದ್ದ

Last Updated 3 ಜನವರಿ 2018, 10:23 IST
ಅಕ್ಷರ ಗಾತ್ರ

ಕೊಪ್ಪಳ: ಇಂದು ಗವಿಸಿದ್ದೇಶ್ವರ ಸ್ವಾಮಿ ತೇರನೇರಲು ಸಜ್ಜಾಗಿದ್ದಾನೆ. ಅದಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ. ಮಠದ ಆವರಣದಲ್ಲಿ ಎಲ್ಲ ಸಿದ್ಧತೆ ನಡೆದಿದೆ. ಅಜ್ಜನ ಜಾತ್ರೆಗೆ ದೂರದ ಊರುಗಳಿಂದ ಭಕ್ತರ ಆಗಮನ ಹಚ್ಚಾಗಿದೆ. ಮನೆಗಳಲ್ಲಿ ಬಂಧುಗಳು ನೆಂಟರು ಜಾತ್ರೆಯ ಹೆಸರಿನಲ್ಲಿ ಒಂದೆಡೆ ಕಲೆತಿದ್ದಾರೆ.

ಜಾತ್ರೆಯೆಂದರೆ ಹಾಗೆಯೇ ಎಲ್ಲರನ್ನೂ ಸೇರಿಸುತ್ತದೆ, ಬೆರೆಸುತ್ತದೆ. ಇಲ್ಲಿಯೂ ಹಾಗೆಯೇ ಅಕ್ಕರೆಯ ಆತಿಥ್ಯ ನೀಡಲು ಮಠದ ಆವರಣ, ದಾಸೋಹ ಭವನ, ಶಿಕ್ಷಣ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿ ನಿಂತಿವೆ. ಕ್ವಿಂಟಲ್‌ಗಟ್ಟಲೆ ಮಾದಲಿ, ರೊಟ್ಟಿ, ಹಲವು ಬಗೆಯ ಖಾದ್ಯಗಳು, ಭಕ್ತರ ಹೊಟ್ಟೆ ಸೇರಲು ಸಜ್ಜಾಗಿವೆ.

ಮಹಾರಥೋತ್ಸವಕ್ಕೆ ಪೂರ್ವಭಾವಿಯಾಗಿ ಮಂಗಳವಾರ ಮಠದ ಮೇಲ್ಭಾಗದ ಗುಡಿಯಲ್ಲಿರುವ ಅನ್ನಪೂರ್ಣೇಶ್ವರಿ ದೇವಿಯ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಬಳಿಕ ಗವಿಸಿದ್ದೇಶ್ವರ ಸ್ವಾಮಿಯ ಲಘು ರಥೋತ್ಸವ ನಡೆಯಿತು.

ನಾಳೆ ಜಾತ್ರಾ ಮೈದಾನದಲ್ಲಿ ಎಳೆಯಲಿರುವ ತೇರು ತನ್ನ ಮುಕುಟ, ಪತಾಕೆಗಳಿಂದ ಸಿಂಗರಿಸಿಕೊಂಡು ನಿಂತಿದೆ. ಝಗಮಗಿಸುವ ವಿದ್ಯುತ್‌ ದೀಪಾಲಂಕಾರ ಮನ ಸೆಳೆಯುತ್ತಿದೆ.

ಸಂಚಾರ ವ್ಯವಸ್ಥೆ ಬದಲಾವಣೆ

ಜ. 3 ಮತ್ತು 4ರಂದು ಬೆಳಿಗ್ಗೆ 9ರಿಂದ ರಾತ್ರಿ 11ರವರೆಗೆ ಜಾತ್ರೆಗೆ ಬರುವ ವಾಹನಗಳನ್ನು ಹೊರತುಪಡಿಸಿ ಹೊಸಪೇಟೆ, ಗಂಗಾವತಿ, ಗಿಣಿಗೇರಿ ಕಡೆಯಿಂದ ಬರುವ ವಾಹನಗಳು ಅಭಯ್‌ ಸಾಲ್ವೆಂಟ್‌ ಕಂಪೆನಿ ಬಳಿಯ ಹೊಸ ಹೆದ್ದಾರಿ ಬೈಪಾಸ್‌ ರಸ್ತೆಯಲ್ಲಿ (ನಿರ್ಮಾಣ ಹಂತದಲ್ಲಿರುವ ರಸ್ತೆ) ಸಾಗಿ ದದೇಗಲ್‌ ಮೂಲಕ ಗದಗ ಕಡೆಗೆ ಹೋಗಬಹುದು.

ಗದಗ ಕಡೆಯಿಂದ ಹೊಸಪೇಟೆ ಕಡೆಗೆ ಹೋಗುವ ವಾಹನಗಳು ದದೇಗಲ್‌ ಮೂಲಕ ಹಾದು ಹೋಗುವ ಹೊಸ ಹೆದ್ದಾರಿ ಬೈಪಾಸ್‌ ಮೂಲಕ ಸಾಗಿ ಅಭಯ್‌ ಸಾಲ್ವೆಂಟ್‌ ಸಮೀಪ ರಾಷ್ಟ್ರೀಯ ಹೆದ್ದಾರಿ - 63ನ್ನು ತಲುಪಿ ಮುಂದೆ ಸಾಗಬಹುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅನೂಪ್‌ ಎ. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾತ್ರೆಯಲ್ಲಿ ಇಂದು

* ಶ್ರೀಶೈಲ ಮಲ್ಲಿಕಾರ್ಜುನ ಸಾಹಸ ಜಾನಪದ ಅಲೆಮಾರಿ ಕಲಾವಿದರ ಸಂಘ ಚಿಲಕಮುಖಿಯ ಕಲಾವಿದರಿಂದ ಸಾಹಸ ಮೋಜಿನ ಗೊಂಬೆ ಪ್ರದರ್ಶನ. ಮಠದ ಆವರಣ. ಬೆಳಿಗ್ಗೆ 10ಕ್ಕೆ.

* ಜಿಲ್ಲಾ ಕರಾಟೆ ಶಿಕ್ಷಕರ ಸಂಘದವರಿಂದ ಕರಾಟೆ ಪ್ರದರ್ಶನ. ಬೆಳಿಗ್ಗೆ 10ಕ್ಕೆ

* ಮಹಾರಥೋತ್ಸವ. ಉದ್ಘಾಟನೆ: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ. ಸಂಜೆ 5ಕ್ಕೆ

* ಅನುಭಾವಿಗಳ ಅಮೃತ ಚಿಂತನಗೋಷ್ಠಿ ಸಂಜೆ 6ರಿಂದ

ಸಾನ್ನಿಧ್ಯ: ಸಂಸ್ಥಾನ ಮುಂಡರಗಿಯ ಡಾ.ಅನ್ನದಾನೀಶ್ವರ ಸ್ವಾಮೀಜಿ

ಯಲಬುರ್ಗಾ ಶ್ರೀಧರಮುರಡಿ ಹಿರೇಮಠದ ಬಸವಲಿಂಗ ಶಿವಾಚಾರ್ಯ ಸ್ವಾಮೀಜಿ, ಖಜ್ಜಿಡೋಣಿಯ ಕೃಷ್ಣಾನಂದ ಶಾಸ್ತ್ರಿ, ಬೆಳಗಾವಿ ರುದ್ರಾಕ್ಷಿಮಠದ ಮಹಾಂತದೇವರು ಶೇಗುಣಿಸಿ

* ಗಾನ ತರಂಗ

ಡಾ.ಬಿ.ಜಯಶ್ರೀ ಬೆಂಗಳೂರು ಅವರಿಂದ

* ಸಂಗೀತ ಕಾರ್ಯಕ್ರಮ: ವಾದ್ಯ ತರಂಗ: ಮತ್ತೂರು ಶ್ರೀನಿಧಿ ಬೆಂಗಳೂರು - ವಾಯೊಲಿನ್‌

ಬಿ.ಸಿ.ಮಂಜುನಾಥ ಬೆಂಗಳೂರು - ಮೃದಂಗ

ಆರ್‌.ಕಾರ್ತಿಕ್‌ - ಕಂಜರ

ಭಾಗ್ಯಲಕ್ಷ್ಮೀ ಕೃಷ್ಣನ್‌ ಬೆಂಗಳೂರು - ಮೂರ್ಚಿಂಗ್‌

ಚಿತ್ರತರಂಗ

ವಿಲಾಸ ನಾಯಕ್‌ ಅಂತರ್‌ರಾಷ್ಟ್ರೀಯ ಕಲಾವಿದ ಬೆಂಗಳೂರು

ಹಾಸ್ಯ: ನರಸಿಂಹ ಜೋಷಿ

* * 

ಅಜ್ಜನ ಜಾತ್ರೆ ಉತ್ತರ ಕರ್ನಾಟಕದಲ್ಲಿ ಅತ್ಯಂತ ವಿಶಿಷ್ಟವಾದ ದೊಡ್ಡ ಜಾತ್ರೆ. ಸಾಗರೋಪಾದಿಯಲ್ಲಿ ಜನ ಸೇರುತ್ತಾರೆ
ಮಹಾಂತೇಶ್ ಪಾಟೀಲ್
ಕೃಷಿ ಸೀಡ್ಸ್ ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT