ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನದ ಬೆಳಕು

Last Updated 3 ಜನವರಿ 2018, 19:30 IST
ಅಕ್ಷರ ಗಾತ್ರ

‘ಹಿಂದೂದರ್ಶನಸಾರ’ ಎಂಬ ಕೃತಿಯನ್ನು ಲಕ್ಷ್ಮೀಪುರಂ ಶ್ರೀನಿವಾಸಾಚಾರ್ಯ ಬರೆದಿದ್ದಾರೆ; ಮೈಸೂರು ವಿಶ್ವವಿದ್ಯಾನಿಲಯ ಅದನ್ನು ಪ್ರಕಟಿಸಿತ್ತು. ತತ್ತ್ವವಿಚಾರಕ್ಕೆ ಕಾರಣಗಳು ಏನು – ಎನ್ನುವುದನ್ನು ಈ ಕೃತಿಯ ಪೀಠಿಕೆಯಲ್ಲಿ ಲೇಖಕರು ಸೂಚಿಸಿರುವುದು ಇಲ್ಲಿ ಉಲ್ಲೇಖಾರ್ಹ:

‘ಪ್ರಪಂಚದಲ್ಲಿ ಸಕಲ ಪ್ರಾಣಿಗಳಿಗಿಂತಲೂ ಮನುಷ್ಯನು ಬುದ್ಧಿಶಕ್ತಿಯಲ್ಲಿ ಪ್ರಬಲನು; ಊಹಾಪೋಹಶಕ್ತಿಯಲ್ಲಿ ನಿಪುಣನು. ನಾಗರಿಕತೆ ದಿನೇ ದಿನೇ ಅಭಿವೃದ್ಧಿಯಾಗುತ್ತಿರುವುದು ಪ್ರತ್ಯಕ್ಷವು. ಮನುಷ್ಯರಲ್ಲಿ ಮುಖ್ಯವಾದ ಸಹಜವಾದ ಸ್ವಭಾವಗಳು ರಾಗದ್ವೇಷಮೋಹಗಳು, ದಯಾದಾಕ್ಷಿಣ್ಯವಿನಯಾದಿಗಳು ಅಭ್ಯಾಸದಿಂದ ಬರುವಂತಹ ಸ್ವಭಾವಗಳು. ರಾಗವೆಂದರೆ ಆಶೆ. ಇದು ಪ್ರಬಲವಾದರೆ ಕಾಮವೆನ್ನಲ್ಪಡುವುದು. ಇದಕ್ಕೆ ಪ್ರತಿರೋಧ ಮಾಡಿದವರ ಮೇಲೆ ದ್ವೇಷವು ಅಭಿವೃದ್ಧಿಯಾಗಿ ಕ್ರೋಧವಾಗುವುದು. ವಸ್ತುಸ್ವಭಾವವನ್ನು ತಿಳಿಯದೇ ಇರುವಿಕೆಯೇ ಭ್ರಾಂತಿಯೆಂಬ ಮೋಹವು. ಇದೇ ಅಜ್ಞಾನವೇ. ಇದು ಪ್ರಬಲವಾದರೆ ಲೋಭವಾಗುವುದು. ಲೋಭವೆಂದರೆ ಎಲ್ಲವೂ ತಮಗೇ ಬೇಕು, ಇತರರಿಗೆ ಇರಬಾರದೆಂಬ ದುರ್ಗುಣವು. ಈ ಉತ್ಕಟರಾಗದ್ವೇಷಮೋಹಗಳೆಂಬ ಕಾಮ ಕ್ರೋಧಲೋಭಗಳೇ ಮನುಷ್ಯರಿಗೆ ಪ್ರಬಲವಾದ ಶತ್ರುಗಳು.

ಈ ಮೂರು ಗುಣಗಳೇ ಲೋಕದಲ್ಲಿ ಪ್ರಬಲಗಳಾದರೆ ಸಕಲವಿಧವಾದ ಅನರ್ಥಗಳಿಗೂ ಕಾರಣಗಳಾಗುವುವು. ಮನುಷ್ಯರಾಗಿರುವವರಿಗೆ ಈ ಗುಣಗಳನ್ನು ಸಂಪೂರ್ಣವಾಗಿ ಬಿಡಲು ಸಾಧ್ಯವೇ ಇಲ್ಲ. ಬಿಟ್ಟರೆ ಜೀವನವೇ ಸಾಧ್ಯವಿಲ್ಲ. ಯಥೋಚಿತವಾಗಿ ಇವುಗಳನ್ನು ತಗ್ಗಿಸುವುದಕ್ಕೆ ಶಾಂತಿ ಯೆಂದು ಹೆಸರು... ಸಕಲ ದರ್ಶನಗಳಿಗೂ ಶಾಂತಿಯೇ ಮುಖ್ಯೋದ್ದೇಶ ವೆಂಬುದರಲ್ಲಿ ಸಂದೇಹವಿಲ್ಲ... ಇಂತಹ ಶಾಂತಿಕರವಾದ ವಿಚಾರಗಳೇ ದರ್ಶನಗಳು, ಸಿದ್ಧಾಂತಗಳು, ತತ್ತ್ವವಿಚಾರಗಳು. ಇವುಗಳ ವಿಚಾರದಿಂದಲೂ ಯಥೋಚಿತವಾದ ಶಾಂತಿ ಬರುವುದು ಎಂದು ವಿಚಾರಪರರ ಅನುಭವವು.’

ಮೇಲಣ ಮಾತುಗಳನ್ನು ಮನನ ಮಾಡಿದಾಗ ತತ್ತ್ವ ವಿಚಾರದ ಗೊತ್ತು–ಗುರಿಗಳು ಏನೆಂಬುದು ಸ್ಪಷ್ಟವಾಗುತ್ತವೆ.

ಮೊದಲಿಗೆ ನಾವಿಲ್ಲಿ ಗಮನಿಸಬೇಕಾದ್ದು ‘ತತ್ತ್ವವಿಚಾರ’ (ಅಥವಾ ‘ದರ್ಶನ’) ಮತ್ತು ‘Philosophy’ - ಇವುಗಳ ನಡುವೆ ಇರುವ ವ್ಯತ್ಯಾಸ. ವಿಚಾರಶಕ್ತಿಯ ಬಗ್ಗೆ ಇರುವ ಪ್ರೀತಿಯೇ Philosophy ಎನಿಸಿಕೊಳ್ಳುತ್ತದೆ. ಆದರೆ  ತತ್ತ್ವವಿಚಾರ–ದರ್ಶನದ ನಿಲುವೇ ಬೇರೆ. ವಿಷಯವನ್ನು ತಿಳಿದುಕೊಳ್ಳಬೇಕು ಅಥವಾ ತಿಳಿವಳಿಕೆಯನ್ನು ಸಂಪಾದಿಸಿ ಕೊಳ್ಳಬೇಕು ಎಂಬುದಷ್ಟೆ ದರ್ಶನಶಾಸ್ತ್ರದ ಉದ್ದೇಶವಲ್ಲ; ಅದು ನಮ್ಮ ಜೀವನಕ್ಕೆ ನೇರವಾಗಿ ಒದಗಬೇಕು ಎನ್ನುವುದೇ ಅದರ ಪ್ರಧಾನ ಉದ್ದೇಶ. ಅದೇನೂ ತರ್ಕವನ್ನು ನಿರಾಕರಿಸದು. ಆದರೆ ತರ್ಕಕ್ಕೂ ಮಿತಿಯಿದೆ ಎಂದು ಎಚ್ಚರಿಸುತ್ತಿರುತ್ತದೆ.

ವಿಚಾರಕ್ಕಾಗಿ ವಿಚಾರ – ಎನ್ನುವುದಕ್ಕೆ ದರ್ಶನಶಾಸ್ತ್ರದಲ್ಲಿ ಹೆಚ್ಚಿನ ಮನ್ನಣೆಯಿಲ್ಲ. ವಿಚಾರವನ್ನು ಮಾಡುತ್ತಿರುವುದು ಯಾವ ಉದ್ದೇಶದಿಂದ ಎನ್ನುವುದು ಅದಕ್ಕೆ ತುಂಬ ಮುಖ್ಯವಾದ ವಿವರ.

ನಮಗೆ ಕೆಲವೊಂದು ಸಂದರ್ಭಗಳಲ್ಲಿ ಸಂತೋಷವಾಗುತ್ತದೆ; ಮತ್ತೆ ಕೆಲವು ಸಂದರ್ಭಗಳಲ್ಲಿ ದುಃಖವುಂಟಾಗುತ್ತದೆ. ಈ ಸಂತೋಷ–ದುಃಖಗಳಿಗೆ ಕಾರಣ ಏನು? ಈ ಪ್ರಶ್ನೆಯನ್ನು ಎತ್ತಿಕೊಂಡು ಚರ್ಚಿಸುವುದು ದರ್ಶನಶಾಸ್ತ್ರದ ಮುಖ್ಯ ಲಕ್ಷಣಗಳಲ್ಲೊಂದು. ಇದೇ ಮೇಲಣ ಮಾತುಗಳಲ್ಲಿ ನಿರೂಪಿತವಾಗಿರುವುದು. ರಾಗ–ದ್ವೇಷ–ಮೋಹಗಳು ಮನುಷ್ಯನ ನಿತ್ಯದ ಏಳು–ಬೀಳುಗಳಿಗೆ ಕಾರಣಗಳಾಗಿವೆ. ಅವನ ಈ ಮೂರು ಸೆಳೆತಗಳು ಅವನಲ್ಲಿ ಕಾಮ–ಕ್ರೋಧ–ಲೋಭ ಎಂಬ ಮೂರು ಶತ್ರುಗಳನ್ನು ಹುಟ್ಟಿಸುತ್ತವೆ. ಇವು ಅವನ ಮೇಲೆ ದಾಳಿ ಮಾಡುತ್ತ ಜೀವನದುದ್ದಕ್ಕೂ ಅವನನ್ನು ಹಿಂಸಿಸುತ್ತವೆ. ಈ ಹಿಂಸೆಯಿಂದ ತಪ್ಪಿಸಿಕೊಳ್ಳದ ಹೊರತು ಅವನಿಗೆ ನೆಮ್ಮದಿ ಇರದು. ಹಾಗಾದರೆ ರಾಗ–ದ್ವೇಷ–ಮೋಹ ಎಂದರೆ ಏನು? ಅವುಗಳ ಸ್ವರೂಪ ಎಂಥದು? ಅವುಗಳಿಂದ ತಲೆದೋರುವ ಕಾಮ–ಕ್ರೋಧ–ಲೋಭಗಳ ಲಕ್ಷಣ ಏನು? ಅವುಗಳ ಹುಟ್ಟು ನಮ್ಮಲ್ಲಿ ಹೇಗೆ ಆಗುತ್ತದೆ? ಅವುಗಳಿಂದ ಪಾರಾಗುವ ದಾರಿಯನ್ನು ಹೇಗೆ ಕಂಡುಕೊಳ್ಳುವುದು? ಇಂಥ ಪ್ರಶ್ನೆಗಳಿಗೆ ಸಮಾಧಾನವನ್ನು ಒದಗಿಸುವುದೇ ತತ್ತ್ವವಿಚಾರ–ದರ್ಶನದ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT