ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಸಂಭ್ರಮಕ್ಕೆ ನಾವೂ ರೆಡಿ

Last Updated 3 ಜನವರಿ 2018, 19:30 IST
ಅಕ್ಷರ ಗಾತ್ರ

ಹಸೆಮಣೆ ಏರುತ್ತಿರುವ ವಧುವಿನ ಉಡುಗೆ ಬಗ್ಗೆ ಮಾತ್ರ ಹೆಚ್ಚು ತಲೆಕಡಿಸಿಕೊಳ್ಳುವ ಕಾಲ ಹೋಯ್ತು. ಚೆಂದದ ಬೆಡಗಿಯೊಂದಿಗೆ ಮಹಾರಾಜನಂತೆ ಮಿಂಚಬೇಕು ಎನ್ನುವುದು ಈಗಿನ ಹುಡುಗರ ಆಸೆ. ಫ್ಯಾಷನ್ ಲೋಕದಲ್ಲಿ ಟ್ರೆಂಡಿಂಗ್ ಆಗಿರುವ ದೇಸಿ ಉಡುಪುಗಳು ಇಂಥವರ ಮೊದಲ ಆಯ್ಕೆ ಎನಿಸುತ್ತಿದೆ. ಪಾಶ್ಚಾತ್ಯ ಉಡುಗೆಗಳಿಗೆ ದೇಸಿ ಮೆರಗು ನೀಡಿರುವ ವಿಭಿನ್ನ ಶೈಲಿಯ ವರನ ಉಡುಪುಗಳು 2017ರಲ್ಲಿ ಮಾರುಕಟ್ಟೆಗೆ ಬಂದಿದ್ದವು. ಪಾಶ್ಚಾತ್ಯ ಶೈಲಿಯ ಸೂಟುಬೂಟು ಮದುವೆಮನೆಗಳಲ್ಲಿ ಈಗ ಅಪರೂಪ ಎನಿಸುತ್ತಿದೆ. ಪೈಜಾಮ ಹಾಗೂ ಪಂಚೆಗಳೇ ಎಲ್ಲೆಡೆ ಕಂಡುಬರುತ್ತಿವೆ. ಈ ಟ್ರೆಂಡ್‌ನ ಇಣುಕುನೋಟ ಮತ್ತು ಭಾವಿ ವರರಿಗೆ ಕಿವಿಮಾತು ಇಲ್ಲಿದೆ.

ಬಣ್ಣಕ್ಕೆ ತಕ್ಕ ಚಿತ್ತಾರ: ವಧು ಕೆಂಗುಲಾಬಿ ಬಣ್ಣದ ಲೆಹೆಂಗಾ ಧರಿಸಿದ್ದರೆ ಅವಳ ಬಟ್ಟೆಯ ಬಣ್ಣಕ್ಕೆ ಹೊಂದುವಂಥ ಕೆಂಪು, ಆಕಾಶ ನೀಲಿ, ತಿಳಿ ಚಿನ್ನದ ಬಣ್ಣದ ಉಣ್ಣೆಬಟ್ಟೆಯ ಶೆರ್ವಾನಿಗಳನ್ನು ಧರಿಸಿ. ಶೇರ್ವಾನಿಗೆ ಸರಿಹೊಂದುವ ದುಪ್ಪಟ್ಟಾ ಆಯ್ಕೆ ಮಾಡಿಕೊಳ್ಳಿ. ಗೋಧಿ ಬಣ್ಣದವರಿಗೆ ಗಾಢವಾದ ಬಣ್ಣ, ಕಪ್ಪು ಬಣ್ಣದ ಹುಡುಗರಿಗೆ ತಿಳಿಬಣ್ಣಗಳು ಚೆನ್ನಾಗಿ ಕಾಣುತ್ತವೆ. ಹರಳುಗಳಿಂದ ವಿನ್ಯಾಸ ಮಾಡಿದ ದುಪ್ಪಟ್ಟಾ ಕೂಡಾ ಈಗ ಲಭ್ಯ. ಶೆರ್ವಾನಿಗೆ ಹೊಂದುವ ಪಂಜಾಬಿ, ಕೊಲ್ಲಾಪುರಿ, ಮೋರ್ಜಿ ಚಪ್ಪಲಿಗಳು ಉಡುಗೆಗೆ ಮೆರುಗು ನೀಡುತ್ತವೆ.

ಟ್ರೆಂಡಿ ಪ್ಯಾಂಟ್ ನಿಮ್ಮ ಆಯ್ಕೆಯಾಗಲಿ: ಮದುವೆ ಮುಹೂರ್ತಕ್ಕಾದರೆ ವಿನ್ಯಾಸಕರು ಧೋತಿ ವಿನ್ಯಾಸದ ಶೆರ್ವಾನಿಗಳಿಗೇ ಆದ್ಯತೆ ಕೊಡುತ್ತಾರೆ. ಈ ದಿರಿಸಲ್ಲಿ ಹುಡುಗರಿಗೆ ಸ್ಮಾರ್ಟ್‌ ಲುಕ್ ಸಿಗುತ್ತದೆ. ಮಾತ್ರವಲ್ಲ, ವಿನಯವಂತಿಕೆಯ ಮೆರುಗೂ ಇರುತ್ತದೆ. ಕುರ್ತಾದೊಂದಿಗೆ ಕಾಂಬಿನೇಷನ್ ಆಗಿ ಧರಿಸಿದರೆ ಟ್ರೆಂಡಿ ಲುಕ್‌ ನೀಡುತ್ತದೆ. ಡಾನ್ಸ್ ಮಾಡಲೂ ಈ ಥರದ ಡ್ರೆಸ್‌ಗಳು ಕಂಫರ್ಟ್‌ ಎನಿಸುತ್ತವೆ. ವೇಸ್ಟ್‌ ಕೋಟ್‌ ಮತ್ತು ರಾಜಸ್ಥಾನಿ ಶೈಲಿಯ ರಾಜರ ಶೂಗಳನ್ನು ಧರಿಸಿದರೆ, ಈ ಬಟ್ಟೆಯ ಅಂದ ಹೆಚ್ಚುತ್ತದೆ.

ಸಿಲ್ಕ್ ಫ್ಯಾಬ್ರಿಕ್‍ನ ಹೊಸ ಅವತಾರ: ಸಣ್ಣ ಹಾಗೂ ಫಿಟ್‌ ದೇಹ ಹೊಂದಿರುವ ಸುಂದರರಿಗೆ ಸಿಲ್ಕ್ ಫ್ಯಾಬ್ರಿಕ್‍ನ ಉಡುಪು ಹೇಳಿ ಮಾಡಿಸಿದಂತಿರುತ್ತವೆ. ವೆಲ್ವೆಟ್ ಬಣ್ಣದ ಕೋಟುಗಳು, ಅಲಂಕೃತ ಕಸೂತಿಗಳೊಂದಿಗೆ ಮದುಮಕ್ಕಳು ಮಿರಿಮಿರಿ ಮಿಂಚುತ್ತಾರೆ. ಮದುವೆ ಖುಷಿಯನ್ನು ರೇಷ್ಮೆಎಳೆಗಳು ಹೆಚ್ಚಿಸುತ್ತವೆ. ಮುತ್ತಿನಮಾಲೆಯ ಶೋಭೆಯನ್ನು ಹೊಂದಿಸಿಕೊಳ್ಳುವುದು ಜಾಣತನ. ಉತ್ತಮ ಗುಣಮಟ್ಟದ ಮುತ್ತಿನಮಾಲೆ ಧರಿಸಿದರೆ ಮದುಮಗನಿಗೆ ಮಹಾರಾಜನ ಲುಕ್ ಸಿಗುತ್ತದೆ. ವೆಲ್ವೆಟ್ ಶೆರ್ವಾನಿಯ ಮೇಲೆ ಒಂದೆರಡು ಹೊಳೆಯುವ ಹರಳುಗಳಿದ್ದರಂತೂ ಉಡುಗೆಯ ಅಂದ ಮತ್ತಷ್ಟು ಹೆಚ್ಚುತ್ತದೆ.

ಪ್ರಿಂಟಿಂಗ್ ಸ್ಪರ್ಶ: ಧರಿಸುವ ಉಡುಪಿಗೆ ಸ್ವಲ್ಪಮಟ್ಟಿನ ಪ್ರಿಂಟಿಂಗ್ ಸ್ಪರ್ಶವೂ ಇರಲಿ. ಸರಳವಾದ ಬಣ್ಣದ ಜೋಡಿ ಪ್ಯಾಂಟ್/ಧೋತಿ ಪ್ಯಾಂಟ್ ಅಥವಾ ಪೈಜಾಮ ನಿಮ್ಮ ಆಯ್ಕೆ ಆಗಿದ್ದರೆ ಸೂಕ್ತ. ಪ್ರಿಂಟಿಂಗ್ ಸ್ಪರ್ಶ ನೀಡಿದರೆ ಹೊರನೋಟ ಮೃದುವಾಗಿ ಕಾಣಿಸುತ್ತದೆ. ನಿಮ್ಮ ಕುರ್ತಾ ಮೇಲೆ ಸಾಂಪ್ರಾದಾಯಿಕ ಭಾರತೀಯ ಚಿತ್ರಗಳನ್ನು ಪ್ರಿಂಟ್‌ ಮಾಡಿಸಿ. ಚಪ್ಪಲಿ ಮತ್ತು ಶೂಗಳಲ್ಲೂ ಸಹ ಬಟ್ಟೆಯ ಮೇಲಿರುವಂತೆ ಕಸೂತಿ ಮಾಡಿಸಿದರೆ ಆಕರ್ಷಣೆ ಮತ್ತಷ್ಟು ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT