ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 4–1–1968

Last Updated 3 ಜನವರಿ 2018, 19:30 IST
ಅಕ್ಷರ ಗಾತ್ರ

ಕಾಶಿ ವಿಶ್ವವಿದ್ಯಾನಿಲಯ ದ್ವಾರದ ಬಳಿ ಭಾರಿ ಗಲಭೆ: ಅಶ್ರುವಾಯು ಪ್ರಯೋಗ

ವಾರಾಣಾಸಿ, ಜ. 3– ಕಾಶಿ ಹಿಂದೂ ವಿಶ್ವವಿದ್ಯಾನಿಲಯದ ಪ್ರವೇಶ ದ್ವಾರದ ಹೊರಗಡೆ ಇಟ್ಟಿಗೆ ಕಲ್ಲು ಎಸೆತದಲ್ಲಿ ತೊಡಗಿದ್ದ ಹತೋಟಿ ಮೀರಿದ ಗುಂಪನ್ನು ಚದುರಿಸಲು ಪೊಲೀಸರು ಇಂದು ಮಧ್ಯಾಹ್ನ ಅಶ್ರುವಾಯು ಷೆಲ್ ಹಾರಿಸಿದರು.

ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸಿನ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಿ ಇಂದಿರಾಗಾಂಧಿಯವರು ಉದ್ಘಾಟನಾ ಭಾಷಣ ಮಾಡುತ್ತಿದ್ದಾಗ ಇಟ್ಟಿಗೆ ಎಸೆತ ಆರಂಭವಾಯಿತು.

ಅಡಿಷನಲ್, ಜಿಲ್ಲಾ ನ್ಯಾಯಾಧೀಶ ಚಿತ್ರಾಂಗದ ಸಿಂಗ್, ಯುಗಾಂತರ ಹಾಗೂ ಅಮೃತ ಬಜಾರ್ ಪತ್ರಿಕೆಗಳ ಪ್ರತಿನಿಧಿಗಳಿಗೆ ಕಲ್ಲೆತದಿಂದ ಗಾಯಗಳಾದವು.

ತಾಂತ್ರಿಕ ತಿಳಿವಳಿಕೆ: ನೀತಿ ನಿರೂಪ‍ಣೆ ಹೇಳಿಕೆ ಅಗತ್ಯ

ವಾರಾಣಸಿ, ಜ. 3– ವಿಜ್ಞಾನ ಹಾಗೂ ಕೈಗಾರಿಕಾ ನೀತಿಯ ಮಧ್ಯೆ ಸಂಪರ್ಕ ಸಾಧಿಸಲು ತಾಂತ್ರಿಕ ಜ್ಞಾನವನ್ನು ಕುರಿತ ನೀತಿ ನಿರೂಪಣಾ ಹೇಳಿಕೆಯೊಂದನ್ನು ಸಿದ್ಧಪಡಿಸಬೇಕೆಂದೂ, ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನೆ ಮಂಡಳಿಯ ಡೈರೆಕ್ಟರ್ ಜನರಲ್ ಡಾ. ಆತ್ಮಾರಾಮ್ ಇಂದು ಇಲ್ಲಿ ಕರೆ ನೀಡಿದರು.

ವೈಜ್ಞಾನಿಕ ನೀತಿಯ ಅನೇಕ ಅಂಶಗಳಿಗೆ ವಾಸ್ತವ ಆಕಾರವನ್ನೂ, ಕೈಗಾರಿಕಾ ನೀತಿಗೆ ನಿರ್ದೇಶನ ಸೂತ್ರವನ್ನೂ ಅದು ನೀಡಲಿದೆ ಎಂದು ಅವರು ನುಡಿದರು.

ಶರಾವತಿ ಸೇವೆಗಾಗಿ ಒಂದು ತಿಂಗಳ ಬೋನಸ್

ಬೆಂಗಳೂರು, ಜ. 3– ಶರಾವತಿ ವಿದ್ಯುತ್ ಯೋಜನೆಯ ಪ್ರಥಮ ಘಟಕದ ಉದ್ಘಾಟನೆಗೆ ಮುನ್ನ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದವರೆಲ್ಲರಿಗೂ ಒಂದು ತಿಂಗಳ ಸಂಬಳವನ್ನು ಬೋನಸ್ ರೂಪದಲ್ಲಿ ನೀಡಲು ಇಂದು ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿತು. ಈ ನೀಡಿಕೆಯು ಅರ್ಹರಾದ ನೌಕರರು ಈಗ ಎಲ್ಲಿಯೇ ಇದ್ದರೂ ಅವರಿಗೆ ಅನ್ವಯವಾಗಲಿದೆ.

ತಮಿಳಿಲ್ಲದ ವಿಶೇಷ ಸ್ಟಾಂಪ್ ಅಣ್ಣಾ ಕೋಪ

ಮದರಾಸು, ಜ. 3– ಎರಡನೇ ವಿಶ್ವ ತಮಿಳು ಸಮ್ಮೇಳನ ಸಂಬಂಧ ಮುದ್ರಿಸಿರುವ ವಿಶೇಷ ಸ್ಟಾಂಪ್‌ನ ಬಿಡುಗಡೆ ಸಮಾರಂಭವನ್ನು ಇಂದು ರದ್ದುಪಡಿಸಲಾಯಿತು. ಕಾರಣ: ಸ್ಟಾಂಪ್‌ನಲ್ಲಿ ವಿವರಗಳನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮುದ್ರಿಸಿ ತಮಿಳಿನಲ್ಲಿ ಏನನ್ನೂ ಮುದ್ರಿಸದೆ ಇದ್ದುದು.

ಸಮಾರಂಭವನ್ನು ರದ್ದು ಮಾಡಲಾಗಿದೆಯೆಂದು ಮುಖ್ಯಮಂತ್ರಿ ಅಣ್ಣಾದೊರೆಯವರು ಸಮಾರಂಭ ಆರಂಭವಾಗುವುದಕ್ಕೆ ಕೆಲವು ನಿಮಿಷಗಳಿದ್ದಾಗ ಪ್ರಕಟಿಸಿದರು.

ಮಾದರಿಯಂತೆ ಮುದ್ರಣ

ನವದೆಹಲಿ, ಜ. 3– ಮದ್ರಾಸಿನ ಮುಖ್ಯಮಂತ್ರಿ ಶ್ರೀ ಸಿ.ಎನ್. ಅಣ್ಣಾದೊರೈ ಕಳುಹಿಸಿದ್ದ ಮಾದರಿಯಂತೆಯೇ 2ನೇ ವಿಶ್ವ ತಮಿಳು ಸಮ್ಮೇಳನದ ಅಂಚೆ ಚೀಟಿಯನ್ನು ಪ್ರಕಟಿಸಲಾಗಿದೆ ಎಂದು ಸಂಪರ್ಕ ಸಚಿವ ಡಾ. ರಾಮ್ ಸುಭಗ್‌ಸಿಂಗ್ ಇಂದು ಇಲ್ಲಿನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರಲ್ಲದೆ ಮುಖ್ಯಮಂತ್ರಿಯವರು ಅಂಗೀಕರಿಸಿದ್ದ ಮಾದರಿ ಅಂಚೆ ಚೀಟಿಯನ್ನು ತೋರಿಸಿ, ಆಶ್ಚರ್ಯ ವ್ಯಕ್ತಪಡಿಸಿದರು.

ಎರಡು ವರ್ಷಗಳ ಪಿ.ಯು.ಸಿ. ಶಿಕ್ಷಣ: ಸರ್ಕಾರದ ಒಪ್ಪಿಗೆ

ಬೆಂಗಳೂರು, ಜ. 3– ಶಿಕ್ಷಣ ಆಯೋಗವು ಶಿಫಾರಸು ಮಾಡಿದ್ದಂತೆ ಎರಡು ವರ್ಷಗಳ ಅವಧಿಯ ಪಿ.ಯು.ಸಿ. ಶಿಕ್ಷಣ ಪ್ರಾರಂಭಿಸಲು ರಾಜ್ಯ ಸರ್ಕಾರ ಸಮ್ಮತಿ ವ್ಯಕ್ತಪಡಿಸಿದೆಯೆಂದು ತಿಳಿದುಬಂದಿದೆ.

ರಾಜ್ಯದ ಶಿಕ್ಷಣ ಸಲಹಾ ಮಂಡಲಿ ಈ ಶಿಫಾರಸ್ಸನ್ನು ಸ್ವಾಗತಿಸಿತ್ತು.

ಸರಕಾರ ರಾಜ್ಯದ ಮೂರು ವಿಶ್ವವಿದ್ಯಾಲಯಗಳೂ ಈ ಬಗ್ಗೆ ತಮ್ಮ ಒಪ್ಪಿಗೆ ಸೂಚಿಸಬೇಕೆಂದು ಕೋರಿ ಪತ್ರ ಬರೆದು ಎರಡು ವರ್ಷದ ಪ್ರಿಯೂನಿವರ್ಸಿಟಿ ಶಿಕ್ಷಣ ಪ್ರಾರಂಭಿಸಲು ಅಗತ್ಯ ಕಾರ್ಯಕ್ರಮ ಕೈಗೊಳ್ಳಬೇಕೆಂದು ಪ್ರಾರ್ಥಿಸಿತ್ತು.

ಈ ಬಾರಿಯ ‘ಬದಲಿ ಹೃದಯಿ’ ಬದುಕುವ ಸಾಧ್ಯತೆ ಹೆಚ್ಚು

ಲಂಡನ್, ಜ. 3– ದಕ್ಷಿಣ ಆಫ್ರಿಕದ ಕೇಪ್‌ಟೌನ್‌ನಲ್ಲಿ ನಿನ್ನೆ ನಡೆಸಿದ ಎರಡನೇ ‘ಬದಲಿ ಹೃದಯ’ದ ಚಿಕಿತ್ಸೆ ಯಶಸ್ವಿಯಾಗುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತಿದೆಯೆಂದು ಇಲ್ಲಿನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನ ಅಧ್ಯಕ್ಷ ಸರ್ ಹೆನ್ರಿ ಆಟ್ಕನ್ಸ್‌ರವರು ಹೇಳಿದ್ದಾರೆ.

ಪರಮತ ಸಹಿಷ್ಣುತೆ, ಪ್ರಾಚೀನ ತಮಿಳು ಸಂಪ್ರದಾಯದ ಹಿರಿಮೆ: ಡಾ. ಜಾಕಿರ್ ಹುಸೇನ್

ಮದ್ರಾಸ್, ಜ. 3– ತಮಿಳು ಸಂಪ್ರದಾಯ ಪ್ರಾಚೀನವಷ್ಟೇ ಅಲ್ಲ, ಪರಮತ ಸಹಿಷ್ಣುವೂ, ಮನೋಧರ್ಮದಲ್ಲಿ ಸರ್ವವ್ಯಾಪಿಯೂ ಆಗಿದೆ. ಈ ಸಂಪ್ರದಾಯದ ಸರ್ವಾಂಗವಾಗಿ ಅಗ್ರ ಪ್ರಾಶಸ್ತ್ಯಕ್ಕೆ ಅರ್ಹವಾಗಿದೆ ಎಂದು ರಾಷ್ಟ್ರಪತಿ ಡಾ. ಜಾಕಿರ್ ಹುಸೇನ್ ಇಂದು ಇಲ್ಲಿ ಘೋಷಿಸಿದರು.

‘ನಮ್ಮ ಭಾಷೆಗಳ ಪಂಕ್ತಿಯಲ್ಲಿ ತಮಿಳು ಒಂದು ಗೌರವ ಸ್ಥಾನವನ್ನು ಪಡೆದಿದೆ.ಉತ್ತರ ಮತ್ತು ದಕ್ಷಿಣಗಳ ನಡುವೆ ಒಂದು ಪ್ರಮುಖ ಸಂಪರ್ಕವನ್ನುಂಟು ಮಾಡಿದೆ. ಹೊರದೇಶಗಳಲ್ಲೂ ಈ ಭಾಷೆಯನ್ನು ಮಾತನಾಡುವವರು ಇರುವುದರಿಂದ ಅದು ಅಂತರ್ರಾಷ್ಟ್ರೀಯ ಭಾಷೆಯೂ ಹೌದು’ ಎಂದು ಡಾ. ಹುಸೇನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT