ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಕೊಡಲಿ!

Last Updated 3 ಜನವರಿ 2018, 19:30 IST
ಅಕ್ಷರ ಗಾತ್ರ

‘ಹಿಂದೂ ಧರ್ಮ ಎಂಬುದೇ ಇರಲಿಲ್ಲ’ ಎಂದು ಸಮಸ್ತ ಪ್ರಜ್ಞಾವಂತ ಜನರು (?!) ವಾದಿಸುತ್ತಿರುವ ಇಂದಿನ ದಿನಗಳಲ್ಲಿ ‘ಬ್ರಾಹ್ಮಣರಿಗೆ ಪ್ರತ್ಯೇಕ ಧರ್ಮದ ಸ್ಥಾನ ನೀಡುವುದು ಸೂಕ್ತ’ ಎಂಬ ಡಾ.ದೇವಿದಾಸ ಪ್ರಭು ಅವರ ಅಭಿಪ್ರಾಯ (ವಾ.ವಾ., ಜ.3) ಸಕಾಲಿಕ ಎಂದೆನಿಸುತ್ತದೆ.

ಈ ದೇಶದಲ್ಲಿ ಪರಕೀಯರ ಆಳ್ವಿಕೆ ಆರಂಭವಾದ ನಂತರ, ತಮ್ಮ ಧರ್ಮವನ್ನು ಇಲ್ಲಿ ಸಂಸ್ಥಾಪಿಸುವುದಕ್ಕಾಗಿ, ‘ಕತ್ತಿ ಇಲ್ಲವೇ ಕುರ್‌ಆನ್’ ಎಂಬ ಉದ್ಘೋಷದೊಡನೆ ನಡೆಸಿದ ಮತಾಂತರದಿಂದಾಗಿ ಲಕ್ಷಾಂತರ ಹಿಂದೂಗಳು ಅವರ ಧರ್ಮಕ್ಕೆ ಸೇರ್ಪಡೆಯಾದರು. ಇಂತಹ ಕಾಲಘಟ್ಟದಲ್ಲಿ ಉದ್ಭವಿಸಿದ ‘ವಿಜಯನಗರ ಸಾಮ್ರಾಜ್ಯ’ ಹಾಗೂ ತದನಂತರದ ಕಾಲಮಾನದಲ್ಲಿ ಜನಿಸಿದ ‘ಮರಾಠಾ ಸಾಮ್ರಾಜ್ಯ’ಗಳ ಉಗ್ರ ಹೋರಾಟದಿಂದಾಗಿ ಈ ದೇಶದಲ್ಲಿ ಹಿಂದೂ ಧರ್ಮ ಇಂದಿಗೂ ಜೀವಂತವಾಗಿದೆ. ಆದರೆ, ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಹಿಂದೆ ವಿದ್ಯಾರಣ್ಯ ಮತ್ತು ಮರಾಠಾ ಸಾಮ್ರಾಜ್ಯ ಸ್ಥಾಪನೆಯ ಹಿಂದೆ ರಾಮದಾಸ ಎಂಬ ಬ್ರಾಹ್ಮಣರು ಪ್ರೇರಕ ಶಕ್ತಿಯಾಗಿದ್ದರು ಎಂಬ ಐತಿಹಾಸಿಕ ಸತ್ಯ ಕತ್ತಲೆಯಲ್ಲಿಯೇ ಉಳಿದಿರುವುದು ವಿಷಾದನೀಯ.

ಬ್ರಾಹ್ಮಣರು ಸಾಮ್ರಾಜ್ಯ ಸ್ಥಾಪನೆ ಮಾಡಿದುದಾಗಲೀ ಅಧಿಕಾರದ ಗದ್ದುಗೆ ಏರಿದುದಾಗಲೀ ಇತಿಹಾಸದಲ್ಲಿ ಎಂದಿಗೂ ಕಾಣಬರುವುದಿಲ್ಲ. ಅಂದು ಈ ಬ್ರಾಹ್ಮಣರು ಪರಕೀಯರ (ಅಥವಾ ಪರ ಧರ್ಮೀಯರ) ವಿರುದ್ಧ ಸಡ್ಡು ಹೊಡೆದು ನಿಲ್ಲದೇ ಹೋಗಿದ್ದಲ್ಲಿ, ವೈದಿಕ ಧರ್ಮವಾಗಲೀ, ಇನ್ಯಾವುದೇ ಧರ್ಮವಾಗಲೀ ಇಂದು ಅಸ್ತಿತ್ವದಲ್ಲಿಯೇ ಇರುತ್ತಿರಲಿಲ್ಲವೇನೋ! ಹೀಗೆ ತಮ್ಮ ಧರ್ಮ– ಮತದ ಉಳಿವಿಗೆ ಕಾರಣೀಭೂತರಾದ ಬ್ರಾಹ್ಮಣರನ್ನು ಹೀಯಾಳಿಸುವುದು, ಅವರ ಧಾರ್ಮಿಕ ಗ್ರಂಥಗಳನ್ನು ಅವಹೇಳನ ಮಾಡುವುದು ಕೆಲವರಿಗೆ ಈಗೀಗ ಅಭ್ಯಾಸವಾಗಿಹೋಗಿದೆ.

ಒಂದು ಸಮೀಕ್ಷೆಯ ಪ್ರಕಾರ ದೇಶದಲ್ಲಿ ಅತ್ಯಂತ ಹಿಂದುಳಿದ ವರ್ಗಗಳಲ್ಲಿ ಬ್ರಾಹ್ಮಣ ಸಮುದಾಯದವರೇ ಮೊದಲು ಬರುತ್ತಾರೆ. ಹೀಗಾಗಿ, ಬ್ರಾಹ್ಮಣರನ್ನು ‘ಹಿಂದುಳಿದ ವರ್ಗ’ ಎಂದು ಪರಿಗಣಿಸಿ, ಎಲ್ಲ ಕ್ಷೇತ್ರಗಳಲ್ಲೂ ಅವರಿಗೆ ಮೀಸಲಾತಿ ನೀಡಬೇಕಾದುದು ಇಂದು ಅಗತ್ಯವಷ್ಟೇ ಅಲ್ಲ, ಅನಿವಾರ್ಯವೂ ಆಗಿದೆ.

–ಉಡುಪಿ ಅನಂತೇಶ ರಾವ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT