ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಬಂದ್‌ ಯಶಸ್ವಿ: ಉಪ ನಗರ ರೈಲು, ಮೆಟ್ರೊ ಸಂಚಾರಕ್ಕೆ ತೊಂದರೆ

Last Updated 3 ಜನವರಿ 2018, 19:30 IST
ಅಕ್ಷರ ಗಾತ್ರ

ಮುಂಬೈ: ಭೀಮಾ–ಕೋರೆಗಾಂವ್‌ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಹಿಂಸಾಚಾರ ವಿರೋಧಿಸಿ ಬುಧವಾರ ನಡೆದ ಮಹಾರಾಷ್ಟ್ರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಲ್ಲು ತೂರಾಟ, ವಾಹನಗಳ ಗಾಜು ಪುಡಿ ಮಾಡಿದ ಕೆಲವು ಘಟನೆಗಳನ್ನು ಬಿಟ್ಟರೆ‌ ಬಂದ್‌  ಶಾಂತಿಯುತವಾಗಿತ್ತು. ಮುಂಬೈ ಉಪ ನಗರಗಳು, ಠಾಣೆ, ಪುಣೆ, ನಾಗಪುರ, ಸಾಂಗ್ಲಿ, ಮೀರಜ್‌, ಔರಂಗಾಬಾದ್‌, ಅಮರಾವತಿ, ಬಾರಾಮತಿಯಲ್ಲಿ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.

ದಲಿತ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಮಹಾನಗರದ ಹಲವೆಡೆ ವಾಹನ ಮತ್ತು ರೈಲು ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಮುಂಬೈನ ಜೀವನಾಡಿಯಾದ ಉಪನಗರ ರೈಲು ಸಂಚಾರ ಮತ್ತು ಮೆಟ್ರೊ ಸಂಚಾರ ಅಸ್ತವ್ಯವಸ್ತಗೊಂಡಿತ್ತು.

ರಾಜ್ಯದಾದ್ಯಂತ ಭಾರಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ಮುಂಬೈ ನಗರದಲ್ಲಿ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು. ರೈಲು ತಡೆಗೆ ಯತ್ನಿಸಿದ ಹಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ವಾಹನ ಮತ್ತು ಜನಸಂಚಾರ ವಿರಳವಾಗಿದ್ದ ಕಾರಣ ನಗರದ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೆ, ಕೆಲವೆಡೆ ಸಂಚಾರ ದಟ್ಟಣೆಯಿಂದ ಜನರು ಮತ್ತು ವಾಹನ ಸವಾರರು ತತ್ತರಿಸಿ ಹೋದರು. ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತ ವಾಹನಗಳು ಕಂಡುಬಂದವು.

ಖಾಲಿ–ಖಾಲಿ: ಸದಾ ಜನರಿಂದ ತುಂಬಿರುತ್ತಿದ್ದ ಮಲ್ಟಿಪ್ಲೆಕ್ಸ್‌, ಚಿತ್ರಮಂದಿರ, ಶಾಪಿಂಗ್‌ ಮಾಲ್‌ಗಳಲ್ಲಿ ಖಾಲಿಯಾಗಿದ್ದವು. ಮಂಜಾಗ್ರತಾ ಕ್ರಮವಾಗಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಕಚೇರಿಗಳಿಗೆ ಡಬ್ಬಿಗಳಲ್ಲಿ ಆಹಾರ ಪೂರೈಸುವ ಡಬ್ಬಾವಾಲಾಗಳು ಕೂಡ ಸೇವೆ ಸ್ಥಗಿತಗೊಳಿಸಿದ್ದರು.

ಹಿಂಸಾಚಾರಕ್ಕೆ ಕಾರಣ ಏನು?

ಪುಣೆ ಸಮೀಪದ ಭೀಮಾ–ಕೋರೆಗಾಂವ್‌ನಲ್ಲಿ 1888ರಲ್ಲಿ ಬ್ರಿಟಿಷ್‌ ಮತ್ತು ಪೇಶ್ವೆಗಳ ನಡುವೆ ಯುದ್ಧ ನಡೆದಿತ್ತು. ಬ್ರಿಟಿಷ್‌ ಸೇನೆಯ ಮಹಾರ್‌ ರೆಜಿಮೆಂಟ್‌ನಲ್ಲಿದ್ದ ದಲಿತ ಸೈನಿಕರು ಪೇಶ್ವೆಗಳ ಸೇನೆಯನ್ನು ಸದೆಬಡಿದಿದ್ದರು.

ಅದರ ಸ್ಮರಣಾರ್ಥ ಸೋಮವಾರ ಭೀಮಾ–ಕೋರೆಗಾಂವ್‌ ಗ್ರಾಮದಲ್ಲಿ 200ನೇ ವಿಜಯೋತ್ಸವ ಆಯೋಜಿಸಲಾಗಿತ್ತು. ಇದರಲ್ಲಿ ಲಕ್ಷಾಂತರ ದಲಿತರು ಭಾಗವಹಿಸಿದ್ದರು.

ಪೇಶ್ವೆಗಳ ವಿರುದ್ಧದ ಬ್ರಿಟಿಷರ ವಿಜಯದ ಆಚರಣೆಗೆ ಬಲಪಂಥೀಯ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

ವಿಜಯೋತ್ಸವದಲ್ಲಿ ತೊಡಗಿದ್ದ ದಲಿತರ ಮೇಲೆ ಕೇಸರಿ ಧ್ವಜ ಹಿಡಿದ ಕಾರ್ಯಕರ್ತರು ದಾಳಿ ನಡೆಸಿದಾಗ ಹಿಂಸಾಚಾರ ಭುಗಿಲೆದ್ದಿತ್ತು. 28 ವರ್ಷದ ಯುವಕ ಬಲಿಯಾಗಿದ್ದ.

ತಪ್ಪಿತಸ್ಥರ ವಿರುದ್ಧ ಕ್ರಮ: ಫಡಣವೀಸ್‌

ಮುಂಬೈ (ಪಿಟಿಐ): ಭೀಮಾ–ಕೋರೆಗಾಂವ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ತಿಳಿಸಿದ್ದಾರೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆಎಂದು ಅವರು ತಿಳಿಸಿದ್ದಾರೆ.

‘ಮಹಾರಾಷ್ಟ್ರ ಪ್ರಗತಿಪರ ಮತ್ತು ಶಾಂತಿಯುತ ರಾಜ್ಯ. ರಾಜ್ಯದಲ್ಲಿಯ ಕೋಮು ಸಾಮರಸ್ಯ ಮತ್ತು ಕಾನೂನು, ಸುವ್ಯವಸ್ಥೆ ಹಾಳು ಮಾಡಲು
ಹೊರಗಿನ ಕೆಲವು ಶಕ್ತಿಗಳು ಯತ್ನಿಸುತ್ತಿವೆ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಭೀಮಾ–ಕೋರೆಗಾಂವ್‌ನಲ್ಲಿ ಸೋಮವಾರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡುವಂತೆ ಮರಾಠಾ ಸಂಘಟನೆಗಳು ಒತ್ತಾಯಿಸಿವೆ.

ರಾಜ್ಯದಲ್ಲಿ ಶಾಂತಿ, ಸಾಮರಸ್ಯ ಕಾಯ್ದುಕೊಳ್ಳುವಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.

ಬಂದ್‌ ಕಾರಣದಿಂದ 12 ವಿಮಾನ ಸಂಚಾರ ರದ್ದಾಗಿದ್ದು, 235 ವಿಮಾನ ಸಂಚಾರ ವಿಳಂಬವಾಗಿದೆ.

ಈ ನಡುವೆ ದಲಿತರ ಹೋರಾಟ ಪಕ್ಕದ ಗುಜರಾತ್‌ಗೂ ವ್ಯಾಪಿಸಿದೆ. ದಲಿತ ಸಂಘಟನೆಗಳ ಕಾರ್ಯಕರ್ತರು ರ‍್ಯಾಲಿ ನಡೆಸಿ ಬಿಜೆಪಿ ಕಚೇರಿ
ಎದುರು ಘೋಷಣೆ ಕೂಗಿದರು.

ರಾಜ್ಯದ 200ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಸ್ಥಗಿತ 

ಬೆಳಗಾವಿ: ಭೀಮಾ– ಕೋರೆಗಾಂವದಲ್ಲಿ ದಲಿತರ ಮೇಲೆ ನಡೆದ ಹಿಂಸಾಚಾರ ಖಂಡಿಸಿ ದಲಿತ ಸಂಘಟನೆಗಳು ಬುಧವಾರ ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿದ್ದರಿಂದ, ಜಿಲ್ಲೆಯ ಮೂಲಕ ಆ ರಾಜ್ಯಕ್ಕೆ ಹೋಗಬೇಕಾಗಿದ್ದ ಸಾರಿಗೆ ಸಂಸ್ಥೆಯ 200ಕ್ಕೂ ಹೆಚ್ಚು ಬಸ್‌ಗಳ ಸಂಚಾರವನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಗಿತಗೊಳಿಸಲಾಗಿದೆ.

‘ಬೆಳಗಾವಿ ಡಿಪೊದಿಂದ ಮಹಾರಾಷ್ಟ್ರದ ವಿವಿಧೆಡೆಗೆ ತೆರಳಬೇಕಿದ್ದ 50 ಹಾಗೂ ಬೆಂಗಳೂರು, ಶಿವಮೊಗ್ಗ ಕಡೆಗಳಿಂದ ಜಿಲ್ಲೆಯ ಮೂಲಕ ಹಾದು ಹೋಗಬೇಕಿದ್ದ 150ಕ್ಕೂ ಹೆಚ್ಚು ಬಸ್‌ಗಳನ್ನು ಚಿಕ್ಕೋಡಿ, ನಿಪ್ಪಾಣಿ ಸೇರಿದಂತೆ ಸುರಕ್ಷಿತ ಸ್ಥಳಗಳಲ್ಲಿ ನಿಲುಗಡೆ ಮಾಡಲಾಗಿದೆ. ರಾತ್ರಿ ಕೆಲವೇ ಬಸ್‌ಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಳಗಾವಿ ವಿಭಾಗ ನಿಯಂತ್ರಣಾಧಿಕಾರಿ ಗಣೇಶ ರಾಠೋಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT