ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದಿಂದ ‘ಇವಿಎಂ ಸವಾಲು’!

Last Updated 8 ಫೆಬ್ರುವರಿ 2018, 9:01 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುನ್ಮಾನ ಮತ ಯಂತ್ರಗಳ ಬಗ್ಗೆ ಸಾರ್ವಜನಿಕರಲ್ಲಿರುವ  ಸಂದೇಹಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ‘ಇವಿಎಂ ಸವಾಲು’ (ಇವಿಎಂ ಚಾಲೆಂಜ್) ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ಚುನಾವಣಾ ಆಯೋಗ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಕೇಂದ್ರ ಚುನಾವಣಾ ಆಯುಕ್ತ ಅಚಲ್‌ ಕುಮಾರ್‌ ಜ್ಯೋತಿ ಅವರಿಗೆ ಪತ್ರ ಬರೆದಿದ್ದಾರೆ.

‘ಇವಿಎಂ ಸವಾಲು’ ಪರೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಜ್ಞಾನಿಗಳು, ತಂತ್ರಜ್ಞರು, ಕಾರ್ಪೊರೇಟ್‌ ಕಂಪೆನಿಗಳು, ನವೋದ್ಯಮ, ಸಂಶೋಧನೆ–ಅಭಿವೃದ್ಧಿ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳಿಗೆ ಅವಕಾಶ ನೀಡಲಾಗುವುದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಈ ವಿಷಯದಲ್ಲಿ ಆಸಕ್ತಿ ಹೊಂದಿರುವ ಇತರ ವ್ಯಕ್ತಿಗಳಿಗೆ ಯಾವುದೇ ಮತ ಯಂತ್ರವನ್ನು ಪರೀಕ್ಷಿಸಲು ಅವಕಾಶ ನೀಡಲಾಗುವುದು. ಮತ ಯಂತ್ರದ  ವಿನ್ಯಾಸ ದಾಖಲೆ, ಪರೀಕ್ಷಾ ವಿವರಣೆ ಮತ್ತು ಫಲಿತಾಂಶ, ಭದ್ರತಾ ನಿಯಮಗಳನ್ನು ಚುನಾವಣಾ ಆಯೋಗ ಯಾವ ರೀತಿಯಲ್ಲಿ ಪಾಲಿಸುತ್ತದೆಯೋ ಅದೇ ರೀತಿ ಇಲ್ಲೂ ಪಾಲಿಸಲಾಗುವುದು. ‘ಇವಿಎಂ ಸವಾಲು’ ಪರೀಕ್ಷೆ  ಫಲಿತಾಂಶವನ್ನು ಬಳಿಕ ಬಹಿರಂಗಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

‘ಈ ಪರೀಕ್ಷೆ ರಾಜಕೀಯ ಉದ್ದೇಶದ್ದಲ್ಲ. ದೇಶದ ಎಲ್ಲ ಬಗೆಯ ತಂತ್ರಜ್ಞರು, ಪ್ರತಿಭಾವಂತರು ಮತ್ತು ಆಸಕ್ತರು ಪಾಲ್ಗೊಳ್ಳಬೇಕು. ಇದು ವೈಜ್ಞಾನಿಕ ಕುತೂಹಲ ತಣಿಸುವ ಪರೀಕ್ಷೆ. ರಾಜಕೀಯ ಪಕ್ಷಗಳಿಂದ ಮುಕ್ತವಾದ ಪರೀಕ್ಷೆ ಆಗಿರುವುದರಿಂದ, ರಾಜಕೀಯ ಪಕ್ಷಗಳ ಜತೆ ಗುರುತಿಸಿಕೊಳ್ಳಲು ಬಯಸದ ವಿಜ್ಞಾನಿಗಳು ಮತ್ತು ತಂತ್ರಜ್ಞರು ಇದರಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಅವರು ಹೇಳಿದ್ದಾರೆ.

‘ಈ ಉದ್ದೇಶಕ್ಕಾಗಿ ಚುನಾವಣಾ ಆಯೋಗ ಸರ್ಕಾರಕ್ಕೆ 250 ವಿದ್ಯುನ್ಮಾನ ಮತ ಯಂತ್ರಗಳನ್ನು ನೀಡಬೇಕು. ಈ ಸವಾಲನ್ನು ಚುನಾವಣಾ ಆಯೋಗದ ಮೇಲುಸ್ತುವಾರಿಯಲ್ಲಿ ನಡೆಸಲು ಸಿದ್ಧರಿದ್ದೇವೆ. ನಾವು ನಡೆಸುವ ಈ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗ ಭಾಗವಹಿಸಬೇಕು. ವಿಜ್ಞಾನಿಗಳು ಮತ್ತು ತಂತ್ರಜ್ಞರು ಇದರಲ್ಲಿ ಭಾಗವಹಿಸುವುದರಿಂದ ಮತ ಯಂತ್ರದ ಸಾಧ್ಯತೆಗಳು ಮತ್ತು ಮಿತಿಯನ್ನು ಮತದಾರರೂ ಅರಿತುಕೊಳ್ಳಲು ಸಾಧ್ಯವಿದೆ’ ಎಂದರು.

‘ಮತ ಯಂತ್ರಗಳಲ್ಲಿ ಲೋಪಗಳಿದ್ದರೆ, ಅದನ್ನು ಎಲ್ಲರೂ ಸೇರಿ ಸರಿಪಡಿಸಬಹುದು. ದೋಷಗಳೇ ಇಲ್ಲದಿದ್ದರೆ, ನಮ್ಮ ಪ್ರಜಾ ತಾಂತ್ರಿಕ ವ್ಯವಸ್ಥೆ ಮೇಲೆ ನಂಬಿಕೆ  ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಎರಡು ಪುಟಗಳ ಪತ್ರದಲ್ಲಿ ಖರ್ಗೆ ತಿಳಿಸಿದ್ದಾರೆ.

‘2017 ರ ಮೇ ತಿಂಗಳಲ್ಲಿ ನಡೆದ ಕೆಲವು ರಾಜ್ಯಗಳ ಚುನಾವಣೆಯ ಬಳಿಕ ಇವಿಎಂಗಳನ್ನು ದುರ್ಬಳಕೆ ಮಾಡಲಾಗುತ್ತದೆ ಎಂಬ ಸಂದೇಹ ವ್ಯಕ್ತವಾಗಿದೆ. ಈ ಅನುಮಾನವನ್ನು ಚುನಾವಣಾ ಆಯೋಗ ಪರಿಹರಿಸಬೇಕು. ಈ ವರ್ಷ ನಮ್ಮ ರಾಜ್ಯದಲ್ಲೂ ಚುನಾವಣೆ ಇದೆ. ಮತ ಯಂತ್ರಗಳ ದುರ್ಬಳಕೆ ಸಾಧ್ಯತೆ ಇದೆ. ಇದರಿಂದ ಪಾರದರ್ಶಕ ಚುನಾವಣೆ ನಡೆಸಲು ಸಾದ್ಯವಿಲ್ಲ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT