ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಾಗಬೇಕು ಸಮಾಜಶಾಲೆ

Last Updated 4 ಜನವರಿ 2018, 19:30 IST
ಅಕ್ಷರ ಗಾತ್ರ

‘ಶಿಕ್ಷಣ ಎಂದರೆ ಪ್ರೀತಿ’ ಎಂಬ ಮಾತೊಂದಿದೆ. ತಾಯಿ– ತಂದೆಯರ ಪ್ರೀತಿ ಕೂಡ ಶಿಕ್ಷಣವೇ ಆಗಿರುತ್ತದೆ. ಶಿಕ್ಷಣದ ಕುರಿತು ವಿಚಾರ ಮಾಡುವಾಗ ನಮಗೆ ರವೀಂದ್ರನಾಥ ಟ್ಯಾಗೋರರ ನೆನಪು ಆಗಲೇಬೇಕು. ರವೀಂದ್ರನಾಥರು ಶಾಲೆಯಲ್ಲಿ ಓದದೆ, ಹುಟ್ಟಿ ಬೆಳೆದ ಮನೆಯಲ್ಲಿಯೇ ಏನೆಲ್ಲ ಕಲಿತರು, ಎಷ್ಟು ಕಲಿತರು, ಕಲಿತು ಕಲಿತು ಏನಾದರು ಎಂಬುದು ಲೋಕಕ್ಕೇ ಗೊತ್ತಿದೆ.

ತಾಯಿ–ತಂದೆ ವಿದ್ಯಾವಂತರಾಗಿರದ ಕಾರಣದಿಂದ ಮತ್ತು ವಿದ್ಯಾವಂತರಾಗಿದ್ದರೂ ಮಗುವಿಗೆ ಕಲಿಸಲು ಸಮಯವಿಲ್ಲದ ಕಾರಣದಿಂದ ಮಗುವಿನ ಶಿಕ್ಷಣಕ್ಕಾಗಿ ‘ಶಾಲೆ’ ಸೃಷ್ಟಿಯಾಯಿತು. ಇವತ್ತು ಶಾಲಾ ಶಿಕ್ಷಣದ ಸ್ವರೂಪ ಏನು ಎಂಬುದನ್ನು ಅರಿತುಕೊಳ್ಳಬೇಕಾದ ಅಗತ್ಯ ಮಕ್ಕಳ ತಾಯಿ– ತಂದೆಯರಿಗೂ ಇದೆ, ಶಿಕ್ಷಕರಿಗೂ ಇದೆ. ಆದರೆ ಇವತ್ತು ಶಿಕ್ಷಣ ಎಂಬುದು ಹೇಗಿದೆ, ಶಾಲೆಯಲ್ಲಿ ಶಿಕ್ಷಣ ಹೇಗೆ ನಡೆಯುತ್ತಿದೆ ಎಂಬುದನ್ನು ಸಮಗ್ರವಾಗಿ ತಿಳಿದುಕೊಳ್ಳುವುದು ಸಮಾಜದ ಹೊಣೆಗಾರಿಕೆ ಕೂಡ ಆಗಿದೆ.

ಯಾಕೆಂದರೆ, ವಿದ್ಯಾರ್ಥಿ ಕೇವಲ ಪುಸ್ತಕದ ಓದಿನ ಮೂಲಕ ಶ್ರೇಷ್ಠನಾದರೆ ಸಾಲದು; ಸನ್ಮಾರ್ಗಿಯೂ ಸನ್ನಡತೆಯವನೂ ಆಗಿರಬೇಕು. ಶಿಕ್ಷಣ ಹಾಗಿದ್ದರೆ ಮಾತ್ರ ಸಮಾಜಕ್ಕೆ, ದೇಶಕ್ಕೆ ಉತ್ತಮ ಅಧಿಕಾರಿಗಳು, ಉತ್ತಮ ಜನನಾಯಕರು ಮತ್ತು ಭ್ರಷ್ಟವಲ್ಲದ ಆಡಳಿತ ಸಿಗುತ್ತದೆ.

ಇವತ್ತು ಶಿಕ್ಷಣ ನಿಜವಾದ ಶಿಕ್ಷಣ ಆಗಿಲ್ಲ. ಶಿಕ್ಷಣಕ್ಕೂ ನಾವು ಬದುಕಬೇಕಾದ ಮಾನವೀಯ ಬದುಕಿಗೂ ನೇರವಾದ ಸಂಬಂಧ ಇಲ್ಲ. ಶಿಕ್ಷಣ ಕೇವಲ ನೌಕರಿ ಮತ್ತು ಅದರಿಂದ ಲಭಿಸುವ ಹಣಕ್ಕೆ ಎಂಬ ವಿಚಾರ ಸಮಾಜಕ್ಕೆ ಗೊತ್ತಿದೆ. ದೊಡ್ಡ ಸಂಬಳದ ಹೆಚ್ಚಿನ ನೌಕರಿಗಳ ಪ್ರಧಾನ ಗುಣವಾದ ಒತ್ತಡವು ನೌಕರನಿಗೆ ಹಣದ ಜೊತೆ ದೈಹಿಕ, ಮಾನಸಿಕ ಅನಾರೋಗ್ಯ ಉಂಟುಮಾಡುತ್ತದೆ ಎನ್ನುವುದು ರಹಸ್ಯ ಸಂಗತಿಯೇನಲ್ಲ.

ಈಚೆಗಿನ ಆಶಾದಾಯಕವಾದ ಬೆಳವಣಿಗೆಯೆಂದರೆ, ಅದೆಷ್ಟೋ ಮಂದಿ ಮೇಜು, ಕುರ್ಚಿ, ಕಂಪ್ಯೂಟರ್‌ಗಳ ನಡುವೆ ದಿನದ ಅರ್ಧ ಅಥವಾ ಮುಕ್ಕಾಲು ಕಾಲ ನರಳುವ ದಾಸ್ಯವನ್ನು ತೊರೆದು, ನಿಸರ್ಗಕ್ಕೆ ಹತ್ತಿರವಾದ ನೆಲದಲ್ಲಿ ಮಾನವೀಯವಾಗಿ ಬದುಕುವ ಉದ್ದೇಶದಿಂದ ಮರಳಿ ಮಣ್ಣಿಗೆ ಬರುತ್ತಿರುವುದು.

ಈಗ ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಅವಿದ್ಯಾವಂತರ ಸಂಖ್ಯೆಗಿಂತ ದೊಡ್ಡದಿದೆ. ಧನವಂತರ ಸಂಖ್ಯೆ ಕೂಡ ಗಣನೀಯವಾಗಿ ದೊಡ್ಡದಿದೆ. ಆದ್ದರಿಂದ ಶಿಕ್ಷಣಕ್ಕೆ ತಗುಲಿಕೊಂಡಿರುವ ಸಕಲ ಭೂತ– ಪಿಶಾಚಿಗಳನ್ನು ಎಲ್ಲರೂ ಸೇರಿ ಈಗಲಾದರೂ ತೊಲಗಿಸಬೇಕು, ಸಾಧ್ಯವಿಲ್ಲವೇ? ಸಾಧ್ಯವಿದೆ.

ಸರ್ಕಾರಿ ಶಾಲೆ, ಖಾಸಗಿ ಶಾಲೆ ಎಂಬ ಭೇದವಿಲ್ಲದೆ ಎಲ್ಲಾ ಶಾಲೆಗಳನ್ನೂ ಸಮಾಜಶಾಲೆ ಅಥವಾ ಕಮ್ಯುನಿಟಿ ಶಾಲೆಗಳಾಗಿ ಪರಿವರ್ತಿಸಬೇಕು. ಶಾಲೆಯನ್ನು ಶ್ರೇಷ್ಠ ಶಾಲೆಯಾಗಿಸುವ ಹೊಣೆ ಸಮಾಜದ್ದಾಗಿರಬೇಕು. ಶಾಲೆಯನ್ನು ಅತ್ಯಂತ ಸಮರ್ಥವಾಗಿ ನಡೆಸುವ ಸಾಮರ್ಥ್ಯವಿರುವ ಮುಖ್ಯೋಪಾಧ್ಯಾಯನನ್ನು ನೇಮಿಸಬೇಕು. ಶಾಲೆ ಹೇಗೆ ನಡೆಯುತ್ತದೆ ಎಂದು ನಿಗಾ ಇಡುವ ಒಬ್ಬ ಸಜ್ಜನ ಸ್ಕೂಲ್ ಇನ್‌ಸ್ಪೆಕ್ಟರ್ ಶಾಲೆಯಲ್ಲಿಯೇ ಇರಬೇಕು. ಉತ್ತಮ ದೈಹಿಕ ಶಿಕ್ಷಣ ನೀಡಬಲ್ಲ ಒಬ್ಬ ಶಿಕ್ಷಕನಿರಬೇಕು. ಇನ್‌ಸ್ಪೆಕ್ಟರ್ ಮತ್ತು ದೈಹಿಕ ಶಿಕ್ಷಣದ ಶಿಕ್ಷಕ ಶಾಲೆಯನ್ನು ದೇವಾಲಯ ಎಂಬ ಭಾವನೆಯಿಂದ ನೋಡಬೇಕು. ಶಾಲೆಯಲ್ಲಿ ಏನು ಕೆಟ್ಟದು ನಡೆಯಬಾರದೋ ಅದು ನಡೆಯದಂತೆ ನೋಡಿಕೊಳ್ಳುವ ಮತ್ತು ನಡೆದರೆ ಅದನ್ನು ತಕ್ಷಣ ಮುಖ್ಯ ಉಪಾಧ್ಯಾಯನ ಗಮನಕ್ಕೆ ತರುವ ಕೆಲಸ ಇವರದಾಗಿರಬೇಕು. ವಿದ್ಯಾಥಿಗಳು ಯಾವುದೇ ವಿಧದ ದೈಹಿಕ ಮತ್ತು ಮಾನಸಿಕ ಶಿಕ್ಷೆಗೆ ಗುರಿಯಾಗಬಾರದು. ಮಾನಸಿಕವಾಗಿ ಸಹ ಮಕ್ಕಳನ್ನು ನೋಯಿಸುವ ಶಿಕ್ಷಕರಿರಬಾರದು. ಪ್ರೀತಿಯ ಬೆನ್ನೆಲುಬಿಲ್ಲದ ಶಿಕ್ಷಣ ಶಿಕ್ಞಣವಾಗಿರಲು ಸಾಧ್ಯವಿಲ್ಲ. ಹೋಮ್‍ವರ್ಕ್ ಎಂಬುದರ ಹೆಸರಿನಲ್ಲಿ ಶಿಕ್ಷಕರು ಪ್ರತಿದಿನ ಒಂದಷ್ಟು ಹೊರೆಯನ್ನು ಎಳೆ ಮಕ್ಕಳ ಮೇಲೆ ಹೊರಿಸಿ ಮನೆಗೆ ಕಳಿಸುವ ಪದ್ಧತಿ ಕೊನೆಗೊಳ್ಳಬೇಕು. ಅದರ ಒತ್ತಡಕ್ಕೆ ವಿದ್ಯಾರ್ಥಿಯೂ ಪೋಷಕರೂ ಸಿಲುಕಿ ನರಳುವುದು ಇಲ್ಲವಾಗಬೇಕು.

ಶಾಲೆಗೆ ಎಲ್ಲಾ ಪರಿಕರಗಳನ್ನು ಒದಗಿಸುವ; ಉತ್ತಮವಾದ ಒಂದು ಆವರಣ ಗೋಡೆ, ಕುಡಿಯುವ ನೀರಿನ ವ್ಯವಸ್ಥೆ, ಸಾಕಷ್ಟು ಶೌಚಾಲಯಗಳು, ಒಂದು ಸುಂದರವಾದ ತೋಟ ಇತ್ಯಾದಿಗಳನ್ನು ನಿರ್ಮಿಸಿಕೊಡುವ ಜವಾಬ್ದಾರಿ ಸಮಾಜದ್ದಾಗಿರಬೇಕು. ಅದಕ್ಕೆ ಬೇಕಾದ ಹಣವನ್ನು ಸರ್ಕಾರ ಮತ್ತು ಸಮಾಜ ಒದಗಿಸಬೇಕು. ಒಟ್ಟಿನಲ್ಲಿ ಎಲ್ಲಾ ಶಾಲೆಗಳೂ ‘ಶಾಲೆ ಹೀಗಿರಬೇಕು’ ಎಂಬಷ್ಟು ಆದರ್ಶ ಶಾಲೆಗಳಾಗಬೇಕು. ಶಾಲೆಯು ಸರ್ಕಾರದ ಸೊತ್ತಲ್ಲ, ಧನವಂತರ ಸೊತ್ತಲ್ಲ. ಶಾಲೆ ಯಾರೇ ಮಾಡಿರಲಿ, ಶಾಲೆ ಸಮಾಜದ ಸೊತ್ತು. ‘ಇದು ನಮ್ಮ ಶಾಲೆ’ ಎಂಬ ಭಾವ ಪ್ರತಿಯೊಬ್ಬನ ಮನದಲ್ಲಿಯೂ ಮೂಡಬೇಕು. ಇತ್ತೀಚೆಗಿನ ಕಾಲದಲ್ಲಿ ಪ್ರತಿಯೊಂದು ಊರಿನಲ್ಲಿಯೂ ನೂರಾರು ಹೊಸ ಹೊಸ ದೇವಾಲಯ, ಗುಡಿ– ಗೋಪುರಗಳು ತಲೆ ಎತ್ತಿವೆ. ಪ್ರತಿವರ್ಷ ಬ್ರಹ್ಮಕಲಶ, ಆ ಪೂಜೆ ಈ ಪೂಜೆ ಎಂದು ಸಾವಿರಗಟ್ಟಲೆ ಲಕ್ಷಗಟ್ಟಲೆ ಹಣ ವ್ಯಯವಾಗುತ್ತದೆ.
ದೇವರು ಹೊಸದಾಗಿ ಏನೂ ಕೊಡುತ್ತಿಲ್ಲ.

ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಎಂಬ ಎರಡು ವಿಧದ ಶಾಲೆಗಳಿರಬಾರದು. ಶಾಲೆಗಳಲ್ಲಿ ಬದುಕಿಗೆ ಬೇಕಾದ ಎಲ್ಲಾ ಭಾಷೆಗಳನ್ನೂ ಕಲಿಸಬೇಕು, ವಿವಿಧ ಕೌಶಲಗಳನ್ನು ಕಲಿಸಬೇಕು, ಉತ್ತಮ ನಡೆ–ನುಡಿಯನ್ನು ಕಲಿಸಬೇಕು, ಸದ್ಗುಣ, ಸಚ್ಚಾರಿತ್ರ್ಯ ಒಳ್ಳೆಯ ಬದುಕಿಗೆಷ್ಟು ಮುಖ್ಯ ಎನ್ನುವುದಕ್ಕೆ ಮಾದರಿಯಾಗಿ ತಾಯಿ–ತಂದೆಯೂ ಇರಬೇಕು, ಶಿಕ್ಷಕರೂ ಇರಬೇಕು. ಅದು ಸಮಾಜದ ಸಂಸ್ಕೃತಿ, ಸಮಾಜದ ಮತ್ತು ದೇಶದ ಸೌಂದರ್ಯ ಎನಿಸಿಕೊಳ್ಳುತ್ತದೆ.

ಸಮಾಜ ಶಾಲೆಯಲ್ಲಿ ಶಿಕ್ಷಕರು ಮತ್ತು ಪೋಷಕರ ನಡುವೆ ಅನ್ಯೋನ್ಯ ಸಂಪರ್ಕವಿರಬೇಕು. ತಿಂಗಳಲ್ಲಿ ಕನಿಷ್ಠ ಎರಡು ಬಾರಿ ಶಿಕ್ಷಕರು ಮತ್ತು ಪೋಷಕರು ಸಭೆ ಸೇರಿ ಶಾಲೆಗೆ ಸಂಬಂಧಿಸಿದ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸಬೇಕು. ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವೆ ಸೌಹಾರ್ದದ ನಡೆ–ನುಡಿಯ ಸಂಬಂಧವಿರಬೇಕು.

ಶಾಲೆಯ ಓದು ಎಂದರೆ ಕೇವಲ ಪುಸ್ತಕದ ಓದುಆಗಿರಬಾರದು. ಪಠ್ಯಪುಸ್ತಕದಲ್ಲಿರುವಷ್ಟನ್ನೇ ಉರು ಹಾಕಿಸುವುದು ಕಲಿಕೆ ಅಲ್ಲ ಎಂಬ ಪ್ರಜ್ಞಾವಂತಿಕೆ ಪೋಷಕರಿಗೂ ಶಿಕ್ಷಕರಿಗೂ ಇರಬೇಕು. ಸಮಾಜಶಾಲೆಯಲ್ಲಿ ಟ್ಯೂಷನ್ ಎಂಬುದು ಇರಬಾರದು. ಟ್ಯೂಷನ್‌ ಅಗತ್ಯವಿಲ್ಲದ ಸ್ಥಿತಿಯನ್ನು ಶಿಕ್ಷಕರು ನಿರ್ಮಾಣ ಮಾಡಬೇಕು. ಯಾವುದೇ ವಿದ್ಯಾರ್ಥಿಗೆ ಹೆಚ್ಚು ಕಲಿಸಬೇಕಾದರೆ ಪ್ರೀತಿಯಿಂದ ಉಚಿತವಾಗಿ ಕಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT