ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣಬೆಳಗೊಳದಲ್ಲಿ ಸ್ಥಾಪನೆಯಾಗಲಿದೆ 12 ಅಡಿ ಎತ್ತರದ ಬಾಹುಬಲಿ

Last Updated 5 ಜನವರಿ 2018, 6:13 IST
ಅಕ್ಷರ ಗಾತ್ರ

ಬಿಡದಿ(ರಾಮನಗರ): ಇಲ್ಲಿನ ದಾಸಪ್ಪನದೊಡ್ಡಿಯಲ್ಲಿರುವ ಶಿಲ್ಪಕಲಾ ಕೇಂದ್ರದಲ್ಲಿ 12 ಅಡಿ ಎತ್ತರದ ಬಾಹುಬಲಿ ಶಿಲ್ಪಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಜೈನರ ದಕ್ಷಿಣ ಕಾಶಿ ಎಂದೇ ಹೆಸರಾದ ಹಾಸನ ಜಿಲ್ಲೆ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಈ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ.

ಬೆಳಗೊಳದ ಬೆಟ್ಟದ ನೆತ್ತಿಯಲ್ಲಿರುವ ಬರೋಬ್ಬರಿ 57ಅಡಿ ಎತ್ತರದ ಗೊಮ್ಮಟೇಶನ ದರ್ಶನ ಪಡೆಯುವುದು ಪ್ರತಿಯೊಬ್ಬರ ಆಶಯ. ಆದರೆ, ಮಕ್ಕಳು, ವೃದ್ಧರು ಈ ಗಿರಿಯ ನೆತ್ತಿಯನ್ನೇರುವುದು ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವರ್ತಕ ಮಹಾವೀರ್‌ ಜೈನ್‌ ಎಂಬುವರು ಶ್ರವಣಬೆಳಗೊಳದ ಭಂಡಾರ ಬಸದಿ ಎಂಬಲ್ಲಿ ಈ ಮೂರ್ತಿಯನ್ನು ಸ್ಥಾಪಿಸಲು ಮುಂದೆ ಬಂದಿದ್ದಾರೆ. ವಿಂಧ್ಯಗಿರಿಯ ಮೇಲಿನ ಬಾಹುಬಲಿಗೆ 12‌ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆದರೆ, ಈ ಮೂರ್ತಿಗೆ ನಿತ್ಯ ಪೂಜೆ, ಅಭಿಷೇಕ ನಡೆಸಲು ಉದ್ದೇಶಿಸಲಾಗಿದೆ.

ಹಿರಿಯ ಶಿಲ್ಪಿ ಅಶೋಕ್‌ ಗುಡಿಕಾರ್ ಎಂಬುವರ ನೇತೃತ್ವದಲ್ಲಿ ಈ ಮೂರ್ತಿಗೆ ಅಂತಿಮ ಸ್ಪರ್ಶ ನೀಡುವ ಕಾರ್ಯ ಭರದಿಂದ ಸಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೊಯಿರಾ ಎಂಬ ಊರಿನಿಂದ ಈ ಏಕಶಿಲೆ ತರಲಾಗಿದ್ದು, ಎರಡು ಅಡಿಗಳಷ್ಟು ಎತ್ತರದ ಕಮಲ ಪೀಠದ ಮೇಲೆ 10ಅಡಿ ಮೂರ್ತಿ ನಿರ್ಮಾಣವಾಗಲಿದೆ. ಬೆಳಗೊಳದ ಬಾಹುಬಲಿಯನ್ನೇ ಇದು ಹೋಲುವಂತಿದೆ. ಕಳೆದ ಆರು ತಿಂಗಳಿನಿಂದ ಈ ಕಲಾಕೃತಿ ನಿರ್ಮಾಣ ಕಾರ್ಯದಲ್ಲಿ ಕಲಾವಿದರು ತೊಡಗಿಸಿಕೊಂಡಿದ್ದಾರೆ. ಇದೇ 14 ಅಥವಾ 16ರಂದು ಬೆಳಗೊಳಕ್ಕೆ ಇದನ್ನು ಒಯ್ಯಲು ಯೋಜಿಸಲಾಗಿದೆ.

ಫೆಬ್ರುವರಿಯಲ್ಲಿ ಬೆಳಗೊಳದಲ್ಲಿ ಮಹಾಮಸ್ತಾಭಿಷೇಕ ನಡೆಯಲಿದ್ದು, ಅದಕ್ಕೂ ಮುನ್ನ ಇದರ ಪ್ರತಿಷ್ಠಾಪನೆಗೆ ಯೋಜಿಸಲಾಗಿದೆ. ಜೈನ ಮುನಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ ಎಂದು ಮಹಾವೀರ ಜೈನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT