ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹಿತರು ದೂರಾಗುವ ಭಯ!

Last Updated 5 ಜನವರಿ 2018, 19:30 IST
ಅಕ್ಷರ ಗಾತ್ರ

1. ನನಗೆ ಸ್ನೇಹಿತರು ಹೆಚ್ಚಿಲ್ಲ. ಆದ ಕಾರಣ ನಾನು ಸ್ನೇಹಿತರಿಂದ ಯಾವುದೇ ರೀತಿ ಬೇಸರವಾದರೂ ಅದನ್ನು ತೋರಿಸಿಕೊಳ್ಳುವುದಿಲ್ಲ. ನನಗೆ ಅವರು ನನ್ನಿಂದ ದೂರವಾದಾರು ಅನ್ನುವ ಭಯ ಕಾಡುತ್ತದೆ. ಈ ಭಯ ಕಡಿಮೆಯಾಗಲು ಏನು ಮಾಡಬೇಕು?
–ಹೆಸರು, ಊರು ಬೇಡ

ನಿಮ್ಮಲ್ಲಿ ಸ್ನೇಹ ಅಥವಾ ಸ್ನೇಹಿತರನ್ನು ಕಳೆದುಕೊಳ್ಳವಂತೆ ಮಾಡುವ ಯಾವ ಅಂಶ ಅಭದ್ರತೆಯನ್ನು ಕಾಡುವಂತೆ ಮಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳಿ. ಸ್ನೇಹದಲ್ಲಿ ಪ್ರತಿಯೊಬ್ಬರು ನೀವು ಹೇಗಿದ್ದಿರೋ ಹಾಗೆ ಒಪ್ಪಿಕೊಳ್ಳುತ್ತಾರೆ. ನೀವು ಬದಲಾಗುವುದು ಬೇಕಿಲ್ಲ. ಏಕೆಂದರೆ ನಿಮ್ಮ ಸ್ನೇಹಿತರು ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಖಂಡಿತ ಅವರಿಗೆ ನಿಮ್ಮ ಸ್ವಭಾವದ ಅರಿವು ಇರುತ್ತದೆ. ಸ್ನೇಹದ ವಿಷಯದಲ್ಲಿ ನಿಮಗೆ ಯಾವತ್ತೋ ಕಹಿಯ ಅನುಭವವಾಗಿರಬೇಕು. ಆ ಅನುಭವದಿಂದ ಹೊರ ಬನ್ನಿ, ಸ್ನೇಹಿತರೊಂದಿಗೆ ಮನಸ್ಸು ಬಿಚ್ಚಿ ಆತ್ಮವಿಶ್ವಾಸದಿಂದ ಮಾತನಾಡಿ; ನಿಮಗೆ ಅವರನ್ನು ಕಳೆದುಕೊಳ್ಳುವ ಭಯವಿರುವ ಬಗ್ಗೆ ತಿಳಿಸಿ. ಆಗ ಅವರು ಖಂಡಿತ ನಿಮಗೆ ಸಹಾಯ ಮಾಡುತ್ತಾರೆ. ನಿಮ್ಮ ಜೊತೆಗೆ ಇರುವ ಭರವಸೆಯನ್ನು ನೀಡುತ್ತಾರೆ. ಸುತ್ತಲಿನ ಜನರೊಂದಿಗೆ ಪರಿಧಿ ಹಾಕಿಕೊಳ್ಳಬೇಡಿ. ನಿಮ್ಮ ಸ್ನೇಹಿತರು ಹಾಗೂ ಅವರ ಸ್ನೇಹಿತರ ಜೊತೆ ಬೆರೆಯಿರಿ. ಆಗ ನಿಮಗೆ ಹೊಸದೊಂದು ಮನೋಭಾವದ ಸ್ನೇಹಿತರೊಂದಿಗೆ ಒಡನಾಡಲು ಸಾಧ್ಯವಾಗುತ್ತದೆ. ಇದರಿಂದ ಹೊಸತೊಂದು ಸ್ನೇಹಿತರ ಬಳಗವೂ ಸೃಷ್ಟಿಯಾಗುತ್ತದೆ. ಆದ್ದರಿಂದ ನಿಮಗೆ ನೀವೇ ನಿರ್ಬಂಧವನ್ನು ಹಾಕಿಕೊಳ್ಳಬೇಡಿ. ಎಲ್ಲರೊಂದಿಗೂ ಮುಕ್ತವಾಗಿ ಬೆರೆಯಿರಿ. ಸಮಯ ಸರಿದಂತೆ ನಿಮ್ಮಲ್ಲಿ ಬದಲಾವಣೆಯನ್ನು ಗುರುತಿಸುತ್ತೀರಿ. ಸಂತೋಷದಿಂದಿರಿ. ಯಾವುದೇ ಸ್ನೇಹಿತನಿಗಾದರೂ ಖುಷಿಯಿಂದಿರುವ ಸ್ನೇಹಿತನ ಜೊತೆ ಬೆರೆಯಲು ಹೆಚ್ಚು ಇಷ್ಟವಾಗುತ್ತದೆ.

2. ನನಗೆ 28 ವರ್ಷ. ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಗಂಡ ಶಿಕ್ಷಕ. ಮನೆಯಲ್ಲಿ ಹಣಕಾಸಿನ ಸಮಸ್ಯೆಯಾಗಲಿ, ಜೀವನ ನಿರ್ವಹಣೆಯ ತೊಂದರೆಯಾಗಲಿ ಇಲ್ಲ. ಆದರೆ ಸಮಸ್ಯೆ ಇರುವುದು ನನ್ನಲ್ಲಿ. ಕಳೆದ ಕೆಲ ದಿನಗಳಿಂದ ಹುಚ್ಚು ಕಲ್ಪನೆಗಳು ನನ್ನನ್ನು ಕಾಡುತ್ತಿವೆ. 18ರ ಆಸುಪಾಸಿನಲ್ಲಿನ ಪ್ರೀತಿ–ಪ್ರೇಮ, ಸರಸ–ಸಲ್ಲಾಪದ ಕಲ್ಪನೆಗಳು ಬರುತ್ತವೆ. ಅವು ಹೇಗೆ ಕಾಡುತ್ತವೆ ಎಂದರೆ, ನನಗೆ ಕುಟುಂಬದ ಜೊತೆ ಬೆರೆಯುವುದೇ ಕಷ್ಟವಾಗಿದೆ. ಯಾರೋ ನನ್ನನ್ನು ಇಷ್ಟಪಟ್ಟ ಹಾಗೇ, ಮುದ್ದು ಮುದ್ದಾಗಿ ಮಾತನಾಡಿದ ಹಾಗೇ, ಅಲ್ಲಿಯೂ ಒಂದು ಕುಟುಂಬವಾಗಿ ಇದಕ್ಕಿಂತಲೂ ಹೆಚ್ಚಿನ ಐಷಾರಾಮಿ ಜೀವನ ನಡೆಸಿದ ಹಾಗೆಲ್ಲಾ ಭಾಸವಾಗುತ್ತದೆ. ಇದರಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಚಿಂತೆಯಾಗಿ ನನ್ನನ್ನು ಕಾಡುತ್ತಿದೆ.
–ಮೀನಾ, ಊರು ಬೇಡ.

ನೀವು ಪ್ಯಾಂಟಸಿ ಜಗತ್ತಿನಲ್ಲಿದ್ದೀರಿ. ಯಾವಾಗಲೋ ಒಮ್ಮೆ ಹೀಗಾದರೆ ಅದು ಸಾಮಾನ್ಯ. ಆದರೆ ದೀರ್ಘವಾಗಿ ಹೀಗೆ ಆಗುತ್ತಿದ್ದರೆ ಅದು ನಿಮ್ಮ ನೈಜ ಜೀವನವನ್ನು ನಾಶ ಮಾಡುತ್ತದೆ. ಯಾವಾಗಲೂ ಪ್ರಯೋಗಿಕವಾಗಿರಿ; ಬ್ಯುಸಿಯಾಗಿರುವಂತೆ ನೋಡಿಕೊಳ್ಳಿ. ಆಗ ನೀವು ಹಗಲುಗನಸನ್ನು ಕಾಣಲು ಸಮಯವಿರುವುದಿಲ್ಲ. ಅದಲ್ಲದೇ, ನೀವು ಈಗ ಪ್ಯಾಂಟಸಿ ಜಗತ್ತಿನ ಮೇಲೆ ಗಮನ ನೆಟ್ಟಿರುವಿರಿ ಅಥವಾ ನಿಮ್ಮ ಯೋಚನೆಗಳು ನಿಮ್ಮ ಪ್ರಸ್ತುತ ಜಗತ್ತಿಗೆ ಸಂಬಂಧಿಸಿದಲ್ಲ. ಪ್ರಸ್ತುತ ಗಳಿಗೆಯಲ್ಲಿ ನೆಲೆನಿಂತಿರುವುದೇ ಜೀವನ. ನೀವು ಹಗಲುಗನಸು ಕಾಣುತ್ತಿದ್ದರೆ ಅದು ನಿಮ್ಮ ದೈನಂದಿನ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ. ದೈನಂದಿನ ಚಟುವಟಿಕೆಯ ಮೇಲೆ ನಿಮ್ಮ ಗಮನ ಕಡಿಮೆಯಾಗಿದೆ ಎಂಬುದನ್ನೂ ಇದು ಸೂಚಿಸುತ್ತದೆ. ಗಮನ ಸ್ವಸ್ಧಗೊಳ್ಳುವ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡು ಪ್ರಸ್ತುತ ಜೀವನದ ಬಗ್ಗೆ ಗಮನವನ್ನು ಹೆಚ್ಚಿಸಿಕೊಳ್ಳಿ.

ನಿಮ್ಮ ಈ ವರ್ತನೆಯನ್ನು ಬದಲಾಯಿಸಿಕೊಳ್ಳಲು, ನೀವು ಹಗಲುಗನಸಿನ ಮೇಲೆ ಏಕೆ ಒಲವು ತೋರುತ್ತಿದ್ದೀರಿ? – ಎಂಬುದನ್ನು ತಿಳಿದುಕೊಳ್ಳಿ. ಇದು ಏಕೆ ಸಂಭವಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗದಿದ್ದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಷ್ಟವಾಗಬಹುದು. ಕೆಲವೊಮ್ಮೆ ಕೆಲವು ವ್ಯಕ್ತಿಗಳ ಹಗಲುಗನಸು ಅವರಲ್ಲಿನ ಒತ್ತಡ ಹಾಗೂ ನೋವಿನ ಭಾವನೆಗಳನ್ನು ದೂರ ಮಾಡಲು ಒಂದು ದಾರಿಯಾಗಿರುತ್ತದೆ. ‘ನಾನು ಹಗಲುಗನಸು ಕಾಣುವ ಉದ್ದೇಶ ಏನು?’ ಎಂದು ನಿಮಗೆ ನೀವೇ ಕೇಳಿಕೊಳ್ಳಿ.  ‘ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು, ಗಮನ ಬೇರೆಡೆ ಸೆಳೆದುಕೊಳ್ಳಲು, ನಿಮ್ಮಲ್ಲಿ ಉತ್ತಮ ಭಾವನೆ ಮೂಡಲು ಅಥವಾ ಸಮಯ ಕಳೆಯಲು ನೀವು ಹಗಲುಗನಸು ಕಾಣುತ್ತಿದ್ದೀರಾ?’ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಪ್ಯಾಂಟಸಿ ಜೀವನನೊಂದಿಗೆ ಯಾವೆಲ್ಲಾ ಋಣಾತ್ಮಕ ಸಂದರ್ಭಗಳು ಎದುರಾಗುತ್ತವೆ ಎಂಬುದನ್ನು ಪಟ್ಟಿ ಮಾಡಿಕೊಳ್ಳಿ. ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆ ಕಡಿಮೆ ಬೆರೆಯುವುದು – ಇಂಥವು ಆ ಪಟ್ಟಿಯಲ್ಲಿರಬಹುದು:  ಹಗಲುಗನಸಿನ ಕಾರಣದಿಂದಾಗಿ ನಿಮ್ಮ ಎಲ್ಲ ಕೆಲಸಗಳನ್ನು ನಿಮ್ಮಿಂದ ಮಾಡಲು ಸಾಧ್ಯವಾಗದೇ ಇರಬಹುದು.

ಮೊದಲು ನೀವು ಹಗಲುಗನಸಿನ ಬಗ್ಗೆ ಜಾಗೃತರಾಗಿ, ಅದು ಯಾವಾಗ ಸಂಭವಿಸುತ್ತದೆ ಎಂದು ತಿಳಿದಾಗ ಅದನ್ನು ಬದಲಾಯಿಸಬಹುದು. ಎದುರಿರುವವರೊಂದಿಗೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಸಾಧ್ಯವಾಗದೇ ಇರುವುದು, ಸಧ್ಯದ ಟಾಸ್ಕ್ ಮೇಲೆ ಗಮನ ಹರಿಸಲು ಸಾಧ್ಯವಾಗದೇ ಇರುವುದು, ಮಾತಿನ ನಡುವೆ ಎದುರಿನವರು ಏನು ಮಾತನಾಡಿದರು ಎಂದು ತಿಳಿಯಲು ಸಾಧ್ಯವಾಗದೇ ಇರುವುದು, ಸಧ್ಯದ ಪರಿಸ್ಥಿತಿಗೆ ಸಂಬಂಧವಲ್ಲದ ವಿಷಯಗಳನ್ನು ಯೋಚಿಸುವುದು ಅಥವಾ ನಡೆಯದ ಘಟನೆಗಳ ಬಗ್ಗೆ ನಿಮ್ಮ ತಲೆಯಲ್ಲಿ ಯೋಚನೆಗಳು ಬರುವುದು – ಇವೆಲ್ಲವನ್ನು ನೀವು ಎದುರಿಸಿರಬಹುದು. ಯಾವಾಗ ನಿಮಗೆ ಹಗಲುಗನಸು ಬೀಳಲು ಆರಂಭಿಸುತ್ತದೋ ಆಗ ಎದ್ದು ಯಾವುದಾದರೊಂದು ಕ್ರಿಯಾತ್ಮಕ ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನಿದ್ದೆಯ ಗುಣಮಟ್ಟ ಕಡಿಮೆಯಾದಾಗಲೂ ಹಗಲುಗನಸಿನಂಥವು ಕಾಡುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿಗೆ ರಾತ್ರಿ ಹೊತ್ತಿಗೆ ವಿಶ್ರಾಂತಿ ನೀಡದೇ ಇದ್ದರೆ ಹಗಲು ಹೊತ್ತಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಹೊಸ ಹವ್ಯಾಸಗಳನ್ನು ಹುಡುಕಿಕೊಳ್ಳಿ, ಮೋಜಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ, ಎಲ್ಲಾ ಸಮಯದಲ್ಲೂ ಬ್ಯುಸಿ ಆಗಿರಲು ಪ್ರಯತ್ನಿಸಿ.

ಅತಿಯಾದ ಹಗಲುಗನಸು ಸಮಸ್ಯೆಯಾಗಬಹುದು. ಇದು ನಿಮ್ಮ ಸಂಬಂಧ, ವೈಯಕ್ತಿಕ ಜೀವನ, ನಿಮ್ಮ ಕೆಲಸದಲ್ಲಿನ ಸಾಮರ್ಥ್ಯ ಅಥವಾ ಇನ್ನಿತರ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದು. ಒಂದು ವೇಳೆ ಹಾಗಿದ್ದರೆ ಚಿಕಿತ್ಸೆ ಒಂದು ಉಪಯುಕ್ತ ದಾರಿ. ಮನಃಶಾಸ್ತ್ರಜ್ಞರನ್ನು ನೋಡಿ.

3. ನನ್ನ ತಂದೆ–ತಾಯಿ ನನ್ನನ್ನು ಬಲವಂತವಾಗಿ ನನ್ನ ಮಾವನ ಜೊತೆ ಮದುವೆ ಮಾಡಿದರು. ಮಾವನನ್ನು ಕಂಡರೆ ನನಗೆ ಸ್ವಲ್ಪವೂ ಪ್ರೀತಿ ಇಲ್ಲ. ನನಗೆ ಅವರ ಜೊತೆ ಹೊಂದಿಕೊಳ್ಳಲು ಆಗುತ್ತಿಲ್ಲ. ನಾನು ವಿದ್ಯಾಭ್ಯಾಸ ಕೂಡ ಮುಗಿಸಿಲ್ಲ. ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲವಿದೆ. ನನಗೆ ಯಾರೂ ಬೆಂಬಲ ನೀಡುತ್ತಿಲ್ಲ. ಒಂಟಿಯಾಗಿ ಹೇಗೆ ಸಾಧನೆ ಮಾಡಬೇಕು. ಏನು ಮಾಡಬೇಕೋ, ತಿಳಿಯುತ್ತಿಲ್ಲ!
–ಊರು, ಹೆಸರು ಬೇಡ

ನೀವು ಇಲ್ಲಿ ನಿಮ್ಮ ಶಿಕ್ಷಣದ ಬಗ್ಗೆ ತಿಳಿಸಿಲ್ಲ ಮತ್ತು ಗಂಡನ ಜೊತೆಗೆ ಇದ್ದೀರಾ ಎಂಬುದನ್ನು ತಿಳಿಸಿಲ್ಲ. ಗಂಡನ ಜೊತೆಗೆ ಇದ್ದೀರಿ ಎಂದು ಪರಿಗಣಿಸಿದರೆ ಸ್ವಲ್ಪ ಸಮಯ ನೀಡಿ ಮತ್ತು ಕುಟುಂಬದವರ ಜೊತೆ ಬೆರೆಯಲು ಪ್ರಯ್ನತಿಸಿ ಎಂದು ನಾನು ಹೇಳ ಬಯಸುತ್ತೇನೆ. ಆಗ ನೀವು ಸಂಸಾರಜೀವನವನ್ನು ಇಷ್ಟಪಡಲು ಆರಂಭಿಸಬಹುದು. ನಿಮ್ಮ ಗಂಡನ ಜೊತೆ ಈ ಎಲ್ಲದರ ಬಗ್ಗೆ ಮಾತನಾಡಿ. ನೀವಿಬ್ಬರು ಜೊತೆಗೂಡಿ ಕೆಲ ಮೌಲ್ಯಯುತ ಸಮಯವನ್ನು ಕಳೆಯಿರಿ. ಆಗ ನೀವು ಅವರ ಜೊತೆ ಬಾಂಧವ್ಯವನ್ನು ಬೆಳೆಸಿಕೊಳ್ಳಬಹುದು. ಅದರ ಜೊತೆಗೆ ನಿಮ್ಮ ಓದನ್ನು ಮುಂದುವರಿಸಿ ಮತ್ತು ಡಿಗ್ರಿಯನ್ನು ಪೂರ್ಣಗೊಳಿಸಿಕೊಳ್ಳಿ. ಇದು ನಿಮಗೆ ಕೆಲಸ ಗಿಟ್ಟಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಎಲ್ಲದರಿಂದಲೂ ನೀವು ನಿಮ್ಮ ಗಂಡನ ಜೊತೆ ಸಾಮರಸ್ಯದಿಂದ ಆಗಿ ಬದುಕಲು ಸಾಧ್ಯವಾಗದಿದ್ದರೆ, ಮನೆಯ ಹಿರಿಯರ ಜೊತೆ ಮಾತನಾಡಿ ನಿರ್ಧಾರವನ್ನು ತೆಗೆದುಕೊಳ್ಳಿ.

4. ನನಗೆ 21 ವರ್ಷ. ಇತ್ತೀಚೆಗಷ್ಟೆ ಬಿ.ಕಾಂ. ಮುಗಿಸಿದ್ದೇನೆ. ಮನೆಯ ಜವಾಬ್ದಾರಿ ಸಂಪೂರ್ಣ ನನ್ನ ಮೇಲಿದೆ. ನಾನು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉನ್ನತ ಕೆಲಸ ಪಡೆಯಬೇಕೆಂದಿದ್ದೇನೆ. ಇತ್ತೀಚೆಗೆ police constable (PC) ಪರೀಕ್ಷೆ ಬರೆದಿದ್ದೆ; ಸಿಇಟಿ ಪಾಸ್ ಆಗಿತ್ತು. ದೈಹಿಕ ಪರೀಕ್ಷೆ ಕೂಡ ಪಾಸ್ ಆಗಿತ್ತು. ಆದರೆ ಮೆಡಿಕಲ್ ಲಿಸ್ಟ್‌ನಲ್ಲಿ ತುಂಬಾ ಸನಿಹದಲ್ಲೇ ಕೈತಪ್ಪಿತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಬೇಸರ ಕಾಡುತ್ತಿದೆ. ಸ್ನೇಹಿತರೊಬ್ಬರು ‘ಓದು ಬಿಡಬೇಡ’ ಎಂದಿದ್ದಾರೆ. ‘PSIಗೆ ಪ್ರಯತ್ನ ಮಾಡು ಆಗುತ್ತೆ’ ಎಂದೂ ಹೇಳುತ್ತಿದ್ದಾರೆ. ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಮನೆಯ ಕಡೆ ಹಾಗೂ ಓದಿನ ಕಡೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಮನಸ್ಸು ಸರಿಯಿಲ್ಲ. ಏನೇನೋ ಕೆಟ್ಟ ಯೋಚನೆಗಳು ಕಾಡುತ್ತಿವೆ. ಏನು ಮಾಡಲಿ?
–ಹೆಸರು, ಊರು ಬೇಡ

ನಿಮ್ಮ ಪ್ರತಿ ಪ್ರಯತ್ನದ ನಂತರವೂ ಹೀಗಾದರೆ ನಿಮ್ಮಲ್ಲಿ ಯಾವ ಭಾವನೆ ಮೂಡಿರಬಹುದು ಎಂಬುದು ನನಗೆ ಅರ್ಥವಾಗುತ್ತದೆ. ಒಂದು ಹಂತದವರೆಗೆ ಅದೃಷ್ಟ ಕೂಡ ಮುಖ್ಯ ಪಾತ್ರವನ್ನು ವಹಿಸುತ್ತದೆ. ನಿಮ್ಮ ಸ್ನೇಹಿತರು ಸಲಹೆ ನೀಡಿದಂತೆ, ನೀವು ಇನ್ನೂ ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು; ಖಂಡಿತ ಅದರಲ್ಲಿ ಯಶಸ್ಸು ಕಾಣುತ್ತೀರಿ. ಅದರ ಜೊತೆಗೆ ಕೆಲಸವನ್ನು ಮಾಡಿಕೊಂಡು ಓದನ್ನೂ ಮುಂದುವರಿಸಬಹುದು. ದೂರಶಿಕ್ಷಣ ಅಥವಾ ಸಂಜೆ ಕಾಲೇಜು ಕೂಡ ನಿಮಗೆ ಸಹಾಯವಾಗಬಹುದು. ಅದರಿಂದ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಳ್ಳಬಹುದು, ಜೊತೆಗೆ ಓದಿನ ಮೇಲೂ ಗಮನ ಹರಿಸಬಹುದು. ಆತ್ಮವಿಶ್ವಾಸದಿಂದಿರಿ ಹಾಗೂ ನಿಮ್ಮನ್ನು ನೀವು ಪ್ರೇರೇಪಿಸಿಕೊಳ್ಳಿ. ಎಲ್ಲವೂ ಒಳ್ಳೆಯದಾಗುತ್ತದೆ – ನಿಮಗೆ ನೀವೇ ಎಂದು ಹೇಳಿಕೊಳ್ಳಿ; ಅದನ್ನು ಸಾಧಿಸಲು ನಿಮ್ಮ ಪ್ರಯತ್ನವನ್ನು ನೀವು ಮಾಡಿ. ಜೀವನ ತುಂಬ ಅವಕಾಶಗಳನ್ನು ನೀಡುತ್ತದೆ. ಅದನ್ನು ಸುಲಭವಾಗಿ ಬಿಟ್ಟುಕೊಡಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT