ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಗಳಿಗೆ ದೇಣಿಗೆ: ಪಾರದರ್ಶಕತೆ ಸಾಧ್ಯವೇ?

‘ಚುನಾವಣಾ ಬಾಂಡ್‌’ ವ್ಯವಸ್ಥೆಯ ಉದ್ದೇಶ ಮತ್ತು ಸ್ವರೂಪ...
Last Updated 5 ಜನವರಿ 2018, 19:30 IST
ಅಕ್ಷರ ಗಾತ್ರ

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಪ್ರಕ್ರಿಯೆ ಮತ್ತು ಚುನಾವಣಾ ವೆಚ್ಚದಲ್ಲಿ ಪಾರದರ್ಶಕತೆ ತರುವ ಸಲುವಾಗಿ ಚುನಾವಣಾ ಬಾಂಡ್‌ ವ್ಯವಸ್ಥೆ ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಕಳೆದ ವರ್ಷದ ಬಜೆಟ್‌ನಲ್ಲಿ (2017ರ ಫೆಬ್ರುವರಿ 2) ಘೋಷಿಸಿತ್ತು. ಇದಾಗಿ 11 ತಿಂಗಳ ಬಳಿಕ, ಅಂದರೆ ಜನವರಿ 2ರಂದು ಚುನಾವಣಾ ಬಾಂಡ್‌ ಯೋಜನೆ ಜಾರಿಗೊಳಿಸಿದೆ.

* ಏನಿದು ಚುನಾವಣಾ ಬಾಂಡ್‌ ಯೋಜನೆ?

ರಾಜಕೀಯ ಪಕ್ಷಗಳಿಗೆ ಸಾರ್ವಜನಿಕರು, ಸಂಸ್ಥೆಗಳು, ಕಂಪನಿಗಳು... ನಗದು ರೂಪದ ದೇಣಿಗೆ ಬದಲಾಗಿ ಬಾಂಡ್‌ ಮೂಲಕ ದೇಣಿಗೆ ಕೊಡುವ ಯೋಜನೆ. ಪಕ್ಷಗಳಿಗೆ ಬರುತ್ತಿರುವ ದೇಣಿಗೆಯಲ್ಲಿ ಕಪ್ಪು ಹಣವೂ ಸೇರಿದೆ. ಅದನ್ನು ತಡೆಗಟ್ಟುವ ಮತ್ತು ದೇಣಿಗೆ ನೀಡಿಕೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ.

‘ಇದುವರೆಗೂ ರಾಜಕೀಯ ಪಕ್ಷಗಳಿಗೆ ಅನಾಮಧೇಯ ವ್ಯಕ್ತಿ ಅಥವಾ ಕಂಪನಿಗಳಿಂದ ನಗದು ರೂಪದಲ್ಲಿ ದೇಣಿಗೆ ಬರುತ್ತಿತ್ತು. ಆ ಹಣದ ಮೂಲ ಯಾವುದು ಎಂಬುದೂ ಗೊತ್ತಿರಲಿಲ್ಲ; ಹೀಗಾಗಿ ಅಲ್ಲಿ ಪಾರದರ್ಶಕತೆ ಇರಲಿಲ್ಲ. ದೇಣಿಗೆ ನೀಡುವ ಪ್ರಕ್ರಿಯೆಯನ್ನು ಚುನಾವಣಾ ಬಾಂಡ್‌ ಶುದ್ಧೀಕರಿಸುತ್ತದೆ. ಪಕ್ಷಗಳಿಗೆ ಕಪ್ಪು ಹಣ ಸೇರುವುದನ್ನು ತಡೆಯುತ್ತದೆ’ ಎಂಬುದು ಸರ್ಕಾರದ ಪ್ರತಿಪಾದನೆ.

* ಯಾರು ಖರೀದಿಸಬಹುದು? ನಿಯಮಗಳೇನು?

ಭಾರತೀಯ ಪ್ರಜೆ ಮತ್ತು ಭಾರತದಲ್ಲಿನ ಸಂಸ್ಥೆಗಳು, ಎನ್‌ಜಿಒಗಳು, ಧಾರ್ಮಿಕ ಅಥವಾ ಇತರೆ ಟ್ರಸ್ಟ್‌ಗಳು ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ನಿರ್ದಿಷ್ಟ ಶಾಖೆಗಳಿಂದ ಬಾಂಡ್‌ ಖರೀದಿಸಬಹುದು.

ಬಾಂಡ್‌ನಲ್ಲಿ ದೇಣಿಗೆ ನೀಡುವವರ ಹೆಸರಿಲ್ಲದಿದ್ದರೂ, ಅದನ್ನು ಖರೀದಿಸುವಾಗ ಅವರು ಬ್ಯಾಂಕ್‌ನಲ್ಲಿ ವೈಯಕ್ತಿಕ ವಿವರಗಳನ್ನು (ಕೆವೈಸಿ) ಕಡ್ಡಾಯವಾಗಿ ನೀಡಬೇಕಾಗುತ್ತದೆ.

ತಮ್ಮ ಬ್ಯಾಂಕ್‌ ಖಾತೆಯಿಂದಲೇ ಹಣ (ಚೆಕ್‌, ಡಿ.ಡಿ ಅಥವಾ ಎಲೆಕ್ಟ್ರಾನಿಕ್‌ ವರ್ಗಾವಣೆ ಮೂಲಕ) ಪಾವತಿಸಬೇಕಾಗುತ್ತದೆ.

1951ರ ಪ‍್ರಜಾಪ್ರಾತಿನಿಧ್ಯ ಕಾಯ್ದೆಯ 29ಎ ಸೆಕ್ಷನ್‌ ಅಡಿಯಲ್ಲಿ ನೋಂದಣಿಯಾಗಿರುವ ರಾಜಕೀಯ ಪಕ್ಷಗಳಿಗೆ ಮಾತ್ರ ದೇಣಿಗೆ ನೀಡಬಹುದಾಗಿದೆ.

ಅಲ್ಲದೇ, ಕಳೆದ ಲೋಕಸಭೆ ಅಥವಾ ವಿಧಾನಸಭಾ ಚುನಾವಣೆಗಳಲ್ಲಿ ಕನಿಷ್ಠ ಶೇ 1ರಷ್ಟು ಮತ ಗಳಿಸಿದ ಪಕ್ಷಗಳಿಗೆ ಮಾತ್ರ ದೇಣಿಗೆ ಕೊಡಬಹುದು.

* ಪಕ್ಷಗಳ ಪಾತ್ರವೇನು?

ದೇಣಿಗೆ ಬಯಸುವ ರಾಜಕೀಯ ಪಕ್ಷಗಳು ತಮ್ಮ ಅಧಿಕೃತ ಬ್ಯಾಂಕ್‌ ಖಾತೆಯ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ದೇಣಿಗೆದಾರ ಖರೀದಿಸಿರುವ ಬಾಂಡ್‌ನ ವಾಯಿದೆ ಮುಗಿಯುವುದರೊಳಗೆ (15 ದಿನಗಳು) ಪಕ್ಷಗಳು ಹಣವನ್ನು ನಗದೀಕರಿಸಿಕೊಳ್ಳಬೇಕು.

ಆಯೋಗಕ್ಕೆ ಲೆಕ್ಕಪತ್ರ ಸಲ್ಲಿಸುವಾಗ ತಮಗೆ ದೊರೆತಿರುವ ದೇಣಿಗೆಗಳ ಮಾಹಿತಿಗಳನ್ನೂ ಅವು ನೀಡಬೇಕಾಗುತ್ತದೆ.

* ಆಕ್ಷೇಪಗಳೇನು?

ಬಾಂಡ್‌ನಲ್ಲಿ ದೇಣಿಗೆ ನೀಡುವವರ ಹೆಸರೇ ಇಲ್ಲದಿದ್ದರೆ ಪಾರದರ್ಶಕತೆಗೆ ಏನು ಅರ್ಥ ಇರುತ್ತದೆ? ಯೋಜನೆಯ

ಮೂಲ ಉದ್ದೇಶವೇ ಸೋತಂತಾಗುವುದಿಲ್ಲವೇ ಎಂಬುದು ವಿರೋಧ ಪಕ್ಷಗಳ ಮುಖಂಡರು ಸೇರಿದಂತೆ ಹಲವರ ಪ್ರಶ್ನೆ.

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಲೋಕಸಭೆಯಲ್ಲಿ  ಮಂಗಳವಾರ ಯೋಜನೆಯ ಬಗ್ಗೆ ವಿವರಿಸುವಾಗ, ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಇದೇ ಪ್ರಶ್ನೆಯನ್ನು ಮುಂದಿಟ್ಟಿದ್ದರು.

ಬಾಂಡ್‌ ಖರೀದಿಸುವಾಗ ದೇಣಿಗೆದಾರರು ಬ್ಯಾಂಕ್‌ನಲ್ಲಿ ವೈಯಕ್ತಿಕ ವಿವರಗಳನ್ನು ನೀಡುತ್ತಾರಾದರೂ ದೇಣಿಗೆ ನೀಡಿದವರು ಯಾರು ಎಂಬ ವಿಷಯ ಸರ್ಕಾರಕ್ಕೆ ಮತ್ತು ಆಡಳಿತ ಪಕ್ಷಕ್ಕೆ ಮಾತ್ರ ಗೊತ್ತಾಗುತ್ತದೆ. ವಿರೋಧ ಪಕ್ಷಗಳಿಗೆ, ಜನಸಾಮಾನ್ಯರಿಗೆ ತಿಳಿಯುವುದಿಲ್ಲ.

ವಿರೋಧ ಪಕ್ಷಗಳಿಗೆ ದೇಣಿಗೆ ನೀಡಿದವರು ಸರ್ಕಾರದ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯೂ ಇರುತ್ತದೆ ಎಂಬುದು ವಿರೋಧ ಪಕ್ಷಗಳ ವಾದ.

ಕಂಪನಿಗಳು ಪಕ್ಷಗಳಿಗೆ ದೇಣಿಗೆ ನೀಡುವುದಕ್ಕೆ ಇದ್ದ ಮಿತಿಯು (ಲಾಭದ ಶೇ 7.5ರಷ್ಟು ಮೊತ್ತ) ಕಂಪನಿ ಕಾಯ್ದೆಗೆ ಮಾಡಿರುವ ತಿದ್ದುಪಡಿಯಿಂದ ತೆರವಾಗಿದೆ. ಅಲ್ಲದೇ, ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಲಾಗಿದೆ ಎಂಬುದನ್ನು ಬಹಿರಂಗಪಡಿಸದೇ ಇರಲು ಅವಕಾಶವನ್ನೂ ಕಲ್ಪಿಸಿದೆ. ಹೀಗಾಗಿ ಕಂಪನಿಗಳು, ಪಕ್ಷದ ಹೆಸರನ್ನು ಬಹಿರಂಗಪಡಿಸದೇ ಎಲ್ಲ ಲಾಭಾಂಶವನ್ನು ಆ ಪಕ್ಷಕ್ಕೆ ದೇಣಿಗೆ ಕೊಡುವುದಕ್ಕೆ ಅವಕಾಶ ಇದೆ. ಚುನಾವಣಾ ಬಾಂಡ್‌ ಮೂಲಕ ನೀಡುವ ದೇಣಿಗೆ ವಿವರ ಕಂಪನಿಯ  ಬ್ಯಾಲೆನ್ಸ್‌ಶೀಟ್‌ನಲ್ಲಿ ನಮೂದಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ ಅಲ್ಲಿ ದೇಣಿಗೆ ನೀಡಿದ ಮೊತ್ತ ನಮೂದಾಗುತ್ತದೆಯೇ ವಿನಾ, ಯಾವ ಪಕ್ಷಕ್ಕೆ ನೀಡಿದ್ದು ಎಂಬುದು ಗೊತ್ತಾಗುವುದಿಲ್ಲ. ಹೀಗಿರುವಾಗ ಹೊಸ ವ್ಯವಸ್ಥೆಯು ಪಾರದರ್ಶಕ ಎಂದು ಹೇಳಲು ಸಾಧ್ಯವಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

* ಸರ್ಕಾರದ ಸಮಜಾಯಿಷಿ ಏನು?

ವಿವಿಧ ಪಕ್ಷಗಳಿಂದ ಎದುರಾಗಬಹುದಾದ ಕಿರುಕುಳವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ದೇಣಿಗೆ ನೀಡುವವರು ತಮ್ಮ ಹೆಸರನ್ನು ಗೋಪ್ಯವಾಗಿ ಇಡಲು ಬಯಸುತ್ತಾರೆ ಎಂದು ಸರ್ಕಾರ ಹೇಳುತ್ತಿದೆ.

‘ನೀಡಿರುವ ದೇಣಿಗೆಯು ಕಂಪನಿಯ ಬ್ಯಾಲೆನ್ಸ್‌ಶೀಟ್‌ನಲ್ಲಿ ಅಥವಾ ವ್ಯಕ್ತಿಯ ಖಾತೆಯಲ್ಲಿ ನಮೂದಾಗುತ್ತದೆ ಮತ್ತು ತಮಗೆ ಸಿಕ್ಕ ದೇಣಿಗೆಯ ವಿವರಗಳನ್ನು ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ. ಹಾಗಾಗಿ ದೇಣಿಗೆ ಹಣ ಅಕ್ರಮವಾಗಿರಲು ಸಾಧ್ಯವಿಲ್ಲ’ ಎಂದು ಅರುಣ್‌ ಜೇಟ್ಲಿ ಲೋಕಸಭೆಯಲ್ಲಿ ವಿರೋಧ ಪಕ್ಷಗಳಿಗೆ ಸ್ಪಷ್ಟನೆ ನೀಡಿದ್ದರು.

* ನಗದು ರೂಪದಲ್ಲಿ ದೇಣಿಗೆ ಕೊಡಲು ಈಗಲೂ ಅವಕಾಶ ಇದೆಯೇ?

ಕೇಂದ್ರ ಸರ್ಕಾರ ಈ ವರ್ಷ ನಗದು ದೇಣಿಗೆಯ ಗರಿಷ್ಠ ಮಿತಿಯನ್ನು ₹20 ಸಾವಿರದಿಂದ ₹2,000ಕ್ಕೆ ಇಳಿಸಿದೆ. ಹೀಗಾಗಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಒಂದು ಸಲಕ್ಕೆ ಹೆಚ್ಚೆಂದರೆ ನಗದು ರೂಪದಲ್ಲಿ ₹ 2000 ಕೊಡಬಹುದು. ಹೀಗೆ ಎಷ್ಟು ಸಲ ಬೇಕಾದರೂ ನೀಡಬಹುದು.

* ಬಾಂಡ್‌ ಸ್ವರೂಪ ಹೇಗಿರುತ್ತದೆ?

ಚುನಾವಣಾ ಬಾಂಡ್‌ ‘ವಾಯಿದೆ ಪತ್ರ’ದ ರೂಪದಲ್ಲಿರುತ್ತದೆ. ₹1,000, ₹10,000, ₹1 ಲಕ್ಷ, ₹10 ಲಕ್ಷ ಮತ್ತು ₹1 ಕೋಟಿ ಮುಖಬೆಲೆಯ ಬಾಂಡ್‌ಗಳು, 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಎಸ್‌ಬಿಐನ ಆಯ್ದ 52 ಶಾಖೆಗಳಲ್ಲಿ ಮಾತ್ರ ಲಭ್ಯ.

* ಬಾಂಡ್‌ನ ಗುಣಲಕ್ಷಣಗಳೇನು?

ಈ ಬಾಂಡ್‌ಗಳಿಗೆ ಬಡ್ಡಿ ದೊರೆಯುವುದಿಲ್ಲ. ದೇಣಿಗೆ ನೀಡುವವರ ಹೆಸರು ಬಾಂಡ್‌ನಲ್ಲಿ ಇರುವುದಿಲ್ಲ!

ಪ್ರತಿವರ್ಷ ಜನವರಿ, ಏಪ್ರಿಲ್‌, ಜುಲೈ ಮತ್ತು ಅಕ್ಟೋಬರ್‌ ತಿಂಗಳಲ್ಲಿ 10 ದಿನಗಳ ಕಾಲ ಇವುಗಳನ್ನು ಮಾರಾಟ ಮಾಡಲಾಗುತ್ತದೆ (ಈ ದಿನಗಳನ್ನು ಸರ್ಕಾರ ನಿಗದಿಪಡಿಸುತ್ತದೆ). ಲೋಕಸಭಾ ಚುನಾವಣೆ ನಡೆಯುವ ವರ್ಷದಲ್ಲಿ ಹೆಚ್ಚುವರಿಯಾಗಿ 30 ದಿನಗಳ ಕಾಲ ಮಾರಾಟ ಮಾಡಲು ಅವಕಾಶ ಇದೆ.

ಈ ಬಾಂಡ್‌ಗಳ ಅವಧಿ (ವ್ಯಾಲಿಡಿಟಿ) 15 ದಿನಗಳು ಮಾತ್ರ. ಆ ನಂತರ ಇವು ಊರ್ಜಿತವಾಗಿರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT