ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಸೆರೆಗೆ ತೀವ್ರಗೊಂಡ ಕಾರ್ಯಾಚರಣೆ

Last Updated 6 ಜನವರಿ 2018, 5:25 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ/ಮೈಸೂರು: ತಾಲ್ಲೂಕಿನ ಅಂತರಸಂತೆ ಹೋಬಳಿ ಯಲ್ಲಿ ಕಾಣಿಸಿಕೊಂಡಿರುವ ಹುಲಿ ಸೆರೆ ಕಾರ್ಯಾಚರಣೆ ಶುಕ್ರವಾರ 5ನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಹುಲಿಯು ದಿನದಿಂದ ದಿನಕ್ಕೆ ತಾಲ್ಲೂಕು ಕೇಂದ್ರದ ಸಮೀಪಕ್ಕೆ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಆರಂಭದಲ್ಲಿ ಹೊನ್ನಮ್ಮನಕಟ್ಟೆಯಲ್ಲಿ ಕಾಣಿಸಿಕೊಂಡಿದ್ದ ಹುಲಿ ಇದೀಗ ತಾಲ್ಲೂಕಿಗೆ 5 ಕಿ.ಮೀ ದೂರದಲ್ಲಿದೆ. ಅರಣ್ಯ ಇಲಾಖೆಯ 50ಕ್ಕೂ ಹೆಚ್ಚಿನ ಸಿಬ್ಬಂದಿ ಸಾಕಾನೆಗಳ ಜತೆ ಕಾರ್ಯಾ ಚರಣೆ ನಡೆಸಿದ್ದಾರೆ. ಹುಲಿ ಹೆಜ್ಜೆಗುರುತುಗಳು, ಮಲ ಹಾಗೂ ಅದು ತಿಂದು ಬಿಟ್ಟಿರುವ ಹಂದಿಯ ಮಾಂಸ ದೊರೆತಿರುವುದು ಹುಲಿ ಇದೆ ಎಂಬುದನ್ನು ಖಚಿತಪಡಿಸಿದೆ.

ಕಾರ್ಯಾಚರಣೆಯ ಸ್ವರೂಪ ಹೀಗಿತ್ತು: ಬೆಳಿಗ್ಗೆಯಿಂದಲೇ ವೈದ್ಯ ಡಾ.ಮುಜೀಬ್ ರೆಹಮಾನ್, ಎಸಿಎಫ್ ಪೂವಯ್ಯ ಹಾಗೂ ಆರ್‌ಎಫ್‌ಒ ವಿನಯ್ ನೇತೃತ್ವದ ತಂಡ ಅರ್ಜುನ, ಅಭಿಮನ್ಯು, ದ್ರೋಣ, ನಂಜುಂಡ ಮತ್ತು ಸರಳ ಆನೆಗಳೊಂದಿಗೆ ನೂರಲಕುಪ್ಪೆಯಲ್ಲಿ ಹುಲಿ ಪತ್ತೆಗೆ ತೊಡಗಿದರು.

ಗ್ರಾಮದ ರಾಜಶೇಖರ ಎಂಬುವವರ ಜಮೀನಿ ನಲ್ಲಿ ಹುಲಿ ನೋಡಿದ್ದಾಗಿ ಕೆಲವು ಗ್ರಾಮಸ್ಥರು ನೀಡಿದ ಮಾಹಿತಿ ಆಧರಿಸಿ ಅಲ್ಲಿಗೆ ತೆರಳಿದ ತಂಡಕ್ಕೆ ಹುಲಿ ಹೆಜ್ಜೆ ಗುರುತು ಪತ್ತೆಯಾಯಿತು. ಸಮೀಪದಲ್ಲೇ ಇದ್ದ ಪೊದೆಯೊಂದರ ಗಿಡಗಂಟಿಗಳು ಅಲುಗಾಡುತ್ತಿದ್ದುದ್ದನ್ನು ಗಮನಿಸಿದ ಸಿಬ್ಬಂದಿ ಹುಲಿ ಇರಬಹುದು ಎಂದು ಅಂದಾಜು ಮಾಡಿತು.

ಅರಿವಳಿಕೆ ಚುಚ್ಚುಮದ್ದು ಸಮೇತ ಮರವೇರಿದ ಸಿಬ್ಬಂದಿ ಮಧ್ಯಾಹ್ನದ ವರೆಗೂ ಕಾದು ಕುಳಿತರು. ವೈದ್ಯ ಡಾ.ಮುಜೀಬ್ ರೆಹಮಾನ್ ಅಭಿಮನ್ಯು ಆನೆ ಏರಿ ಅರಿವಳಿಕೆ ನೀಡಲು ಸಿದ್ಧರಾದರು. ಇತರ ಸಾಕಾನೆಗಳ ಸಹಾಯದಿಂದ ಪೊದೆಯ ಬಳಿ ಹೋಗಿ ನೋಡಿದಾಗ ಅಲ್ಲಿ 20ಕ್ಕೂ ಹೆಚ್ಚು ಕಾಡುಹಂದಿಗಳು ಇರುವುದು ಪತ್ತೆಯಾಯಿತು. ಇದರಿಂದ ಕಾದು ಕುಳಿತಿದ್ದ ಸಿಬ್ಬಂದಿ ಬೇಸ್ತುಬಿದ್ದರು.

ಮುಂದೆ ಹುಲಿ ಹೆಜ್ಜೆ ಜಾಡು ಹಿಡಿದು ಹೊರಟ ಸಿಬ್ಬಂದಿಗೆ ಹಂದಿಯೊಂದನ್ನು ತಿಂದು ಬಿಟ್ಟ ಮಾಂಸ ದೊರಕಿತು. ಇದರ ಮಧ್ಯೆ ಹುಲಿಯ ಮಲವೂ ಸಿಕ್ಕಿತು. ಒಮ್ಮೆಲೆ ಹಸುಗಳ ಹಿಂಡು ಓಡಿ ಬಂದಿದ್ದರಿಂದ ಗಾಬರಿಗೊಂಡ ಸಿಬ್ಬಂದಿ ಹಸುಗಳು ಓಡಿಬಂದ ದಿಕ್ಕಿನಡೆಗೆ ದೌಡಾಯಿಸಿದರೂ ಹುಲಿ ಪತ್ತೆಯಾ ಗಲಿಲ್ಲ. ಸಂಜೆ ವೇಳೆಗೆ ಕಬಿನಿ ಹಿನ್ನೀರಿನ ಬಳಿಯವರೆಗೆ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನ ವಾಗಲಿಲ್ಲ.

ಕಾರ್ಯಾಚರಣೆಯಲ್ಲಿ ಅರ್ಜುನ, ಅಭಿಮನ್ಯು, ದ್ರೋಣ, ನಂಜುಂಡ ಮತ್ತು ಸರಳ ಆನೆಗಳು ಪಾಲ್ಗೊಂಡಿದ್ದವು. ಸಿಎಫ್ ಮಣಿಕಂಠನ್, ಎಸಿಎಫ್ ಪೂವಯ್ಯ, ಆರ್‌ಎಫ್‌ಒ ವಿನಯ್, ಮಧು, ಸಿಪಿಐ ಹರೀಶ್ ಕುಮಾರ್ ಸೇರಿದಂತೆ ಇತರರು ಇದ್ದರು.

ಡ್ರೋಣ್ ಬಳಕೆ

ಕಾರ್ಯಾಚರಣೆಗೆ ‘ಡ್ರೋಣ್’ ಕ್ಯಾಮೆರಾ ಬಳಸಿದರೂ ಹುಲಿಯ ಯಾವುದೇ ಸುಳಿವು ಕಂಡು ಬರಲಿಲ್ಲ. ಪ್ರದೇಶದಲ್ಲಿ ಡ್ರೋಣ್ ಆಕಾಶದಲ್ಲಿ ಸಂಚರಿಸಿ ಸುತ್ತಮುತ್ತಲ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರಿ ಹಿಡಿಯಿತು. ಆದರೆ, ಇದರಲ್ಲಿ ಹುಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.

ಹುಲಿ ಸೆರೆಗೆ ಬಂದ ‘ರಾಣಾ’!

ಎಚ್.ಡಿ.ಕೋಟೆ ತಾಲ್ಲೂಕಿನ ಸಮೀಪಕ್ಕೆ ಹುಲಿ ಬರುತ್ತಿರುವುದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಪತ್ತೆಗಾಗಿ ಬಂಡೀಪುರ ಅರಣ್ಯದಲ್ಲಿರುವ ಚಾಣಾಕ್ಷ ಶ್ವಾನ ‘ರಾಣಾ’ನನ್ನು ಕರೆಸಿದರು. ಹುಲಿಯ ವಾಸನೆ ಗ್ರಹಿಸಿ ಸಾಕಷ್ಟು ದೂರ ರಾಣಾ ಹೋಯಿತಾದರೂ ಯಾವುದೇ ಸುಳಿವು wಲಭ್ಯವಾಗಲಿಲ್ಲ. ಕೊನೆಗೆ ಕಬಿನಿ ಹಿನ್ನೀರಿನ ಬಳಿವರೆಗೂ ಹೋಗಿ ವಾಪಸಾಯಿತು. ಇದರಿಂದ ಹುಲಿ ಹಿನ್ನೀರಿನಲ್ಲಿ ಈಜಿ ಬೇರೆಡೆಗೆ ಹೋಗಿರಬಹುದು. ಇಲ್ಲವೇ, ಹಿನ್ನೀರಿನ ದಡದಲ್ಲೇ ಎಲ್ಲಾದರೂ ಅವಿತಿರಬಹುದು ಎಂದು ಅಧಿಕಾರಿಗಳು ಊಹಿಸಿದ್ದಾರೆ.

ಹುಲಿ ಎಲ್ಲಿಂದ ಎಲ್ಲಿಗೆ?

4ಜ. 1ರಂದು ಹುಲಿ ಹೊನ್ನಮ್ಮನಕಟ್ಟೆಯಲ್ಲಿ ಕಾಣಿಸಿಕೊಂಡಿತು

4ಜ. 2ರಂದು ಹೊನ್ನಮ್ಮನಕಟ್ಟೆಯಿಂದ 2 ಕಿ.ಮೀ ದೂರದ ದಮ್ಮನಕಟ್ಟೆಗೆ ಬಂದಿತು

4ಜ. 3 ಮತ್ತು 4ರಂದು ದಮ್ಮನಕಟ್ಟೆಯಿಂದ 4 ಕಿ.ಮೀ ದೂರದ ಸೋಗಳ್ಳಿಯಲ್ಲಿ ಹುಲಿ ಸುಳಿವು ಲಭ್ಯವಾಯಿತು

4ಜ. 5ರಂದು ದಮ್ಮನಕಟ್ಟೆಯಿಂದ 5 ಕಿ.ಮೀ ದೂರದ ನೂರಲಕುಪ್ಪೆ ಬಳಿ ಹುಲಿಯ ಮಲ, ಹೆಜ್ಜೆಗುರುತು ಸಿಕ್ಕಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT