ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಬರ್ ಗ್ಯಾಸ್ ಘಟಕ ನಿರ್ಮಾಣ ಕ್ರಾಂತಿಗೆ ಸಜ್ಜು

Last Updated 6 ಜನವರಿ 2018, 5:47 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಈಗ ಅಡುಗೆ ಅನಿಲ ಸ್ವಾವಲಂಬನೆ ಅಭಿಯಾನ ಆರಂಭವಾಗಿದೆ. ಮನೆಗೆ ಬೇಕಾದಷ್ಟು ಅನಿಲವನ್ನು ಅವರೇ ಉತ್ಪಾದಿಸಿಕೊಳ್ಳತೊಡಗಿದ್ದಾರೆ. ಮಾತ್ರವಲ್ಲ, ಹೊಲಗಳಿಗೆ ಫಲವತ್ತಾದ ಸಗಣಿ ಗೊಬ್ಬರವೂ ಸಿಗತೊಡಗಿದೆ.

ಇದು ಸಾಧ್ಯವಾಗಿರುವುದು ಎಸ್‌.ಕೆ.ಜಿ. ಸಂಘದ ನೇತೃತ್ವದಲ್ಲಿ ನಡೆದಿರುವ ‘ರಾಮನಗರ ಬಯೋಗ್ಯಾಸ್‌ ಪ್ರಾಜೆಕ್ಟ್‌’ನಿಂದ. ಸ್ವಯಂ ಸೇವಾ ಸಂಸ್ಥೆಯೊಂದರ ಈ ಪರಿಸರ ಸ್ನೇಹಿ ಕಾರ್ಯಕ್ಕೆ ಕ್ರಮೇಣ ಜನಮನ್ನಣೆ ದೊರೆಯುತ್ತಿದ್ದು, ಗ್ರಾಮೀಣ ಭಾಗದ ಜನರು ತಮ್ಮ ಮನೆಗಳ ಹಿತ್ತಲಿನಲ್ಲಿ ಗೋಬರ್ ಗ್ಯಾಸ್‌ ಘಟಕ ಹೊಂದಲು ಅಸಕ್ತಿ ತೋರುತ್ತಿದ್ದಾರೆ.

ಇನ್ಫೊಸಿಸ್ ಸಹಯೋಗ: ಜಗತ್ತಿನ ತಾಪಮಾನ ನಿರಂತರ ಏರಿಕೆಯಾಗುತ್ತಲೇ ಇದೆ. ಭೂಮಿಯನ್ನು ತಣ್ಣಗಾಗಿಸದ ಹೊರತು ತನಗೆ ಉಳಿಗಾಲವಿಲ್ಲ ಎಂದು ಅರಿತು ತಾಪಮಾನ ಕುಗ್ಗಿಸುವ ಪ್ರಯತ್ನಕ್ಕೆ ಪ್ರಪಂಚದ ವಿವಿಧ ದೇಶಗಳು ನಾಂದಿ ಹಾಡಿವೆ. ಭಾರತದ ಸಾಫ್ಟ್‌ವೇರ್ ದಿಗ್ಗಜ ಸಂಸ್ಥೆಯಾದ ಇನ್ಫೊಸಿಸ್ ಸಹ ‘ಹಸಿರಿನೆಡೆಗೆ’ ಎಂಬ ಅಭಿಯಾನದಡಿ ಸಾಮಾಜಿಕ ಕಾರ್ಯಗಳಿಗೆ ನೆರವು ನೀಡುತ್ತಿದೆ. ಜಿಲ್ಲೆಯಲ್ಲಿ ನಡೆದಿರುವ ಈ ಅಭಿಯಾನಕ್ಕೂ ಸಂಸ್ಥೆಯು ಆರ್ಥಿಕ ನೆರವು ಒದಗಿಸುತ್ತಿದೆ.

ರಾಮನಗರದಲ್ಲಿ ಈ ಗೋಬರ್‌ ಗ್ಯಾಸ್ ಘಟಕಗಳ ನಿರ್ವಹಣೆಯ ಹೊಣೆಯನ್ನು ಕೋಲಾರದ ಪರಿಸರವಾದಿ ವಿದ್ಯಾಸಾಗರ್‌ ದೇವಭಕ್ತಕುಣಿ ಹೊತ್ತಿದ್ದಾರೆ. ಅವರ ನೇತೃತ್ವದ ಎಸ್‌ಕೆಜಿ ಸಂಘವು ಈಗಾಗಲೇ ಇಂತಹ ಹತ್ತು ಹಲವು ಯೋಜನೆಗಳನ್ನು ರೂಪಿಸಿದೆ. ಜಿಲ್ಲೆಯಲ್ಲಿ 2016ರ ಜನವರಿಯಲ್ಲಿಯೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಹಂತಹಂತವಾಗಿ ಕಾರ್ಯಕ್ರಮವು ಅನುಷ್ಠಾನಗೊಳ್ಳುತ್ತಿದೆ.

‘ಗೋಬರ್‌ ಗ್ಯಾಸ್‌ ಘಟಕದಿಂದ ಹತ್ತಾರು ಅನುಕೂಲಗಳು ಇವೆ. ಸಗಣಿಯಿಂದ ಶುದ್ಧ ಅಡುಗೆ ಅನಿಲ ದೊರೆಯುವುದರ ಜೊತೆಗೆ ಉತ್ತಮ ಗೊಬ್ಬರ, ವಾತಾವರಣದ ಸಂರಕ್ಷಣೆಯೂ ಆಗುತ್ತದೆ’ ಎನ್ನುತ್ತಾರೆ ವಿದ್ಯಾಸಾಗರ್.

‘ರಾಮನಗರ ಜಿಲ್ಲೆಯು ಪಶು ಸಂಗೋಪನೆಯಲ್ಲಿ ಮುಂದಿದೆ. ಇಲ್ಲಿನ ಸಾವಿರಾರು ಕುಟುಂಬಗಳು ಎರಡು–ಮೂರು ಹಸುಗಳನ್ನು ಸಾಕುತ್ತಾ ಜೀವನ ನಿರ್ವಹಣೆ ಮಾಡುತ್ತಿವೆ. ಇಂತಹ ಜನರು ಗೋಬರ್‌ ಘಟಕಗಳನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ ಅವರಿಗೆ ಹೆಚ್ಚು ಉಳಿತಾಯ ಆಗಲಿದೆ' ಎಂದು ಅವರು ವಿವರಿಸುತ್ತಾರೆ.

ಉಚಿತ ಸಲಕರಣೆ ವಿತರಣೆ: ಗೋಬರ್‌ ಗ್ಯಾಸ್ ನಿರ್ಮಾಣ ಮಾಡಿಕೊಳ್ಳಲು ಕನಿಷ್ಠ 12X12 ಅಡಿ ಜಾಗ ಹೊಂದಿರಬೇಕಾಗುತ್ತದೆ. ಸುಮಾರು 6 ಜನರು ಇರುವ ಕುಟುಂಬಕ್ಕೆ 2 ಘನ ಮೀಟರ್‌ ಹಾಗೂ ಅದಕ್ಕಿಂತ ಹೆಚ್ಚು ಜನರು ಇರುವ ಕುಟುಂಬಗಳಿಗೆ 3 ಘನ ಮೀಟರ್‌ನಷ್ಟು ವಿಸ್ತೀರ್ಣದ ಸ್ಥಾವರವನ್ನು ನಿರ್ಮಿಸಿಕೊಡಲಾಗುತ್ತದೆ.

ಒಂದು ಘಟಕ ನಿರ್ಮಾಣಕ್ಕೆ ಸುಮಾರು ₹35 ಸಾವಿರ ಖರ್ಚಾಗಲಿದ್ದು, ಅದರ ಪೈಕಿ ₹25 ಸಾವಿರದಷ್ಟು ಮೊತ್ತದ ಸಾಮಗ್ರಿ ಮತ್ತು ತಾಂತ್ರಿಕ ನೆರವನ್ನು ಸಂಘವೇ ನೀಡುತ್ತಿದೆ. 12 ಚೀಲದಷ್ಟು ಸಿಮೆಂಟ್‌ ಹಾಗೂ ಕಬ್ಬಿಣ, ಜಲ್ಲಿ, ಪೈಪ್‌, ಕಾಂಕ್ರೀಟ್‌ ಮುಚ್ಚಳ ಮೊದಲಾದ ಕಚ್ಚಾ ಸಾಮಗ್ರಿಗಳು ಪುಕ್ಕಟೆಯಾಗಿ ಸಿಗುತ್ತವೆ. ಇದಲ್ಲದೆ ಮೇಸ್ತ್ರಿ ಸಹಿತ ಅಗತ್ಯ ತಾಂತ್ರಿಕ ನೆರವನ್ನು ನೀಡಲಾಗುತ್ತಿದೆ. ರೈತರು ತಮ್ಮ ಖರ್ಚಿನಲ್ಲಿ ಒಂದು ಟ್ರ್ಯಾಕ್ಟರ್‌ನಷ್ಟು ಮರಳು, ಮೂವರು ಕಾರ್ಮಿಕರನ್ನು ಒದಗಿಸಬೇಕಾಗುತ್ತದೆ.

ಘಟಕ ನಿರ್ಮಾಣವಾದ ಬಳಿಕ ಅಲ್ಲಿಂದ ಮನೆಗೆ ಅಡುಗೆ ಅನಿಲ ಸರಬರಾಜಿಗೆ ಬೇಕಾಗುವಷ್ಟು ಪೈಪ್‌, ಅಡುಗೆ ಮಾಡಲು ಗ್ಯಾಸ್ ಸ್ಟೌ ಸಹ ಸಂಘದಿಂದ ಉಚಿತವಾಗಿ ಸಿಗುತ್ತಿದೆ. ನಂತರದಲ್ಲಿ ಒಂಬತ್ತು ವರ್ಷಗಳವರೆಗೆ ಉಚಿತ ಸೇವೆ (ಸರ್ವೀಸ್‌ ಕಾರ್ಯಗಳು) ಸಹ ಲಭ್ಯವಾಗಲಿದೆ. ಇದಕ್ಕೆಂದೇ ಪ್ರತ್ಯೇಕ ಸಿಬ್ಬಂದಿಯನ್ನೂ ನೇಮಿಸಿಕೊಂಡಿದ್ದೇವೆ ಎನ್ನುತ್ತಾರೆ ಸಂಘದ ಸಿಬ್ಬಂದಿ ಕೆ.ಎಲ್. ಕಿರಣ್‌.

ಉತ್ತಮ ಪ್ರತಿಕ್ರಿಯೆ: ಯೋಜನೆಗೆ ಕೆಲವು ಕಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಇನ್ನೂ ಕೆಲವು ಕಡೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕೆಲವು ಕಡೆ ಇಡೀ ಹಳ್ಳಿಗಳ ಜನತೆ ಈ ಘಟಕಗಳನ್ನು ಹೊಂದಲು ಮುಂದೆ ಬಂದಿದ್ದಾರೆ ಎಂದು ವಿದ್ಯಾಸಾಗರ್ ಹೇಳುತ್ತಾರೆ.

ಕನಕಪುರ ತಾಲ್ಲೂಕಿನ ಕೊಳ್ಳಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಲಗದೊಡ್ಡಿ ಎಂಬಲ್ಲಿ 78 ಮನೆಗಳ ಜನರು ಈ ಗೋಬರ್ ಘಟಕ ನಿರ್ಮಿಸಿಕೊಂಡಿದ್ದಾರೆ. ದ್ಯಾವಸಂದ್ರ, ಅತ್ತಿಗುಪ್ಪೆ, ರಾಮೇನಹಳ್ಳಿ, ಹೊಸಳ್ಳಿ, ಮಾಕಳಿ, ಮೇಗಳದೊಡ್ಡಿ ಮೊದಲಾದ ಗ್ರಾಮಗಳಲ್ಲಿ ಇಂತಹ ಹತ್ತಾರು ಘಟಕಗಳು ಈಗಾಗಲೇ ನಿರ್ಮಾಣವಾಗಿವೆ.

ಘಟಕಗಳನ್ನು ಅಳವವಡಿಸಿಕೊಂಡಿರುವ ಜನರೂ ಈ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ‘ಈ ಮೊದಲು ಮನೆಗೆ ತಿಂಗಳಿಗೊಂದು ಸಿಲಿಂಡರ್ ಬೇಕಿತ್ತು. ಗೋಬರ್‌ ಘಟಕ ಬಂದ ಮೇಲೆ ಅದರ ಬಳಕೆಗೆ ನಿಂತಿದೆ. ಮೂರು ಹಸುಗಳಿದ್ದು, ಅದರಲ್ಲಿನ ಅರ್ಧದಷ್ಟು ಸಗಣಿಯಲ್ಲಿಯೇ ಇದನ್ನು ನಿರ್ವಹಣೆ ಮಾಡಬಹುದು. ಹೊರಗೆ ಬರುವ ಗೊಬ್ಬರವನ್ನು ನೇರವಾಗಿ ಹೊಲಕ್ಕೆ ಬಳಸಿಕೊಳ್ಳುತ್ತಿದ್ದು, ಹೆಚ್ಚು ಫಲವತ್ತಾಗಿಯೂ ಇದೆ’ ಎನ್ನುತ್ತಾರೆ ರಾಮನಗರ ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದೇಗೌಡನ ದೊಡ್ಡಿ ಗ್ರಾಮದ ಕುಮಾರ್ ಹಾಗೂ ಸುಜಾತಾ ದಂಪತಿ.

ತಪ್ಪು ಕಲ್ಪನೆ ಬೇಡ

‘ಗೋಬರ್‌ ಘಟಕಕ್ಕೆ ಸಗಣಿ ಹಾಕಿದರೆ ಅದು ಸುಟ್ಟುಹೋಗಿ ಗೊಬ್ಬರ ಕಡಿಮೆ ಆಗುತ್ತದೆ ಎಂಬ ತಪ್ಪು ಕಲ್ಪನೆಯು ರೈತರಲ್ಲಿದೆ. ಆದರೆ ಅದು ಸುಳ್ಳು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ’ ಎನ್ನುತ್ತಾರೆ ವಿದ್ಯಾಸಾಗರ್‌.

ಒಮ್ಮೆ ಘಟಕಕ್ಕೆ ಸಗಣಿ ಹಾಕಿದರೆ ಅದು ಕೊಳೆತು ಗೊಬ್ಬರವಾಗಿ ಹೊರಬರಲು 40 ದಿನ ಬೇಕು. ಈ ಕೊಳೆಯುವ ಪ್ರಕ್ರಿಯೆಯಲ್ಲಿ ಸಗಣಿಗೆ ಆಮ್ಲಜನಕದ ಸಂಪರ್ಕ ಸಿಗುವುದಿಲ್ಲ. ಇದರಿಂದ ಅದರಲ್ಲಿನ ಬೀಜ, ಕಳೆ ನಾಶವಾಗುತ್ತದೆ. ಹೊರಬರುವ 1 ಕೆ.ಜಿ.ಯಷ್ಟು ಗೊಬ್ಬರವು 2 ಕೆ.ಜಿ. ಸಗಣಿಯ ಫಲವತ್ತತೆಗೆ ಸಮವಾಗಿರುತ್ತದೆ ಎನ್ನುತ್ತಾರೆ ಅವರು.

ಇಲ್ಲಿ ಉತ್ಪಾದನೆ ಆಗುವ ಅನಿಲವು ಶೇ 60ರಷ್ಟು ಮಿಥೇನ್‌ ಹಾಗೂ ಶೇ 40 ರಷ್ಟು ಇಂಗಾಲದ ಸಂಯೋಜನೆ ಹೊಂದಿದೆ, ಇದು ಗಾಳಿಗಿಂತ ಹಗುರವಾಗಿದ್ದು, ಅದರೊಡನೆ ಬೆರೆತು ಹೋಗುವುದರಿಂದ ಅನಾಹುತ ಸಂಭವಿಸುವ ಸಾಧ್ಯತೆಯೂ ಇಲ್ಲ ಎಂದು ಹೇಳುತ್ತಾರೆ.

* * 

ಒಂದು ವರ್ಷದ ಹಿಂದೆ ಗೋಬರ್‌ ಗ್ಯಾಸ್‌ ಘಟಕ ನಿರ್ಮಿಸಿಕೊಂಡಿದ್ದು, ಅದರಿಂದ ಬರುವ ಅನಿಲದಿಂದಲೇ ಅಡುಗೆಯಾಗುತ್ತಿದೆ. ಇದರಿಂದ ಪ್ರತಿ ತಿಂಗಳು ಸಿಲಿಂಡರ್ ತರುವುದು ತಪ್ಪಿದೆ
ಸುಜಾತಾ
ಮಾದೇಗೌಡನ ದೊಡ್ಡಿ ನಿವಾಸಿ
(ಚಿತ್ರ: 5ಆರ್ಎಂಜಿ3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT