ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೈರಪ್ಪನವರ ಬಾಲ್ಯ ಹುಡುಕುತ್ತಾ...

Last Updated 6 ಜನವರಿ 2018, 19:30 IST
ಅಕ್ಷರ ಗಾತ್ರ
ADVERTISEMENT

ಸಂತೇಶಿವರದ ಆರಂಭದಲ್ಲೇ ಎದುರಾದವರು ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ. ಅಂಗಡಿಯ ಗಲ್ಲಾದ ಮೇಲಿದ್ದ ಶರಭಣ್ಣನವರನ್ನು ಭೈರಪ್ಪನವರ ನೆನಪುಗಳ ಕುರಿತು ಸಾಕ್ಷ್ಯಚಿತ್ರಕ್ಕಾಗಿ ಕೆದಕುತ್ತಿದ್ದರು. ಶೇಷಾದ್ರಿ ಅವರೊಂದಿಗೆ ಮುಗುಳುನಗು ಬದಲಿಸಿಕೊಂಡು ಮುಂದೆ ಸಾಗಿದರೆ, ಮನೆಯೊಂದರ ಅಂಗಳದಲ್ಲಿ ಬಾಯಿ ತುಂಬ ಪೇಸ್ಟು ನೊರೆ ತುಂಬಿಕೊಂಡಿದ್ದ ಮಧ್ಯವಯಸ್ಕನೊಬ್ಬ ಕೈಸನ್ನೆಯಲ್ಲೇ ನಾವು ಹೋಗಬೇಕಾದ ದಾರಿ ಸೂಚಿಸಿದ.
‘ನಾವು–ನೀವು: ಡಾ.ಎಸ್‌.ಎಲ್‌. ಭೈರಪ್ಪನವರ ಜೊತೆ’ ಎನ್ನುವ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿತ್ತು. ‘ಶ್ರೀಮತಿ ಗೌರಮ್ಮ ಸ್ಮಾರಕ ಟ್ರಸ್ಟ್’ ಡಿ. 30ರಂದು ಏರ್ಪಡಿಸಿದ್ದ ಆ ಕಾರ್ಯಕ್ರಮ ಓದುಗರು ತಮ್ಮ ನೆಚ್ಚಿನ ಲೇಖಕನೊಂದಿಗೆ ನೇರವಾಗಿ ಸಂವಾದಿಸುವ ಅವಕಾಶ ಕಲ್ಪಿಸಿತ್ತು. ಬೆಳಿಗ್ಗೆ ಒಂಬತ್ತೂಮೂವತ್ತರ ವೇಳೆಗಾಗಲೇ ಭೈರಪ್ಪನವರ ಅಭಿಮಾನಿ ಓದುಗರು ಒಬ್ಬೊಬ್ಬರಾಗಿ ಸಂತೇಶಿವರದ ಹವೆಗೆ ಮೈ–ಮನಗಳನ್ನು ಒಡ್ಡಿಕೊಳ್ಳುತ್ತಿದ್ದರು. ನೆಚ್ಚಿನ ಲೇಖಕನನ್ನು ಭೇಟಿ ಮಾಡಿ, ಕೈಕುಲುಕಿ, ಮಾತನಾಡಿ ಪುಲಕಗೊಳ್ಳುತ್ತಿದ್ದರು. ಕಾಲಿಗೆ ನಮಸ್ಕರಿಸಿ ಧನ್ಯತಾಭಾವ ಅನುಭವಿಸಿದವರೂ ಇದ್ದರು.

ಆತಿಥ್ಯ ಅಚ್ಚುಕಟ್ಟಾಗಿತ್ತು. ಭರ್ಜರಿಯಾಗಿತ್ತು. ಪುಟ್ಟ ಊರಿನಲ್ಲಿ ನೂರಾರು ಮಂದಿಗೆ ಯಾವ ತೊಂದರೆಯೂ ಆಗದಂತೆ ವ್ಯವಸ್ಥೆ ಕಲ್ಪಿಸುವಲ್ಲಿ ಟ್ರಸ್ಟ್‌ ಶ್ರಮ ಎದ್ದುಕಾಣುತ್ತಿತ್ತು. ಸ್ವತಃ ಭೈರಪ್ಪನವರು ‘ತಿಂಡಿ ಆಯ್ತಾ?’ ಎಂದು ವಿಚಾರಿಸುವ ಮೂಲಕ ಆತಿಥ್ಯದ ನಿಗಾವಹಿಸಿದ್ದರು.

ಸೃಜನಶೀಲ ಲೇಖಕನೊಬ್ಬನ ಊರಿಗೆ ತೆರಳಿ, ಅವನು ಆಡಿ ಬೆಳೆದ ಸ್ಥಳಗಳಿಗೆ ಭೇಟಿಕೊಡುವುದು ಬರಹಗಾರ ಹಾಗೂ ಅವನ ಕೃತಿಯನ್ನು ಹೆಚ್ಚು ಆಪ್ತವಾಗಿಸಿಕೊಳ್ಳುವ ದಾರಿಗಳಲ್ಲೊಂದು. ಸಾಮಾನ್ಯವಾಗಿ ಇಂಥ ಭೇಟಿಗಳೊಂದಿಗೆ ಸಂಭ್ರಮವೊಂದು ತಳುಕು ಹಾಕಿಕೊಂಡಿರುತ್ತದೆ. ಈ ಸಡಗರ ಭೈರಪ್ಪನವರ ಅಭಿಮಾನಿಗಳಲ್ಲೂ ಇತ್ತು. ಆದರೆ, ಲೇಖಕನ ಮೇಲೆ ಪ್ರಭಾವ ಬೀರಿದ ಸ್ಥಳಗಳ ಭೇಟಿ ಪುಲಕ ಹುಟ್ಟಿಸುವಂತಹದ್ದೇನಾಗಿರಲಿಲ್ಲ. ಅವೆಲ್ಲವೂ ಲೇಖಕನ ಬದುಕಿನ ವಿಷಾದದೊಂದಿಗೆ ತಳಕು ಹಾಕಿಕೊಂಡ ಸ್ಥಳಗಳು.

ಸುಮಾರು ಇನ್ನೂರು ಓದುಗರ ಎದುರಿಗೆ ಕೂತ ಭೈರಪ್ಪನವರು ಸಂತೇಶಿವರದೊಂದಿಗಿನ ತಮ್ಮ ನೆನಪುಗಳನ್ನು ಮೆಲುಕು ಹಾಕತೊಡಗಿದರು. ‘ಯಾವ ಪ್ರಸಂಗಗಳು ನಮ್ಮ ಜೀವನದಲ್ಲಿ ಆಳವಾಗಿ ಆಗಿರುತ್ತವೆಯೋ ಅವುಗಳನ್ನು ಮರೆಯಲು ಆಗುವುದಿಲ್ಲ. ಪ್ರಯಾಣದಲ್ಲಿ ನೂರಾರು ಮರಗಳನ್ನು ನೋಡುತ್ತೇವೆ. ಯಾವುದೂ ನೆನಪಿನಲ್ಲಿ ಉಳಿಯುವುದಿಲ್ಲ. ಅಕಸ್ಮಾತ್ ಒಂದು ಅಪಘಾತವಾದರೆ ಜೀವಮಾನವಿಡೀ ಮರೆಯಲು ಸಾಧ್ಯವಿಲ್ಲ. ಅಂದರೆ, ಗಾಢವಾದುದು ಮಾತ್ರ ನೆನಪಿನಲ್ಲಿ ಉಳಿಯುತ್ತದೆ’ ಎಂದರು. ಬೆಳೆದ ಮಗುವೊಂದು ತನ್ನ ಬದುಕನ್ನು ಹಿಂತಿರುಗಿ ನೋಡಿದಂತೆ ನಿರ್ಮಮವಾಗಿ ಅವರು ತಮ್ಮ ಬದುಕಿನ ಘಟನೆಗಳನ್ನು ಕಥೆಗಳ ರೂಪದಲ್ಲಿ ಹೇಳತೊಡಗಿದರು. ಭೈರಪ್ಪನವರು ಅದೇಕೆ ಕಹಿಕಂಠದವರಾಗಿರುತ್ತಾರೆ ಹಾಗೂ ಘನಗಂಭೀರವಾಗಿರುತ್ತಾರೆ ಎನ್ನುವುದಕ್ಕೆ ಆ ಕಥನಗಳು ಉದಾಹರಣೆಯಂತಿದ್ದವು.

ಪ್ರಸಂಗ 1: ಮೂಲ ದೇವರೂ ಉತ್ಸವ ಮೂರ್ತಿಯೂ...

ಭೈರಪ್ಪನವರ ಮನೆಗೆ ಹತ್ತು ಹದಿನೈದು ಹೆಜ್ಜೆ ದೂರದಲ್ಲಿ ಗಂಗಾಧರೇಶ್ವರ ದೇಗುಲವಿದೆ. ಆ ದೇಗುಲ ಕುರಿತಂತೆ ಭೈರಪ್ಪನವರ ನೆನಪುಗಳನ್ನು ಅವರ ಮಾತಿನಲ್ಲೇ ಕೇಳಿ:

‘ಕೆರೆ ಏರಿ ಮೇಲೆ ಗಂಗಾಧರೇಶ್ವರನ ಮೂಲ ವಿಗ್ರಹ ಇದೆ. ಅದು ಕಲ್ಲಿನ ಲಿಂಗ. ಆ ಮಂದಿರಕ್ಕೆ ಬೀಗ ಇಲ್ಲ. ಕಲ್ಲಿನ ಲಿಂಗವನ್ನು ಯಾರೂ ಕದಿಯಲ್ಲ. ಇಲ್ಲಿರುವುದು ಉತ್ಸವಮೂರ್ತಿ. ಈ ಮೂರ್ತಿ ಮೇಲೆ ಬೆಳ್ಳಿ–ಚಿನ್ನ ಎಲ್ಲ ಇರುತ್ತೆ. ಹಾಗಾಗಿ ಬೀಗ ಹಾಕಿರ್ತಾರೆ. ಉತ್ಸವಮೂರ್ತಿ ಬೆಲೆ ಜಾಸ್ತೀನೋ ಮೂಲ ದೇವರ ಬೆಲೆ ಜಾಸ್ತೀನೋ ನೀವೇ ಹೇಳಿ. ಈ ದೇವರಿಗೆ ವರ್ಷಕ್ಕೊಮ್ಮೆ ರಥೋತ್ಸವ. ಸುತ್ತ ಏಳು ಹಳ್ಳಿಗಳಿಗೆ ಉತ್ಸವಮೂರ್ತಿ ತಗೊಂಡು ಹೋಗಿ ರಥೋತ್ಸವಕ್ಕಾಗಿ ಎಲ್ಲರ ಮನೆಗಳಿಂದ ಕಾಸು, ದಿನಸಿ ಸಂಗ್ರಹಿಸಲಾಗುತ್ತದೆ. ಸಂತೇಶಿವರದ ನೆರೆಹೊರೆ ಅನ್ನುವಂತಿರುವ ನುಗ್ಗೇಹಳ್ಳಿಯಲ್ಲಿ ನರಸಿಂಹಸ್ವಾಮಿ ದೇವಸ್ಥಾನವಿದೆ. ಅದು ಅಯ್ಯಂಗಾರರ ದೇವಸ್ಥಾನ. ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ನೌಕರಿಯಲ್ಲಿರುವ ಜನ ನಡೆದುಕೊಳ್ಳುತ್ತಿದ್ದ ಆ ದೇವರ ರಥೋತ್ಸವ ಅದ್ದೂರಿಯಾಗಿ ನಡೆಯುತ್ತಿತ್ತು. ನಮ್ಮ ಊರಲ್ಲೂ ಅದ್ದೂರಿ ಉತ್ಸವ ನಡೆಸುವ ಆಸೆಯಿಂದ ಊರಿನ ಜನ, ಏಳು ಹಳ್ಳಿ ಬದಲು ಇನ್ನಷ್ಟು ಹಳ್ಳಿಗಳಿಗೆ ಹೋಗಿ ಚಂದಾ ಸಂಗ್ರಹಿಸಲು ನಿರ್ಧರಿಸಿದರು.

ಇದೇ ದೇವಸ್ಥಾನದಲ್ಲಿ ಮಹದೇವಯ್ಯನವರು ಎನ್ನುವ ಒಬ್ಬರಿದ್ದರು. ಅವರು ಸನ್ಯಾಸಿಗಳು. ಅವರ ಬಗ್ಗೆ ‘ಗೃಹಭಂಗ’, ‘ಭಿತ್ತಿ’ಯಲ್ಲಿ ಬರೆದಿದ್ದೇನೆ. ಬಳ್ಳಾರಿ ಕಡೆಯವರು. ಭಿಕ್ಷೆ ಮಾಡಿಕೊಂಡು, ದೇವಸ್ಥಾನದಲ್ಲಿ ನೆಲೆಸಿದ್ದರು. ಚಿಕ್ಕಂದಿನಲ್ಲಿ ನನ್ನನ್ನು ತೊಡೆ ಮೇಲೆ ಕೂರಿಸಿಕೊಂಡು, ಮುದ್ದೆ ತಿನ್ನಿಸುತ್ತಿದ್ದರು. ಅದ್ದೂರಿಯಾಗಿ ಉತ್ಸವ ಮಾಡಲು ಹೊರಟವರನ್ನು ಕರೆದು ಅವರು ಹೇಳಿದರು: ‘ನೋಡ್ರಪ್ಪ… ಉತ್ಸವ ದೇವರು ಊರಾಡಿದಷ್ಟೂ ಮೂಲ ದೇವರ ಮಹಿಮೆ ಕಡಿಮೆ ಆಗ್ತದೆ.’

ಮುದುಕ ಏನೋ ಹೇಳ್ತಾನೆ ಅಂದುಕೊಂಡು ಜನ ಮುಂದಕ್ಕೆ ಹೋದರು. ಅವರ ಒಗಟಿನಂಥ ಮಾತು ನನಗೆ ಅರ್ಥವಾಗಲಿಲ್ಲ. ‘ಹಂಗಂದ್ರೆ ಏನು ಅಯ್ಯನವರೇ’ ಎಂದು ಕೇಳಿದೆ. ‘ನೀನಿನ್ನೂ ಚಿಕ್ಕ ಹುಡುಗ ಕಣೋ. ನಿನಗೆಲ್ಲಿ ಅರ್ಥ ಆಗುತ್ತೆ. ಮುಂದೆ ಎಂದಾದರೂ ಅರ್ಥ ಆಗಬಹುದು. ಆಗದೇ ಇರಬಹುದು’ ಎಂದರು.

ಮುಂದೆ ನೌಕರಿಗಾಗಿ ಗುಜರಾತ್, ದೆಹಲಿಗೆ ಹೋದೆ. 1971ರಲ್ಲಿ ಟ್ರಾನ್ಸ್‌ಫರ್ ಮಾಡಿಸಿಕೊಂಡು ಮೈಸೂರಿಗೆ ಬಂದೆ. ಆ ವೇಳೆಗೆ ಕೆಲವು ಕಾದಂಬರಿ ಬರೆದಿದ್ದೆ, ಸ್ವಲ್ಪ ಹೆಸರೂ ಬಂದಿತ್ತು. ಮೈಸೂರಿನಲ್ಲಿ ಜನ ಕಾರ್ಯಕ್ರಮಗಳಿಗೆ ಭಾಷಣಕ್ಕೆ ಕರೆಯತೊಡಗಿದರು. ನಮ್ಮಲ್ಲಿ ಸಾಹಿತಿ ಇದಾನೆ ಅಂದ್ರೆ ಭಾಷಣಕ್ಕೆ ಕರೆದುಬಿಡುತ್ತಾರೆ. ಸಾಹಿತಿ ಎಂದರೆ ನಮ್ಮಲ್ಲಿ ಭಾಷಣಕಾರ ಆಗಲೇಬೇಕು. ಸಂಗೀತಗಾರನನ್ನು ಭಾಷಣಕ್ಕೆ ಕರೆಯೊಲ್ಲ (ಕೆಲವು ಸಂಗೀತಗಾರರು ಸಂಗೀತದ ನಡುವೆ ಭಾಷಣ ಮಾಡುವುದೂ ಇದೆ). ಎರಡು ಕಡೆ ಭಾಷಣ ಮಾಡಲು ಹೋದೆ. ಅಲ್ಲಿ ದೊರೆಯುತ್ತಿದ್ದ ಹೊಗಳಿಕೆ ಮಜಾ ಅನ್ನಿಸ್ತಿತ್ತು. ಮಾತನಾಡಿದ್ದು ಪೇಪರ್‌ನಲ್ಲಿ ಬಂದು ಮತ್ತಷ್ಟು ಭಾಷಣಕ್ಕೆ ಕರೆದರು. ಆರು ತಿಂಗಳ ಕಾಲ ಸಾಕಷ್ಟು ಭಾಷಣ ಮಾಡಿದೆ. ಎಷ್ಟೊಂದು ಹಾರಗಳು, ಶಾಲುಗಳು, ಮೈಸೂರು ಪೇಟಾಗಳು! ಮಜಾ ಅನ್ನಿಸ್ತು. ಒಂದು ದಿನ ಅನ್ನಿಸ್ತು. ದೆಹಲಿಯಲ್ಲಿ ಓದು, ಬರಹ, ಚಿಂತನೆಗೆ ಸಮಯ ದೊರೆಯುತ್ತಿತ್ತು. ಸಾಕಷ್ಟು ಕಾದಂಬರಿ ಬರೆದಿದ್ದೆ. ಇಲ್ಲಿಗೆ ಬಂದ ಆರು ತಿಂಗಳಲ್ಲಿ ಏನೂ ಓದಿರಲಿಲ್ಲ, ಏನೂ ಬರೆದಿರಲಿಲ್ಲ. ಆಗ ಅಯ್ಯನವರು ಹೇಳಿದ ‘ಉತ್ಸವ ದೇವರು ಊರಾಡಿದಷ್ಟೂ ಮೂಲ ದೇವರ ಮಹಿಮೆ ಕಡಿಮೆ ಆಗ್ತದೆ’ ಎನ್ನುವ ಮಾತು ಇದ್ದಕ್ಕಿದ್ದಂತೆ ನೆನಪಾಯ್ತು. ಮೂಲದೇವರು ನನ್ನ ಕ್ರಿಯೇಟಿವಿಟಿ. ಉತ್ಸವದೇವರು ಎನ್ನುವುದು ಸಭೆ, ಪಬ್ಲಿಸಿಟಿ. ಅಂದೇ ತೀರ್ಮಾನ ಮಾಡಿದೆ, ಇನ್ನು ಭಾಷಣಕ್ಕೆ ಹೋಗಲ್ಲ ಅಂತ.

ಪ್ರಸಂಗ 2: ಸಾವಿನ ಸನ್ನಿಧಿಯಲ್ಲಿ ಬದುಕಿನ ವರ

ನಮ್ಮೂರಿಗೆ ಆಗಾಗ್ಗೆ ಪ್ಲೇಗ್ ಬರ್ತಿತ್ತು. ಎರಡು ವರ್ಷಕ್ಕೋ ಮೂರು ವರ್ಷಕ್ಕೋ ಪ್ಲೇಗ್ ಬಂದರೆ 50– 60 ಜನ ಸಾಯ್ತಿದ್ದರು. ಒಂದೇ ಮನೆಯಲ್ಲಿ ಇಬ್ಬರು ಮೂವರು ಸಾಯ್ತಿದ್ದರು. ಜನ ಊರು ಬಿಟ್ಟು ಹೊಲ– ಗದ್ದೆಯಲ್ಲಿ ಗುಡಿಸಲು ಹಾಕ್ಕೊಂಡು ಇರ್ತಿದ್ದರು. ಆಗ ಮಹದೇವಯ್ಯನವರು ಊರಿನ ದೇಗುಲ ಬಿಟ್ಟು ಮೂಲ ಗಂಗಾಧರೇಶ್ವರನ ದೇಗುಲಕ್ಕೆ ಹೋಗುತ್ತಿದ್ದರು.

ಒಂದು ಸಲ ನನ್ನ ಅಕ್ಕನಿಗೆ ಪ್ಲೇಗ್ ತಗುಲ್ತು. ಅವಳಿಗೆ ಮದುವೆಯಾಗಿತ್ತು, ಇನ್ನೂ ಗಂಡನ ಮನೆಗೆ ಹೋಗಿರಲಿಲ್ಲ. ನನ್ನ ಅಣ್ಣನಿಗೆ ಪ್ಲೇಗಾಯ್ತು, ನನಗೂ ಪ್ಲೇಗಾಯ್ತು. ಒಂದೇ ದಿನ, ಅಕ್ಕ– ಅಣ್ಣ ಇಬ್ಬರೂ ಎರಡು ಗಂಟೆ ಅಂತರದಲ್ಲಿ ಸತ್ತುಹೋದರು. ಆ ಹೆಣಗಳನ್ನು ಸುಡಲಿಕ್ಕೆ ತೆಗೆದುಕೊಂಡು ಹೋದರು.

ನನ್ನ ತಾಯಿ ನನ್ನನ್ನು ಹೊತ್ತುಕೊಂಡು ಮಹದೇವಯ್ಯನವರ ಬಳಿ ಹೋದರು. ಅವರು ದೇಗುಲದ ಜಗಲಿ ಮೇಲೆ ಕೂತು ಏಕತಾರಿ ಜೊತೆ ಭಜನೆ ಮಾಡುತ್ತಿದ್ದರು. ಅಮ್ಮ ನನ್ನನ್ನು ಅವರ ತೊಡೆ ಮೇಲೆ ಹಾಕಿದರು.

‘ಅಯ್ಯನೋರೆ ಇಬ್ಬರು ಮಕ್ಕಳನ್ನು ಈಗ ಸುಡ್ತಾ ಇದಾರೆ. ಇವನು ಬದುಕುತ್ತಾನೋ ಇಲ್ಲವೋ ತಿಳಿದಿಲ್ಲ. ನನ್ನ ಅದೃಷ್ಟ ಚೆನ್ನಾಗಿಲ್ಲ. ಇವನನ್ನು ನಿಮಗೆ ಕೊಡ್ತಾ ಇದ್ದೀನಿ. ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಬದುಕಿ ದೊಡ್ಡವನಾಗಲಿ. ಇವನು ಸಂಸಾರಸ್ಥನಾಗದೆ, ನಿಮ್ಮ ಹಾಗೆ ಸನ್ಯಾಸಿಯಾದರೂ ಪರವಾಗಿಲ್ಲ. ಆದರೆ ಬದುಕಿರಲಿ’ ಎಂದು ಅಲ್ಲಿ ಬಿಟ್ಟು ವಾಪಸ್ಸು ಬಂದಳು. ಏನಾಯ್ತೋ ಏನು ಕಥೆಯೋ ನಾನು ಬದುಕಿದೆ.

ಬಹುಶಃ ನನ್ನ ಅಮ್ಮನ ಮನಸ್ಸಿನಲ್ಲಿ ಶಂಕರಾಚಾರ್ಯರ ಜೀವನ ಇದ್ದಿರಬೇಕು. ಶಂಕರರು 8ನೇ ವಯಸ್ಸಿನಲ್ಲಿ ಸನ್ಯಾಸಿ ಆಗಬೇಕು ಎಂದು ಬಯಸ್ತಾರೆ. ಇರುವ ಒಬ್ಬ ಮಗ ಗೃಹಸ್ಥನಾಗಬೇಕು ಎನ್ನುವ ಆಸೆ ತಾಯಿಯದು. ಒಂದು ದಿನ ಬಾಲಶಂಕರ ನದಿಯಲ್ಲಿ ಸ್ನಾನ ಮಾಡುವಾಗ, ಮೊಸಳೆ ಬಂದು ಅವರನ್ನು ಹಿಡಿದುಕೊಂಡಿತು. ಅಲ್ಲೇ ಸಮೀಪದಲ್ಲಿ ಬಟ್ಟೆ ಒಗೆಯುತ್ತಿದ್ದ ಅಮ್ಮನಿಗೆ ಶಂಕರರು ಹೇಳಿದರು: ‘ನನಗೆ ಸನ್ಯಾಸಿಯಾಗಲು ನೀನು ಅನುಮತಿ ಕೊಟ್ಟರೆ ಈ ಮೊಸಳೆ ನನ್ನನ್ನು ಬಿಡುತ್ತೆ. ಇಲ್ಲದೆ ಹೋದರೆ ಅದು ನನ್ನನ್ನು ತಿಂದುಹಾಕುತ್ತೆ.’ ಮಗ ಬದುಕಲಿ ಎಂದು ತಾಯಿ ಸನ್ಯಾಸಿಯಾಗಲು ಅನುಮತಿ ಕೊಟ್ಟರು. ಅದು ಕಥೆ ಇರಬಹುದು. ಆದರೆ ಅದು ನನ್ನ ಅಮ್ಮನ ಮನಸನ್ನು ಪ್ರೇರೇಪಿಸಿದಂತೆ ಕಾಣಿಸುತ್ತದೆ.

ಇದೇ ದೇಗುಲದ ಅಂಗಳದಲ್ಲಿ ಹೈಸ್ಕೂಲಿನ ರಜಾದಿನಗಳಲ್ಲಿ ದಿನವೂ ಒಂದೋ ಎರಡೋ ಪುಸ್ತಕ ಓದುತ್ತಿದ್ದೆ. ಹಸಿವಾದಾಗ ಕೆರೆ ನೀರು ಕುಡಿದು, ಮತ್ತೆ ಓದುತ್ತಿದ್ದೆ. ಓದಿನ ಅಭ್ಯಾಸಕ್ಕೆ ದೇವಸ್ಥಾನ ವೇದಿಕೆಯಾಯಿತು.

ಪ್ರಸಂಗ 3: ಹೆಗಲ ಮೇಲೆ ತಮ್ಮನ ಹೆಣ!

ಚನ್ನರಾಯಪಟ್ಟಣದಲ್ಲಿ ಹೈಸ್ಕೂಲಿನ ಮೊದಲನೇ ವರ್ಷ ಓದ್ತಿದ್ದೆ. ಊಟಕ್ಕೆ ಭಿಕ್ಷಾನ್ನ ಊಟ. ಸಿನಿಮಾಮಂದಿರದಲ್ಲಿ ಗೇಟ್‌ಕೇಪರ್‌ ಆಗಿ ಐದು ರೂಪಾಯಿ ಸಂಪಾದನೆ. ಹನ್ನೆರಡಾಣೆ ಬಾಡಿಗೆಯ ರೂಮು ಮಾಡಿಕೊಂಡಿದ್ದೆ. ಒಂದು ದಿನ ಬೆಳಗ್ಗೆ ಆರರ ಸುಮಾರಿಗೆ ಯಾರೋ ಬಾಗಿಲು ಬಡಿದರು. ಕಣ್ಣುಜ್ಜಿಕೊಂಡು ನೋಡಿದರೆ, ಬಂದವರು ನನ್ನ ತಮ್ಮ ಕೃಷ್ಣಮೂರ್ತಿ ಸತ್ತುಹೋಗಿರುವ ಸುದ್ದಿ ಕೊಟ್ಟರು. ಗಂಟೆಗೆ ಎರಡಾಣೆ ಬಾಡಿಗೆಯ ಸೈಕಲ್ ತೆಗೆದುಕೊಂಡು, 16 ಮೈಲಿ ಸವೆಸಿ ಊರಿಗೆ ಬಂದೆ. ನಮ್ಮದು ದಪ್ಪಗೋಡೆಯ ಗುಡಿಸಲು. ಹಂಚಿನ ಬದಲು ಸೋಗೆ ಹೊದಿಸಲಾಗಿತ್ತು. ಬಾಗಿಲ ಬಳಿಯೇ ಹೆಣ. ಅಜ್ಜಿ ಸುಮ್ಮನೆ ಕುಳಿತಿದ್ದರು. ಅಮ್ಮ ಆ ವೇಳೆಗೆ ತೀರಿಹೋಗಿದ್ದರು. ಅಪ್ಪ–ಚಿಕ್ಕಪ್ಪ ಊರಲ್ಲಿರಲಿಲ್ಲ. ಅವರು ಎಲ್ಲಿಗೆ ಹೋಗಿದ್ದರೋ ಯಾರಿಗೂ ಗೊತ್ತಿರಲಿಲ್ಲ.

ಯಾವ ಜಾತ್ಯಸ್ಥರೂ ಮನೆಯ ಕಡೆಗೆ ಸುಳಿದಿರಲಿಲ್ಲ. ನಮ್ಮ ಅಜ್ಜಿ ನಾಲಗೆ ಕೆಟ್ಟದ್ದು ಎನ್ನುವ ಕಾರಣಕ್ಕೋ ಬೆಳಗ್ಗೆ ಎದ್ದರೆ ಇವರ ಗೋಳು ಇದ್ದೇ ಇರುತ್ತೆ ಎನ್ನುವುದಕ್ಕೋ ಒಬ್ಬರೂ ಬರಲಿಲ್ಲ. ಕೊನೆಗೆ ಕರಡಿ ಎನ್ನುವ ಒಬ್ಬ ಮನುಷ್ಯ (ನಮ್ಮೂರಿನ ನೀರಗಂಟಿ) ಬಂದ. ‘ಎಷ್ಟು ಹೊತ್ತು ಇಟ್ಕೊಂಡ್ರೂ ಅಷ್ಟೆ. ಹೆಣ ತಗೊಂಡು ಒಪ್ಪ ಮಾಡ್ರಿ’ ಎಂದ.
ನನಗಾಗ 15 ವರ್ಷ. 5 ವರ್ಷದ ತಮ್ಮನ ಹೆಣವನ್ನು ಹೆಗಲಮೇಲೆ ಹಾಕಿಕೊಂಡು, ಮಡಕೆಯನ್ನು ಕೈಯಲ್ಲಿ ಹಿಡಿದು ನಡೆದುಕೊಂಡು ಸ್ಮಶಾನಕ್ಕೆ ಹೋದೆ. ಕರಡಿ ಚಿತೆ ಸಿದ್ಧಪಡಿಸಿದ್ದ. ಅವನು ಹೇಳಿದಂತೆ ಎಲ್ಲವನ್ನೂ ಮಾಡಿದೆ. ಸಮೀಪದಲ್ಲಿನ ಶಿವೇಗೌಡರ ಬಾವಿಯಲ್ಲಿ ಸ್ನಾನ ಮಾಡಿಕೊಂಡು ಮನೆಗೆ ಬಂದೆ. ಆ ವೇಳೆಗೆ ಅಸಾಧ್ಯ ಹಸಿವು. ಮಧ್ಯಾಹ್ನ 12 ಗಂಟೆ ಆಗಿದೆ. ಮನೆಯಲ್ಲಿ ತಿನ್ನಲಿಕ್ಕೆ ಏನೂ ಇಲ್ಲ. ‘ಸಂಪು ಮನೆಗೆ ಹೋಗಿ ರಾಗಿಹಿಟ್ಟೋ ಜೋಳದ ಹಿಟ್ಟೋ ಇದ್ರೆ ಇಸ್ಕೊಂಡು ಬಾ’ ಅಂತ ಅಜ್ಜಿ ಹೇಳಿದಳು. ಎದುರಿನ ಮನೆ ಅದು. ನಾನು ಹೋದೆ. ಯಜಮಾನರು ದೇವರಯ್ಯನವರು ಅಂತ, ಶಾನುಭಾಗರು. ದಪ್ಪ ಮೀಸೆ, ದುಂಡು ಮೀಸೆಯ ಸೊಗಸುಗಾರರು. ಹಿಟ್ಟು ಕೇಳಿದೆ. ‘ಕೊಡ್ತೀನಿ’ ಎಂದು ಒಳಗೆ ಹೋದರು. ಒಳಗೆ ಅವರ ಹೆಂಡತಿ, ‘ಕೊಡ್ತೀನಿ ಎಂದು ಹೇಳಿದರಲ್ಲ, ಎಲ್ಲಿಂದ ಬರುತ್ತೆ’ ಅದು ಎಂದು ದಬಾಯಿಸಿದ್ದು ಕೇಳಿಸಿತು.

ನಾನು ಹುಟ್ಟಿದ ಸಮಯದಲ್ಲೇ ಸಂಪಮ್ಮನಿಗೂ ಮಗುವಾಗಿತ್ತು. ಆಕೆಗೆ ಬಾಣಂತಿ ಸನ್ನಿಯಾಗಿ, ಮಗುವನ್ನೇ ಕೊಲ್ಲಲು ಹೋಗುತ್ತಿದ್ದರಂತೆ. ಆಗ, ನನ್ನ ತಾಯಿಯೇ ನನಗೆ ಕುಡಿಸುತ್ತಿದ್ದ ಹಾಲು ಕಡಿಮೆ ಮಾಡಿ, ಆ ಮಗುವಿಗೆ ಏಳೆಂಟು ತಿಂಗಳು ಹಾಲು ಬದುಕಿಸಿದ್ದರು. ಅಂಥ ಸಂಪಮ್ಮ ಹಿಟ್ಟು ಕೊಡಲು ಒಪ್ಪುತ್ತಿಲ್ಲ.

‘ಗಂಡು ಎಂದರೆ ದೇವರಯ್ಯನವರು’ ಎನ್ನುವ ಹೊಗಳಿಕೆಗೆ ಪಾತ್ರರಾಗಿದ್ದ ದೇವರಯ್ಯನವರು ಅಳುಮುಖದಲ್ಲಿ ನನ್ನ ಕಡೆ ನೋಡುತ್ತ, ‘ಮಗು, ನಾನು ಏನು ಮಾಡಲೋ’ ಎಂದರು. ‘ಪರವಾಗಿಲ್ಲ ಮಾಮಯ್ಯ’ ಎಂದು ವಾಪಸ್ಸು ಬಂದೆ. ಬರಿ ಹೊಟ್ಟೆಯಲ್ಲೇ ಸೈಕಲ್ ಹತ್ತಿದೆ.

ಪ್ರಸಂಗ 4: ನಂಬಿಸಿ ಕೈಬಿಟ್ಟ ದೇವರು!

ಅಮ್ಮ ನನ್ನನ್ನು ಬಾಗೂರಿನ ಸೋದರಮಾವನ ಮನೆಯಲ್ಲಿ ಬಿಟ್ಟಿದ್ದರು. ನಾನು ಬಹಳ ತುಂಟಾಟ ಮಾಡ್ತಿದ್ದೆನಂತೆ. ತುಂಬಿದ ಕೆರೆಯಲ್ಲಿ ಈಜುತ್ತಿದ್ದೆ. ಹಾವು ಹೊಡೆಯಲಿಕ್ಕೆ ಹೋಗ್ತಿದ್ದೆ. ಮರಕೋತಿ ಆಡುತ್ತಿದ್ದೆ. ಎಲ್ಲಿ ನಾಟಕ–ಮೇಳ ಎಂದರೂ ಹೇಳದೆ ಕೇಳದೆ ಹೋಗಿಬಿಡ್ತಿದ್ದೆ. ಮಗ ಇಲ್ಲಿದ್ದರೆ ಏನು ಮಾಡಿಕೊಂಡು ಸಾಯ್ತಾನೋ ಎಂದು ಯೋಚಿಸಿ ಬಾಗೂರಿನ ಅಣ್ಣನ ಸುಪರ್ದಿಗೆ ಒಪ್ಪಿಸಿದಳು.

ನನ್ನ ಮಾವ ಪೊಲೀಸ್ ಡಿಪಾರ್ಟ್‌ಮೆಂಟ್‌ನಲ್ಲಿದ್ದವನು. ಅವನೇ ಕಳ್ಳತನ ಮಾಡಿ ಡಿಸ್ಮಿಸ್ ಆಗಿದ್ದ. ಅಲ್ಲಿನ ಮೆಥಡಾಲಜಿಯನ್ನು ನನ್ನ ಮೇಲೆ ಪ್ರಯೋಗಿಸುತ್ತಿದ್ದ. ಒಂದು ದಿನ ಕೆರೆಗೆ ಕರಕೊಂಡು ಹೋಗಿ, ‘ಈಜ್ತೀಯಾ’ ಎಂದ. ಅರ್ಧ ಕೆರೆವರೆಗೆ ಈಜಿ ವಾಪಸ್ಸು ಬಂದೆ. ಜನರೆಲ್ಲ ಭೇಷ್ ಎಂದರು. ನನ್ನ ಮಾವ ಹತ್ತಿರ ಕರೆದರು. ಕೆರೆಯ ಹಿಂದೆ ನಾಗಲಿಂಗೇಶ್ವರದ ದೇವಸ್ಥಾನವಿತ್ತು. ಅಲ್ಲಿಗೆ ಕರಕೊಂಡು ಹೋಗಿ ಕೂದಲು ಹಿಡಿದು ತಿರುಗಿಸಿ, ಕಡೆದ (ಹೊಡೆತದ ತೀವ್ರ ರೂಪ). ಅಂದಿಗೆ ನೀರಿನ ಮೇಲೆ ಭಯ ಶುರುವಾಯಿತು. ಅವನು ನನಗೆ ಉದ್ದಕ್ಕೂ ಹುಟ್ಟಿಸಿದ್ದು ಬರೀ ಭಯವೇ.

ಒಮ್ಮೆ ರಜೆಗೆ ಸಂತೇಶಿವರಕ್ಕೆ ಬಂದೆ. ವಾಪಸ್ಸು ಹೊರಡುವಾಗ ಅಮ್ಮ ಕೊಟ್ಟ ಚಕ್ಕುಲಿ, ಕೋಡುಬಳೆ ಗಂಟು ತಗೊಂಡು ಹೊರಟೆ. ಗಿಡ–ಮರ ದಟ್ಟವಾಗಿ ಬೆಳೆದಿದ್ದ ದಾರಿ. ರಂಗಸ್ವಾಮಿ ಗುಡ್ಡದ ಸಮೀಪ ಬಂದಾಗ ಒಂದು ಯೋಚನೆ ಹೊಳೀತು. ರಂಗಸ್ವಾಮಿ ಬಹಳ ಪವರ್‌ಫುಲ್ ದೇವರು. ಗುಡ್ಡ ಹತ್ತಿ, ಭಕ್ತಿಯಿಂದ ಕೈಮುಗಿದೆ. ‘ನಾನು ಬಾಗೂರಿಗೆ ಹೋಗೋ ಹೊತ್ತಿಗೆ ನಮ್ಮ ಮಾವ ಸತ್ತುಬಿದ್ದಿರಲಿ. ಮನೆ ಮುಂದೆ ಸೌದೆ ಉರಿ ಕಾಣ್ತಾ ಇರಲಿ’ ಎಂದು ಪ್ರಾರ್ಥನೆ ಮಾಡಿದೆ. ಬಲಗಡೆ ಹೂಪ್ರಸಾದವೂ ದೊರೆಯಿತು. ಧನ್ಯತೆಯಿಂದ ಬಾಗೂರಿಗೆ ಹೊರಟೆ. ಮನೆ ಹತ್ತಿರ ಬಂದಂತೆಲ್ಲ ಸಂತೋಷಕ್ಕೆ ಎದೆ ಢವಢವ ಅಂತಿದೆ. ಮನೆ ಹತ್ತಿರ ನೋಡಿದರೆ ಬೆಂಕಿಯೂ ಇಲ್ಲ, ಏನೂ ಇಲ್ಲ. ಮಾವ ಮನೆ ಒಳಗಡೆ ಕೂತು ಬೀಡಿ ಸೇದುತ್ತಿದ್ದ. ಲೇಟಾಗಿ ಬಂದದ್ದಕ್ಕೆ ಸಿಟ್ಟಾಗಿ ಮತ್ತೆ ಚಚ್ಚಿದ. ಅಂದಿನಿಂದ ರಂಗಸ್ವಾಮಿ ದೇವರ ಮಹಿಮೆ ಮೇಲೆ ನಂಬಿಕೆ ಕಡಿಮೆಯಾಯ್ತು.

ಪ್ರಸಂಗ 5: ಹೆಣ್ಣು ಧ್ವನಿಯ ಸರ್ಪ

ಬಾಗೂರಿನ ನಾಗೇಶ್ವರನ ದೇವಾಲಯಕ್ಕೆ ಮಾವನೇ ಪೂಜಾರಿ. ನಾನು ಮಾವನ ಮನೆಗೆ ಹೋದಮೇಲೆ ಪೂಜೆ ಮಾಡುವ ಜವಾಬ್ದಾರಿ ನನಗೆ ಬಂತು. ದೇವಸ್ಥಾನದಲ್ಲಿ ಏಳು ಹೆಡೆ ಸರ್ಪ ಇದೆ ಎಂದು ಗೆಳೆಯರೆಲ್ಲ ಹೇಳುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ನಾಗಾಭರಣವನ್ನು ತಲೆ ಮೇಲೆ ಹೊತ್ತುಕೊಂಡು ಹೋಗುವ ನಾನು ಗೆಳೆಯರಿಗೆ ಹೀರೊ ರೀತಿ ಕಾಣಿಸ್ತಿದ್ದೆ.

ಒಂದು ದಿನ ಸಂಜೆ ನಾಲ್ಕೂವರೆ ಸುಮಾರಿಗೆ ಕಡಲೆಕಾಯಿ ತಿನ್ನಲಿಕ್ಕಾಗಿ ಗದ್ದೆ ಕಡೆಗೆ ಹೋದೆ. ದೇವಸ್ಥಾನದ ನೆನಪಾಯಿತು. ಈಗ ಹೋದರೆ ದೇವಸ್ಥಾನ ಹೇಗೆ ಕಾಣಬಹುದು ಎನ್ನುವ ಕುತೂಹಲ. ದೇವಸ್ಥಾನಕ್ಕೆ ಬಂದೆ. ಒಳಗೆಲ್ಲ ಕತ್ತಲೆ. ಭುಸ್ ಭುಸ್ ಎನ್ನುವ ಶಬ್ದ… ಏಳು ಹೆಡೆ ಸರ್ಪವೇ ಉಸಿರಾಡುತ್ತಿರಬೇಕು ಅನ್ನಿಸಿತು. ಭಂಡಧೈರ್ಯದಿಂದ, ‘ಸತ್ತರೂ ಪರವಾಗಿಲ್ಲ’ ಅಂದುಕೊಂಡು ಒಳಗೆ ಹೋದೆ. ಬಸವಣ್ಣನನ್ನು ದಾಟಿ ಗರ್ಭಗುಡಿ ಸಮೀಪಿಸಿದೆ. ‘ನಿಮ್ಮ ಹುಡುಗ… ನಿಮ್ಮ ಹುಡುಗ’ ಎನ್ನುವ ಹೆಂಗಸಿನ ಧ್ವನಿ. ಇದೇನು ಸರ್ಪ ಹೆಂಗಸಿನ ಧ್ವನಿಯಲ್ಲಿ ಮಾತನಾಡುತ್ತಿದೆ ಅಂದುಕೊಳ್ಳುತ್ತಿರುವಾಗಲೇ, ಹೆಂಗಸೊಬ್ಬಳು ಸೀರೆ ಸರಿಮಾಡಿಕೊಂಡು ನನ್ನನ್ನು ದೂಡಿಕೊಂಡು ಓಡಿದಳು. ಮೇಲೆದ್ದು ಪಂಚೆ ಸರಿಮಾಡಿಕೊಂಡ ಮಾವ (ನನ್ನ ಮಾವನೇ ಸರ್ಪ), ಮತ್ತೆ ನನ್ನ ಜುಟ್ಟು ಹಿಡಿದುಕೊಂಡರು.

ನಾಗಪ್ಪ ಅನ್ನೋದು ಇದೆಯಾ? ಈಶ್ವರ ಇದ್ದಾನಾ? ದೇವಸ್ಥಾನದಲ್ಲಿ ಇಂಥದ್ದೆಲ್ಲ ಮಾಡ್ಕೊಂಡು ಮಾವ ಸುಖವಾಗಿಯೇ ಇದ್ದಾನಲ್ಲ… ನಾನು ಮಾತ್ರ ಕಷ್ಟಪಡುತ್ತಿದ್ದೇನೆ… ಎಂದೆಲ್ಲ ಅನ್ನಿಸಿತು. ಚಿಕ್ಕ ವಯಸ್ಸಿನಲ್ಲಿ ದೇವರು ಎಂದರೇನು, ಸಾವು ಎಂದರೇನು ಎನ್ನುವ ಜಿಜ್ಞಾಸೆ ಶುರುವಾಗಿ ನನ್ನ ಮುಂದಿನ ಓದಿಗೆ, ಫಿಲಾಸಫಿ ಅಧ್ಯಯನಕ್ಕೆ ಕಾರಣವಾಯಿತು. ಇದೆಲ್ಲ ನನ್ನ ಬರವಣಿಗೆಗೆ ಒಂದು ಬಿಗಿ, ಆಳ ಹಾಗೂ ಗಾಢತೆ ತಂದುಕೊಟ್ಟವು.

ಬದುಕು– ಬರವಣಿಗೆಯ ಪ್ರಸಂಗ– ಪ್ರೇರಣೆಗಳನ್ನು ನೆನಪಿಸಿಕೊಳ್ಳುವಾಗ ಭೈರಪ್ಪನವರ ಧ್ವನಿಯಲ್ಲಿ ಏರಿಳಿತವಾಗುತ್ತಿತ್ತು. ಯಾರದೋ ಬದುಕನ್ನು ನಿವೇದಿಸುತ್ತಿರುವಂತೆ ಕಾಣಿಸಿದರೂ, ವಿನೋದ– ವಿಷಾದದ ಲಹರಿಗಳು ಅವರ ಮುಖದಲ್ಲಿ ಸುಳಿದುಹೋಗುತ್ತಿದ್ದವು.

ಭೈರಪ್ಪನವರ ಮಾತಿನ ನಂತರ ಗುಂಪು ಹೊರಟಿದ್ದು ರಂಗಸ್ವಾಮಿ ಬೆಟ್ಟಕ್ಕೆ. ಸಂತೇಶಿವರಕ್ಕೆ ನಾಲ್ಕೈದು ಕಿ.ಮೀ. ದೂರದ ಆ ಪುಟ್ಟ ಗುಡ್ಡ ಹಸಿರಿನ ಪ್ರಭಾವಳಿಯಿಂದ ನೋಡುಗರನ್ನು ಮೋಹಕಗೊಳಿಸುವಂತಿದೆ. ‘ಭೈರಪ್ಪನವರಿಗೆ ಜ್ಞಾನೋದಯವಾಗಿದ್ದು’ ಇಲ್ಲಿಯೇ ಎಂದ ಅರ್ಚಕರೊಬ್ಬರ ಮಾತಿನಲ್ಲಿ, ನಮ್ಮ ನಡುವಿನ ಕಾದಂಬರಿಕಾರನಿಗೆ ಪುರಾಣಪುರುಷನ ಆವರಣವೊಂದು ಸೃಷ್ಟಿಯಾಗುತ್ತಿರುವುದನ್ನು ಸೂಚಿಸುವಂತಿತ್ತು.

ದೇಗುಲದ ನಂತರದ ಪ್ರಯಾಣ ಸ್ಮಶಾನದತ್ತ. ಹಳ್ಳಿಗಳಲ್ಲಿ ಊರು ಮತ್ತು ಮಸಣದ ನಡುವಣ ಗೆರೆ ತೀರಾ ತೆಳುವಾದುದು. ‘ಗೌರಮ್ಮ ಟ್ರಸ್ಟ್‌’ನ ಕೃಷ್ಣಪ್ರಸಾದ್‌, ಭೈರಪ್ಪನವರ ಒಡಹುಟ್ಟಿದವರ ಸಾವಿನ ಕಥೆಗಳನ್ನು ನೆನಪಿಸಿಕೊಳ್ಳುವಾಗ ಅಲ್ಲೆಲ್ಲೋ ಒಂದಷ್ಟು ನಿಟ್ಟುಸಿರುಗಳು ಕೇಳಿಸಿದ ಅನುಭವವಾಗಿರಬೇಕು.

ತಮ್ಮನ ಅಂತ್ಯಸಂಸ್ಕಾರದ ನಂತರ ಭೈರಪ್ಪನವರು ಸ್ನಾನ ಮಾಡಿದ ಶಿವೇಗೌಡರ ಕಲ್ಲಿನ ಬಾವಿ ಈಗ ಹಾಳುಬಿದ್ದಿದೆ. ಇನ್ನೇನು ಮುಚ್ಚಿಹೋಗುವ ಹಂತದಲ್ಲಿರುವ ಆ ಬಾವಿಯನ್ನು ನೋಡಿಕೊಂಡು, ಮುಂದಕ್ಕೆ ಬಂದರೆ ಎದುರಾದುದು ಬತ್ತಿದ ಕೆರೆಯಂಗಳ. ‘ಮಳೆ ಕಡಿಮೆಯಾದಂತೆಲ್ಲ ಕೆರೆಯ ಬಯಲೂ ಕ್ಷೀಣಿಸುತ್ತಿದೆ’ ಎಂದು ಸಂತೇಶಿವರಕ್ಕೆ ಸಮೀಪದ ಊರಿನವರೊಬ್ಬರು ಹೇಳಿದರು.

ಭೈರಪ್ಪನವರ ಪಾಲಿಗೆ ಶಾಲೆಯಂತೆ ಪರಿಣಮಿಸಿದ ಗಂಗಾಧರೇಶ್ವನ ಪರಿಸರವನ್ನು ನೋಡಿಕೊಂಡು ಮತ್ತೆ ‘ಗೌರಮ್ಮ ಟ್ರಸ್ಟ್‌’ ಅಂಗಳಕ್ಕೆ ಬಂದರೆ ಭೈರಪ್ಪನವರೊಂದಿಗಿನ ಸಂವಾದಕ್ಕೆ ವೇದಿಕೆ ಸಿದ್ಧವಾಗುತ್ತಿತ್ತು. ಸಂತೇಶಿವರದ ನೆಪದಲ್ಲಿ ಭೈರಪ್ಪನವರ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಲೇಖಕನೊಂದಿಗೆ ಒಡನಾಡಲು ದೊರೆತ ಅವಕಾಶ ಅನೇಕರ ಪಾಲಿಗೆ ಬೆಲೆ ಕಟ್ಟಲಾಗದ ಕ್ಷಣಗಳಾಗಿದ್ದವು. ಬೆಂಗಳೂರಿನಿಂದ ಬಂದಿದ್ದ ಕಾಂತಿಮತಿ ಬ್ಯಾಂಕ್‌ ಉದ್ಯೋಗಿ ಆಗಿದ್ದವರು. ವೆಂಕಟೇಶ್‌ ರೆಡ್ಡಿ ಬಿ.ಎಚ್‌.ಇ.ಎಲ್‌ನಲ್ಲಿ ದುಡಿದವರು. ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡವರು ಭೈರಪ್ಪನವರ ಸಾಹಿತ್ಯಪ್ರಪಂಚದೊಂದಿಗೆ ಗುರ್ತಿಸಿಕೊಂಡಿದ್ದಾರೆ. ಇಪ್ಪತ್ತು ಮೂವತ್ತರ ತರುಣ, ತರುಣಿಯರು ಭೈರಪ್ಪನವರ ಪಾತ್ರ ಪ್ರಪಂಚದ ಕುರಿತು ಚರ್ಚಿಸುತ್ತಿದ್ದುದು ಕುತೂಹಲಕರವಾಗಿತ್ತು.

ಸಂತೇಶಿವರದ ಭೇಟಿಯನ್ನು ವಿಶೇಷವಾಗಿಸಿದ್ದು ಊರ ಜನರ ಪ್ರೀತಿ–ಕಾಳಜಿ. ರಾಜಶೇಖರಯ್ಯ ಎನ್ನುವ ತೊಂಬತ್ತರ ಸಮೀಪದ ಅಜ್ಜ ಮಾತಿಗೆ ಸಿಕ್ಕಿದರು. ಅವರು ಭೈರಪ್ಪನವರೊಂದಿಗೆ ಒಟ್ಟಿಗೆ ಕಲಿತವರು. ‘‘ಬಡವರಾದರೂ ಅವರಿಗೆ ತಲೆ ಚೆನ್ನಾಗಿತ್ತು. ವಿದ್ಯೆ–ಬುದ್ಧಿಯಿಂದಾಗಿ ಅವರನ್ನು ದೇಶವೇ ಮೆಚ್ಚಿಕೊಂಡಿದೆ’’ ಎಂದರು. ಕಾದಂಬರಿಕಾರರಾಗಿ ಬೆಳೆದ ನಂತರ ಭೈರಪ್ಪನವರೊಂದಿಗೆ ರಾಜಶೇಖರಯ್ಯ ಮಾತನಾಡಿಯೇ ಇಲ್ಲ. ಹಿಂಜರಿಕೆ ತೊರೆದು, ಭೈರಪ್ಪನವರ ಎದುರು ನಿಂತು ಬಾಲ್ಯದ ಪರಿಚಯ ಹೇಳಿಕೊಳ್ಳುವಾಗ ಅವರ ಕಣ್ಣುಗಳು ಹೊಳೆಯುತ್ತಿದ್ದವು.

ಸಮೀಪದಲ್ಲೇ ಊರಿಗೆ ಬಂದ ಅತಿಥಿಗಳಿಗೆ ಎಳನೀರು ಸೇವೆ ನಡೆದಿತ್ತು. ಎಳನೀರು ಕುಡಿದ ಮಹಿಳೆಯೊಬ್ಬರು ತಮ್ಮ ಜೊತೆಯಿದ್ದವರಿಗೆ ಹೇಳುತ್ತಿದ್ದರು: ‘ಎಳನೀರು ತಂಪಾಗಿದೆ. ಭೈರಪ್ಪನವರನ್ನು ಹೆತ್ತ ತಾಯಿಯ ಹೊಟ್ಟೆ ಕೂಡ ಇಷ್ಟೇ ತಂಪಾಗಿರಬೇಕು’. ಹೌದಲ್ಲವೇ, ಎಲ್ಲ ತಾಯಂದಿರ ಹೊಟ್ಟೆಯೂ ತಂಪಾಗಿರುತ್ತದೆ.

***
ಓದುಗರೊಂದಿಗಿನ ಸಂವಾದದಲ್ಲಿ ಭೈರಪ್ಪನವರು ಹೇಳಿದ್ದು:

* ನಮ್ಮಲ್ಲಿ ಇತಿಹಾಸದ ಪಠ್ಯಪುಸ್ತಕಗಳು ಯಾವಾಗಲೂ ರಾಜಕೀಯಪ್ರೇರಿತ. ನಾವಷ್ಟೇ ಹೊರಗಿನಿಂದ ಬಂದವರಲ್ಲ. ಮುಸಲ್ಮಾನರು ಕೂಡ ಹೊರಗಿನಿಂದ ಬಂದವರು. ಆರ್ಯರಾದ ನೀವು ಕೂಡ ಹೊರಗಿನಿಂದ ಬಂದವರು ಎನ್ನುವ ಸಿದ್ಧಾಂತವನ್ನು ಬ್ರಿಟೀಷರು ಮಂಡಿಸಿದರು. ಸ್ವಾತಂತ್ರ್ಯಾನಂತರವೂ ಈ ಸಿದ್ಧಾಂತ ಮುಂದುವರೆಯಿತು. ಇಂದಿರಾಗಾಂಧಿ ಕಾಲದಲ್ಲಂತೂ ಇದು ಬಹಳವಾಯಿತು. ಈಗ ಅದನ್ನೆಲ್ಲ ತಿದ್ದಿಬರೆಯಲು ಹೊರಟರೆ ಎಡಪಂಥೀಯರು ಹುಯಿಲೆಬ್ಬಿಸುತ್ತಾರೆ.

* ಸಾಹಿತ್ಯ ಕೃತಿಗಳನ್ನು ಐಡಿಯಾಲಜಿ ಮೇಲೆ ವರ್ಗೀಕರಣ ಮಾಡುವುದನ್ನು ನಾನು ಒಪ್ಪುವುದಿಲ್ಲ.

* ಕಲೆಯ ಗುರಿ ಸಮಾಜವನ್ನು ಉದ್ಧಾರ ಮಾಡುವುದು ಎನ್ನುವುದು ಎಡಪಂಥೀಯರ ನಂಬಿಕೆ. ಇದು ಕಮ್ಯುನಿಸ್ಟ್ ಸಿದ್ಧಾಂತ. ಸಾಹಿತ್ಯದ ಕೆಲಸ ಮನುಷ್ಯ ಜೀವನದಲ್ಲಿ ಉಂಟಾಗುವ ಭಾವನೆಗಳು ಮತ್ತು ತಾಕಲಾಟಗಳನ್ನು ಓದುಗರ ಅನುಭವಕ್ಕೆ ಬರುವಂತೆ ಶೋಧಿಸುವುದು. ಇದೇ ರಸಾನುಭವ. ನನಗೆ ಇದರಲ್ಲಿ ಸಂಪೂರ್ಣ ನಂಬಿಕೆ.

* ಲೇಖಕನೊಬ್ಬ ತನ್ನ ಅನುಭವ ಶೋಧನೆ ಮತ್ತು ತವಕ–ತಲ್ಲಣಗಳನ್ನು ಓದುಗರಿಗೆ ತಲುಪಿಸುವುದು ಸಾಹಿತ್ಯದ ಮುಖ್ಯ ಉದ್ದೇಶವೇ ಹೊರತು, ಎಡ–ಬಲ ಸೇರಿದಂತೆ ಯಾವುದೇ ಸಿದ್ಧಾಂತದ ಪ್ರತಿಪಾದನೆಯಲ್ಲ. ಸಿದ್ಧಾಂತನಿಷ್ಠ ಕೃತಿಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಹೆಚ್ಚು ಕಾಲ ಉಳಿಯುವ ಕೃತಿ ಯಾವ ಸಿದ್ಧಾಂತಕ್ಕೂ ಒಳಗಾಗದೆ, ಅದು ಮನುಷ್ಯನ ಮೂಲಭೂತ ತಾಕಲಾಟಗಳ ಚಿತ್ರಣ ಒಳಗೊಂಡಿರುತ್ತದೆ.

* ಸಂಸ್ಕೃತದ ಸಹಾಯ ಇಲ್ಲದಿದ್ದರೆ ಕನ್ನಡ ಸಾಹಿತ್ಯ ಬೆಳೆಯುವುದಿಲ್ಲ. ಸಂಸ್ಕೃತವನ್ನು ಎಲಿಮೆಂಟರಿ ಮಟ್ಟದಲ್ಲಾದರೂ ಕಲಿಯದೆ ಹೋದರೂ ಶುದ್ಧ ಕನ್ನಡವನ್ನು ಬರೆಯುವುದು ಸಾಧ್ಯವಿಲ್ಲ. ಕನ್ನಡ ವ್ಯಾಕರಣದಲ್ಲಿರುವ ಮುಕ್ಕಾಲು ಭಾಗ ಸಂಸ್ಕೃತ ವ್ಯಾಕರಣವೇ.

* ಕನ್ನಡ ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಕಲಿಸಬೇಕು. ಮಾಧ್ಯಮಿಕ ಹಂತದಲ್ಲಿ ನೂರು ಅಂಕಕ್ಕೆ ಕನ್ನಡ ಓದಿದರೆ, ಐವತ್ತು ಅಂಕಗಳಿಗೆ ಸಂಸ್ಕೃತ ಕಲಿಯುವಂತಾದರೆ, ನಮ್ಮ ಕನ್ನಡ ಗಟ್ಟಿಯಾಗುತ್ತದೆ. ನನ್ನ ಭಾಷೆಗೆ ತೂಕ ಬಂದಿರುವುದು ಸಂಸ್ಕೃತದ ಸಹಾಯದಿಂದಲೇ ಎಂದು ಹೇಳಲಿಕ್ಕೆ ನನಗೆ ಹೆಮ್ಮೆಯಿದೆ.

* ‘ಕವಲು’ ಕಾದಂಬರಿಗಳಲ್ಲಿನ ಸ್ತ್ರೀಪಾತ್ರಗಳು ನನ್ನ ಹಿಂದಿನ ಸ್ತ್ರೀಪಾತ್ರಗಳಂತೆ ಇಲ್ಲ ಎನ್ನುವ ಆರೋಪವಿದೆ. ಗುಜರಾತಿ ಭಾಷೆಯಲ್ಲಿ ಎಲ್ಲ ಹೆಂಗಸರಿಗೂ ‘ಬೆಹನ್’ ಎನ್ನುವ ವಿಶೇಷಣ ಸೇರಿಸಲಾಗುತ್ತದೆ. ಮಾಡ್ರನ್ ಗುಜರಾತಿ ಹುಡುಗಿಯರು ಇದನ್ನು ಆಕ್ಷೇಪಿಸುತ್ತಾರೆ. ‘ಮಿಸ್’ ಸೇರಿಸಲು ಬಯಸುತ್ತಾರೆ. ಏನಮ್ಮಾ ನಿನ್ನಲ್ಲಿ ಮಿಸ್ ಆಗಿರೋದು ಎನ್ನುವಂತಾಗುತ್ತದೆ. ತಂಗಿ ಎಂದರೆ ಎಷ್ಟೋ ಸಂಬಂಧಗಳನ್ನು ಬ್ಲಾಕ್ ಮಾಡಿದಂತಾಗುತ್ತದೆ. ಅದು ಅವರಿಗೆ ಬೇಕಾಗಿಲ್ಲ. ‘ಗೃಹಭಂಗ’ದ ಗೌರಮ್ಮನಂತೆ ‘ಕವಲು’ ಕಾದಂಬರಿಯ ಪಾತ್ರಗಳನ್ನು ಬರೆಯಲಿಕ್ಕೆ ಹೋದರೆ ಅದು ಅನ್ ರಿಯಲಿಸ್ಟಿಕ್ ಆಗಿಬಿಡುತ್ತೆ.

* ಕೆಲವರು ಲೇಖಕನ ಸ್ವಾತಂತ್ರ್ಯವನ್ನು ಹಾಳು ಮಾಡುವಷ್ಟು ಸೆನ್ಸಿಟಿವ್ ಆಗಿರುತ್ತಾರೆ. ‘ಕವಲು’ ಕಾದಂಬರಿಯಲ್ಲಿನ ಪಾತ್ರಗಳನ್ನು ನೋಡಿ, ಇವರಿಗೆ ಹೆಂಗಸರ ಬಗ್ಗೆ ಗೌರವವಿಲ್ಲ ಎಂದು ಬಾವುಟ ಹಿಡಿದು ಪ್ರತಿಭಟಿಸಿದರು. ಹೆಣ್ಣುಗಳ ನಡುವಣ ವಿವಾಹಬಾಹಿರ ಸಂಬಂಧದ ಬಗ್ಗೆ ನಾನು ಬರೆದಿರುವೆ. ಅದು ಸಮಾಜದಲ್ಲಿ ಇಲ್ಲವೇ? ನಾನು ಪುರುಷರ ಲಂಪಟತನದ ಬಗ್ಗೆ ಬರೆದಾಗ ಯಾವ ಪುರಷರೂ ಭೈರಪ್ಪ ಗಂಡಸರಿಗೆ ಅನ್ಯಾಯ ಮಾಡಿದ್ದಾನೆ ಎಂದು ಪ್ರತಿಭಟಿಸಲಿಲ್ಲ. ಚಳವಳಿಗೆ ಬಿದ್ದ ಹೆಂಗಸರಿಗೆ ಸ್ವಲ್ಪವೂ ಸಹಿಷ್ಣುತೆ ಇಲ್ಲ ಅನ್ನಿಸಿತು. ಚಳವಳಿಗೆ ಬೀಳದ ಹೆಂಗಸರು ‘ಇಂಥದ್ದನ್ನೆಲ್ಲ ನಾವೂ ನೋಡಿದ್ದೇವೆ’ ಎಂದುಕೊಂಡರು.

* ರಾಮಾಯಣ, ಮಹಾಭಾರತಗಳ ಒಂದು ಸ್ಥೂಲ ಕಥೆ ನಡೆದಿರುವುದು ನಿಜ. ಅದನ್ನು ಬರೆದವರು ಪಾತ್ರಗಳಿಗೆ ಪೌರಾಣಿಕ ಆಯಾಮವನ್ನು, ಅತಿ ಮಾನುಷತೆಯನ್ನು ಆರೋಪಿಸಿದರು. ರಾಮಾಯಣ–ಮಹಾಭಾರತವನ್ನು ಬದುಕನ್ನು ಅರ್ಥ ಮಾಡಿಕೊಳ್ಳುವ ದೃಷ್ಟಿಯಿಂದ ಓದಬೇಕು. ದೈವ ನಂಬಿಕೆಯಿಂದ ಭಾರತ–ರಾಮಾಯಣ ಓದಬೇಕೆನ್ನುವುದು ತಪ್ಪುಕಲ್ಪನೆ.

* ‘ಉತ್ತರಕಾಂಡ’ದಲ್ಲಿ ಸೀತೆಯ ಕಥೆ ಬರೆದಿರುವೆ. ಮೂಲ ರಾಮಾಯಣದಲ್ಲಿನ ಅನುಭವಗಳ ಹಿನ್ನೆಲೆಯಲ್ಲಿ, ಒಬ್ಬ ಹೆಣ್ಣು ಪ್ರತಿಕ್ರಿಯಿಸಬಹುದಾದ ರೀತಿಯನ್ನು ಬರೆದಿರುವೆ. ರಾಮನನ್ನು ಕಡಿಮೆ ಮಾಡಿದ್ದಾರೆ ಎಂದು ಕೆಲವರಿಗೆ ಕೋಪ. ನಾನು ಹಾಗೇನೂ ಮಾಡಿಲ್ಲ. ನಮ್ಮಲ್ಲಿ ಅವತಾರದ ಕಲ್ಪನೆಯಿದೆ. ಆದರೆ, ಮನುಷ್ಯ ಪಾತ್ರ ಎಂದು ಪರಿಗಣಿಸದೆ ಹೋದರೆ ವಾಸ್ತವಿಕತೆ ಬರೋದಿಲ್ಲ. ಅವತಾರದ ಸಿದ್ಧಾಂತಕ್ಕೆ ಒಳಗಾಗಿದ್ದರಿಂದ ವ್ಯಾಸ, ವಾಲ್ಮೀಕಿ ದೈವತ್ವ ಆರೋಪಿಸಿದರು. ಭಕ್ತರು ರಾಮ ಮಾಡಿದ ಪ್ರತಿಯೊಂದನ್ನೂ ಸರಿ ಎಂದು ವಾದಿಸಲೇಬೇಕು. ನನ್ನ ಸೀತೆಯ ಪಾತ್ರ ರಕ್ತ–ಮಾಂಸದಿಂದ ಕೂಡಿದೆ. ಸರಯೂ ನದಿಯಲ್ಲಿ ರಾಮ ಐಕ್ಯನಾದ ಎಂದು ಹೇಳಲಾಗಿದೆ. ಹಾಗಂದರೆ ಏನರ್ಥ? ಅವನಿಗೇನು ಈಜು ಬರುತ್ತಿರಲಿಲ್ಲವೆ? ಈ ರೀತಿ ಯೋಚಿಸಿದರೆ ಭಕ್ತರಿಗೆ ಸಿಟ್ಟು ಬರುತ್ತದೆ. ಇದಕ್ಕೆ ಏನೂ ಮಾಡಲಾಗುವುದಿಲ್ಲ. ಇದನ್ನು ಒಂದು ಸಾಹಿತ್ಯಕೃತಿ ಎಂದು ನೋಡಬೇಕಾಗುತ್ತದೆ.

* ನನಗೆ ಜೀವನದಲ್ಲಿ ಒಳ್ಳೆಯದು–ಕೆಟ್ಟದ್ದು ಎಲ್ಲದರಲ್ಲೂ ಆಸಕ್ತಿಯಿದೆ. ಈಗ ಮುಕ್ತವಾಗಿ ಹರಟುವಂಥ ಸ್ನೇಹಿತರು ಇಲ್ಲ. ಬಾಲ್ಯಸ್ನೇಹಿತರ ಜೊತೆ ಮುಕ್ತವಾಗಿ ಹರಟಬಹುದು. ಹೊಸ ಸ್ನೇಹಿತರ ಜೊತೆ ಮುಕ್ತವಾಗಿ ಮಾತನಾಡಲು ಸಂಕೋಚ ಅಡ್ಡಬರುತ್ತದೆ. ಸೃಜನಶೀಲ ಲೇಖಕ ಜೀವನದ ಮಸಾಲೆಯಿಂದ ವಂಚಿತನಾಗಬಾರದು. ಸ್ಥಿತಪ್ರಜ್ಞ ಎನ್ನುವುದೆಲ್ಲ ಬುರುಡೆ.

* ಬರವಣಿಗೆ ದೈವಲೀಲೆಯಂತೆ ರೂಪುಗೊಳ್ಳುವುದಿಲ್ಲ. ಅದು ಏಕಾಗ್ರತೆಯನ್ನೂ ತ್ಯಾಗವನ್ನೂ ಬೇಡುತ್ತದೆ. ಕಾದಂಬರಿ ಬರೆಯುವಾಗ ಮಸಾಲೆದೋಸೆ ತಿನ್ನಬೇಕು ಅನ್ನಿಸಿದರೆ ಕಷ್ಟ. ದೋಸೆ ತಿಂದು ಬರೆಯಲು ಹೋದರೆ ಆಕಳಿಕೆ ಶುರುವಾಗುತ್ತೆ. ಬರವಣಿಗೆ ಕಾಲದಲ್ಲಿ ಹಿತಮಿತವಾದ ಆಹಾರ ತೆಗೆದುಕೊಳ್ಳಬೇಕು. ಮನಸ್ಸು ಚಂಚಲಗೊಳಿಸುವ ಸುಖಗಳನ್ನೂ ದೂರ ಇರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT