ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸಾಹದ ಚಿಲುಮೆ ಸಲೀಲ್‌ ಪಾರೇಖ್‌

Last Updated 6 ಜನವರಿ 2018, 19:30 IST
ಅಕ್ಷರ ಗಾತ್ರ

ಹೊಸ ವರ್ಷವು ಯಾವಾಗಲೂ ತನ್ನ ಒಡಲ ಒಳಗೆ ಹೊಸ ಭರವಸೆಯ ಬೆಳ್ಳಿಕಿರಣಗಳನ್ನು ಹೊತ್ತುಕೊಂಡೇ ನಾಡಿಗೆ ಕಾಲಿಡುತ್ತದೆ. ದೇಶದ ಮಾಹಿತಿ ತಂತ್ರಜ್ಞಾನ ರಂಗದ ಎರಡನೇ ಅತಿದೊಡ್ಡ ಸಂಸ್ಥೆಯಾಗಿರುವ ಇನ್ಫೊಸಿಸ್‌ನ ಎರಡು ಲಕ್ಷ ಸಿಬ್ಬಂದಿ ಪಾಲಿಗೂ ಅಂತಹ ಭರವಸೆಯ ಬೆಳಕು ಈ ಬಾರಿ ಹೊಸ ಸಿಇಒ ಸಲೀಲ್‌ ಎಸ್‌. ಪಾರೇಖ್‌ ಅವರ ರೂಪದಲ್ಲಿ ಒದಗಿ ಬಂದಿದೆ. ಕಂಪ್ಯೂಟರ್‌ ಪರಿಭಾಷೆಯಲ್ಲಿಯೇ ಹೇಳುವುದಾದರೆ, ಇನ್ಫೊಸಿಸ್‌ಗೆ ರಿಬೂಟ್ಸ್‌ (reboots) ಅಂದರೆ, ಹೊಸ ಚಾಲನೆ ನೀಡಲು ಹೊಸ ನಿಪುಣ ತಂತ್ರಜ್ಞನ ಆಗಮನವಾಗಿದೆ.

ಹಿಂದಿನ ವರ್ಷ ಸಂಸ್ಥೆಯ ಪ್ರವರ್ತಕರು ಮತ್ತು ನಿರ್ದೇಶಕ ಮಂಡಳಿ ನಡುವಣ ಬೋರ್ಡ್‌ರೂಂ ಕಲಹದಿಂದಾಗಿ ಹಾದಿಬೀದಿ ಮಾತಾಗಿದ್ದ ವಿದ್ಯಮಾನಗಳ ಕಾರ್ಮೋಡಗಳು ಈಗ ದೂರ ಸರಿದಿವೆ. ಹಲವಾರು ನಾಟಕೀಯ ಬೆಳವಣಿಗೆಗಳ ನಂತರ, ಕೊನೆಗೂ ವಿವಾದ ಸೌಹಾರ್ದಯುತ ಪರಿಹಾರ ಕಂಡುಕೊಂಡಿದೆ. ಆ ಪರಿಹಾರ ಸೂತ್ರದ ಫಲವಾಗಿಯೇ ಈಗ ಸಂಸ್ಥೆಯ ಚುಕ್ಕಾಣಿಯು ಹೊಸ ಸೂತ್ರಧಾರನ ಕೈಗೆ ಹಸ್ತಾಂತರಗೊಂಡಿದೆ. ಸಲೀಲ್‌ ಪಾರೇಖ್‌ (53) ಅವರು ಹೊಸ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ 5 ವರ್ಷಗಳ ಅವಧಿಗೆ ಅಧಿಕಾರ ವಹಿಸಿಕೊಂಡಿದ್ದಾರೆ.

ಫ್ರಾನ್ಸ್‌ನ ಕ್ಯಾಪ್‌ಜೆಮಿನಿ ಸಮೂಹದ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿದ್ದ ಸಲೀಲ್‌, ಅಲ್ಲಿ 25 ವರ್ಷಗಳ ಕಾಲ ಆ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ವಿಶಿಷ್ಟ ಹೆಗ್ಗಳಿಕೆ ಪಡೆದಿದ್ದಾರೆ. ಜಾಗತಿಕ ಮಟ್ಟದ ತಂತ್ರಜ್ಞಾನ ಉದ್ದಿಮೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅಪಾರ ಅನುಭವವೂ ಇವರ ಬೆನ್ನಿಗೆ ಇದೆ. ಅಷ್ಟೇ ಅಲ್ಲ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಉದ್ದಿಮೆಗಳ ವೈಫಲ್ಯಕ್ಕೆ ಕಾರಣ ಗುರುತಿಸಿ, ವಿಶ್ಲೇಷಿಸಿ, ಪರಿಹಾರ ಕ್ರಮ ಜಾರಿಗೊಳಿಸಿ ಅವುಗಳು ಮತ್ತೆ ಲಾಭದ ಹಾದಿಗೆ ಮರಳಿಸುವಂತೆ ಮಾಡಿದ ಅಪರೂಪದ ಗಾರುಡಿಗನೂ ಹೌದು. ಇನ್ಫೊಸಿಸ್‌ನ ಸಹಸ್ಥಾಪಕರೂ ಇವರನ್ನು ಒಪ್ಪಿಕೊಂಡಿರುವುದೇ ಇವರ ವ್ಯಕ್ತಿತ್ವದ ವೈಖರಿಗೆ ಕನ್ನಡಿ ಹಿಡಿಯುತ್ತದೆ.

ಹಲವಾರು ಪ್ರತಿಕೂಲಗಳನ್ನು ಎದುರಿಸುತ್ತಿರುವ ಸಂಸ್ಥೆಯು ಇವರನ್ನು ಆಯ್ಕೆ ಮಾಡಿರುವುದಕ್ಕೆ, ಅವರಲ್ಲಿ ಇರುವ ಹಲವಾರು ಗುಣವಿಶೇಷಗಳೇ ಕಾರಣ. ಯುರೋಪ್‌ ಮತ್ತು ಉತ್ತರ ಅಮೆರಿಕ ಮಾರುಕಟ್ಟೆಯ ಆಳವಾದ ಅನುಭವ ಮತ್ತು ದೊಡ್ಡ ಪ್ರಮಾಣದ ಸ್ವಾಧೀನ ಪ್ರಕ್ರಿಯೆಗಳಲ್ಲಿನ ನಿಪುಣತೆಗೂ ಅವರು ಖ್ಯಾತರಾಗಿದ್ದಾರೆ. ಈ ಎಲ್ಲ ಕಾರಣಗಳಿಗಾಗಿಯೇ ಅವರು ಈ ಹೊಸ ಹುದ್ದೆ ನಿಭಾಯಿಸಲು ಸೂಕ್ತವಾದ ಪರಿಪೂರ್ಣ ವ್ಯಕ್ತಿಯಾಗಿದ್ದಾರೆ.

ಪ್ರವರ್ಧಮಾನಕ್ಕೆ ಬರುತ್ತಿರುವ ಡಿಜಿಟಲ್‌ ತಂತ್ರಜ್ಞಾನ ಸಂಸ್ಥೆಗಳ ಜತೆಗಿನ ಅವರ ಈ ಮೊದಲಿನ ಒಡನಾಟವು, ಹೊಸ ಹುದ್ದೆಯನ್ನು ತುಂಬ ಸುಲಲಿತವಾಗಿ ನಿಭಾಯಿಸಲು ಸಲೀಲ್‌ ಅವರಿಗೆ ನೆರವಾಗಲಿದೆ. ಅಂತಹ ಚಾಕಚಕ್ಯತೆ ಅವರಲ್ಲಿ ಇದೆ. ಬಹು ಸಂಸ್ಕೃತಿಯ ಕೆಲಸದ ಪರಿಸರದಲ್ಲಿನ ಅನುಭವ, ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್‌ ಸೇವೆ ಮಾರಾಟದ ಮೇಲೆ ಅವರಿಗೆ ಬಿಗಿ ಹಿಡಿತವೂ ಇದೆ.

ಪ್ರವರ್ತಕರು, ಆಡಳಿತ ಮಂಡಳಿ ಮತ್ತು ಸಿಬ್ಬಂದಿಯನ್ನು ಒಟ್ಟುಗೂಡಿಸಿ ಎಲ್ಲರನ್ನೂ ಜತೆಯಲ್ಲಿಯೇ ಕರೆದೊಯ್ಯುವ ಉತ್ತಮ ಸಂಘಟಕರೂ ಅವರಾಗಿದ್ದಾರೆ. ಡಿಜಿಟಲ್‌ ತಂತ್ರಜ್ಞಾನದಲ್ಲಿ ಹೂಡಿಕೆ, ಸ್ವಾಧೀನ ಪ್ರಕ್ರಿಯೆ, ಆಕ್ರಮಣಕಾರಿ ಧೋರಣೆಯ ಮಾರಾಟ ನಾಯಕತ್ವ ಸೃಷ್ಟಿಸುವುದು ಮತ್ತು ಸಂಸ್ಥೆಯಲ್ಲಿ ಜಾಗತಿಕ ಸಂಸ್ಕೃತಿ ಉಳಿಸಿಕೊಳ್ಳುವುದು ಅವರ ಮುಂದಿರುವ ಸವಾಲುಗಳಾಗಿವೆ.

ಇಪ್ಪತ್ತನಾಲ್ಕಕ್ಕೂ ಹೆಚ್ಚು ಜನರಲ್ಲಿ ಇವರನ್ನು ಆಯ್ಕೆ ಮಾಡಿರುವುದು ಇವರ ಪರಿಪೂರ್ಣ ವ್ಯಕ್ತಿತ್ವಕ್ಕೆ ಸಂದ ಗೌರವವಾಗಿದೆ. ಉದ್ದಿಮೆಯಲ್ಲಿ ಆಳವಾಗಿ ಬೇರುಬಿಟ್ಟಿರುವುದು, ಅಂತರರಾಷ್ಟ್ರೀಯ ಅನುಭವ ಮತ್ತು ದೇಶಿ ಐ.ಟಿ ಉದ್ದಿಮೆಯ ತಿಳಿವಳಿಕೆಯು ಅವರನ್ನು ಫ್ರಾನ್ಸ್‌ನ ಕ್ಯಾಪ್‌ಜೆಮಿನಿಯಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ಸ್‌ ಸಿಟಿಗೆ ಎಳೆದು ತಂದಿದೆ.

ಅವರ ಮುಂದಿನ ಹಾದಿಯು ಹೂವಿನ ಹಾಸಿಗೆ ಏನೂ ಆಗಿಲ್ಲ. ಪ್ರವರ್ತಕರು ಮತ್ತು ಹೊಸ ನಿರ್ದೇಶಕ ಮಂಡಳಿ ಮಧ್ಯೆ ಶಾಂತಿ – ಸಮನ್ವಯತೆ ಕಾಯ್ದುಕೊಳ್ಳಬೇಕಾಗಿದೆ. ಜತೆಗೆ ಬಾಹ್ಯ ಸವಾಲುಗಳಾದ ವೀಸಾ ನಿರ್ಬಂಧ ಮತ್ತು ವಹಿವಾಟು ವೃದ್ಧಿಯಂತಹ ಜಟಿಲ ಸಮಸ್ಯೆಗಳ ಸಿಕ್ಕುಗಳನ್ನು ಬಿಡಿಸಿಕೊಳ್ಳುತ್ತಲೇ ಸಂಸ್ಥೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ. ಸ್ವಯಂಚಾಲಿತ ವ್ಯವಸ್ಥೆ, ಕೃತಕ ಬುದ್ಧಿಮತ್ತೆ, ಮಷಿನ್‌ ಲರ್ನಿಂಗ್‌ ದಿನನಿತ್ಯದ ತಲೆನೋವುಗಳನ್ನೂ ಸಮರ್ಥವಾಗಿ ನಿವಾರಿಸಿಕೊಳ್ಳಬೇಕಾಗಿದೆ.

ಉನ್ನತ ಹುದ್ದೆಯಲ್ಲಿದ್ದವರ ವಿವಾದಾತ್ಮಕ ನಿರ್ಗಮನದ ಬೆನ್ನಲ್ಲೇ, ಹೊಸ ಹುದ್ದೆ ಅಲಂಕರಿಸುವವರಿಂದ ನಿರೀಕ್ಷೆಗಳು ಹೆಚ್ಚು ವಾಸ್ತವಿಕ ನೆಲೆಯಲ್ಲಿ ಇರಲಿವೆ ಎನ್ನುವ ಮಾತೊಂದು ಚಾಲ್ತಿಯಲ್ಲಿ ಇದೆ. ಸಲೀಲ್‌ ಅವರ ನೇಮಕಾತಿಯಿಂದಲೂ ಇನ್ಫೊಸಿಸ್‌ ಸಿಬ್ಬಂದಿಯಷ್ಟೇ ಅಲ್ಲದೆ ಅದರ ಹಿತಚಿಂತಕ
ರಲ್ಲಿಯೂ ಇಂತಹ ಅನಿಸಿಕೆ ಮನೆ ಮಾಡಿರಬಹುದು. ಇಂತಹ ಅನಿಸಿಕೆಗಳನ್ನು ಸುಳ್ಳು ಮಾಡಿ, ನಿರೀಕ್ಷೆಗಿಂತ ಹೆಚ್ಚಿನದನ್ನು ಸಾಧಿಸುವ ಅಪರೂಪದ ವ್ಯಕ್ತಿತ್ವ ಇವರದ್ದಾಗಿದೆ. ಈಗ ಸಂಸ್ಥೆಯ ಕಾರ್ಯನಿರ್ವಾಹಕಯೇತರ ಅಧ್ಯಕ್ಷರಾಗಿರುವ ನಂದನ್‌ ನಿಲೇಕಣಿ ಅವರ ಶ್ರೀರಕ್ಷೆಯೂ ಇವರಿಗೆ ಇರಲಿದೆ.

ಗುಜರಾತ್‌ನ ಬ್ರಾಹ್ಮಣ ಕುಟುಂಬದಿಂದ ಬಂದಿರುವ ಸಲೀಲ್‌ (ಜನನ 1964), ಐಐಟಿ ಮುಂಬೈನಿಂದ ಏರೊನಾಟಿಕಲ್‌ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್‌ ಪದವಿ ಪಡೆದಿದ್ದಾರೆ. ಆನಂತರ, ಅಮೆರಿಕದ ಕಾರ್ನೆಲ್‌ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್‌ ಸೈನ್ಸ್‌ ಆ್ಯಂಡ್‌ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರಿಗೆ ಮೂವರು ಗಂಡು ಮಕ್ಕಳು ಇದ್ದಾರೆ.

ಸಲೀಲ್‌ ಎಂದರೆ ಸಂಸ್ಕೃತದಲ್ಲಿ ಬತ್ತದ ಪ್ರವಾಹ ಎಂಬರ್ಥ ಇದೆ. ಹೆಸರಿಗೆ ತಕ್ಕಂತೆ ಸದಾ ಚಟುವಟಿಕೆಯ, ಸರಳ ಸ‌ಜ್ಜನಿಕೆಯ ವಿಶಿಷ್ಟ ವ್ಯಕ್ತಿ ಇವರಾಗಿದ್ದಾರೆ. ಪಶ್ಚಿಮದ ಮಾರುಕಟ್ಟೆಯ ಆಳ ಅಗಲಗಳನ್ನೆಲ್ಲ ತಮ್ಮ ಮೂವತ್ತು ವರ್ಷಗಳ ಅನುಭವದಲ್ಲಿ ಅರೆದು ಕುಡಿದಿರುವ ಸಲೀಲ್‌, ಇನ್ಫಿಗೆ ಅಗತ್ಯವಾದ ಉತ್ಸಾಹ ತುಂಬಲು ಹುಮ್ಮಸ್ಸಿನಿಂದಲೇ ಕಾರ್ಯಪ್ರವೃತ್ತರಾಗಿ
ದ್ದಾರೆ. ವೈಮಾನಿಕ ಕ್ಷೇತ್ರದಲ್ಲಿ ಸಲೀಲ್‌ ಪಡೆದಿರುವ ಪದವಿಯು, ಇನ್ಫೊಸಿಸ್‌ ಅನ್ನು ಹೊಸ ಎತ್ತರಕ್ಕೆ ಹಾರಿಸಲು ನೆರವಾಗುವುದೇ ಎನ್ನುವುದನ್ನು ಕಾಲವೇ ಉತ್ತರಿಸಲಿದೆ.

ಹಿಂದಿನ ಸಿಇಒ ವಿಶಾಲ್‌ ಸಿಕ್ಕಾ ಅವರು ತಮ್ಮ ಪ್ರಯಾಣಕ್ಕೆ ಸಂಸ್ಥೆಯ ವೆಚ್ಚದಲ್ಲಿ ಬಾಡಿಗೆ ವಿಮಾನಗಳನ್ನು ಬಳಸುತ್ತಿದ್ದರು. ಏರೊನಾಟಿಕಲ್‌ ಎಂಜಿನಿಯರಿಂಗ್‌ ಮತ್ತು ಕಂಪ್ಯೂಟರ್‌ ಸೈನ್ಸ್‌ ಪರಿಣತ ಸಲೀಲ್‌ ಅವರೇ ಈಗ ಇನ್ಫೊಸಿಸ್‌ನ ಪೈಲಟ್‌ ಸ್ಥಾನದಲ್ಲಿದ್ದುಕೊಂಡು ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ.

ಇವರ ನೇತೃತ್ವದಲ್ಲಿ ಇನ್ಫೊಸಿಸ್‌ ಮತ್ತೆ ತನ್ನ ಗತ ವೈಭವಕ್ಕೆ ಮರಳುವ ನಿರೀಕ್ಷೆಯು ಸಂಸ್ಥೆಯ ಹಿತಚಿಂತಕರಲ್ಲಿ ಮನೆ ಮಾಡಿದೆ. ಸಮರ್ಥ, ಉತ್ಸಾಹಿ ನಾವಿಕನ ಕೈಗೆ ಚುಕ್ಕಾಣಿ ಕೊಟ್ಟಿರುವ ಸಂಸ್ಥೆ, ಅವರಿಂದ ಬಹಳಷ್ಟನ್ನು ನಿರೀಕ್ಷಿಸಿದೆ. ಇತರರು ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಇವರು ಹುಸಿ ಮಾಡಲಾರರು. ಅವುಗಳನ್ನೆಲ್ಲ ಈಡೇರಿಸುವ ಅನುಭವ, ಜಾಣ್ಮೆ ಎಲ್ಲವೂ ಮೇಳೈಸಿರುವ ಸಲೀಲ್‌ ಅವರ ಮುಂದಿನ ನಡೆಯನ್ನು ಇಡೀ ವಿಶ್ವದ ಐ.ಟಿ ಉದ್ಯಮವು ಕುತೂಹಲದಿಂದ ಎದುರು ನೋಡುತ್ತಿರುವುದಂತೂ ನಿಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT