ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಕೆಲ್‌ ಮುಂದಿದೆ ಮಹತ್ವದ ಸವಾಲು

Last Updated 6 ಜನವರಿ 2018, 19:30 IST
ಅಕ್ಷರ ಗಾತ್ರ

ಹೊಸ ವರ್ಷಾಗಮನದ ಸಂದರ್ಭದಲ್ಲಿ ಕಳೆದ ಭಾನುವಾರ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಜರ್ಮನಿಯ ಹಂಗಾಮಿ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಜರ್ಮನ್ನರೆಲ್ಲರ ಏಳ್ಗೆಗೆ ದುಡಿಯುವುದಾಗಿ ಹಾಗೂ 2018 ಮತ್ತು ಅದರಾಚೆಗೂ ಫಲಪ್ರದವೆನ್ನಿಸುವಂತಹ ಕಾರ್ಯಗಳನ್ನು ಮಾಡಲು ಶೀಘ್ರದಲ್ಲೇ ನೂತನ ಸರ್ಕಾರ ರಚಿಸುವುದಾಗಿ ಸಂಕಲ್ಪ ತೊಟ್ಟರು.

ಸೆಪ್ಟೆಂಬರ್ 24ರ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಹೊಮ್ಮಲು ಕಾರಣವಾದ ಜರ್ಮನ್ ಸಮಾಜದ ವಿಭಜನೆಗಳ ಬಗ್ಗೆ ಗಂಭೀರವಾಗಿ ಪರಾಮರ್ಶಿಸಿದ ಮರ್ಕೆಲ್, ರಾಷ್ಟ್ರದ ಆರ್ಥಿಕ ಸದೃಢತೆಯ ನಡುವೆಯೂ ಬಹುತೇಕ ಜರ್ಮನ್ನರಿಗೆ ತಾವು ಹಿಂದೆ ಬಿದ್ದಿದ್ದೇವೆಂಬ ಭಾವನೆ ಇದೆ ಎಂಬುದನ್ನು ಒಪ್ಪಿಕೊಂಡರು. ‘ಭವಿಷ್ಯದ ಸವಾಲುಗಳನ್ನು ಎದುರಿಸುವ’ ನಿಟ್ಟಿನಲ್ಲಿ ‘ಸಮಸ್ತ ಪ್ರಜೆಗಳ ಅಗತ್ಯಗಳ ಬಗ್ಗೆ ಗಮನ ಹರಿಸುವುದಾಗಿ’ ಅವರು ವಾಗ್ದಾನ ನೀಡಿದರು.

ಹೊಸ ಮೈತ್ರಿಕೂಟ ರಚನೆ ಯತ್ನದಲ್ಲಿ ವಿಫಲಗೊಂಡು, ಇದೀಗ ತಮ್ಮ ಹಳೆಯ ಸಹವರ್ತಿ ಪಕ್ಷಗಳ ಜತೆ ಸೇರಿ ಸರ್ಕಾರ ರಚಿಸಲು ಹೆಣಗಾಡುತ್ತಿರುವ ದುರ್ಬಲ ಮರ್ಕೆಲ್ ಅವರಿಗೆ ನೂತನ ವರ್ಷವು ತನ್ನದೇ ಸವಾಲುಗಳನ್ನು ಮುಂದೊಡ್ಡಲಿದೆ.

ಮತ್ತೊಂದು ಚುನಾವಣೆ ತಪ್ಪಿಸಬೇಕಾದ ತೀವ್ರ ಒತ್ತಡದಲ್ಲಿರುವ ಮರ್ಕೆಲ್ ಅವರು ಸೋಷಿಯಲ್ ಡೆಮಾಕ್ರಾಟ್ಸ್ ಪಕ್ಷದೊಂದಿಗೆ ಇಂದು (ಜನವರಿ 7) ಮಾತುಕತೆ ನಡೆಸಲಿದ್ದಾರೆ. ಈ ಪ್ರಕ್ರಿಯೆಯು 2017ರ ಪಾರ್ಲಿಮೆಂಟ್ ಚುನಾವಣೆಯಲ್ಲಷ್ಟೇ ಮೊದಲ ಬಾರಿಗೆ ಕೆಲವು ಸ್ಥಾನಗಳನ್ನು ಗೆದ್ದಿರುವ ರಾಷ್ಟ್ರೀಯವಾದಿ ಜನಪ್ರಿಯ ಪಕ್ಷವಾದ ‘ಆಲ್ಟರ್ನೆಟಿವ್ ಫಾರ್ ಜರ್ಮನಿ’ಯನ್ನು ಇನ್ನಷ್ಟು ಬಲಯುತಗೊಳಿಸಲಿದೆ ಎಂಬುದು ಹಲವರ ಆತಂಕವಾಗಿದೆ.

ಮರ್ಕೆಲ್ ಅವರ ಕನ್ಸರ್ವೇಟಿವ್ ಪಕ್ಷದ ಎದುರು ಕೆಲವು ದಶಕಗಳ ನಂತರ ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮಿದ ಮೊದಲ ಪಕ್ಷವೆಂಬ ಗರಿಮೆ ‘ಆಲ್ಟರ್ನೆಟಿವ್ ಫಾರ್ ಜರ್ಮನಿ’ ಪಕ್ಷದ್ದಾಗಿದೆ. ಜರ್ಮನಿ ಸಂಕ್ಷಿಪ್ತಾಕ್ಷರಗಳ ಪ್ರಕಾರ, ‘ಎಎಫ್‍ಡಿ’ ಎಂದೇ ಹೆಸರಾಗಿರುವ ಈ ಪಕ್ಷವು 2017ರ ಚುನಾವಣೆಯಲ್ಲಿ 10 ಲಕ್ಷಕ್ಕೂ ಹೆಚ್ಚು, ಅಂದರೆ ಒಟ್ಟಾರೆ ಶೇಕಡ 12.6ರಷ್ಟು ಮತಗಳನ್ನು ಪಡೆಯುವಲ್ಲಿ ಸಫಲವಾಯಿತು. ಜರ್ಮನ್ ಪಾರ್ಲಿಮೆಂಟ್ ಪ್ರತಿನಿಧಿಗಳು ತಮ್ಮ ಹಿತಾಸಕ್ತಿಗಳನ್ನುಪ್ರತಿನಿಧಿಸುತ್ತಿಲ್ಲವೆಂದು ಭಾವಿಸಿದ್ದ ಹಾಗೂ ಮರ್ಕೆಲ್ ಅವರ ವಲಸೆ ನೀತಿಗಳ ಬಗ್ಗೆ ಆಕ್ರೋಶಗೊಂಡಿದ್ದ ಜರ್ಮನ್ನರನ್ನು ‘ಎಎಫ್‍ಡಿ’ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.

ಜರ್ಮನಿಯಲ್ಲಿ ಒಮ್ಮತದ ಸರ್ಕಾರ ರಚನೆಯು ಒಂದು ಸಂಪ್ರದಾಯ ಎಂಬಂತೆ ನಡೆದು ಬರುತ್ತಿತ್ತು. ಅತ್ಯಂತ ದೊಡ್ಡಪಕ್ಷವು ಸಣ್ಣ ಪಕ್ಷದೊಂದಿಗೆ ಸೇರಿ ಸರ್ಕಾರ ರಚಿಸುತ್ತಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಎಎಫ್‍ಡಿ ಯಶಸ್ಸು ಈ ಆಯ್ಕೆಯ ಅವಕಾಶದ ಬಾಗಿಲನ್ನು ಮುಚ್ಚಿಹಾಕುವುದರ ಜತೆಗೆ ಮರ್ಕೆಲ್ ಅವರನ್ನು ಮುಜುಗರದ ಮೈತ್ರಿ ಸಂಧಾನಗಳಿಗೆ ದೂಡಿತು. ಚುನಾವಣೆ ಮುಗಿದು ಮೂರು ತಿಂಗಳ ನಂತರ ಕೂಡ ಸರ್ಕಾರ ರಚಿಸಲು ಅವರು ಕಸರತ್ತು ನಡೆಸುತ್ತಲೇ ಇದ್ದಾರೆ.

ಜರ್ಮನಿ ಮತ್ತು ಯುರೋಪ್‍ನ ಆರ್ಥಿಕ ದೃಷ್ಟಿಕೋನವು ಕಳೆದೊಂದು ದಶಕದಿಂದಅತ್ಯುತ್ತಮವಾಗಿಯೇ ಮುಂದುವರಿದಿದೆ. ಜರ್ಮನಿಯ ಸೆಂಟ್ರಲ್ ಬ್ಯಾಂಕ್, 2018ರಲ್ಲಿ ಶೇಕಡ 2.5ರಷ್ಟು ಬೆಳವಣಿಗೆ ಅಂದಾಜಿಸಿರುವ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಫೋಕ್ಸ್‌ ವ್ಯಾಗನ್ ಹಾಗೂ ಇತರ ವಾಹನ ಕಂಪನಿಗಳ ಮಾಲಿನ್ಯ ಹೊರಸೂಸುವಿಕೆ ಹಗರಣವು ಆರ್ಥಿಕತೆಯ ಮೇಲೆ ಯಾವುದೇದುಷ್ಪರಿಣಾಮವನ್ನು ಬೀರಿಲ್ಲ.

ರಾಷ್ಟ್ರವು ದೀರ್ಘಾವಧಿ ಸ್ಪರ್ಧಾತ್ಮಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮೂಲಸೌಕರ್ಯ ಮತ್ತು ನೌಕರರ ಮೇಲೆ ಹೂಡಿಕೆ ಮಾಡುವುದು ಅಗತ್ಯ ಎಂಬುದು ವಿಶ್ಲೇಷಕರ ಅಭಿಮತ. ‘ಇಲ್ಲಿ ನಿರುದ್ಯೋಗ ಸಮಸ್ಯೆ ಇಲ್ಲವಾದರೂ ವಲಸಿಗರಿಗೆ ನೌಕರಿ ಅವಕಾಶ ನೀಡದಿದ್ದರೆ ಮುಂಬರುವ ದಿನಗಳಲ್ಲಿ ಕಾರ್ಮಿಕರ ಕೊರತೆ ಉಂಟಾಗುವ ಭೀತಿ ಇದೆ. ಇದನ್ನು ನೀಗಬೇಕೆಂದರೆ ಶಿಕ್ಷಣ ಮತ್ತು ತರಬೇತಿಗಾಗಿ ಹೆಚ್ಚು ವ್ಯಯಿಸಬೇಕಾಗುತ್ತದೆ’ ಎಂದು ಚಾನ್ಸೆಲರ್ ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸಿದ್ದಾರೆ.

ಫೋರ್ಬ್ಸ್‌ ನಿಯತಕಾಲಿಕದ ಪ್ರಕಾರ, ಜರ್ಮನಿಯು ಜಗತ್ತಿನ ಸಿರಿವಂತ ರಾಷ್ಟ್ರಗಳಲ್ಲಿ ಒಂದಾಗಿಯೇ ಮುಂದುವರಿದಿದೆ; ಆದಾಯದ ದೃಷ್ಟಿಯಿಂದ ಬೃಹತ್ ಎನ್ನಿಸಿಕೊಳ್ಳುವ ನಾಲ್ಕು ಕಂಪನಿಗಳು ಇಲ್ಲಿಗೆ ಸೇರಿದ್ದಾಗಿವೆ; ಐರೋಪ್ಯ ಒಕ್ಕೂಟದಲ್ಲಿ ಅತ್ಯಧಿಕ ತಲಾವಾರು ಆದಾಯ ಇರುವ ನಾಡು ಕೂಡ; ನಿರುದ್ಯೋಗವೂ ಅತ್ಯಂತ ಕಡಿಮೆ ಎನ್ನಬಹುದಾದ ಶೇಕಡ 5.6ರಷ್ಟು ಮಾತ್ರ ಇದೆ.

ಆದರೆ ಮರ್ಕೆಲ್ ಅವರ 12 ವರ್ಷಗಳ ಅಧಿಕಾರಾವಧಿಯಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿನ ಅಂತರ ಅಧಿಕವಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಶೇ 16ರಷ್ಟು ಜನರು ಬಡತನದ ಆಪತ್ತಿಗೆ ಸಿಲುಕುವ ಸಾಧ್ಯತೆ ಇದೆ. ತನ್ನ ಸಮಾನ ಸಾಮಾಜಿಕ ಮಾರುಕಟ್ಟೆ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ರಾಷ್ಟ್ರವನ್ನು ಇದರಿಂದ ಒಂದು ಬಗೆಯ ಅಭದ್ರತೆ ಭಾವನೆ ಆವರಿಸಿದೆ.

ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ ಬಿಡುಗಡೆ ಮಾಡಿರುವ ದಾಖಲೆಗಳ ಅನ್ವಯ, ಜರ್ಮನಿಯಲ್ಲಿ ಶೇ 14ರಷ್ಟು ಮಕ್ಕಳು ಕಲ್ಯಾಣ ಯೋಜನೆಗಳ ಸವಲತ್ತು ಪಡೆಯುತ್ತಿದ್ದಾರೆ. ಶಾಲಾ ವ್ಯವಸ್ಥೆಯಲ್ಲಿನ ತರತಮಗಳನ್ನು ಸಂಸ್ಥೆಯು ನಿರಂತರವಾಗಿ ಎತ್ತಿ ತೋರಿಸುತ್ತಾ ಬಂದಿದೆ.

ವಿಶ್ವವಿದ್ಯಾಲಯ ಮಟ್ಟದಲ್ಲಿ ವ್ಯಾಸಂಗ ಮಾಡುವ ಅವಕಾಶವು ಉಳ್ಳವರ ಕುಟುಂಬಗಳ ಮಕ್ಕಳಿಗೆ ಹೆಚ್ಚಾಗಿ ದೊರೆಯುತ್ತಿದ್ದರೆ, ಬಡ ಕುಟುಂಬಗಳ ಮಕ್ಕಳು ಇದರಿಂದ ವಂಚಿತರಾಗುತ್ತಿದ್ದಾರೆ ಎಂದೂ ಅದು ಹೇಳಿದೆ.

ಪ್ರಮುಖವಾಗಿ ಸಿರಿಯಾ, ಇರಾಕ್ ಮತ್ತು ಅಫ್ಗಾನಿಸ್ತಾನದಿಂದ ಜರ್ಮನಿಗೆ 2015-16ರಲ್ಲಿ ಸುಮಾರು 10 ಲಕ್ಷ ಜನರು ವಲಸೆ ಬಂದಿದ್ದಾರೆ. ಇವರೆಲ್ಲರನ್ನೂ ಜರ್ಮನ್ ಮುಖ್ಯವಾಹಿನಿ ಜತೆ ಒಂದಾಗಿಸಿಕೊಳ್ಳುವ ಖಾತರಿ ನೀಡುವುದು ಮುಂಬರುವ ಯಾವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಲಿದೆ.

ವಲಸಿಗರು ದೊಡ್ಡ ಪ್ರಮಾಣದಲ್ಲಿರುವುದು ಜರ್ಮನಿಯಲ್ಲಿ ಸಂಘರ್ಷದ ಮೂಲವಾಗಿ ಪರಿಣಮಿಸಿದೆ. ಚಾನ್ಸೆಲರ್ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದಂತೆ, ಸಮಾಜದಲ್ಲಿ ವಿಭಜನೆಗಳನ್ನು ಹುಟ್ಟುಹಾಕಿದೆ. ಮರ್ಕೆಲ್ ಅವರು ಈ ಹಿಂದೆ ವರ್ಷಾಗಮನದ ಸಂದರ್ಭಗಳಲ್ಲಿ, ನಿರಾಶ್ರಿತರು ಹಾಗೂ ವಲಸಿಗರ ವಿಷಯವನ್ನು ನೇರವಾಗಿಯೇ ಪ್ರಸ್ತಾಪಿಸಿದ್ದರು. ಆದರೆ ಈ ಬಾರಿ ಅವರು, ಈ ಸಮಸ್ಯೆಯ ಬಗ್ಗೆ ಉಲ್ಲೇಖದಂತೆ ಪ್ರಸ್ತಾಪಿಸಿದರೇ ವಿನಾ ಅದರ ಬಗ್ಗೆ ಒತ್ತಿ ಹೇಳಲಿಲ್ಲ.

ಇದೇ ವೇಳೆ, ವಲಸೆ ಸಮಸ್ಯೆ ಕುರಿತು ತಮ್ಮದೇ ಕನ್ಸರ್ವೇಟಿವ್ ಪಕ್ಷದೊಳಗೆ ಹಾಗೂ ಸಂಭಾವ್ಯ ಮಿತ್ರಪಕ್ಷವಾದ ‘ಸೋಷಿಯಲ್ ಡೆಮಾಕ್ರಟಿಕ್’ನೊಂದಿಗೆ ಇರುವ ಭಿನ್ನಾಭಿಪ್ರಾಯಗಳನ್ನು ಮರ್ಕೆಲ್ ಅವರು ಬಗೆಹರಿಸಿಕೊಳ್ಳಲೇಬೇಕಾಗಿದೆ. ವಲಸಿಗರ ಸಂಖ್ಯೆಗೆ ಮಿತಿ ಹೇರಬೇಕು ಎಂದು ಕನ್ಸರ್ವೇಟಿವ್ ಪಕ್ಷವು ಪಟ್ಟು ಹಿಡಿಯಲಿದ್ದರೆ, ಇದು ಸಂವಿಧಾನ ವಿರೋಧಿಯಾಗಲಿದೆ ಎಂದು ‘ಸೋಷಿಯಲ್ ಡೆಮಾಕ್ರಾಟ್’ಗಳು ದನಿ ಎತ್ತಲಿದ್ದಾರೆ.

ಮರ್ಕೆಲ್ ಅವರ ಈ ಸಂದಿಗ್ಧವು ಐರೋಪ್ಯ ಒಕ್ಕೂಟದ ಹಲವು ದೇಶಗಳ ಮುಂದೆ ಒಂದು ದೊಡ್ಡ ಪ್ರಶ್ನೆಯಾಗಿ ಪರಿಣಮಿಸಿದೆ; ಜರ್ಮನಿಯ ಮೇಲೆ ಈ ಮುಂಚಿನಂತೆಯೇ ತಮ್ಮ ‘ಅಘೋಷಿತ ನಾಯಕ ರಾಷ್ಟ್ರ’ ಎಂಬ ವಿಶ್ವಾಸ ತಾಳಬಹುದೋ ಅಥವಾ ಇಲ್ಲವೋ ಎಂಬುದೇ ಈ ಪ್ರಶ್ನೆಯಾಗಿದೆ.

2017ರಲ್ಲಿ ನಡೆದ ಜರ್ಮನಿ ಮತ್ತು ಫ್ರಾನ್ಸ್ ಚುನಾವಣೆಗಳು ಯೂರೋವಲಯ, ವಲಸೆ, ರಕ್ಷಣೆ ಹಾಗೂ ಇನ್ನಿತರ ವಿಷಯಗಳ ಕುರಿತ ಗಂಭೀರ ನಿರ್ಧಾರಗಳನ್ನು ಹಿಂದಕ್ಕೆ ಸರಿಸಿವೆ. ಎಮ್ಯಾನುಯಲ್ ಮ್ಯಾಕ್ರೊನ್‌ ಅವರ ನೇತೃತ್ವದಲ್ಲಿ ಫ್ರಾನ್ಸ್ ದೇಶವು ಮಹತ್ವಾಕಾಂಕ್ಷಿ ಸುಧಾರಣಾ ಕಾರ್ಯಸೂಚಿ ಪ್ರಕಟಿಸಿದೆ. ಆದರೆ ತಮ್ಮ ಕಾರ್ಯಸೂಚಿ ಯಶಸ್ವಿಯಾಗಬೇಕೆಂದರೆ ಜರ್ಮನಿ ಮುನ್ನಡೆಯುವುದು ಅವರಿಗೆ ಅವಶ್ಯವಾಗಿದೆ.

ಜರ್ಮನ್ನರು ಕಳೆದ ವರ್ಷವಿಡೀ, ಅಂತರ್ಜಾಲದಲ್ಲಿ ದ್ವೇಷ ಭಾಷಣ ಹರಿಬಿಡುವುದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸುತ್ತಾ ಬಂದರು. ಬಹುತೇಕರ ಪ್ರಕಾರ, ಸಮಾಜದಲ್ಲಿ ಒಡಕು ಹೆಚ್ಚಲು ಇಂತಹ ದ್ವೇಷ ಭಾಷಣಗಳೇ ಮುಖ್ಯ ಕಾರಣ.

ಬರುವ ಸೋಮವಾರದಿಂದ ಜಾರಿಗೆ ಬರಲಿರುವ ಹೊಸ ಕಾನೂನಿನಂತೆ, ದ್ವೇಷ ಭಾಷಣವೆಂದು ಗುರುತಿಸಲಾದ ಭಾಷಣಗಳನ್ನು ಸಾಮಾಜಿಕ ಜಾಲತಾಣಗಳು ನಿಗದಿತ ಸಮಯದೊಳಗೆ ತೆಗೆದು ಹಾಕಬೇಕಾಗುತ್ತದೆ. ಇಲ್ಲದಿದ್ದರೆ 5 ದಶಲಕ್ಷ ಯೂರೋದಿಂದ ಹಿಡಿದು 50 ದಶಲಕ್ಷ ಯೂರೋಗಳಷ್ಟು ಭಾರಿ ದಂಡ ತೆರಬೇಕಾಗುತ್ತದೆ.

ಇದರ ನಡುವೆಯೇ ಚಾನ್ಸೆಲರ್ ಅವರಿಗೆ ಅಂತರ್ಜಾಲವನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ಅದ್ಯಾವುದು ನೆರವಿಗೆ ಬರುತ್ತದೆ ಎಂದು ವೀಕ್ಷಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT