ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲಿತ ವಿದ್ಯೆ ಸಮಾಜದ ಏಳಿಗೆಗೆ ಬಳಕೆಯಾಗಲಿ’

Last Updated 7 ಜನವರಿ 2018, 10:10 IST
ಅಕ್ಷರ ಗಾತ್ರ

ಕುಕನೂರು: ಬಾಲ್ಯದಲ್ಲೇ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಿ, ಮುಂಬರುವ ಸಮಸ್ಯೆಗಳನ್ನು ಎದು­ರಿಸುವ ಸಾಮರ್ಥ್ಯವನ್ನು ಬೆಳೆಸಬೇಕು ಎಂದು ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾಧಿಕಾರಿ ಮೆಹಮೂದ್‌ ಅಭಿಪ್ರಾಯಪಟ್ಟರು.

ಸಮೀಪದ ಗುದ್ನೇಪ್ಪ ಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶುಕ್ರವಾರ ಅಲ್ಪಸಂಖ್ಯಾತರ ಇಲಾಖೆ ಹಾಗೂ ಸಿಗ್ಮಾ ಫೌಂಡೇಷನ್ ಆಶ್ರಯದಲ್ಲಿ 5 ದಿನಗಳ ನಾಯಕತ್ವ ಮತ್ತು ಸಂವಹನ ಕಲೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ಮೌಲ್ಯಾಧಾರಿತ ಬದುಕಿನ ಅರ್ಥವನ್ನು ತಿಳಿ ಹೇಳಬೇಕು. ಜೀವನ ನಿರ್ವಹಣೆ ಕೌಶಲ ತರಬೇತಿ ನೀಡುವ ಶಿಬಿರಗಳು ಅಗತ್ಯ ಎಂದರು.

ಫೌಂಡೇಷನ್ ಸಿ.ಒ ಅಮೀನ್‌ ಮಾತನಾಡಿ ಸಂವಹನ, ನಾಯಕತ್ವ, ಜೀವ ರಕ್ಷಣಾ, ಮಾನಸಿಕ ಒತ್ತಡ ನಿರ್ವಹಣೆ ಹಾಗೂ ನಿವಾರಣೆ ಕೌಶಲಗಳನ್ನು ಕಲಿತು ಉತ್ತಮ ನಾಗರಿಕರಾಗಿ ಬದುಕು ಕಟ್ಟಿಕೊಳ್ಳಬೇಕು, ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಇಂಥ ಶಿಬಿರ­ಗಳು ಅತ್ಯಂತ ಸಹಕಾರಿಯಾಗಿವೆ ಎಂದು ಹೇಳಿದರು.

ಫೌಂಡೇಷನ್ ಸಂಯೋಜಕ ಮುಜಿಬರ್‌ ರೆಹೆಮಾನ್‌ ಮಾತನಾಡಿ, ವಿವಿಧ ಕ್ಷೇತ್ರಗಳ ಸಾಧಕರ, ವಿಶ್ವ ನಾಯಕರ ಚರಿತ್ರೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ಅವರ ಜೀವನ–ಸಾಧನೆಗೆ ಸಂಬಂಧಿಸಿದ ಕತೆಗಳನ್ನು ಹೇಳಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳಸಲಾಯಿತು ಎಂದರು. ಮಹನೀಯರ ಉಕ್ತಿಯನ್ನು ಉಲ್ಲೇಖಿಸಿ, ವಿದ್ಯಾರ್ಥಿಗಳಲ್ಲಿ ಆಂತರಿಕ ಅಭಿಪ್ರೇರಣೆ ಉಂಟು ಮಾಡಲಾಯಿತು.

ಉದಾ: ಸ್ವಾಮಿ ವಿವೇಕಾನಂದರ ‘ಏಳಿ ಎದ್ದೇಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ’, ಡಿವಿಜಿ ಅವರ ‘ದುಡಿದು ದೊಡ್ಡವನಾ ಗು, ಮೇರು ಪರ್ವತವಾಗು, ಕಾಯವಳಿದರೂ ಛಾಯೆ ಉಳಿಯಲಿ ಜಗದಿ’ ಇಂತಹ ಉಕ್ತಿಗಳನ್ನು ವಿದ್ಯಾರ್ಥಿಗಳು ಅರ್ಥೈಯಿಸಿ, ಅನ್ವಯಿಸಿಕೊಳ್ಳುವಂತೆ ತರಬೇತಿ ನೀಡಲಾಯಿತು ಎಂದು ಹೇಳಿದರು.

ಪ್ರಾಚಾರ್ಯ ಅಲಿಚಾಂದ ಪಟೇಲ ಮಾತನಾಡಿ, ದಿನನಿತ್ಯದ ಜೀವನಕ್ಕೆ, ನಮ್ಮ ವೃತ್ತಿ ಬದುಕಿಗೆ ಎಲ್ಲಕ್ಕೂ ಸಂವಹನ ಕೌಶಲ ಅತ್ಯಂತ ಅಗತ್ಯ. ನಿರಂತರ ಸಾಧನೆ ಮತ್ತು ಪ್ರಯತ್ನದಿಂದ ಅದನ್ನು ಯಾರು ಬೇಕಾದರೂ ತಮ್ಮದಾಗಿಸಿಕೊಳ್ಳಬಹುದು ಎಂದರು.

ಮೂಕಪ್ಪ, ಗುರುರಾಜ, ರಷೀದ್‌ ಹಣಜಗೇರಿ ಇದ್ದರು. ಶಿಬಿರದಿಂದ ಸಾಕಷ್ಟು ಅನುಕೂಲವಾಯಿತು. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ವಿದ್ಯಾರ್ಥಿಗಳು ಅಭಿಪ್ರಾಯವನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT