ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಂಡ್ ಮ್ಯಾಪಿಂಗ್ ಎಂಬ ಮಾಯಾವಿ ಕಲಿಕೆ

Last Updated 7 ಜನವರಿ 2018, 19:30 IST
ಅಕ್ಷರ ಗಾತ್ರ

ತರಗತಿಯಲ್ಲಿ ಕನ್ನಡ ಶಿಕ್ಷಕರು ವ್ಯಾಕರಣಪಾಠವನ್ನು ಮಾಡುವ ವೇಳೆ ಹತ್ತನೇ ತರಗತಿಯ ಸುಂದರೇಶ ಚಿತ್ರ ಬಿಡಿಸುತ್ತಾ ಕುಳಿತಿದ್ದಾನೆ. ಇದನ್ನು ಗಮನಿಸಿದ ಶಿಕ್ಷಕರು ಅವನ ಹತ್ತಿರ ಬಂದು ಫಟಾರನೇ ಕೆನ್ನೆಗೊಂದು ಏಟು ಕೊಟ್ಟು ನೋಟ್ಸ್ ಕಿತ್ತುಕೊಂಡು ಹೋದರು. ಕಪಾಳ ಉಜ್ಜುತ್ತಾ ತಲೆ ಎತ್ತಿ ನಿಂತಿದ್ದ ಸುಂದರೇಶ ‘ಸರ್ ನಾನು ವ್ಯಾಕರಣದ ಚಿತ್ರ ಬರೆಯುತ್ತಿದ್ದೆ’ ಎಂದ. ಆಗ, ಇಡೀ ತರಗತಿಯ ಮಕ್ಕಳು ಗೊಳ್ಳನೇ ನಕ್ಕರು. ಶಿಕ್ಷಕರು ಒಂದು ಕ್ಷಣ ದಂಗಾದರು. ‘ಏನು ವ್ಯಾಕರಣದ ಚಿತ್ರವಾ!?’ ಎಂದು ಪುಸ್ತಕ ತೆರೆದು ನೋಡಿದರು. ಆಶ್ಚರ್ಯವಾಯಿತು. ಅರ್ಥ ಮಾಡಿಕೊಳ್ಳಲು ಕ್ಲಿಷ್ಟವಾದ ವ್ಯಾಕರಣದ ಅಂಶವನ್ನು ಇಷ್ಟೊಂದು ಸುಲಭವಾಗಿ ಚಿತ್ರದ ಮೂಲಕ ಬರೆದುಕೊಂಡ ಸುಂದರೇಶನ ಕೌಶಲ ಮತ್ತು ಜಾಣ್ಮೆಯನ್ನು ಮನದಲ್ಲೇ ಮೆಚ್ಚಿದರು. ಅವನ ಈ ಕಾರ್ಯವನ್ನು ಗಮನಿಸದೇ ಏಟು ನೀಡಿದ್ದರ ತಮ್ಮ ತಪ್ಪಿನ ಅರಿವಾಯಿತು. ಹಾಗಾದರೆ ಸುಂದರೇಶ ಹೇಗೆ ವ್ಯಾಕರಣ ಚಿತ್ರವನ್ನು ಬರೆದ? ಇದನ್ನು ಹೇಗೆ ಕಲಿತ? ಇದರಿಂದ ಏನುಪಯೋಗ ಎಂಬ ಪ್ರಶ್ನೆಗಳು ಮೂಡುವುದು ಸಹಜ. ಆ ಎಲ್ಲ ಪ್ರಶ್ನೆಗಳಿಗೆ ಉತ್ತರವೇ ಮೈಂಡ್ ಮ್ಯಾಪಿಂಗ್.

ಏನಿದು ಮೈಂಡ್ ಮ್ಯಾಪಿಂಗ್?

ಮೈಂಡ್ ಮ್ಯಾಪಿಂಗ್ ಎಂಬುದು ಪರಿಕಲ್ಪನೆ ಮತ್ತು ಕಲ್ಪನೆಗಳ ರೇಖಾತ್ಮಕ ಚಿತ್ರಿಕೆಯಾಗಿದೆ. ಅಂದರೆ ನಿರ್ದಿಷ್ಟ ಪರಿಕಲ್ಪನೆಯನ್ನು ಪದಗಳ ಆಧಾರಿತ ರೇಖಾಚಿತ್ರ, ನಕ್ಷೆ, ಆಲೇಖ ಅಥವಾ ವಿವಿಧ ದೃಶ್ಯಾವಳಿಗಳ ಮೂಲಕ ರಚಿಸುವ ಚಿತ್ರಿಕೆಯಾಗಿದೆ. ಇದು ದೃಶ್ಯಾತ್ಮಕ ಯೋಚನಾ ಸಾಧನವಾಗಿದ್ದು, ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು, ವಿಶ್ಲೇಷಿಸಲು, ಸಂಶ್ಲೇಷಿಸಲು, ಮರುಸೃಷ್ಟಿಸಲು ಸಹಾಯ ಮಾಡುತ್ತದೆ.
ಇಲ್ಲಿ ಪರಿಕಲ್ಪನೆಗೆ ಸಂಬಂಧಿಸಿದ ಮಾಹಿತಿಯನ್ನು ಕ್ರಮಾನುಗತವಾಗಿ ಚಿತ್ರದ ದೃಶ್ಯಾವಳಿಗಳ ಮೂಲಕ ಬಿಂಬಿಸಲಾಗುತ್ತದೆ. ಪರಿಕಲ್ಪನೆಗೆ ಸಂಬಂಧಿಸಿದ ಮುಖ್ಯ ಅಂಶ/ಪದವು ಕೇಂದ್ರದಲ್ಲಿದ್ದು, ಆ ಪರಿಕಲ್ಪನೆಗೆ ಸಂಬಂಧಿಸಿದ ಉಪ ಅಂಶಗಳನ್ನು ವಿವಿಧ ಶಾಖೆಗಳ ನಕ್ಷೆಯಲ್ಲಿ ಪ್ರಸ್ತುತ ಪಡಿಸಲಾಗುತ್ತದೆ.

ಇದು ಬೋಧನೆ ಮತ್ತು ಕಲಿಕೆಯ ಕ್ರಾಂತಿಕಾರಿ ವಿಧಾನವಾಗಿದೆ. ವಿವಿಧ ವಿಚಾರಗಳ ನಡುವಿನ ಸಂಬಂಧವನ್ನು ವಿವಿಧ ಕೊಂಡಿಗಳ ಸಹಾಯದಿಂದ ಸುಲಭವಾಗಿ ಅರ್ಥಮಾಡಿಕೊಳ್ಳಲು ಮತ್ತು ಬಾಹ್ಯೀಕರಿಸಲು ಬಳಸುವ ಆಲೋಚನಾ ಸಾಧನವಾಗಿದೆ.

ಸರಳ ರಚನೆ: ವಿಷಯ ಅಥವಾ ಪರಿಕಲ್ಪನೆಗೆ ಸಂಬಂಧಿಸಿದ ಮೈಂಡ್ ಮ್ಯಾಪಿಂಗ್ ರಚಿಸುವುದು ಬಹಳ ಸುಲಭ. ಆದರೆ ವಿಷಯವನ್ನು ವಿಭಿನ್ನವಾಗಿ ಪ್ರಸ್ತುತಪಡಿಸುವ ಹಾಗೂ ಕಾಲ್ಪನಿಕತೆ ಇರಬೇಕು. ವಿಷಯ/ಪರಿಕಲ್ಪನೆಯ ಮುಖ್ಯ ಪದವನ್ನು ವೃತ್ತ/ಚೌಕ/ಆಯತ ವಿವಿಧ ಆಕೃತಿಗಳ ಮಧ್ಯೆ ಬರೆಯಬೇಕು. ಆ ಪರಿಕಲ್ಪನೆಗೆ ಸಂಬಂಧಿಸಿದ ಉಪಘಟಕಗಳ ಪದಗಳನ್ನು ವಿವಿಧ ಶಾಖಾ ಕೊಂಡಿಗಳನ್ನು ಬಳಸಿ ಚಿತ್ರಿಸಬೇಕು. ಮಾಹಿತಿ ಹೆಚ್ಚು ಇದ್ದರೆ ಉಪಘಟಕಗಳ ಉಪ ಅಂಶಗಳನ್ನು ಆಯಾ ಶಾಖಾ ಕೊಂಡಿಗಳ ಸುತ್ತಲೂ ಉಪಕೊಂಡಿ ರಚಿಸಿಕೊಳ್ಳಬೇಕು. ಇವೆಲ್ಲವನ್ನು ಸುಂದರವಾಗಿ ರೇಖಾಚಿತ್ರದ ಮೂಲಕ ಚಿತ್ರಿಸುವ ಕಲೆಗಾರಿಕೆ ಪ್ರಮುಖವಾದದ್ದು. ಸಾಧ್ಯವಾದರೆ ಶಾಖಾ ಕೊಂಡಿಗಳನ್ನು ವಿವಿಧ ಬಣ್ಣಗಳಿಂದ ತುಂಬಿದರೆ ಇನ್ನಷ್ಟು ಅರ್ಥಪೂರ್ಣ ಹಾಗೂ ಸುಂದರ ಮ್ಯಾಪ್ ರಚಿಸಿಬಹುದು.

ಕೇಂದ್ರ ವಿಷಯದ ಸುತ್ತಲೂ ಸಂಬಂಧಿತ ಉಪ ವಿಷಯಗಳನ್ನು ಅಭಿವೃದ್ದಿ ಪಡಿಸಬೇಕು. ಪ್ರತಿಯೊಂದು ಉಪ ವಿಷಯವನ್ನೂ ಕೇಂದ್ರದೊಂದಿಗೆ ರೇಖೆಯಿಂದ ಜೋಡಿಸಬೇಕು. ಉಪವಿಷಯಕ್ಕೆ ಇನ್ನಷ್ಟು ವಿಷಯಗಳಿದ್ದರೆ ಸೇರಿಸಿ ರೇಖೆಯ ಸಹಾಯದಿಂದ ಸಂಬಂಧಿಸಿದ ಉಪ ವಿಷಯದೊಂದಿಗೆ ಸೇರಿಸಬೇಕು. ಸಾಧ್ಯವಾದಷ್ಟೂ ಮಾಹಿತಿ ಪದಗಳು ಸಂಕ್ಷಿಪ್ತವಾಗಿರಲಿ. ಒಂದೇ ಪದ ಇದ್ದರೆ ನಕ್ಷೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಅಕ್ಷರಗಳ ಗಾತ್ರ, ಬೇರೆ ಬೇರೆಯಾಗಿರಲಿ ಮತ್ತು ಬೇರೆ ಬೇರೆ ಬಣ್ಣಗಳಿಂದ ಪದಗಳನ್ನು ಬರೆಯಿರಿ.

ಉಪಯೋಗಗಳು: ಮೈಂಡ್ ಮ್ಯಾಪಿಂಗ್‌ನ ಉಪಯೋಗಗಳು ಹಲವಾರು. ಇದು ಇಡೀ ಕಲಿಕಾಂಶವನ್ನು ಒಂದೇ ಚಿತ್ರಣದ ಮೂಲಕ ತೋರಿಸುವುದರಿಂದ ಕಲಿಕೆ ಸುಲಭ ಹಾಗೂ ಶಾಶ್ವತವಾಗಿರುತ್ತದೆ. ಚಿತ್ರಿಕೆಗಳನ್ನು ಮೆದುಳು ಸುಲಭವಾಗಿ ಗ್ರಹಿಸಿಟ್ಟುಕೊಳ್ಳುವುದರಿಂದ ಕಲಿಕೆ ಸುಗಮವಾಗುತ್ತದೆ. ಮೈಂಡ್ ಮ್ಯಾಪಿಂಗ್‌ನ ಉಪಯೋಗಗಳು ಕೆಳಗಿನಂತಿವೆ:

* ಉದ್ದುದ್ದ ನೋಟ್ಸ್ ಬರೆಯುವ ಶ್ರಮ ತಪ್ಪುತ್ತದೆ.
* ಸಮಯದ ಉಳಿತಾಯ.
* ಸುಗಮ, ಸಂತಸ ಹಾಗೂ ಶಾಶ್ವತ ಕಲಿಕೆ.
* ಕಲಿಕೆಯಲ್ಲಿ ಸೃಜನಶೀಲತೆಯ ಪ್ರಯೋಗ.
* ಮಾಹಿತಿಯ ವರ್ಗೀಕರಣ ಮತ್ತು ವಿಶ್ಲೇಷಣೆಯ ಸುಲಭ ಮಾರ್ಗ
* ಯೋಜನಾಬದ್ಧ ಸ್ವತಂತ್ರ ಕಲಿಕೆ.
* ಕಲಿಕೆಯನ್ನು ಪ್ರಸ್ತುತ ಪಡಿಸುವ ಹೊಸ ಮಾರ್ಗಗಳ ಸಂಶೋಧನೆ.
* ಸಂಕೀರ್ಣ ಪರಿಕಲ್ಪನೆಗಳ ಸುಗಮ ಕಲಿಕೆ.
* ಪರಿಕಲ್ಪನೆಯ ಸಮಗ್ರ ಮಾಹಿತಿಯ ವಿಶ್ಲೇಷಣೆ.
* ಪರಿಕಲ್ಪನೆಯ ಸ್ಪಷ್ಟ ಚಿತ್ರಣ.
* ಗೊಂದಲಗಳಿಗೆ ಅವಕಾಶವಿರುವುದಿಲ್ಲ.
* ಮಾಹಿತಿಗಳನ್ನು ನೆನಪಿಟ್ಟುಕೊಳ್ಳುವ ಸುಲಭ ವಿಧಾನ.
* ವಿಷಯದ ಆಳವಾದ ಮತ್ತು ಉತ್ಕೃಷ್ಟ ಕಲಿಕೆ.
* ವಿಷಯದ ಕುರಿತ ಹೆಚ್ಚಿನ ಮಾಹಿತಿಯ ಅನ್ವೇಷಣೆ.
* ವಿಮರ್ಶಾತ್ಮಕ ಚಿಂತನೆಗೆ ಪ್ರೇರಣೆ.
*  ಸ್ವ-ಅಧ್ಯಯನ ಕೌಶಲವನ್ನು ಬೆಳೆಸುತ್ತದೆ.
* ವಿಷಯದ ಸುಲಭ ಗ್ರಹಿಕೆಗೆ ರಹದಾರಿ.
* ಪರೀಕ್ಷಾರ್ಥಿಗೆ ವಿಷಯ ಮನದಟ್ಟಾಗುತ್ತದೆ.
* ಬೋಧಕರಿಗೆ/ಉಪನ್ಯಾಸಕರಿಗೆ ವಿಷಯ ಪ್ರಸ್ತುತತೆ ಸುಲಭವಾಗುತ್ತದೆ.
* ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರಿಗೆ ಅತ್ಯಂತ ಸುಲಭ ಕಲಿಕಾ ಮಾರ್ಗ.
***

ವಿಶೇಷತೆ ಏನು?

ಮೈಂಡ್ ಮ್ಯಾಪಿಂಗ್ ಸಾಂಪ್ರದಾಯಿಕ ಟಿಪ್ಪಣಿ ಅಥವಾ ಚಿತ್ರ ವಿಧಾನಕ್ಕಿಂತ ಭಿನ್ನವಾಗಿದ್ದು, ಮೆದುಳಿನ ಕಾರ್ಯಕ್ಕೆ ನಿಕಟವಾದ ಹೋಲಿಕೆಯ ಕಲಿಕೆ/ಬೋಧನಾ ಮಾರ್ಗವಾಗಿದೆ. ಇದು ವಿಶ್ಲೇಷಣಾತ್ಮಕ ಮತ್ತು ಕಲಾತ್ಮಕ ಚಟುವಟಿಕೆಯಾಗಿದ್ದು, ಮೆದುಳನ್ನು ಕಲಿಕೆಯಲ್ಲಿ ಉತ್ಕೃಷ್ಟವಾಗಿ ತೊಡಗಿಸುತ್ತದೆ. ಜ್ಞಾನಗ್ರಹಣ ಕಾರ್ಯದಲ್ಲಿ ಅತ್ಯಂತ ಉತ್ತಮ ಸಾಧನಾಗಿದ್ದು, ಕಲಿಕಾರ್ಥಿಗೆ ಹೆಚ್ಚು ಖುಷಿಯನ್ನೂ ನೀಡುತ್ತದೆ.
ಪ್ರಾರಂಭದಲ್ಲಿ ಇಲ್ಲಿನ ಕಲಿಕೆಯು ಗೊಂದಲ ಎನಿಸಬಹುದು. ಆದರೆ ಸ್ವಲ್ಪ ಪ್ರಯತ್ನದಿಂದ ರೇಖಾತ್ಮಕ ಟಿಪ್ಪಣಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರೆ ಸುಲಭ ಸಾಧನವಾಗುತ್ತದೆ.
ಟಿಪ್ಪಣಿಗಿಂತಲೂ ಸುಲಭ: ಮೈಂಡ್ ಮ್ಯಾಪಿಂಗ್‌ನ ಮುಖ್ಯ ಪ್ರಯೋಜನವೆಂದರೆ, ಪರಿಕಲ್ಪನೆಗೆ ಸಂಬಂಧಿಸಿದ ಮಾಹಿತಿಗಳ ರಚನಾತ್ಮಕ ಜೋಡಣೆಯಾಗಿದೆ. ಇದರಿಂದ ಪುಟಗಟ್ಟಲೆ ನೋಟ್ಸ್/ಟಿಪ್ಪಣಿ ಬರೆಯುವ ಶ್ರಮ  ತಪ್ಪುತ್ತದೆ. ಮಾಹಿತಿಯು ಸುಲಭವಾಗಿ ನೆನಪಿನಲ್ಲಿ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT