ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್ಡಗಳ ಮರೆಯಲ್ಲಿ ‘ಮದ್ಯಾರಾಧನೆ’

Last Updated 8 ಜನವರಿ 2018, 5:41 IST
ಅಕ್ಷರ ಗಾತ್ರ

ರಾಯಚೂರು: ನಗರ ವ್ಯಾಪ್ತಿಯಲ್ಲಿರುವ ಗುಡ್ಡಗಾಡು ಪ್ರದೇಶಗಳು ಪ್ರತಿ ದಿನ ಸಂಜೆಯಾಗುತ್ತಿದ್ದಂತೆ ಮದ್ಯಪ್ರಿಯರ ತಾಣವಾಗಿ ಬದಲಾಗುತ್ತವೆ. ಸ್ನೇಹಿತರೊಂದಿಗೆ ಮದ್ಯ ಸೇವಿಸುತ್ತಾ ಸ್ವಚ್ಛಂದವಾಗಿ ಕಾಲ ಕಳೆಯುವುದು ಅನೇಕರಿಗೆ ಜೀವನದ ಭಾಗವಾಗಿ ಪರಿಣಮಿಸಿದೆ.

ಚಂದ್ರಬಂಡಾ ರಸ್ತೆ, ಮಂತ್ರಾಲಯ ರಸ್ತೆ, ಬೇರೂನ್‌ಕಿಲ್ಲಾ ಪಕ್ಕದ ಗುಡ್ಡ, ಗದ್ವಾಲ್ ರಸ್ತೆ, ಸಿದ್ರಾಂಪುರ ರಸ್ತೆ, ಆಶಾಪುರ ರಸ್ತೆಗಳಿಗೆ ಹೊಂದಿಕೊಂಡು ಗುಡ್ಡಗಾಡು ಜಾಗಗಳಿವೆ. ತಂಪು ಗಾಳಿ ಮತ್ತು ರಾತ್ರಿ ಗೂಡು ಸೇರುವ ಹಕ್ಕಿಗಳ ಹಿಂಡುಗಳಿಂದ ಹೊಮ್ಮುವ ನಿನಾದ ಕೇಳುತ್ತಾ ಗೆಳೆಯರ ಗುಂಪುಗಳು ಕುಳಿತುಕೊಳ್ಳುತ್ತವೆ. ಕತ್ತಲು ಆವರಿಸುತ್ತಿದ್ದಂತೆ ಒಬ್ಬರ ಮುಖ ಇನ್ನೊಬ್ಬರಿಗೆ ಕಾಣುವುದಿಲ್ಲ. ಆದರೆ, ಮದ್ಯದ ಅಮಲಿಗೆ ಇದೇ ಪೂರಕ ವಾತಾವರಣ ಆಗಿ ಬಿಡುತ್ತದೆ.

ಜನರಿಲ್ಲದ, ಸದ್ದುಗದ್ದಲವಿಲ್ಲದ ಪ್ರದೇಶದಲ್ಲಿ ಮದ್ಯ ಸೇವಿಸುವುದಕ್ಕೆ ಸದ್ಯ ಯಾವ ಅಡಚಣೆಗಳು ಇಲ್ಲ. ಗುಡ್ಡಗಳಲ್ಲಿ ಮದ್ಯ ಸೇವನೆ ಆಗಿದೆ ಎನ್ನುವುದಕ್ಕೆ ಸಾಕ್ಷಿ; ಮದ್ಯಪ್ರಿಯರು ಸ್ಥಳದಲ್ಲಿ ಬಿಟ್ಟು ಹೋಗುತ್ತಿರುವ ತ್ಯಾಜ್ಯರಾಶಿ. ಮದ್ಯದ ಬಾಟಲಿಗಳು ಹಾಗೂ ಸುಟ್ಟುಹಾಕಿದ ಸಿಗರೇಟ್ ರಾಶಿಗಳು ಕಂಡು ಬರುತ್ತವೆ.

ಈ ಗುಡ್ಡಗಾಡು ಯಾವ ಇಲಾಖೆ ಅಥವಾ ಖಾಸಗಿ ವ್ಯಕ್ತಿಗಳ ಒಡೆತನದಲ್ಲಿವೆ ಎಂಬುದು ಜನರಿಗೆ ಗೊತ್ತಿಲ್ಲ. ಸರ್ಕಾರದಿಂದ ಯಾವ ಫಲಕಗಳನ್ನು ಹಾಕಿಲ್ಲ. ಹೀಗಾಗಿ ಗುಡ್ಡಗಳು ಪಾನಗೋಷ್ಠಿಗೆ ಮುಕ್ತ ಆಯ್ಕೆಗಳಾಗಿ ಕಾಣುತ್ತಿವೆ. ಕೆಲ ಕಡೆ ಖಾಸಗಿ ವ್ಯಕ್ತಿಗಳು ಆವರಣ ಗೋಡೆಗಳನ್ನು ಹಾಕಿ ಕೊಂಡಿರುವುದನ್ನು ಕಾಣಬಹುದು.

ಇನ್ನುಳಿದಂತೆ ಸರ್ಕಾರಿ ಜಾಗ ಅಥವಾ ಅರಣ್ಯ ಇಲಾಖೆಗೆ ಸಂಬಂಧಿ ಸಿದ ಜಾಗ ಇರಬೇಕು ಎನ್ನುವ ಊಹೆಯೊಂದಿಗೆ ಜನರು ರಾತ್ರಿ ಕಾಲ ಕಳೆಯುತ್ತಾರೆ. ಗುಡ್ಡಗಳಲ್ಲಿ ಏನೇನು ಮಾಡಬಾರದು ಎನ್ನುವ ನಿರ್ಬಂಧಗಳನ್ನು ಎಲ್ಲಿಯೂ ಹಾಕಿಲ್ಲ. ಸುತ್ತಮುತ್ತ ಗ್ರಾಮೀಣ ಭಾಗದಿಂದ ಬರುವ ಮದ್ಯಪ್ರಿಯರು ಕೂಡಾ ಮಾರ್ಗಮಧ್ಯ ಗುಡ್ಡದಲ್ಲಿ ಮದ್ಯ ಸೇವಿಸಿ ಗುರುತುಗಳನ್ನು ಬಿಟ್ಟು ಹೋಗುತ್ತಿದ್ದಾರೆ.

ಗುಡ್ಡಗಳಿಗೆ ಹೊಂದಿಕೊಂಡು ಜನವಸತಿ ಪ್ರದೇಶಗಳಿವೆ. ಮಂತ್ರಾಲಯ ರಸ್ತೆಯುದ್ದಕ್ಕೂ ತಲೆ ಎತ್ತಿರುವ ನೂತನ ಬಡಾವಣೆಗಳ ಜನರು ಬೆಳಿಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕೆ ಸಾಮಾನ್ಯವಾಗಿ ಗುಡ್ಡದ ಮಾರ್ಗದಲ್ಲಿ ಹೋಗುವುದನ್ನು ಕಾಣಬಹುದು. ಗುಡ್ಡದ ಮಾರ್ಗದ ಇಕ್ಕೆಲುಗಳಲ್ಲಿ ಮದ್ಯದ ಬಾಟಲಿಗಳ ರಾಶಿ ಗೋಚರಿಸುತ್ತದೆ. ಬಾಟಲಿಗಳನ್ನು ಒಡೆದು ಹಾಕಿರುವುದು ಮತ್ತು ಇತರೆ ತ್ಯಾಜ್ಯದ ರಾಶಿ ಕಣ್ಣಿಗೆ ರಾಚುತ್ತದೆ. ಕಾಣಿಸಿದರೂ ಕಾಣದಂತೆ ಜನರು ವಾಯುವಿಹಾರ ಮಾಡಿ ಬರುವುದು ನಿತ್ಯದ ರೂಢಿ.

‘ಜನರು ವಾಯುವಿಹಾರಕ್ಕಾಗಿ ಹೋಗುವ ಮಾರ್ಗದಲ್ಲಾದರೂ ನಗರಸಭೆಯವರು ಫಲಕ ಹಾಕಬೇಕು. ಮದ್ಯಸೇವನೆ ಮತ್ತು ಅನೈತಿಕ ಚಟುವಟಿಕೆಗಳು ಕಂಡುಬಂದರೆ ದಂಡ ವಿಧಿಸಲಾಗುವುದು ಎಂದು ಹೇಳಬಹುದಿತ್ತು. ಮದ್ಯ ಸೇವಿಸುವ ಜನರಿಂದ ಏನೂ ತೊಂದರೆ ಇಲ್ಲವಲ್ಲ ಅಂದುಕೊಂಡು ಎಲ್ಲರೂ ಸುಮ್ಮನಿದ್ದಾರೆ. ಏನಾದರೂ ಘಟಿಸಿದ ಮೇಲೆ ಎಚ್ಚೆತ್ತುಕೊಳ್ಳುತ್ತಾರೆ’ ಎಂದು ಐಡಿಎಸ್‌ಎಂಟಿ ಕಾಲೋನಿಯ ಮಂಜುನಾಥ ಬೇಸರ ವ್ಯಕ್ತಪಡಿಸಿದರು.

ಮದ್ಯ ಸೇವಿಸುವುದಕ್ಕೆ ನಿರ್ದಿಷ್ಟ ಜಾಗಗಳಿವೆ. ಅಲ್ಲಿಯೇ ಕುಡಿಯಬೇಕು. ಎಲ್ಲಿಬೇಕಾದಲ್ಲಿ ಕುಡಿಯುವುದನ್ನು ನಿಯಂತ್ರಿಸದಿದ್ದರೆ ಆಡಳಿತ ಇದ್ದು ಏನು ಪ್ರಯೋಜನ. ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಗುಡ್ಡಗಳಲ್ಲಿ ಉದ್ಯಾನ ಅಥವಾ ಇತರೆ ಏನಾದರೂ ಕೆಲಸಗಳನ್ನು ಮಾಡಬೇಕು. ಬೇಕಾಬಿಟ್ಟಿ ಗುಡ್ಡಗಳನ್ನು ಬಿಟ್ಟಿರುವುದರಿಂದ ರಾತ್ರಿ ಏನೆಲ್ಲ ನಡೆದು ಹೋಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ನಗರದ ಹೊರಗೆ ಏನಾದರೂ ಮಾಡಿಕೊಳ್ಳಲಿ. ನಗರದೊಳಗಾದರೂ ನಗರಸಭೆ ಅಧಿಕಾರಿಗಳು ಸರಿಯಾದ ಕ್ರಮ ವಹಿಸಬೇಕು. ಗುಡ್ಡಗಳು ಯಾವ ಇಲಾಖೆಗಾದರೂ ಸೇರಲಿ; ಆ ಬಗ್ಗೆ ಮುತೂವರ್ಜಿ ವಹಿಸಿ ಕೆಲಸ ಮಾಡಿಸಬೇಕಿರುವುದು ನಗರಸಭೆಯ ಕರ್ತವ್ಯ. ನಗರದ ಅಭಿವೃದ್ಧಿ ಮಾಡಬೇಕು ಎನ್ನುವ ಉದ್ದೇಶದಿಂದಲೆ ಜನರು ನಗರಸಭೆಗೆ ತೆರಿಗೆ ಕಟ್ಟುತ್ತಾರೆ’ ಎಂದು ಅವರು ತಿಳಿಸಿದರು.

* * 

ಬಾರ್‌ಗಳಲ್ಲಿ ಕುಡಿಯುವುದಕ್ಕೆ ಹೆಚ್ಚು ಹಣ ಕೊಡಬೇಕು. ಎಂಎಸ್‌ಐಎಲ್ ಅಂಗಡಿಯಲ್ಲಿ ಎಂಆರ್‌ಪಿ ದರಕ್ಕೆ ಮದ್ಯ ಖರೀದಿಸಿ ಗುಡ್ಡಗಳಲ್ಲಿ ಕುಡಿದರೆ ಅಗ್ಗವಾಗುತ್ತದೆ.
ದುರ್ಗಪ್ಪ ನಿವಾಸಿ, ಸತ್ಯನಾಥ ಕಾಲೋನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT