ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಬಹಿರ್ದೆಸೆ ತಡೆಗೆ ಶೌಚಾಲಯ

Last Updated 8 ಜನವರಿ 2018, 9:45 IST
ಅಕ್ಷರ ಗಾತ್ರ

ಹಾಸನ: ನಗರ ಬೆಳೆದಂತೆ ಜನಸಂಖ್ಯೆಯೂ ಹೆಚ್ಚುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ಸಾರ್ವಜನಿಕ ಶೌಚಾಲಯ ಇಲ್ಲ ಎಂಬ ಬಹಳ ದಿನಗಳ  ದೂರು ನಿವಾರಿಸಲು ನಗರಸಭೆ ಮುಂದಾಗಿದೆ.

ನಗರದಲ್ಲಿ ಎಲ್ಲೆಂದರಲ್ಲಿ ಮೂತ್ರ ಹಾಗೂ ಮಲ ವಿಸರ್ಜನೆ ಮಾಡುವುದನ್ನು ತಪ್ಪಿಸಲು ಮೂರು ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದ್ದು, ಈ ಪೈಕಿ ಎನ್.ಆರ್. ವೃತ್ತದ ಬಳಿ ನಿರ್ಮಿಸಿರುವ ಶೌಚಗೃಹ ಪೂರ್ಣಗೊಂಡು, ಜನರ ಉಪಯೋಗಕ್ಕೆ ಲಭ್ಯವಾಗಿದೆ.

ನಗರಸಭೆ 14ನೇ ಹಣಕಾಸು ಯೋಜನೆ ಅಡಿ ತಲಾ ₹ 10 ಲಕ್ಷ ವೆಚ್ಚದಲ್ಲಿ ಕಟ್ಟಿನಕೆರೆ ಮಾರುಕಟ್ಟೆ, ಕಾರಾಗೃಹ ಹಿಂಭಾಗ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಇದಲ್ಲದೇ, ತಣ್ಣೀರುಹಳ್ಳ ಮತ್ತು ಮಹಾರಾಜ ಉದ್ಯಾನಕ್ಕೆ ಹೊಂದಿಕೊಂಡಂತೆ ನಗರಸಭೆ ಜಾಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಶೌಚಗೃಹ ನಿರ್ಮಿಸಲಾಗಿದೆ.

‘ನಗರದಲ್ಲಿ ಸದ್ಯ ಮೂರು ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗುತ್ತಿದೆ. ಜನಸಂಖ್ಯೆ ಗಮನ ದಲ್ಲಿಟ್ಟುಕೊಂಡು ಹೆಚ್ಚುವರಿಯಾಗಿ ಎಂ.ಜಿ. ರಸ್ತೆ, ಹೊಸ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದ ಬಳಿ ಹೊಸದಾಗಿ ಶೌಚಾಲಯ ನಿರ್ಮಿಸಲು ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಇನ್ನೂ ಹಣ ಬಿಡುಗಡೆ ಮಾಡಿಲ್ಲ’ ಎಂದು ನಗರಸಭೆ ಅಧ್ಯಕ್ಷ ಎಚ್.ಎಸ್. ಅನಿಲ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾರ್ವಜನಿಕ ಶೌಚಾಲಯಗಳಲ್ಲಿ ಶುಚಿತ್ವ ಇಲ್ಲದಿರುವ ಬಗ್ಗೆ ಜನರಿಂದ ಸಾಕಷ್ಟು ದೂರುಗಳು ಬಂದಿವೆ. ಹಾಗಾಗಿ, ಅವುಗಳ ನಿರ್ವಹಣೆ ಗುತ್ತಿಗೆಯನ್ನು ಖಾಸಗಿಯವರಿಗೆ ನೀಡಲಾಗುವುದು. ಸಾರ್ವಜನಿಕರು ಹಣ ಪಾವತಿಸಿ ಬಳಸಿದರೆ ಶುಚಿತ್ವ ಕಾಪಾಡಲು ಸಾಧ್ಯ’ ಎಂದು ಅನಿಲ್ ಅಭಿಪ್ರಾಯಪಟ್ಟರು.

‘ಹೊಸ ಬಸ್ ನಿಲ್ದಾಣ ಶೌಚಾಲಯ ಸಹ ದುರ್ನಾತ ಬೀರುತ್ತಿದೆ. ಅನೇಕ ಕಡೆ ನಲ್ಲಿಗಳು ಮುರಿದು ಶೌಚಗೃಹದಲ್ಲಿ ನೀರು ನಿಂತಿರುತ್ತದೆ. ಕೈ ತೊಳೆಯುವ ನೀರಿನ ನಲ್ಲಿಗಳು ಹಾಳಾಗಿ ನೀರು ಪೋಲಾಗುತ್ತಿದೆ. ನಿಲ್ದಾಣಕ್ಕೆ ನಿತ್ಯ ಸಾವಿರಾರು ಪ್ರಯಾಣಿಕರು ಬರುವುದರಿಂದ ಶುಚಿತ್ವಕ್ಕೆ ಆದ್ಯತೆ ನೀಡಬೇಕು’ ಎಂದು ಪ್ರಯಾಣಿಕ ಮಂಜೇಗೌಡ ಒತ್ತಾಯಿಸಿದರು.

‘ನಗರ ಪ್ರದೇಶದಲ್ಲಿ ಹೆಚ್ಚು ಸಮುದಾಯ ಶೌಚಾಲಯ ಇಲ್ಲದೆ ತುಂಬಾ ತೊಂದರೆಯಾಗುತ್ತಿತ್ತು. ಜನರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ದುರ್ವಾಸನೆಯಿಂದ ಪಾದಚಾರಿಗಳು ಹಿಂಸೆ ಅನುಭವಿಸುವಂತಾಗಿತ್ತು. ಬಸ್ ನಿಲ್ದಾಣ ಹೊರತು ಪಡಿಸಿ ಬಹುತೇಕ ಕಡೆ ಶೌಚಾಲಯಗಳ ನಿರ್ವಹಣೆ ಸರಿ ಇಲ್ಲ. ಗ್ರಾಮೀಣ ಪ್ರದೇಶದಿಂದ ಶಾಲಾ, ಕಾಲೇಜುಗಳಿಗೆ ಬರುವ ಹೆಣ್ಣು ಮಕ್ಕಳು, ಮಹಿಳೆಯರು ತೊಂದರೆ ಅನುಭವಿಸಬೇಕಾಗಿತ್ತು. ಹೊಸ ಶೌಚಾಲಯ ನಿರ್ಮಿಸಿದರೆ ಸಾಲದು, ಅವುಗಳ ನಿರ್ವಹಣೆ ಸಮರ್ಪಕವಾಗಿ ಆಗಬೇಕು’ ಎನ್ನುತ್ತಾರೆ ವಿದ್ಯಾರ್ಥಿನಿ ಎ.ಎಸ್.ಪೂಜಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT