ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬೆಟ್ಟದ ರೈಲಿಂಗ್ಸ್‌ ಕಾಮಗಾರಿ ಪೂರ್ಣ

Last Updated 8 ಜನವರಿ 2018, 9:48 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಬಾಹುಬಲಿ ಮಹಾಮಸ್ತಕಾಭಿಷೇಕದ ಅಂಗವಾಗಿ ಚಂದ್ರಗಿರಿ ಮತ್ತು ವಿಂಧ್ಯಗಿರಿ ಬೆಟ್ಟಗಳ ದುರಸ್ತಿ ಕಾಮಗಾರಿ ಅಂತಿಮ ಹಂತ ತಲುಪಿವೆ ಎಂದು ಕೇಂದ್ರ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ಬೆಂಗಳೂರು ವಿಭಾಗದ ಅಧೀಕ್ಷಕಿ ಕೆ.ಮೂರ್ತೇಶ್ವರಿ ತಿಳಿಸಿದರು.

ವಿಂಧ್ಯಗಿರಿ ಮತ್ತು ಚಂದ್ರಗಿರಿ ಬೆಟ್ಟಗಳಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದ ಅವರು, ಚಂದ್ರಗಿರಿಯಲ್ಲಿ ಈವರೆಗೂ ಅರ್ಧ ಭಾಗಕ್ಕೆ ಮಾತ್ರ ರೈಲಿಂಗ್ಸ್‌ ಮತ್ತು ಮೆಟ್ಟಿಲುಗಳ ವ್ಯವಸ್ಥೆ ಇತ್ತು. ಉಳಿದ ಅರ್ಧ ಭಾಗದಲ್ಲಿ ಮೆಟ್ಟಿಲುಗಳನ್ನು ಕೆತ್ತುವ ಕೆಲಸ ಬಾಕಿ ಇದ್ದು, ಎರಡೂ ಬದಿ ರೈಲಿಂಗ್ಸ್‌ ಹಾಕುವ ಕೆಲಸ ಪೂರ್ಣಗೊಂಡಿದೆ ಎಂದು ಹೇಳಿದರು.

ಚಂದ್ರಗಿರಿಯ ಚಿಕ್ಕಬೆಟ್ಟದ ಕೋಟೆಯ ಬಿದ್ದಿರುವ ಭಾಗವನ್ನು ಮಾತ್ರ ದುರಸ್ತಿಗೊಳಿಸಿದ್ದು, ಒಳ ಭಾಗದಲ್ಲಿ ನೆಲಹಾಸು ಕಲ್ಲು ಚಪ್ಪಡಿಗಳನ್ನು ಹಾಕುವ ಕೆಲಸ ನಡೆದಿದೆ. ಸುರಕ್ಷತೆ ದೃಷ್ಠಿಯಿಂದ ಬೇಲಿ ನಿರ್ಮಿಸಲಾಗುವುದು ಎಂದು ಹೇಳಿದರು. ಪುರಾತತ್ವ ಇಲಾಖೆಯ ನಾಗರಾಜ್‌, ಶ್ರೀಮಠದ ಎಲ್‌.ಎಸ್‌.ಜೀವೇಂದ್ರ ಕುಮಾರ್‌ ಇದ್ದರು.

12 ಕಡೆ ಅಗ್ನಿಶಾಮಕ ವಾಹನ ನಿಯೋಜನೆ

ಮಹಾ ಮಸ್ತಕಾಭಿಷೇಕದ ಅಂಗವಾಗಿ ಪಟ್ಟಣದ 12 ಪ್ರದೇಶಗಳಲ್ಲಿ ಅಗ್ನಿಶಾಮಕ ವಾಹನ ನಿಯೋಜಿಸಲಾಗುವುದು ಎಂದು ಅಗ್ನಿಶಾಮಕ ದಳ ಆಡಳಿತ ಉಪನಿರ್ದೇಶಕ ವರದರಾಜನ್ ಹೇಳಿದರು.

ಮಹೋತ್ಸವ ಹಿನ್ನಲೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ತಾತ್ಕಾಲಿಕ ಉಪನಗರಗಳಾದ ತ್ಯಾಗಿನಗರ, ಕಳಶನಗರ, ಯಾತ್ರಿನಗರ ಹಾಗೂ ಪಂಚಕಲ್ಯಾಣ ನಗರಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಹೆಲಿಪ್ಯಾಡ್, ಸಭಾಮಂಟಪಗಳು, ಸಾರ್ವಜನಿಕ ಪ್ರದೇಶಗಳು, ಗಣ್ಯರ ವಾಸಸ್ಥಳ ಹಾಗೂ ಜನಸಂಖ್ಯೆ ದಟ್ಟಣೆ ಇರುವ ಸ್ಥಳಗಳನ್ನು ಗುರುತಿಸಿ ವಾಹನಗಳ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಮಹೋತ್ಸವ ಪೂರ್ಣವಾಗುವ ತನಕ 350 ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಸಿಬ್ಬಂದಿಗೆ ಹೆಚ್ಚಿನ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು. ಕೆ.ಆರ್.ಡಿ.ಸಿ.ಎಲ್ ಸಹಾಯಕ ಎಂಜಿನಿಯರ್ ಪ್ರಸನ್ನ ದರ್ಜೆ, ಮೈಸೂರು ವಲಯ ಮುಖ್ಯ ಅಗ್ನಿಶಾಮಕ ಅಧಿಕಾರಿ ವೈ.ಎ.ಕೌಸರ್, ಮೈಸೂರು ವಲಯ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಜಿ.ಈಶ್ವರ್ ನಾಯಕ್, ಹಾಸನ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಂಗನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT