ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‍ಟಿಪಿ ದುರಂತ: ಮುನ್ನೆಚ್ಚರಿಕೆ ಹಾಗೂ ಸುರಕ್ಷತೆಯ ಕೊರತೆ

Last Updated 8 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಸೋಮಸುಂದರಪಾಳ್ಯದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‍ಟಿಪಿ) ದುರಸ್ತಿಯ ಸಂದರ್ಭದಲ್ಲಿ ಮೂವರು ಮೃತಪಟ್ಟಿದ್ದಾರೆ. ಈ ಘಟನೆ ನಮ್ಮ ಪೌರವ್ಯವಸ್ಥೆಯಲ್ಲಿ ಕಾರ್ಮಿಕರ ಜೀವಗಳ ಕುರಿತು ನಿರ್ಲಕ್ಷ್ಯ ಇರುವುದನ್ನು ಮತ್ತೆ ಸಾಬೀತುಪಡಿಸುವಂತಿದೆ. ಅಪಾರ್ಟ್‍ಮೆಂಟೊಂದರ ಎಸ್‍ಟಿಪಿಯಲ್ಲಿ ನಡೆದಿರುವ ಈ ಘಟನೆಯಲ್ಲಿ ಓರ್ವ ಸ್ವಚ್ಛತಾ ಮೇಲ್ವಿಚಾರಕ ಹಾಗೂ ಕೂಲಿ ಕಾರ್ಮಿಕರಿಬ್ಬರು ಸಾವಿಗೀಡಾಗಿದ್ದಾರೆ. ವಿಷಯುಕ್ತ ಗಾಳಿ ಸೇವನೆಗೆ ಮೂವರೂ ಬಲಿಯಾಗಿರುವುದು ಸುರಕ್ಷತಾ ಕ್ರಮಗಳಲ್ಲಿ ಲೋಪವಾಗಿರುವುದನ್ನು ಸ್ಪಷ್ಟವಾಗಿ ತೋರಿಸುವಂತಿದೆ. ಎಸ್‍ಟಿಪಿಗಳಲ್ಲಿ ಹಾಗೂ ಮ್ಯಾನ್‍ಹೋಲ್‍ಗಳಲ್ಲಿ ಅನಿರೀಕ್ಷಿತ ಅಪಾಯಗಳು ಎದುರಾಗುವುದು ಸಹಜ. ಹಾಗಾಗಿಯೇ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕೆಂದು ಕಾನೂನು ಹೇಳುತ್ತದೆ. ವಾಸ್ತವ ಹೀಗಿದ್ದರೂ ಸುರಕ್ಷತೆಯನ್ನು ಮತ್ತೆ ಮತ್ತೆ ನಿರ್ಲಕ್ಷಿಸಲಾಗುತ್ತದೆ. ಬಡಪಾಯಿ ಕಾರ್ಮಿಕರ ಜೀವಗಳೊಂದಿಗಿನ ಚೆಲ್ಲಾಟ ಮುಂದುವರೆದೇ ಇದೆ. ಪ್ರಸಕ್ತ ಪ್ರಕರಣದಲ್ಲಂತೂ ಯಾವುದೇ ಮುನ್ನೆಚ್ಚರಿಕೆಯನ್ನು ವಹಿಸಿದಂತಿಲ್ಲ. ಎಸ್‍ಟಿಪಿಗೆ ಇಳಿದಿರುವ ಕಾರ್ಮಿಕ ಉಸಿರಾಟದ ತೊಂದರೆಯಿಂದ ಕೂಗಿಕೊಂಡಾಗ, ಮೇಲೆ ಇದ್ದ ಉಳಿದಿಬ್ಬರು ಟ್ಯಾಂಕ್‍ನೊಳಗೆ ಇಳಿದಿದ್ದಾರೆ. ಮೂವರೂ ವಿಷಗಾಳಿ ಸೇವಿಸಿ ಟ್ಯಾಂಕ್‍ನೊಳಗೇ ಜೀವ ಕಳೆದುಕೊಂಡಿದ್ದಾರೆ. ಈ ನತದೃಷ್ಟರ ಸಾವಿನ ಕ್ಷಣಗಳ ಬೊಬ್ಬೆಯನ್ನು ಅಪಾರ್ಟ್‍ಮೆಂಟ್‍ ನಿವಾಸಿಗಳು ಕಿಟಕಿಗಳಿಂದ ನೋಡುತ್ತಿದ್ದರು ಎನ್ನಲಾಗಿದೆ. ಸಕಾಲಿಕ ನೆರವು ದೊರೆತಿದ್ದಲ್ಲಿ ಮೂವರಲ್ಲಿ ಒಬ್ಬಿಬ್ಬರಾದರೂ ಉಳಿದುಕೊಳ್ಳುತ್ತಿದ್ದರೇನೊ? ಚರಂಡಿಗಳಷ್ಟೇ ಅಲ್ಲದೆ, ಮನುಷ್ಯ ಸಂವೇದನೆಗಳು ಕೂಡ ನಾರುತ್ತಿರುವುದನ್ನು ಈ ಘಟನೆ ಸೂಚಿಸುವಂತಿದೆ.

ಕಳೆದ ಹತ್ತು ವರ್ಷಗಳಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 31 ಕಾರ್ಮಿಕರು ಎಸ್‍ಟಿಪಿ ಹಾಗೂ ಮ್ಯಾನ್‍ಹೋಲ್‍ಗಳಲ್ಲಿ ಜೀವ ಕಳೆದುಕೊಂಡಿದ್ದಾರೆ. ಪ್ರತಿ ಸಾರಿ ದುರಂತ ಸಂಭವಿಸಿದಾಗಲೂ ಕಾರ್ಮಿಕರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗುತ್ತದೆ. ಪರಿಹಾರ ಕೊಟ್ಟು ಕೈತೊಳೆದುಕೊಳ್ಳುವ ಕೆಲಸ ನಡೆಯುತ್ತದೆ, ಯಥಾಸ‍್ಥಿತಿ ಮುಂದುವರೆಯುತ್ತದೆ. ಘಟನೆಗಳಿಗೆ ಸಂಬಂಧಿಸಿದಂತೆ ಈವರೆಗೆ ಯಾರೊಬ್ಬರಿಗೂ ಕಠಿಣ ಶಿಕ್ಷೆಯಾಗಿಲ್ಲ. ‘ಒಳಚರಂಡಿ ಸುರಕ್ಷತಾ ಕೈಪಿಡಿ ಕರಡು– 2012’ರ ನಿಯಮಗಳ ಪ್ರಕಾರ, ಪರ್ಯಾಯ ಮಾರ್ಗ ಇಲ್ಲದ ಸಂದರ್ಭದಲ್ಲಷ್ಟೇ ಮ್ಯಾನ್‍ಹೋಲ್‍ ಅಥವಾ ಎಸ್‍ಟಿಪಿಗೆ ಕಾರ್ಮಿಕರು ಇಳಿಯಬಹುದು. ಅಂತಹ ಸಂದರ್ಭದಲ್ಲಿ ಆಮ್ಲಜನಕ ಪೂರೈಕೆ ಕಡ್ಡಾಯವಾಗಿರುತ್ತದೆ. ಕಾರ್ಮಿಕರು ಗುಂಡಿಗಿಳಿಯುವ ಮುನ್ನ ಕೈಗವಸು, ಬೂಟು ಹಾಗೂ ಮಾಸ್ಕ್‌ ಧರಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಪ್ರತಿ ಮೂರು ನಿಮಿಷಕ್ಕೊಮ್ಮೆ ಸಹಾಯಕರೊಬ್ಬರು ಅನಿಲ ಪರೀಕ್ಷೆ ನಡೆಸಬೇಕು. ಇವೆಲ್ಲ ನಿಯಮಗಳ ಪಾಲನೆಯಾದರೆ ಅನಾಹುತಗಳನ್ನು ನಿಯಂತ್ರಿಸುವುದು ಸಾಧ್ಯವಿದೆ. ಆದರೆ, ಕಾನೂನಿನ ಅರಿವಿದ್ದೂ ಅವುಗಳನ್ನು ನಿರ್ಲಕ್ಷಿಸುವ ಕಾರಣದಿಂದಾಗಿ ಅಮಾಯಕ ಜನ ಸಾಯುತ್ತಿದ್ದಾರೆ. ಸುರಕ್ಷತಾ ಕ್ರಮಗಳನ್ನು ಖಚಿತಪಡಿಸುವ ಯಾವುದೇ ವ್ಯವಸ್ಥೆಯೂ ನಮ್ಮಲ್ಲಿಲ್ಲ. ದುರಂತ ನಡೆದಾಗ ಬಿಬಿಎಂಪಿ ಹಾಗೂ ಜಲಮಂಡಳಿಗಳು ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವ ನಾಟಕವಾಡುತ್ತವೆ. ಒಂದಿಷ್ಟು ದಂಡ ವಸೂಲು ಮಾಡುವ ಮೂಲಕ ಪ್ರಕರಣಗಳು ತಣ್ಣಗಾಗುತ್ತವೆ. ಕೃಷ್ಣರಾಜ ಮಾರುಕಟ್ಟೆ (ಕೆ.ಆರ್. ಮಾರುಕಟ್ಟೆ) ಸಮೀಪದ ‘ಕೈಲಾಶ್ ಬಾರ್ ಅಂಡ್ ರೆಸ್ಟೋರೆಂಟ್’ನಲ್ಲಿ ನಡೆದಿರುವ ಅಗ್ನಿ ಅನಾಹುತದ ಹಿನ್ನೆಲೆಯಲ್ಲೂ ವ್ಯವಸ್ಥಾಪಕರ ನಿರ್ಲಕ್ಷ್ಯವನ್ನು ಗಮನಿಸಬಹುದು. ಬಾರಿನಲ್ಲಿ ಕೆಲಸ ಮಾಡುವ ಐವರು ಸಿಬ್ಬಂದಿ ಬೆಂಕಿಗೆ ಆಹುತಿಯಾಗಿದ್ದಾರೆ. ಬೆಂಕಿಯನ್ನು ಉತ್ತೇಜಿಸುವ ಸರಕು ತುಂಬಿರುವ ಅಂಗಡಿಯಲ್ಲಿ ವಾತಾನುಕೂಲ ವ್ಯವಸ್ಥೆ ಅಚ್ಚಕಟ್ಟಾಗಿರಬೇಕು ಹಾಗೂ ಬೆಂಕಿ ಕಾಣಿಸಿಕೊಂಡಲ್ಲಿ ಅದನ್ನು ನಂದಿಸಲು ಅಗ್ನಿಶಾಮಕ ಸಲಕರಣೆಗಳನ್ನು ಸುಸಜ್ಜಿತವಾಗಿ ಇರಿಸಿಕೊಂಡಿರಬೇಕು. ಆದರೆ, ಇಂಥ ಮುನ್ನೆಚ್ಚರಿಕೆ ಕ್ರಮಗಳನ್ನು ಎಷ್ಟು ಅಂಗಡಿಗಳಲ್ಲಿ ಕಾಣಲಿಕ್ಕೆ ಸಾಧ್ಯವಿದೆ?

ಎಸ್‍ಟಿಪಿ ಹಾಗೂ ಮ್ಯಾನ್‍ಹೋಲ್‍ಗಳಲ್ಲಿ ಕಾರ್ಮಿಕರನ್ನು ಇಳಿಸುವುದು ಅನಿವಾರ್ಯ ಎನ್ನುವ ಚಕ್ರವ್ಯೂಹದಲ್ಲಿ ನಾವು ಬದುಕುತ್ತಿದ್ದೇವೆ. ದೀರ್ಘಾವಧಿಯಲ್ಲಿ, ಕೊಳಕು ಬಳಿಯುವ ಕೆಲಸವನ್ನು ಮನುಷ್ಯರಿಂದ ಯಂತ್ರಗಳಿಗೆ ವರ್ಗಾಯಿಸುವ ಕೆಲಸ ಪೂರ್ಣ ಪ್ರಮಾಣದಲ್ಲಿ ಜಾರಿಗೊಳ್ಳಬೇಕಾಗಿದೆ. ಅಲ್ಲಿಯವರೆಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಾರ್ಮಿಕರ ಜೀವವನ್ನು ರಕ್ಷಿಸುವ ಕೆಲಸ ನಡೆಯಬೇಕಾಗಿದೆ. ಜೀವನೋಪಾಯಕ್ಕಾಗಿ ದುಡಿಯುವವರು ಸುರಕ್ಷತಾ ಕ್ರಮಗಳನ್ನು ಒತ್ತಾಯಿಸುವ ಸ್ಥಿತಿಯಲ್ಲಿರುವುದಿಲ್ಲ. ಅಂಥ ಕಾರ್ಮಿಕರಿಗೆ ಸೂಕ್ತ ಸವಲತ್ತುಗಳನ್ನು ಒದಗಿಸುವುದು ಅವರಿಂದ ಕೆಲಸ ತೆಗೆದುಕೊಳ್ಳುವವರ ಜವಾಬ್ದಾರಿ. ಆ ಹೊಣೆಗಾರಿಕೆ ಸರಿಯಾದ ರೀತಿಯಲ್ಲಿ ನಿರ್ವಹಣೆಯಾಗುತ್ತಿದೆಯೇ ಎನ್ನುವುದನ್ನು ಗಮನಿಸುವುದು ಸರ್ಕಾರದ ಕರ್ತವ್ಯ. ಸುರಕ್ಷತೆಯ ನಿರ್ಲಕ್ಷ್ಯದ ಘಟನೆಗಳು ವರದಿಯಾದಾಗ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಇಲ್ಲದೆ ಹೋದಲ್ಲಿ ಈ ಸಾವುಗಳಲ್ಲಿ ಸರ್ಕಾರವೂ ಕೊಲೆಗಾರನ ಪಾತ್ರದಲ್ಲಿ ನಿಲ್ಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT