ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷೆಗೂ ಹೆಚ್ಚಿನ ರಾಸುಗಳು; ರೈತರ ಹರ್ಷ

Last Updated 9 ಜನವರಿ 2018, 9:04 IST
ಅಕ್ಷರ ಗಾತ್ರ

ಹಿರೀಸಾವೆ (ಹಾಸನ ಜಿಲ್ಲೆ): ಹೋಬಳಿಯ ಬೂಕನಬೆಟ್ಟದ ರಂಗನಾಥಸ್ವಾಮಿ 87ನೇ ಜಾತ್ರೆಗೆ ಎರಡು ದಿನಗಳಲ್ಲಿ ನಿರೀಕ್ಷೆಗೂ ಮೀರಿದ ಜಾನುವಾರುಗಳು ಬಂದಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ.

ಸಾವಿರಾರು ಎತ್ತುಗಳು ಜಾತ್ರಾ ಆವರಣದಲ್ಲಿ ಸೇರಿವೆ. ಉತ್ತಮ ಎತ್ತುಗಳು ಬಂದಿರುವುದರಿಂದ, ಜಾತ್ರೆಯಲ್ಲಿ ರಾಸುಗಳ ಬೆಲೆ ಹೆಚ್ಚಾಗಿದೆ. ಹಳ್ಳಿಕಾರ ಜಾತಿಯ ಎತ್ತುಗಳಿಗೆ ಹೆಚ್ಚು ಬೇಡಿಕೆ ಇದೆ. ವ್ಯಾಪಾರವು ಪ್ರಾರಂಭವಾಗಿದೆ ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ರೈತರು ಎತ್ತುಗಳನ್ನು ಕೊಳ್ಳಲು ಜಾತ್ರೆಗೆ ಬಂದಿದ್ದಾರೆ.

‘ಪ್ರತಿ ವರ್ಷಕ್ಕಿಂತ ಈ ಸಲ ಜಾನುವಾರುಗಳ ಬೆಲೆ ಸ್ವಲ್ಪ ದುಬಾರಿಯಾಗಬಹುದು. ಮುಂದಿನ ಎರಡು, ಮೂರು ದಿನ ವ್ಯಾಪಾರ ನಡೆಯುತ್ತದೆ’ ಎನ್ನುತ್ತಾರೆ ಸ್ಥಳಿಯ ರೈತರು. ಜಾತ್ರೆಗಾಗಿ ಸಾಕಿರುವ ಎತ್ತುಗಳನ್ನು ರೈತರು ವಿಶೇಷ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಜಾತ್ರೆ ಕರೆತರುತ್ತಿದ್ದಾರೆ. ನಾಗಮಂಗಲ ತಾಲ್ಲೂಕು ಹಳೆ ಚನ್ನಾಪುರದ ರೈತ ಮೇಲಗಿರೀಗೌಡ ₹ 2 ಲಕ್ಷ ಬೆಲೆಯ 2 ಜೋಡಿ ಎತ್ತುಗಳನ್ನು ಮತ್ತು ನಾಗತಿಹಳ್ಳಿಯ ರಾಜೇಗೌಡ 2 ಜೊತೆ ಎತ್ತುಗಳ ವಿಶೇಷ ಮೆರವಣಿಗೆ ನಡೆಸಿ, ರೈತರ ಗಮನಸೆಳೆದರು.

ಜಾತ್ರೆಯ ಆವರಣದಲ್ಲಿ 9ರಿಂದ (ಇಂದಿನಿಂದ) 11ರವರೆಗೆ ಕೃಷಿ ಮೇಳ ಆಯೋಜಿಸಲಾಗಿದೆ. 18ರಂದು ಗ್ರಾಮೀಣ ಕ್ರೀಡಾಕೂಟ, 19ರಂದು ರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಲಿದೆ ಎಂದು ಉಪತಹಶೀಲ್ದಾರ್ ಮೋಹನಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪಶುಪಾಲನಾ ಇಲಾಖೆಯಿಂದ ರಾಸುಗಳಿಗೆ ಜಾತ್ರಾ ಆವರಣದಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆ ಸೇರಿದಂತೆ ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳ ವಿವಿಧ ತಾಲ್ಲೂಕುಗಳಿಂದ ರೈತರು ಎತ್ತುಗಳನ್ನು ಮಾರಾಟ ಮಾಡಲು ಜಾತ್ರೆಗೆ ಬಂದಿದ್ದಾರೆ. ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳ ರೈತರು ರಾಸುಗಳನ್ನು ಕೊಳ್ಳಲು ಬಂದಿದ್ದಾರೆ.

* * 

ಕಳೆದ ವರ್ಷ ಉತ್ತಮ ಮಳೆ, ಬೆಳೆಯಾಗಿದ್ದು, ರೈತರು ಉತ್ತಮವಾಗಿ ರಾಸುಗಳನ್ನು ಸಾಕಿರುವುದು ಹೆಮ್ಮೆಯ ವಿಷಯ. ಹಳ್ಳಿಕಾರ್ ಜಾತಿಯ ರಾಸುಗಳು ಜಾತ್ರೆಯಲ್ಲಿ ಹೆಚ್ಚು ಇವೆ
ಡಾ.ಸುಬ್ರಹ್ಮಣ್ಯ
ಪಶುವೈದ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT