ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಂಗಳೂರು ಕೇಂದ್ರ ವಿ.ವಿ.ಗೆ ₹100 ಕೋಟಿ ನೀಡಲಿ’

ರೂಪುರೇಷೆ ಸಿದ್ಧಪಡಿಸಲು ವಿವಿಧ ಕ್ಷೇತ್ರಗಳ ಗಣ್ಯರ ಸಭೆ
Last Updated 9 ಜನವರಿ 2018, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ಕೇವಲ ₹ 3 ಕೋಟಿ ಅನುದಾನ ನೀಡಲಾಗಿದೆ. ಈ ವಿಶ್ವವಿದ್ಯಾಲಯ ಉದ್ಧಾರ ಆಗಬೇಕಾದರೆ ಕನಿಷ್ಠ ₹100 ಕೋಟಿ ಅನುದಾನ ಬಿಡುಗಡೆ ಮಾಡಬೇಕು.’

ವಿಶ್ವವಿದ್ಯಾಲಯದ ಭವಿಷ್ಯದ ರೂಪುರೇಷೆ ಹಾಗೂ ಕಾರ್ಯ ಚಟುವಟಿಕೆಗಳನ್ನು ರೂಪಿಸುವ ಉದ್ದೇಶದಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರದ ಗಣ್ಯರ ಸಭೆಯಲ್ಲಿ ವ್ಯಕ್ತವಾದ ಒಕ್ಕೊರಲ ಅಭಿಪ್ರಾಯವಿದು.

ಬೆಂಗಳೂರು ವಿಶ್ವವಿದ್ಯಾಲಯವು ವಿಭಜನೆ ಆಗುವ ಮುನ್ನ ಬೋಧಕ ಹಾಗೂ ಬೋಧಕೇತರ ವರ್ಗದ ಹುದ್ದೆಗಳಲ್ಲಿ ಶೇ 49ರಷ್ಟು ಖಾಲಿ ಇದ್ದವು. ಇರುವ ಸಿಬ್ಬಂದಿಯನ್ನು ಈಗ ಮೂರು ವಿ.ವಿ.ಗಳಿಗೆ ಹಂಚಿಕೆ ಮಾಡಬೇಕು. ಇದರಿಂದ ಪ್ರತಿ ವಿಶ್ವವಿದ್ಯಾಲಯಕ್ಕೆ ಶೇ 17ರಷ್ಟು ಸಿಬ್ಬಂದಿ ಲಭ್ಯವಾಗುತ್ತಾರೆ. ಇದರಿಂದ ವಿ.ವಿ.ಯ ಅಸ್ಮಿತೆ ಹಾಗೂ ಘನತೆಗೆ ಧಕ್ಕೆ ಉಂಟಾಗಲಿದೆ. ಅಗತ್ಯವಿರುವ ಸಿಬ್ಬಂದಿಯನ್ನು ಕೂಡಲೇ ನೇಮಕ ಮಾಡಬೇಕು ಎಂದು ವಿಶ್ರಾಂತ ಕುಲಪತಿ ಡಾ.ಎನ್‌.ಪ್ರಭುದೇವ್‌ ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಕವಿ ಡಾ.ಸಿದ್ಧಲಿಂಗಯ್ಯ, ‘ಸರ್ಕಾರವು ವಿ.ವಿ.ಗೆ ₹3 ಕೋಟಿ ಅನುದಾನ ನೀಡುವ ಮೂಲಕ ಮೂರು ನಾಮ ಹಾಕಿದೆ’ ಎಂದು
ವ್ಯಂಗ್ಯವಾಡಿದರು.

ಸಾಹಿತಿ ಡಾ.ಕೆ.ಮರುಳಸಿದ್ದಪ್ಪ, ‘ಈ ವಿ.ವಿ ಶೂನ್ಯದಿಂದ ಹುಟ್ಟುತ್ತಿಲ್ಲ. ಇದಕ್ಕೆ ತನ್ನದೇ ಆದ ಅಸ್ಮಿತೆ, ಚರಿತ್ರೆ ಇದೆ. ಅದನ್ನು ಬಳಸಿಕೊಂಡು ಬೆಳವಣಿಗೆಯ ಹಾದಿಯಲ್ಲಿ ಸಾಗಬೇಕು’ ಎಂದರು.

ಸಂಗೀತ ನಿರ್ದೇಶಕ ಹಂಸಲೇಖ, ‘ಬೋಧನಾಂಗ, ಪರೀಕ್ಷಾಂಗ ಹಾಗೂ ಪ್ರಸಾರಾಂಗ ಇರುವಂತೆ ಸಹಯೋಗಕ್ಕೆ ಪ್ರತ್ಯೇಕ ವಿಭಾಗ ಸ್ಥಾಪಿಸಬೇಕು. ಸಂಗೀತ, ಜಾನಪದ, ಕಲಾ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ರೂಪಿಸಬೇಕು’ ಎಂದರು.

ಚಿಂತಕ ಡಾ.ಜಿ.ರಾಮಕೃಷ್ಣ,‘ವಿ.ವಿ ಹಾಗೂ ಅದರ ವ್ಯಾಪ್ತಿಯ ಕಾಲೇಜುಗಳ ನಡುವೆ ಒಳ್ಳೆಯ ಸಂಬಂಧ ಇರಬೇಕು. ಪ್ರಜಾಪ್ರಭುತ್ವವಾದಿ ಕ್ರಮಗಳ ಮೂಲಕ ಆ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಬೇಕು’ ಎಂದರು.

ವಿ.ವಿ.ಗಳು ವಿಮರ್ಶಾತ್ಮಕ ಗುಣವನ್ನು ಬೆಳೆಸಿಕೊಂಡರೆ ಅವುಗಳಿಗೆ ದೇಶದ್ರೋಹ ಪಟ್ಟ ಕಟ್ಟಲಾಗುತ್ತಿದೆ. ಉನ್ನತ ವಿದ್ಯಾಸಂಸ್ಥೆಗಳು ಹಾಗೂ ಜನರ ನಡುವೆ ಘರ್ಷಣೆ ಏರ್ಪಡುತ್ತಿದೆ. ಇಂತಹ ಬೆಳವಣಿಗೆ ತಡೆಯಲು ಸ್ಥಳೀಯ ಜನರನ್ನು ವಿ.ವಿ ಒಳಗೊಳ್ಳಬೇಕು’ ಎಂದು ಜೆಎನ್‌ಯು ಪ್ರಾಧ್ಯಾಪಕ ಎಚ್‌.ಎಸ್‌.ಶಿವಪ್ರಕಾಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT