ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ ಏಕ ಸದಸ್ಯ ಪೀಠದ ಮಹತ್ವದ ತೀರ್ಪು: ಐಎಸ್‌ಐ ಹೆಲ್ಮೆಟ್ ಇದ್ದರೆ ಮಾತ್ರ ವಿಮೆ

Last Updated 9 ಜನವರಿ 2018, 19:49 IST
ಅಕ್ಷರ ಗಾತ್ರ

ಬೆಂಗಳೂರು: ‘ದ್ವಿಚಕ್ರ ವಾಹನ ಸವಾರರು ಐಎಸ್‌ಐ ಮುದ್ರೆ ಇರುವ ಹೆಲ್ಮೆಟ್‌ ಧರಿಸದೇ ಅಪಘಾತಕ್ಕೀಡಾಗಿ ಜೀವ ಕಳೆ
ದುಕೊಂಡರೆ ಅಥವಾ ಅಂಗ ಊನವಾದರೆ ಹಾಗೂ ಕಾರು ಚಾಲಕರು ಸೀಟ್‌ ಬೆಲ್ಟ್‌ ಹಾಕದಿದ್ದರೆ ವಿಮಾ ಕಂಪನಿ ವಿಮಾ ಹಣ ಪಾವತಿಸಬಾರದು’ ಎಂದು ಹೈಕೋರ್ಟ್‌ ತೀರ್ಪು ನೀಡಿದೆ.

ಓರಿಯಂಟಲ್‌ ವಿಮಾ ಕಂಪನಿ ಸಲ್ಲಿಸಿದ್ದ ಎಂಎಫ್‌ಎ (ಮಿಸಲೇನಿಯಸ್‌ ಫಸ್ಟ್‌ ಅಪೀಲ್) ಅರ್ಜಿ ಮೇಲಿನ ಕಾಯ್ದಿರಿಸಿದ್ದ ಮಹತ್ವದ ತೀರ್ಪನ್ನು ಎಲ್‌.ನಾರಾಯಣ ಸ್ವಾಮಿ ಅವರ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದೆ.

‘ಹೆಲ್ಮೆಟ್ ಧರಿಸುವುದು ಎಂದರೆ ನೆಪ ಮಾತ್ರಕ್ಕೆ ಯಾವುದೊ ಒಂದು ಹೆಲ್ಮೆಟ್ ಅನ್ನು ಹಾಕಿಕೊಳ್ಳುವುದಲ್ಲ. ಮೋಟಾರು ವಾಹನ ಕಾಯ್ದೆ–1988ಕ್ಕೆ (ಕೆಎಂವಿ) ಸಂಬಂಧಿಸಿದ ನಿಯಮ 230ರ ಪ್ರಕಾರ ರಕ್ಷಣಾತ್ಮಕ ಹೆಲ್ಮೆಟ್‌ ಅನ್ನೇ ಧರಿಸಬೇಕು. ಹೆಲ್ಮೆಟ್‌ ಮೇಲೆ ಇಂಡಿಯನ್‌ ಬ್ಯೂರೊ ಆಫ್‌

ಸ್ಟ್ಯಾಂಡರ್ಡ್‌ ಸಂಖ್ಯೆ ಐಎಸ್‌ಐ 4151: 1993 ಮುದ್ರೆಯೇ ಇರಬೇಕು’ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

‘ಹೆಲ್ಮೆಟ್‌ ಮೇಲೆ ತಯಾರಿಕಾ ಕಂಪನಿ ಹೆಸರು, ದಿನಾಂಕ, ವರ್ಷ ಹಾಗೂ ಗಾತ್ರದ ವಿವರ ನಮೂದಾಗಿರಬೇಕು. ಇದು ಅಳಿಸಿ ಹೋಗುವಂತಿರಬಾ
ರದು. ಸುಲಭವಾಗಿ ಓದುವಂತಿರಬೇಕು’ ಎಂದೂ ನಿರ್ದೇಶಿಸಲಾಗಿದೆ.

‘ಕೆಎಂವಿ ಕಾಯ್ದೆ ಕಲಂ 129ರ ಅನುಸಾರ ದ್ವಿಚಕ್ರ ವಾಹನ ಸವಾರರು (ಹಿಂಬದಿ ಸವಾರರೂ ಸೇರಿದಂತೆ) ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಬೇಕು. ಇದನ್ನು ಪರಿಶೀಲಿಸಬೇಕಾದ್ದು ಸಂಚಾರ ಪೊಲೀಸರ ಕರ್ತವ್ಯ’ ಎಂದು ತಿಳಿಸಲಾಗಿದೆ.

‘ಅಪಘಾತ ವಿಮಾ ಪ್ರಕರಣಗಳಲ್ಲಿ ಅಧೀನ ನ್ಯಾಯಾಲಯ ಮತ್ತು ನ್ಯಾಯಮಂಡಳಿಗಳು ನಡೆಸುವ ವಿಚಾರಣೆ ಸೂಕ್ಷ್ಮವಾಗಿರಬೇಕು. ಮೋಟಾರು ಸೈಕಲ್, ಸ್ಕೂಟರ್ ಮತ್ತು ಮೊಪೆಡ್‌ಗಳು...ಹೀಗೆ ಯಾವುದೇ ಸವಾರರು ರಾಜ್ಯ ವ್ಯಾಪ್ತಿಯಲ್ಲಿ ಸಂಚರಿಸುವಾಗ ಹೆಲ್ಮೆಟ್‌ ಧರಿಸುವುದು ಕಡ್ಡಾಯ. ಹೆಲ್ಮೆಟ್ ಧರಿಸಬೇಕೆಂಬ ಆದೇಶದ ಮುಖ್ಯ ಉದ್ದೇಶ ರಸ್ತೆ ಅಪಘಾತಗಳ ಸಮಯದಲ್ಲಿ ತಲೆಗೆ ಆಗುವ ಪೆಟ್ಟನ್ನು ತಡೆಯುವುದೇ ಆಗಿದೆ' ಎಂದು ಹೇಳಲಾಗಿದೆ.

ಪಾವಗಡ ತಾಲ್ಲೂಕಿನ ಓಬಳಾಪುರ ಗ್ರಾಮದ ಎನ್‌.ನರೇಶ್‌ ಬಾಬು ಮತ್ತು ಸಿ.ವಿ.ಜಯಂತ್‌ ಎಂಬುವರು 2014ರ ಮೇ 20ರಂದು ಬಜಾಜ್‌ ಪಲ್ಸರ್‌ ಬೈಕ್‌ನಲ್ಲಿ ಹೋಗುತ್ತಿರುವಾಗ ಬಸ್‌ ಡಿಕ್ಕಿಯಾಗಿ ಅಪಘಾತಕ್ಕೆ ಒಳಗಾಗಿದ್ದರು. ಅವರಿಗೆ ಪರಿಹಾರವಾಗಿ ವಿಮಾ ಕಂಪನಿ
₹2.58 ಲಕ್ಷ ನೀಡಬೇಕು ಎಂದು ಮಧುಗಿರಿಯ ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಸುಜಾತಾ ಎಂ. ಸಾಂಬ್ರಾಣಿ ಆದೇಶಿಸಿದ್ದರು. ಇದನ್ನು ವಿಮಾ ಕಂಪೆನಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ರಸ್ತೆ ಸುರಕ್ಷಾ ನೀತಿ ಅವಶ್ಯವಿದೆ...

‘ಹೆಚ್ಚಿನ ಜನರು ಹೆಲ್ಮೆಟ್‌ ಧರಿಸುವ ನಿಯಮ ಪಾಲಿಸುತ್ತಿಲ್ಲ. ಹೆಚ್ಚುತ್ತಿರುವ ಅಪಘಾತ ತಡೆಯಲು ಸರ್ಕಾರ ಅವಶ್ಯವಾದ ನೀತಿ ರೂಪಿಸಬೇಕು ಮತ್ತು ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು’ ಎಂದು ಸೂಚಿಸಲಾಗಿದೆ.

‘ಯಾವುದೇ ಒಬ್ಬ ವ್ಯಕ್ತಿ ಕಾನೂನು ಪಾಲನೆಯಲ್ಲಿ ವಿಫಲನಾಗಿ ಅಪಘಾತದಲ್ಲಿ ಗಾಯಗೊಂಡರೆ ಅಂತಹವರ ವಿರುದ್ಧ ಕಾನೂನು ಕ್ರಮ ಅನಿವಾರ್ಯ’ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.

‘ಮೊದಲು ಈ ನಿಯಮ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ– ಧಾರವಾಡ, ಕಲಬುರ್ಗಿಯಲ್ಲಿ ಮಾತ್ರವೇ ಅನ್ವಯವಾಗುತ್ತಿತ್ತು. ಆದರೆ, ಹೆಲ್ಮೆಟ್ ಕಡ್ಡಾಯ ಎಂಬ ನಿಯಮ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ವ್ಯಾಪ್ತಿಗೂ ಅನ್ವಯವಾಗುತ್ತದೆ’ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT