ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ಬೆಟ್ಟವಾದರೇನು?

Last Updated 10 ಜನವರಿ 2018, 19:30 IST
ಅಕ್ಷರ ಗಾತ್ರ

ಚಿಕ್ಕ ವಯಸ್ಸಿನಲ್ಲಿ ಮರಕೋತಿ ಆಟ ಆಡುತ್ತಿದ್ದ ಆ ಹುಡುಗ, ಬೆಳೆದು ದೊಡ್ಡವನಾದ ಮೇಲೆ ಬರಿಗಾಲಲ್ಲಿ ಕೈಗಳಿಗೆ ಸೀಮೆಸುಣ್ಣದ ಪುಡಿ ಹಾಕಿಕೊಂಡು, ಸಮತಟ್ಟಾದ ರಸ್ತೆಯಲ್ಲೇ ನಡೆದಂತೆ, ಸರಬರನೆ ಬಂಡೆ ಏರುವುದನ್ನು ರೂಢಿಸಿಕೊಂಡ. ಆ ಹುಡುಗನ ಈ ಹವ್ಯಾಸ ಎಲ್ಲರೂ ಆತನತ್ತ ಕತ್ತು ಮೇಲೆತ್ತಿ ನೋಡುವಂತೆ ಮಾಡಿತು. ಹೌದು, ಎಂತಹ ಕಡಿದಾದ ಬೆಟ್ಟ ಕಂಡರೂ ಏರಲು ಥಟ್ಟಂತ ಮುನ್ನುಗ್ಗುವ ಆ ಯುವಕನೇ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿಯ ಬಸವರಾಜ ಕಾಳಿ.

ಧಾರವಾಡ ಜಿಲ್ಲೆಯ ಪ್ರಥಮ ಶಿಲಾರೋಹಿ ಎಂದು ಗುರುತಿಸಿಕೊಂಡಿರುವ ಈ ಯುವಕನಲ್ಲಿ ಸಾಧಿಸುವ ಛಲ ಹೇಗೆ ಮಡುವುಗಟ್ಟಿದೆ ಎಂದರೆ ನಿತ್ಯ ಬೆಳಗಾದರೆ ಅವರಿಗೀಗ ಗುಡ್ಡ–ಬೆಟ್ಟಗಳನ್ನು ಹುಡುಕಿಕೊಂಡು ಹೋಗುವ ಖಯಾಲಿ.

ನಿತ್ಯ ಬೆಳಿಗ್ಗೆ ತಮ್ಮೂರಿನ ಪುರಾತನ ಕೋಟೆಯನ್ನು ಹತ್ತುವುದು, ಸಮೀಪದಲ್ಲಿ ಇರುವ ಬೂದನಗುಡ್ಡವನ್ನು ಏರುವುದು, ಹಾಗೆಯೇ ತಿಂಗಳಿನಲ್ಲಿ ಎರಡು ಬಾರಿ ಬಾದಾಮಿಗೆ ಹೋಗಿ ಅಭ್ಯಾಸ ಮಾಡುವುದು ಬಸವರಾಜ ಅವರ ರೂಢಿ. ಬಡತನದಲ್ಲಿ ಬೆಂದು ಬಸವಳಿದಿರುವ ಅವರು ಅಲ್ಲಿ ಇಲ್ಲಿ ಕೆಲಸ ಮಾಡುತ್ತಾ, ಮನೆಯ ತುತ್ತಿನ ಚೀಲವನ್ನು ತುಂಬಿಸುತ್ತಿದ್ದಾರೆ.

ಸೀಮೆಸುಣ್ಣದ ಪುಡಿಯನ್ನು ಹಾಕುವುದಕ್ಕೆ ಚಾಕ್ ಬ್ಯಾಗ್ ಹುಡುಕಿಕೊಂಡು ಅಂಗಡಿಗೆ ಹೋದರು. ಅದರ ಬೆಲೆ ಕೇಳಿ, ತೆಗೆದುಕೊಳ್ಳಲು ಆಗದೇ ವಾಪಸ್‌ ಬಂದರು. ಮನೆಗೆ ಬಂದವರೇ ತಮ್ಮ ಹಳೆಯ ಪ್ಯಾಂಟ್ ಕತ್ತರಿಸಿ ಅದರೊಳಗೆ ಒಂದು ಸಾಕ್ಸ್ ಇಟ್ಟು, ಹೊಲಿದರು. ಅನನ್ಯವಾದ ಚಾಕ್‌ ಬ್ಯಾಗ್‌ವೊಂದು ಬಳಕೆಗೆ ಸಿದ್ಧವಾಯಿತು. ಈಗ ಎಲ್ಲಿಯೇ ಶಿಲಾರೋಹಣಕ್ಕೆ ನಿಂತರೂ ಬಸವರಾಜ ಅವರ ಆಪ್ತ ಸಂಗಾತಿಯಾಗಿದೆ ಆ ಬ್ಯಾಗ್‌.

ತಮ್ಮ ಸಾಹಸ ಚಟುವಟಿಕೆಗಳಿಗೆ ಸಹಾಯ ಸಿಕ್ಕೀತೆ ಎಂದು ಗ್ರಾಮ ಪಂಚಾಯಿತಿಯನ್ನು ಕೇಳಿಕೊಂಡರು. ಒಂದಲ್ಲ, ಎರಡಲ್ಲ; ಮೂರು ಸಲ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದರೂ ಯಾವುದೇ ಸಹಾಯಹಸ್ತ ಸಿಗಲಿಲ್ಲ ಎಂಬುದು ಅವರ ನೋವಿನ ಮಾತು.

ಚಿಕ್ಕ ವಯಸ್ಸಿನಲ್ಲಿ ಮರಕೋತಿ ಆಟದಲ್ಲಿ ಇವರನ್ನು ಮೀರಿಸುವವರು ಇನ್ನೊಬ್ಬ ವ್ಯಕ್ತಿ ಇರಲಿಲ್ಲ. ಒಂದುದಿನ ಸ್ನೇಹಿತರೊಂದಿಗೆ ಸೊಗಲದ ಪ್ರವಾಸಕ್ಕೆ ಬಸವರಾಜ ಹೋಗಿದ್ದರು. ಅಲ್ಲಿ ಕೆಲವು ಶಿಲಾರೋಹಿಗಳು ಕಾಲಿಗೆ ಶೂಗಳನ್ನು ಧರಿಸಿ, ಸೊಂಟಕ್ಕೆ ಒಂದು ಹಗ್ಗವನ್ನು ಬಿಗಿದು, ಕೈಯಲ್ಲಿ ಬಿಳಿಯ ಸುಣ್ಣದ ಪುಡಿಯನ್ನು ಹಚ್ಚಿಕೊಂಡು ಕಲ್ಲಿನ ಬಂಡೆಗಳ ಮೇಲೆ ಹತ್ತುತ್ತಿರುವುದನ್ನು ನೋಡಿದರು. ಇವರಿಗೂ ಅಂತಹ ಸಾಹಸ ಮೆರೆಯುವ ಆಸೆ.

ಶೂ ಧರಿಸದೆ, ಹಗ್ಗ ಕಟ್ಟಿಕೊಳ್ಳದೆ ಸರ ಸರನೆ ಜೇಡದ ಹಾಗೆ ಮೇಲೇರಿದಾಗ ಎಲ್ಲರಿಗೂ ಆಶ್ಚರ್ಯ. ಅಲ್ಲಿಗೆ ಕೋಚ್ ಆಗಿ ಬಂದಿದ್ದ ಜನರಲ್ ತಿಮ್ಮಯ್ಯ ನ್ಯಾಷನಲ್ ಅಕಾಡೆಮಿ ಆಫ್ ಅಡ್ವೆಂಚರ್‌ ಸಂಸ್ಥೆಯ ಮ್ಯಾನೇಜರ್ ಶಬ್ಬೀರ್‌ ಅವರ ಪರಿಚಯವಾಗಿ ಇವರಿಗೆ ರಾಮನಗರ ರಾಕ್ ಕ್ಲೈಂಬಿಂಗ್ ಬೇಸಿಕ್ ಕೋರ್ಸ್‌ಗೆ ಬರುವಂತೆ ಸೂಚಿಸಿದರು.

ಕೋರ್ಸ್‌ಗೆ ಕ್ರೀಡಾಪಟುಗಳನ್ನು ಆಯ್ಕೆಮಾಡಲು ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಯಿತು. ಉತ್ತರ ಕರ್ನಾಟಕದಿಂದ 47 ಜನ ಭಾಗವಹಿಸಿದ್ದರು. ಅದರಲ್ಲಿ ಬಸವರಾಜ ಆಯ್ಕೆಯಾದರು.

ರಾಮನಗರದಿಂದ ಶಿಲಾ ರೋಹಣದ ಕೆಲವು ಪಾಠಗಳನ್ನು ಕಲಿತು ಬಂದ ಬಸವರಾಜ ಅವರನ್ನು ಶಿಕ್ಷಕ ಬಸವರಾಜ ಹಾದಿಮನಿ ಮತ್ತು ರಾಜೇಶ ಪತ್ತಾರ ಹೆಚ್ಚಿನ ತರಬೇತಿಗಾಗಿ ‌ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಆವರಣದಲ್ಲಿರುವ ಕ್ಲೈಂಬಿಂಗ್‌ ವಾಲ್‌ಗೆ ಕಳುಹಿಸಿದರು. ತರಬೇತಿಯಲ್ಲಿ ಅವರಿಗೆ ‘ಎ’ ಶ್ರೇಣಿ ಸಿಕ್ಕಿತು.

ಶಿಲಾರೋಹಿಗಳಲ್ಲಿ ಹೆಸರು ಮಾಡಿದ ಸಿ.ಎಂ.ಪ್ರವೀಣ್ ಅವರ ಪರಿಚಯವೂ ಆಯಿತು. ಅವರಲ್ಲೂ ಕೆಲವು ಪಟ್ಟುಗಳನ್ನು ಕರಗತ ಮಾಡಿಕೊಂಡ ಬಳಿಕ ಬಸವರಾಜ ಅವರು ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಆರಂಭಿಸಿದರು.

ಕೋತಿರಾಜ ಎಂದು ಚಿರಪರಿಚಿತರಾದ ಜ್ಯೋತಿರಾಜ ಅವರ ಸಂಪರ್ಕಕ್ಕೆ ಬಸವರಾಜ ಬಂದಾಗ, ಅವರ ಸಾಹಸ ಪ್ರವೃತ್ತಿಯನ್ನು ಪರೀಕ್ಷಿಸಲು ಜ್ಯೋತಿರಾಜ ಅವರು ಬಂಡೆಗಳನ್ನು ಹತ್ತಲು ಹೇಳಿದ್ದರು. ಆಗ ಬಸವರಾಜ ಸರ ಸರನೆ ಬಂಡೆ ಏರಿ ಇಳಿದಿದ್ದರು. ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅವರಿಗೆ ಉಡುಗೊರೆಯಾಗಿ ಸೀಮೆಸುಣ್ಣದ ಪುಡಿ ಯನ್ನು ನೀಡಿದರು. ಆಗಿನಿಂದ ಇಬ್ಬರೂ ಗೆಳೆಯರಾದರು.

ಏಷ್ಯಾ ಖಂಡದ ಅತಿ ಎತ್ತರದ ಏಕಶಿಲಾ ಬಂಡೆಗಳಲ್ಲಿ ದ್ವಿತೀಯ ಸ್ಥಾನದಲ್ಲಿರುವ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸಾವನದುರ್ಗದ ಬಂಡೆಯನ್ನು ಅತಿ ಕಡಿಮೆ ಸಮಯದಲ್ಲಿ ಏರಿ ದಾಖಲೆ ಸೃಷ್ಟಿಸುವ ಅಭಿಲಾಷೆ ಅವರದು.

‘ಅಪಘಾತ ಸಂಭವಿಸಿದ ಸ್ಥಳಕ್ಕೆ ಕರೆದೊಯ್ದು ಕೆಲಸ ಮುಗಿದ ನಂತರ ಅಷ್ಟೋ ಇಷ್ಟೋ ಹಣ ನೀಡಿ ಕಳಿಸಲಾಗುತ್ತದೆ. ಮಿಕ್ಕ ಸಮಯದಲ್ಲಿ ನನ್ನನ್ನು ಕೇಳುವವರೇ ಇಲ್ಲ. ನನ್ನ ಮೇಲೆ ಮನೆತನದ ಹೊಣೆಯೂ ಇದೆ. ಒಂದು ಕಾಯಂ ಕೆಲಸ ಅಂತ ಸಿಕ್ಕರೆ ನನ್ನ ಸಾಹಸ ಪ್ರವೃತ್ತಿ ಮುಂದುವರಿಸಲು ಅನುಕೂಲ ವಾಗುತ್ತದೆ’ ಎಂದು ಬಸವರಾಜ ಹೇಳುತ್ತಾರೆ.

‘ಒಮ್ಮೆ ಗೋಕಾಕ್ ಫಾಲ್ಸ್‌ಗೆ ಹೋಗಿ ಅಭ್ಯಾಸ ಮಾಡುತ್ತಿರುವಾಗ ಮೇಲಿಂದ ಕೆಳಗೆ ಬಿದ್ದು ಕೈ–ಕಾಲು ಮತ್ತು ತಲೆಗೆ ಪೆಟ್ಟು ತಿಂದಿದ್ದೆ. ಆಗ ಯಾರಿಂದಲೂ ಸಹಾಯ ಸಿಕ್ಕಿರಲಿಲ್ಲ. ಶಿಲಾರೋಹಣ ಸ್ಪರ್ಧೆಯಲ್ಲಿ ಸಾಧನೆ ಮಾಡುವ ತವಕವೂ ಇದೆ. ಆದರೆ, ಹೆಚ್ಚಿನ ತರಬೇತಿ ಪಡೆಯಲು ಧಾರವಾಡ ಅಥವಾ ಹುಬ್ಬಳ್ಳಿ ಸಮೀಪ ಈ ಕ್ರೀಡೆಗೆ ಪೂರಕವಾದ ಸೌಲಭ್ಯಗಳು ಇಲ್ಲ. ತರಬೇತಿಗೆ ಬೇಕಾದ ಮೂಲಸೌಕರ್ಯ ಕಲ್ಪಿಸಿಕೊಟ್ಟರೆ ಅನುಕೂಲವಾಗುತ್ತದೆ’ ಎಂದು ಅವರು ಮನದಾಳ ತೋಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT