ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತಷ್ಟು ಸ್ಮಾರ್ಟ್ ಆಗಲಿದೆ ಸಹಾಯಕ ತಂತ್ರಜ್ಞಾನ

Last Updated 10 ಜನವರಿ 2018, 19:30 IST
ಅಕ್ಷರ ಗಾತ್ರ

ನಮ್ಮ ಮುಂದಿನ ಬದುಕು ಹೇಗಿರಬೇಕು ಎಂಬುದನ್ನು ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಂಸ್ಥೆಗಳು ಒಂದೆರಡು ವರ್ಷಗಳ ಹಿಂದೆಯೇ ನಿರ್ಧರಿಸಿರುತ್ತವೆ! ಭವಿಷ್ಯದ ನಡೆ ಸಂಪೂರ್ಣ ತಂತ್ರಜ್ಞಾನದೊಂದಿಗೆ ಬೆರೆತಿರುವಂತೆ ಊಹಿಸಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಹೊಸತನ್ನು ಗ್ರಾಹಕನ ಕೈಗಿಟ್ಟು ಸಂಭ್ರಮಿಸಲು ಕಾತುರದಲ್ಲಿರುತ್ತವೆ.

ಗ್ರಾಹಕರಿಗಾಗಿ ರೂಪಿಸಿದ ಅತ್ಯಾಧುನಿಕ ಉತ್ಪನ್ನಗಳನ್ನು ಲಾಸ್ ವೆಗಾಸ್‍ನಲ್ಲಿ ಪ್ರತಿ ವರ್ಷ ನಡೆಯುವ ‘ಸಿಇಎಸ್’ ಮೇಳದಲ್ಲಿ ಪ್ರದರ್ಶಿಸಲಾಗುತ್ತದೆ. ಈ ವರ್ಷ ಗೂಗಲ್ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಅಮೆಜಾನ್‍ನ ‘ಅಲೆಕ್ಸಾ’ ಹಾಗೂ ಗೂಗಲ್‍ನ ‘ಹೇ ಗೂಗಲ್’ ನಡುವಿನ ಪೈಪೋಟಿಗೆ ಸಾಕ್ಷಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹೇಳುವುದನ್ನು ಕೇಳಿಸಿಕೊಂಡು ತನ್ನ ಮಿತಿಯಲ್ಲಿ ಕಾರ್ಯನಿರ್ವಹಿಸುವ ‘ಸಹಾಯಕ ಸ್ನೇಹಿ’ ತಂತ್ರಜ್ಞಾನ ವಿಶ್ವದ ಗ್ರಾಹಕರನ್ನು ಸೆಳೆಯುತ್ತಿದೆ. ಧ್ವನಿಯನ್ನು ಕೇಳಿ ತಾನಾಗಿಯೇ ಹುಡುಕಾಟ ನಡೆಸುವ ಹೊಸ ಬಗೆಯನ್ನು 2011ರಲ್ಲಿ ಆ್ಯಪಲ್ ‘ಸಿರಿ’ ಮೂಲಕ ಪರಿಚಯಿಸಿತ್ತು. ಈ ರೀತಿಯ ಆವಿಷ್ಕಾರಗಳಲ್ಲಿ ಆಸಕ್ತಿ ಬೆಳೆಸಿಕೊಂಡ ಅಮೆಜಾನ್, ವ್ಯಕ್ತಿ ಆಡುವ ಯಾವುದೇ ಮಾತನ್ನು ಅರ್ಥೈಸಿಕೊಂಡು ಪ್ರತಿಕ್ರಿಯೆ ನೀಡುವ ‘ಇಕೊ’ ಸ್ಮಾರ್ಟ್‌ ಸ್ಪೀಕರ್ ಅಭಿವೃದ್ಧಿಪಡಿಸಿ 2015ರಲ್ಲಿ ಮಾರುಕಟ್ಟೆಗೆ ತಂದಿತು. ಆವರೆಗೂ ಸುಮ್ಮನಿದ್ದ ಗೂಗಲ್ ತನ್ನ ಅಸಿಸ್ಟಂಟ್‌ (ಸಹಾಯಕ) ತಂತ್ರಜ್ಞಾನವನ್ನು ಬಳಸಿ 2016ರಲ್ಲಿ ‘ಗೂಗಲ್ ಹೋಂ ಸ್ಪೀಕರ್’ ಹೊರ ತಂದಿತು.

ಕಳೆದ ವರ್ಷ ಸ್ಮಾರ್ಟ್ ಸ್ಪೀಕರ್ ಮಾರುಕಟ್ಟೆಯಲ್ಲಿ ಅಮೆಜಾನ್ ಅಲೆಕ್ಸಾ ಶೇ 69ರಷ್ಟು ಪಾಲು ಹೊಂದಿತ್ತು. ಗೂಗಲ್ ಹಲವು ಉಪಕರಣಗಳೊಂದಿಗೆ ‘ಹೇ ಗೂಗಲ್’ ಅಳವಡಿಕೆ ಒಡಂಬಡಿಕೆ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಧ್ವನಿ ಸಹಾಯಕ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯನ್ನು ಪ್ರದರ್ಶಿಸುವ ಮೂಲಕ ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸಲು ಮುಂದಾಗಿದ್ದು, ಇದೇ ಮೊದಲ ಬಾರಿಗೆ ‘ಹೇ ಗೂಗಲ್’ ಬರಹವನ್ನು ಲಾಸ್ ವೆಗಾಸ್ ನಗರದ ಮೋನೊರೈಲಿನ ಮೇಲೆ, ಬೃಹತ್ ಜಾಹೀರಾತು ಫಲಕಗಳಲ್ಲಿ ಹಾಗೂ ಕಟ್ಟಡಗಳ ಮೇಲೆ ಪ್ರದರ್ಶಿಸಿ ಗಮನ ಸೆಳೆಯಲಾಗುತ್ತಿದೆ.

ಕುತೂಹಲ-ಪೈಪೋಟಿ

ಇದೇ 9ರಿಂದ 12ರವರೆಗೂ ಸಿಇಎಸ್ ಪ್ರದರ್ಶನ ಆಯೋಜನೆಯಾಗಿದೆ. ಕೈಬೆರಳ ಉಗುರಿಗೆ ಅಂಟಿಸಬಹುದಾದ ಯುವಿ ಸೆನ್ಸರ್ (ಸಂವೇದಕ), ಮೋಟಾರ್ ಬೈಕ್ ಸವಾರರಿಗೆ ಅಪಘಾತ ಸಮಯದಲ್ಲಿ ಸೊಂಟಕ್ಕೆ ರಕ್ಷಣೆ ಒದಗಿಸುವ ಏರ್‌ ಬ್ಯಾಗ್, ಮೈಕ್ರೋಎಲ್‍ಇಡಿ ತಂತ್ರಜ್ಞಾನ ಬಳಸಿ ಸಿದ್ಧಪಡಿಸಿರುವ ಸ್ಯಾಮ್‍ಸಂಗ್ 146 ಇಂಚಿನ ಟಿ.ವಿ, ಎಲ್‍ಜಿ ಸಂಸ್ಥೆಯ 5ಕೆ ಅಲ್ಟ್ರಾವೈಡ್ ಪರದೆ, ಲ್ಯಾಪ್‍ಟಾಪ್‍ಗೆ ಇಂಟರ್‌ನೆಟ್‌ ಪೂರೈಸುವ ದೀಪ, ಇನ್ನೂ ಹಲವು ಬಗೆಯ ನೂತನ ಉತ್ಪನ್ನಗಳು ಪ್ರದರ್ಶನಗೊಂಡಿವೆ. ಈ ಕುರಿತು ಸಂಪೂರ್ಣ ಮಾಹಿತಿ ಮುಂದಿನ ದಿನಗಳಲ್ಲಿ ಸಿಗಲಿದೆ. ಅದಕ್ಕೂ ಮುನ್ನ ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ತಂತ್ರಜ್ಞಾನ ಬಳಕೆ ಹಾಗೂ ಉಪಯೋಗದ ತಿಳಿಯೋಣ.

ಕರೆದರೆ ಓ ಎನ್ನುತ...

ಅಲೆಕ್ಸಾ, ಹದಿನೇಳು ಹತ್ತೊಂಬತ್ಲ ಎಷ್ಟು? ಅಲೆಕ್ಸಾ, ಉಪ್ಪಿಟ್ಟಿಗೆ ಏನೇನು ಹಾಕಬೇಕು? ಅಲೆಕ್ಸಾ, ಬೆಳಗ್ಗೆ 5ಕ್ಕೆ ಏಳಿಸು; ಅಲೆಕ್ಸಾ, ರೊಮ್ಯಾಂಟಿಕ್ ಸಾಂಗ್ ಕೇಳಿಸು...ಹೀಗೆ ಮಾತನಾಡಿದ ಎಲ್ಲವನ್ನೂ ಕೇಳುತ್ತ ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುವ ಸಹಾಯಕಿ ಅಥವಾ ಸ್ನೇಹಿತೆ ಅಲೆಕ್ಸಾ. ಅಮೆಜಾನ್ ಇಕೊ ಸ್ಮಾರ್ಟ್‌ಸ್ಪೀಕರ್‌ನಲ್ಲಿ ಅಳವಡಿಸಿದ ಧ್ವನಿ ಸಂವೇದಕ ತಂತ್ರಜ್ಞಾನ ಇಂದು ಹಲವು ಸಾಧನಗಳಲ್ಲಿ ಬಳಕೆಯಾಗುತ್ತಿದೆ. ಮನೆಯ ದೀಪ ಗಳನ್ನು ಬೆಳಗಿಸುವುದು, ಆರಿಸುವುದು ಸೇರಿದಂತೆ ಸ್ಮಾರ್ಟ್ ಹೋಂ ಕಾರ್ಯಗಳನ್ನು ನಿರ್ವಹಿಸುತ್ತಿದೆ.

ಅತಿ ಸೂಕ್ಷ್ಮವಾದ ಮೈಕ್ರೋಫೋನ್‍ಗಳನ್ನು ಅಳವಡಿಸಿರುವುದರಿಂದ ಗೂಗಲ್ ಹೋಂ ಸ್ಪೀಕರ್‌ ಗಿಂತ ಅಮೆಜಾನ್ ಇಕೊ ಹೆಚ್ಚು ಗಮನ ಸೆಳೆದಿದೆ. ಪ್ರಸ್ತುತ ಇಂಗ್ಲಿಷ್‍ನಲ್ಲಿ ಆಡಿದ ಮಾತುಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವ ಅಲೆಕ್ಸಾ, ಹೆಣ್ಣಿನ ಧ್ವನಿಯಲ್ಲಿ ಎಲ್ಲದಕ್ಕೂ ಉತ್ತರಿಸುತ್ತದೆ. ವೈಫೈ ಸಂಪರ್ಕದಿಂದ ಅಲೆಕ್ಸಾ ಹಲವು ಸಮಸ್ಯೆಗಳಿಗೆ ಅಂತರ್ಜಾಲ ಬಳಕೆ ಮಾಡಿ ಕ್ಲೌಡ್‍ನಲ್ಲಿ ಸಂಗ್ರಹಗೊಂಡಿರುವ ಮಾಹಿತಿಯನ್ನು ಹುಡುಕಿ ಹೇಳುತ್ತದೆ.

ಇಷ್ಟೇ ಅಲ್ಲದೆ ಹೇಳಿದ ವಸ್ತುಗಳನ್ನು ಪಟ್ಟಿ ಮಾಡಿ ಆನ್‍ಲೈನ್‍ನಲ್ಲಿ ಬುಕ್ ಮಾಡಬಹುದು. ಈಗಾಗಲೇ ಆ್ಯಪ್ ಕೂಡ ಬಿಡುಗಡೆಯಾಗಿರುವುದರಿಂದ ಮೊಬೈಲ್‍ಗಳಲ್ಲಿ ಅದನ್ನು ಅಳವಡಿಸಿಕೊಂಡು ಹೆಸರು ಹೇಳಿ ಕರೆ ಮಾಡಲು ಅಥವಾ ಸಂದೇಶ ರವಾನಿಸಲು ಹೇಳಬಹುದು. ಗೂಗಲ್‍ನಲ್ಲಿಯೂ ಹೇ ಗೂಗಲ್, ಎನ್ನುವ ಮೂಲಕ ಇಂಥದ್ದೇ ಸಹಕಾರ ಪಡೆಯಬಹುದು. ಅಲೆಕ್ಸಾ ಮೆಷಿನ್ ಆದರೂ ನಿತ್ಯವೂ ಹೊಸದನ್ನು ಹೇಳಿ ಕಲಿಸಬಹುದಾದ ಅವಕಾಶವಿದೆ. ಈಗಾಗಲೇ 15 ಸಾವಿರ ಕೌಶಲಗಳನ್ನು ಇದು ಹೊಂದಿದೆ. ಗ್ರಾಹಕರೂ ಹೊಸದನ್ನು ಸೇರಿಸಬಹುದಾಗಿದೆ. ಗೂಗಲ್‍ನ ಅಸಿಸ್ಟಂಟ್ ಸಹಕಾರವನ್ನು 1500 ಸ್ಮಾರ್ಟ್ ಹೋಂ ಸಾಧನಗಳು ಬಳಸಿಕೊಳ್ಳುತ್ತಿವೆ.

ಶೌಚಗೃಹ ಮತ್ತು ಸ್ನಾನಗೃಹವನ್ನೂ ಸಂಪೂರ್ಣ ಸ್ಮಾರ್ಟ್ ಮಾಡುವ ವ್ಯವಸ್ಥೆಗೆ ಅಲೆಕ್ಸಾ ಅಳವಡಿಕೆಯಾಗುತ್ತಿದೆ. ಗೂಗಲ್-ಅಮೆಜಾನ್ ಪೈಪೋಟಿ ಜನರನ್ನು ಮತ್ತಷ್ಟು ಸ್ಮಾರ್ಟ್ ಮಾಡುವ ಜತೆಗೆ ಸದಾ ಜತೆಗಿರುವ ಸ್ನೇಹಿತರನ್ನೂ ಸೃಷ್ಟಿಸಿಕೊಡುತ್ತಿವೆ.

* ₹2000ಕ್ಕೆ ಮೈಕ್ರೋಮ್ಯಾಕ್ಸ್ ಸ್ಮಾರ್ಟ್‌ಫೋನ್‌: ಭಾರತದಲ್ಲಿ ಆ್ಯಂಡ್ರಾಯ್ಡ್ ಒರಿಯೊ ‘ಗೊ’ ಆವೃತ್ತಿ

ಗೂಗಲ್ ತನ್ನ ಬಳಕೆದಾರರನ್ನು ವಿಸ್ತರಿಸಿಕೊಳ್ಳುವ ಉದ್ದೇಶದಿಂದ ಅತಿ ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ಒದಗಿಸಲು ಸಹಕಾರಿಯಾಗುವ ಆ್ಯಂಡ್ರಾಯ್ಡ್ ಒರಿಯೊ ‘ಗೊ’ ಆವೃತ್ತಿಯನ್ನು ಭಾರತದ ಮಾರುಕಟ್ಟೆಗೆ ತರುತ್ತಿದೆ. ದೇಶದ ಮೊಬೈಲ್ ಉತ್ಪಾದನಾ ಸಂಸ್ಥೆಗಳಾದ ಮೈಕ್ರೋಮ್ಯಾಕ್ಸ್, ಇಂಟೆಕ್ಸ್, ಲಾವಾ ಹಾಗೂ ಕಾರ್ಬನ್ ಸೇರಿ ಇತರ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮೈಕ್ರೋಮ್ಯಾಕ್ಸ್ ಇದೇ ತಿಂಗಳು ₹2000ಕ್ಕೆ ಅತ್ಯಾಧುನಿಕ ಆಯ್ಕೆಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ.

ಭಾರತದ ಕೋಟ್ಯಂತರ ಜನರೊಂದಿಗೆ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿದೆ. ಆ್ಯಂಡ್ರಾಯ್ಡ್ ಒರಿಯೊ ಗೊ ಆಪರೇಟಿಂಗ್ ಸಿಸ್ಟಂ ಅನ್ನು 510 ಎಂಬಿ-1ಜಿಬಿ ರ್‍ಯಾಮ್ ಹಾಗೂ 8ಜಿಬಿ ಮೆಮೊರಿ ಹೊಂದಿರುವ ಮೊಬೈಲ್‍ನಲ್ಲಿ ಕಾರ್ಯನಿರ್ವಹಿಸುವಂತೆ ಅಭಿವೃದ್ಧಿ ಪಡಿಸಲಾಗಿದೆ. ಈಗಾಗಲೇ ಮೀಡಿಯಾಟೆಕ್ ಹಾಗೂ ಕ್ವಾಲ್ಕಂ ಚಿಪ್ ಸಂಸ್ಥೆಗಳು ಪ್ರೊಸೆಸರ್ ಪೂರೈಕೆ ಮಾಡುತ್ತಿವೆ.

ಈ ಆ್ಯಂಡ್ರಾಯ್ಡ್ ಗೊ ಆವೃತ್ತಿಯಲ್ಲಿ ಹೊಸ ಅಪ್ಲಿಕೇಷನ್‍ಗಳು ಹಾಗೂ ಇದಕ್ಕಾಗಿಯೇ ಭಿನ್ನ ವ್ಯವಸ್ಥೆಯನ್ನು ಮಾಡಲಾಗಿದೆ.

* ಸಂಗ್ರಹಕ್ಕೆ ಹೆಚ್ಚು ಅವಕಾಶ: ಜಿಮೇಲ್, ಅಸಿಸ್ಟಂಟ್, ಮ್ಯಾಪ್ಸ್, ಪ್ಲೇಸ್ಟೋರ್ ಸೇರಿ ಅಗತ್ಯ ಆ್ಯಪ್‍ಗಳನ್ನು ಮಾತ್ರ ಮುಂಚಿತವಾಗಿಯೇ ಅಳವಡಿಸಲಾಗಿರುತ್ತದೆ. ಗೊ ಆವೃತ್ತಿ ಹಾಗೂ ಅದರೊಂದಿಗೆ ನೀಡಲಾಗುವ ಅಪ್ಲಿಕೇಷನ್‍ಗಳು ಸಹ ಹಗುರವಾಗಿದ್ದು, ಕಡಿಮೆ ಸಂಗ್ರಹ ಸ್ಥಳ ಬಳಸಿಕೊಳ್ಳುವುದರಿಂದ ಫೋನ್ ಮೆಮೊರಿಯಲ್ಲಿ ಅಧಿಕ ಸ್ಥಳ ಉಳಿದಿರುತ್ತದೆ. ಆ್ಯಂಡ್ರಾಯ್ಡ್‌ನ ಇನ್ನಾವುದೇ ಆವೃತ್ತಿ ಆಪರೇಟಿಂಗ್ ಸಿಸ್ಟಂಗಿಂತ ಅತಿ ಕಡಿಮೆ ಸ್ಥಳವನ್ನು ಇದು ಬಳಸುವುದು ಗಮನಾರ್ಹ.

* ಗೂಗಲ್ ಅಸಿಸ್ಟಂಟ್ ಗೊ: ಇದೇ ಮೊದಲ ಬಾರಿಗೆ 1ಜಿಬಿ ಅಥವಾ ಅದಕ್ಕಿಂತಲೂ ಕಡಿಮೆ ಮೆಮೊರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್ ಅಸಿಸ್ಟಂಟ್ ಸಿಗುತ್ತಿದೆ. ಸದಾ ನಮ್ಮ ಸಹಾಯಕ್ಕೆ ಸಿದ್ಧವಿರುವ ಈ ಆ್ಯಪ್‍ ಕೇಳಿದ ಪ್ರಶ್ನೆಗೆ ಉತ್ತರಿಸುವ ಜತೆಗೆ ಹೇಳುವುದನ್ನು ವೇಗವಾಗಿ ಮಾಡಬಲ್ಲದು.

* ಜಿಬೋರ್ಡ್‍: ಗೂಗಲ್‍ನ ಈ ಕಿಬೋರ್ಡ್‌ನಲ್ಲಿ 220 ಭಾಷೆಗಳ ಆಯ್ಕೆ ಇದೆ. ಆಟೋ ಕರೆಕ್ಟ್, ಧ್ವನಿ ಮೂಲಕ ಟೈಪಿಸುವುದು ಹಾಗೂ ಇಂಗ್ಲಿಷ್ ಅಕ್ಷರಗಳ ಮೂಲಕ ಇತರೆ ಭಾಷೆಯಲ್ಲಿ ಟೈಪಿಸುವ ಆಯ್ಕೆಗಳನ್ನು ಹೊಂದಿದೆ. ಇಮೋಜಿ, ಜಿಫ್‍ಗಳನ್ನೂ ಹೊಂದಿದೆ.

*ಗೂಗಲ್ ಪ್ಲೇ ಪ್ರೊಟೆಕ್ಟ್: ಮೊಬೈಲ್‍ನೊಂದಿಗೆ ಮುಂಚಿತವಾಗಿಯೇ ಸಿಗುವ ಈ ಆ್ಯಪ್‍ ಇತರೆ ಅಪ್ಲಿಕೇಷನ್ ಹಾಗೂ ಮಾಹಿತಿ ಸಂಗ್ರಹವನ್ನು 24/7 ಸುರಕ್ಷಿತವಾಗಿಡಲು ಸಹಕಾರಿ.

* ಫೈಲ್ಸ್ ಗೊ: ಡೌನ್‍ಲೋಡ್ ಮಾಡಿದ ಅಥವಾ ನೇರವಾಗಿ ಮೊಬೈಲ್‍ಗೆ ಉಳಿಸಿಕೊಂಡ ಫೈಲ್‍ಗಳನ್ನು ಹುಡುಕುವುದು ಇದರಿಂದ ಸುಲಭವಾಗಲಿದೆ. ಎಲ್ಲವೂ ಫೈಲ್ಸ್ ಗೊ ಒಳಗೆ ಬೇರೆ ಬೇರೆ ಕಡತಗಳಾಗಿ ಕೂರುವುದರಿಂದ ಅನಗತ್ಯ ಫೈಲ್‍ಗಳನ್ನು ತೆಗೆದು ಹಾಕುವುದು ಸರಳವಾಗಲಿದೆ.

ಕೆಲವು ಅಧ್ಯಯನಗಳ ಪ್ರಕಾರ 2020ಕ್ಕೆ ಭಾರತದಲ್ಲಿ 35 ಕೋಟಿ ಸ್ಮಾರ್ಟ್‌ಫೋನ್‌ಗಳು ಬಳಕೆಯಲ್ಲಿ ಇರಲಿವೆ. ಪ್ರಸ್ತುತ ಭಾರತದಲ್ಲಿ 4ಜಿ ಡಾಟಾಗೆ ಬಳಕೆಯಾಗುವ ಸ್ಮಾರ್ಟ್‌ಫೋನ್‌ಗೆ ₹6 ಸಾವಿರ ನೀಡಬೇಕು. ಗೂಗಲ್‍ನ ಈ ಯೋಜನೆ ಮೂಲಕ ಸ್ಮಾರ್ಟ್‌ಫೋನ್‌ ಬಳಕೆ ಮಾಡುವವರ ಸಂಖ್ಯೆ ಏರಿಕೆಯಾಗಲಿದೆ.  

ಭಾರತದಲ್ಲಿ ಇಂಟರ್ನೆಟ್‌ ಬಳಕೆ:

* ಇಂಟರ್‌ನೆಟ್‌ ಬಳಸುವವರು- 45.5 ಕೋಟಿ- ಶೇ 95ರಷ್ಟು ಮೊಬೈಲ್ ಮೂಲಕ

* ಫೇಸ್‍ಬುಕ್ ಬಳಕೆ- 24.1 ಕೋಟಿ ಜನರು- 2016ರಿಂದ ಶೇ 70ರಷ್ಟು ಏರಿಕೆ

* ವಾಟ್ಸ್‌ಆ್ಯಪ್ ಬಳಕೆ- 20 ಕೋಟಿ ಜನರು- 2016ರಿಂದ ಶೇ 100ರಷ್ಟು ಹೆಚ್ಚಳ

* ಖರೀದಿಗಾಗಿ ಆ್ಯಪ್‍ಗಳ ಬಳಕೆ- 6 ಕೋಟಿ ಜನ- 2017ಕ್ಕೆ 10 ಕೋಟಿ ಗ್ರಾಹಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT