ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನದೊಳಗೆ ಹೊಯ್ದಾಟದ ‘ತೆರೆಗಳು’

Last Updated 10 ಜನವರಿ 2018, 19:30 IST
ಅಕ್ಷರ ಗಾತ್ರ

ಕಣ್ಣೊಳಗೊಂದು ಭಾವ, ಮಾತಿನೊಳಗೊಂದು ಮೌನ, ದೇಹಭಂಗಿಗಳಲ್ಲೊಂದು ಸಂವೇದನೆ, ಇಂಥ ಹಾವಭಾವವನ್ನು ತನುಮನದಲ್ಲಿ ತುಂಬಿಕೊಂಡು ಪ್ರೇಕ್ಷಕರ ಕಣ್ಣಿನೊಟ್ಟಿಗೆ ಮಾತನಾಡುವ ನಟ ಜೀವಂತ...

ಜೀವಂತ ರಂಗಪಯಣ ಎಂಬ ಅಡಿ ಬರಹದೊಡನೆ ಸುಮಾರು 15 ವರ್ಷಗಳಿಂದ ರಂಗಭೂಮಿ ಚಟುವಟಿಕೆಗಳಲ್ಲಿ ಉತ್ಸಾಹ ತೋರಿರುವ ತಂಡ ‘ರಂಗಸಿರಿ’. ಬೆಂಗಳೂರು ನಾಟಕೋತ್ಸವದಲ್ಲಿ ‘ರಂಗಸಿರಿ’ ಕಲಾವಿದರು ಪಿ. ಲಂಕೇಶ್ ರಚನೆಯ ‘ತೆರೆಗಳು’ ನಾಟಕ ಪ್ರದರ್ಶಿಸಲಿದ್ದಾರೆ. ಈ ತಂಡದ ಪ್ರತಿಭೆಯ ಅನಾವರಣಕ್ಕೆ ಕಲಾಗ್ರಾಮ ಮಲ್ಲತ್ತಹಳ್ಳಿಯಲ್ಲಿ ವೇದಿಕೆ ಸಿದ್ಧವಾಗಿದೆ.

ಬೆಂಗಳೂರಿನವರೇ ಆದ ಬಿ.ವಿ. ವಿನಯ್‌ ಈ ನಾಟಕದ ನಿರ್ದೇಶಕರು. ಎಂ.ಟೆಕ್ ಓದಿರುವ ಇವರು 15 ವರ್ಷಗಳಿಂದ ರಂಗಸಿರಿ ತಂಡದಲ್ಲಿದ್ದಾರೆ. ಇದೀಗ ಗ್ರೀನ್ ಆಪಲ್ ಫಿಲ್ಮ್ ಪ್ರೊಡಕ್ಷನ್ ಹೌಸ್‌ನಲ್ಲಿ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ.

ಶಾಲಾ, ಕಾಲೇಜು ದಿನಗಳಿಂದಲೂ ನಟನೆಯಲ್ಲಿ ಒಲವು ಬೆಳೆಸಿಕೊಂಡ ಇವರು ರಂಗಸಿರಿ ತಂಡದಲ್ಲಿ ಇದುವರೆಗೆ ಸುಮಾರು 15ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ನಟರಾಜ ಹೊನ್ನವಳ್ಳಿ, ರಾಜಾರಾಂ ಅವರ ಗರಡಿಯಲ್ಲಿ ಪಳಗಿದವರು. ‘ನಾಟಕದಲ್ಲಿ ಅಭಿನಯಿಸುತ್ತಾ, ನಿರ್ದೇಶನಕ್ಕಿಳಿಯುವುದು ಒಂದು ಸವಾಲು’ ಎನ್ನುವುದು ಅವರ ಅಭಿಪ್ರಾಯ.

‘ತೆರೆಗಳು’ ವಿಶಿಷ್ಟ ನಾಟಕ. ನಾಲ್ಕು ನಟರನ್ನು ಕೇಂದ್ರವಾಗಿರಿಸಿಕೊಂಡು ನಡೆಯುವ ಈ ನಾಟಕ ಒಬ್ಬ ವ್ಯಕ್ತಿಯ ಸುತ್ತಮುತ್ತ ನಡೆಯುವ ಆಗುಹೋಗುಗಳನ್ನು ಹೇಳ ಹೊರಟಿದೆ. ಲೇಖಕನ ಅಂತರಾಳದಲ್ಲಿ ಎದ್ದಿರುವ ಪ್ರಾಯಶ್ಚಿತ, ಪಶ್ಚಾತ್ತಾಪ, ತಪ್ಪು ಎಂಬ ತೆರೆಗಳನ್ನು ನೋಡುಗರಿಗೆ ದಾಟಿಸಲು ವಿನಯ್ ಅವರು ಆಯ್ದುಕೊಂಡ ಹಾದಿ ಹಾಸ್ಯ ಮತ್ತು ವಿಡಂಬನೆ.

ನಾವೆಲ್ಲರೂ ತಿಳಿದೋ, ತಿಳಿಯದೆಯೋ ತಪ್ಪುಗಳನ್ನು ತಪ್ಪುಗಳನ್ನು ಮಾಡಿರುತ್ತೇವೆ. ತಪ್ಪುಗಳಲ್ಲಿ ಸಣ್ಣ, ದೊಡ್ಡ ಎಂಬ ವ್ಯತ್ಯಾಸ ಇರುವುದಿಲ್ಲ. ಸಣ್ಣದಿರಲಿ, ದೊಡ್ಡದಿರಲಿ ತಪ್ಪು ಎಂದ ಮೇಲೆ ಅದು ತಪ್ಪೇ. ವ್ಯಕ್ತಿಯಲ್ಲಿರುವ ಸರಿಗಳನ್ನು ಮರೆತುಬಿಡುವ ಸಮಾಜ ತಪ್ಪುಗಳನ್ನು ಎತ್ತಿತೋರಿಸುತ್ತದೆ. ಮನುಷ್ಯ ತಾನು ಮಾಡುವ ತಪ್ಪುಗಳನ್ನು ಸರಿ ಎಂದು ಸಾಧಿಸಲು ಹೆಣಗುತ್ತಾನೆ. ಕೊನೆಗೆ ಪ್ರಾಯಶ್ಚಿತ ಹಾಗೂ ಪಶ್ಚಾತ್ತಾಪ ಮಾತ್ರ ತಪ್ಪುಗಳಿಗೆ ದಿಟ್ಟ ಉತ್ತರವಾಗುತ್ತವೆ ಎನ್ನುವುದು ನಾಟಕದ ಆಶಯ.

‘ಪ್ರೇಕ್ಷಕರ ಮನಸಿನಲ್ಲಿ ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕುವ ನಾಟಕವು ನೋಡುಗರೇ ಉತ್ತರ ಕಂಡುಕೊಂಡು ಸಾವಧಾನವಾಗಿ ಯೋಚಿಸಲು ಅಣಿಗೊಳಿಸುತ್ತದೆ’ ಎನ್ನುವುದು ನಿರ್ದೇಶಕ ವಿನಯ್ ಅವರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT