ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜರಥ’ದ ಮನೋಗತ

Last Updated 11 ಜನವರಿ 2018, 19:30 IST
ಅಕ್ಷರ ಗಾತ್ರ

ಹುಟ್ಟಿದ್ದು ಮಂಗಳೂರಿನಲ್ಲಿಯೇ ಆದರೂ ಬೆಳೆದಿದ್ದೆಲ್ಲ ಮುಂಬೈನಲ್ಲಾಗಿದ್ದರಿಂದ ಈ ಹುಡುಗಿಗೆ ಕನ್ನಡ ಅಪರಿಚಿತ ಭಾಷೆಯೇ ಆಗಿತ್ತು. ನಂತರ ನಟನೆಯ ಗೀಳು ಹತ್ತಿಸಿಕೊಂಡು ಹಿಂದಿ ಕಿರುತೆರೆ ಧಾರಾವಾಹಿಗಳು ಮತ್ತು ಕಿರುಚಿತ್ರಗಳಲ್ಲಿ, ಜಾಹೀರಾತುಗಳ ಮೂಲಕ ಕ್ಯಾಮೆರಾ ಎದುರಿಸುವುದರಲ್ಲಿ ಪಳಗಿದ ಆವಂತಿಕಾ ಶೆಟ್ಟಿ, ಹಿರಿತೆರೆಗೆ  ನಾಯಕಿಯಾಗಿ ಪದಾರ್ಪಣೆಗೊಂಡಿದ್ದು ಕನ್ನಡದಲ್ಲಿಯೇ. 2015ರಲ್ಲಿ ತೆರೆಕಂಡ ‘ರಂಗಿತರಂಗ’ ಸಿನಿಮಾದ ಇಬ್ಬರು ನಾಯಕಿಯರಲ್ಲಿ ಆವಂತಿಕಾ ಕೂಡ ಒಬ್ಬರು. ಈ ಸಿನಿಮಾ ಭರ್ಜರಿ ಯಶಸ್ಸನ್ನೂ ಕಂಡಿತು. ಈ ಯಶಸ್ಸು ಅವರಿಗೆ ಕನ್ನಡವನ್ನು ಕಲಿಯಲೂ ಪ್ರೇರೇಪಿಸಿತು. ಈಗ ಈ ಹುಡುಗಿ, ಶಬ್ದಗಳಿಗಾಗಿ ತಡಕಾಡುತ್ತಲೇ ಆದರೂ ಕನ್ನಡದಲ್ಲಿಯೇ ಮಾತನಾಡುವಷ್ಟು ಸಿದ್ಧರಾಗಿದ್ದಾರೆ.

ಯಶಸ್ವಿ ಸಿನಿಮಾದ ಮೂಲಕ ಪರಿಚಿತರಾದ ನಟಿಯರಿಗೆ ಸಾಲು ಸಾಲು ಅವಕಾಶ ಬರುವುದು ಗಾಂಧಿನಗರದಲ್ಲಿ ಸಾಮಾನ್ಯವಾಗಿ ಕಂಡುಬರುವ ಸಂಗತಿ. ಹಾಗೆ ಬಂದ ಅವಕಾಶಗಳನ್ನೆಲ್ಲ ಒಪ್ಪಿಕೊಂಡು ಸರತಿ ಸೋಲಿನ ಸುಳಿಯಲ್ಲಿ ಸಿಲುಕಿ ಮಾಯವಾಗಿಬಿಟ್ಟ ಉದಾಹರಣೆಗಳೂ ಸಾಕಷ್ಟಿವೆ. ಆದರೆ ಆವಂತಿಕಾ ಈ ವಿಷಯದಲ್ಲಿ ತುಂಬ ಚ್ಯೂಸಿ. ‘ರಂಗಿತರಂಗ’ದ ಯಶಸ್ಸಿನ ನಂತರವೂ ಅವರು ಇದುವರೆಗೆ ನಟಿಸಿದ್ದು ಮೂರೇ ಸಿನಿಮಾಗಳು. ಅವುಗಳಲ್ಲಿ ಎರಡು ಇನ್ನೂ ಬಿಡುಗಡೆಯಾಗಬೇಕಾಗಿವೆ.

‘‘ಒಂದು ಸಿನಿಮಾ ಯಶಸ್ವಿಯಾದಾಗ ಅದರಲ್ಲಿ ನಟಿಸಿದ ಕಲಾವಿದರ ಮೇಲೆ ಜನರ ನಿರೀಕ್ಷೆಯೂ ಹೆಚ್ಚಾಗಿರುತ್ತದೆ. ಆದ್ದರಿಂದ ಬಂದ ಅವಕಾಶಗಳನ್ನೆಲ್ಲ ಒ‍ಪ್ಪಿಕೊಳ್ಳುತ್ತಾ ಹೋದರೆ ಆ ಪಾತ್ರಗಳಿಗೆ ನ್ಯಾಯ ಒದಗಿಸಲು ಆಗುವುದಿಲ್ಲ. ಅಲ್ಲದೇ ನಾನು ಕನ್ನಡವನ್ನು ಕಲಿಯಲು ಶುರುಮಾಡಿದ್ದು ‘ರಂಗಿತರಂಗ’ ಸಿನಿಮಾ ಸಮಯದಲ್ಲಿ. ಅದನ್ನು ಪೂರ್ತಿ ಕಲಿತುಕೊಂಡು, ಕಥೆ, ನನ್ನ ಪಾತ್ರದ ಬಗ್ಗೆ ಓದಿ ಅರಿತುಕೊಂಡು ಸಿನಿಮಾ ಮಾಡಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಆದ್ದರಿಂದಲೇ ನಾನು ನನ್ನ ಪಾತ್ರಗಳಿಗೆ ಮಹತ್ವ ಇರುವ ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳಲು ನಿರ್ಧರಿಸಿದೆ. ‘ರಂಗಿತರಂಗ’ದ ನಂತರ ‘ಕಲ್ಪನಾ 2’ ಸಿನಿಮಾ ಒಪ್ಪಿಕೊಂಡೆ’’ ಎನ್ನುತ್ತಾರೆ ಅವರು.

ಟಿ.ವಿ. ಜಾಹೀರಾತು, ಧಾರಾವಾಹಿ, ಕಿರು ಚಿತ್ರಗಳು ಹೀಗೆ ವಿವಿಧ ಪ್ರಕಾರಗಳಲ್ಲಿ ನಟಿಸಿದ ಅನುಭವ ಅವರೊಳಗಿನ ನಟಿಯನ್ನು ತಿದ್ದಿ ಸಿನಿಮಾ ಮಾಧ್ಯಮಕ್ಕೆ ಸಿದ್ಧಗೊಳಿಸಿದೆಯಂತೆ.

‘ನಾನು ಒಪ್ಪಿಕೊಳ್ಳುವ ಪಾತ್ರದಲ್ಲಿ ನಟನೆಗೆ ಸಾಕಷ್ಟು ಅವಕಾಶ ಇರಬೇಕು‍’ ಎನ್ನುವ ಆವಂತಿಕಾ, ‘ನಟನೆ ಎನ್ನುವುದು ನನ್ನ ಪಾಲಿಗೆ ವೃತ್ತಿ ಅಲ್ಲವೇ ಅಲ್ಲ. ಅದು ನನ್ನ ಜೀವನ. ನಾನು ನಟನೆಯಲ್ಲಿ ದೈವತ್ವವನ್ನು ಕಾಣುತ್ತೇನೆ. ಅದಕ್ಕಾಗಿ ಎಷ್ಟು ಬೇಕಾದರೂ ಕಷ್ಟಪಡುತ್ತೇನೆ. ಅಭಿನಯ ನಾನು ತುಂಬ ಭಾವನಾತ್ಮಕವಾಗಿ ಅನುಭವಿಸುವ ಕೆಲಸ’ ಎನ್ನುತ್ತಾರೆ.

ಇದೇ ತಿಂಗಳ 19ರಂದು ಆವಂತಿಕಾ ನಟಿಸಿರುವ ‘ರಾಜು ಕನ್ನಡ ಮೀಡಿಯಂ’ ಸಿನಿಮಾ ಬಿಡುಗಡೆಯಾಗುತ್ತಿದೆ. ಹಾಗೆಯೇ ‘ರಾಜರಥ’ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ. ಈ ಎರಡೂ ಚಿತ್ರಗಳಲ್ಲಿ ಪೂರ್ತಿ ಬೇರೆಯದೇ ರೀತಿಯ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರಂತೆ.

‘‘ರಾಜು ಕನ್ನಡ ಮೀಡಿಯಂ’ ಸಿನಿಮಾದ ಪ್ರಥಮಾರ್ಧದಲ್ಲಿ ಪ್ರೇಕ್ಷಕ ನನ್ನ ಪಾತ್ರವನ್ನು ದ್ವೇಷಿಸುತ್ತಾನೆ. ರಾಜರಥ ಸಿನಿಮಾದಲ್ಲಿ ನನ್ನ ಪಾತ್ರವನ್ನು ಎಲ್ಲರೂ ಪ್ರೀತಿಸುತ್ತಾರೆ’’ ಎಂಬುದು ಅವರ ವ್ಯಾಖ್ಯಾನ.

‘ರಾಜು ಕನ್ನಡ ಮೀಡಿಯಂ ಸಿನಿಮಾಕ್ಕೆ ನಾನು ಡಬ್ಬಿಂಗ್‌ ಮಾಡಿಲ್ಲ. ಆದ್ದರಿಂದ ಆ ಪಾತ್ರ ಹೇಗೆ ಬಂದಿದೆ ಎಂದು ನನಗೂ ಗೊತ್ತಿಲ್ಲ. ಆದರೆ ಮೊದಲಾರ್ಧದಲ್ಲಿ ಸ್ವಾರ್ಥಿ ಹುಡುಗಿಯ ಪಾತ್ರ. ದ್ವಿತೀಯಾರ್ಧದಲ್ಲಿ ಒಳ್ಳೆಯ ಹುಡುಗಿಯಾಗಿ ರೂಪಾಂತರವಾಗುತ್ತೇನೆ. ಆದರೆ ‘ರಾಜರಥ’ದಲ್ಲಿ ನನ್ನ ಹಿಂದಿನ ‘ರಂಗಿತರಂಗ’, ‘ಕಲ್ಪನಾ 2’ ಎರಡೂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ತುಂಬ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮೇಘಾ ಎಂಬುದು ಪಾತ್ರದ ಹೆಸರು. ತುಂಬ ಘನವಾದ, ಎಲ್ಲರೂ ಇಷ್ಟಪಡುವಂಥ ಪಾತ್ರ ಅದು’ ಎಂದು ಉತ್ಸಾಹದಿಂದ ವಿವರಿಸುತ್ತಾರೆ.

ಯಾವುದೇ ಪಾತ್ರ ಒಪ್ಪಿಕೊಂಡರೂ ಅದಕ್ಕೆ ಸಂಪೂರ್ಣವಾಗಿ ತಮ್ಮನ್ನು ಸಿದ್ಧಪಡಿಸಿಕೊಳ್ಳುವುದು ಆವಂತಿಕಾ ಅವರ ಸ್ವಭಾವ. ‘ನನಗೆ ನಟನಾಶಾಲೆಯಲ್ಲಿ ಒಂದು ಪಾತ್ರಕ್ಕೆ ಹೇಗೆ ಸಿದ್ಧವಾಗಬೇಕು ಎಂಬುದನ್ನು ಹೇಳಿಕೊಟ್ಟಿದ್ದಾರೆ. ಪಾತ್ರದ ಕುರಿತು ಮಾಹಿತಿ ಸಿಕ್ಕಿದ ಮೇಲೆ ಅದನ್ನು ನೋಟ್‌ ಮಾಡಿಕೊಳ್ಳುತ್ತೇನೆ. ಆ ಪಾತ್ರದ ಹಿನ್ನೆಲೆ ಕಥೆಯನ್ನು ನಿರ್ದೇಶಕರೊಂದಿಗೆ ಚರ್ಚಿಸುತ್ತೇನೆ. ಅವಳು ಹೇಗೆ ನಡೆಯುತ್ತಾಳೆ, ಹೇಗೆ ಮಾತನಾಡುತ್ತಾಳೆ, ಆಂಗಿಕ ಅಭಿನಯ ಹೇಗಿರಬೇಕು ಎಂಬ ಸಣ್ಣ ಸಣ್ಣ ಸಂಗತಿಗಳನ್ನೂ ಕೇಳಿ ತಿಳಿದುಕೊಳ್ಳುತ್ತೇನೆ. ನಂತರ ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಪಾತ್ರಕ್ಕೆ ಜೀವತುಂಬುತ್ತೇನೆ’ ಎಂದು ಅವರು ಪಾತ್ರಸಿದ್ಧತೆಯ ಕುರಿತು ವಿವರಿಸುತ್ತಾರೆ.

ಆವಂತಿಕಾ ಭರನಾಟ್ಯ ಕಲಾವಿದೆ. ಭರತನಾಟ್ಯದಲ್ಲಿ ವಿಶಾರದಾ ಮುಗಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕರಾಟೆಯನ್ನೂ ಕಲಿಯುತ್ತಿದ್ದಾರೆ. ಇದು ಅವರ ಫಿಟ್‌ನೆಸ್‌ ಕಾಪಾಡಿಕೊಳ್ಳಲೂ ನೆರವಾಗುತ್ತಿದೆ. 

ಚಿತ್ರರಂಗದಲ್ಲಿ ನಟಿಯರಿಗೆ ಎಷ್ಟು ಮಾನ್ಯತೆ ಸಿಗಬೇಕೋ ಅಷ್ಟು ಸಿಗುತ್ತಿಲ್ಲ ಎಂಬ ಕುರಿತೂ ಅವರಿಗೆ ಬೇಸರವಿದೆ.

‘ಚಿತ್ರರಂಗದಲ್ಲಿ ಮಾತ್ರ  ಅಂತಲ್ಲ, ಇಡೀ ಜಗತ್ತಿನ ಯಾವುದೇ ಕ್ಷೇತ್ರದಲ್ಲಿಯೂ ಲಿಂಗಸಮಾನತೆ ಇಲ್ಲ. ಸಮಾನತೆ ಕುರಿತ ಮಾತುಗಳು ಕೇಳಲಿಕ್ಕೆ ಚೆನ್ನಾಗಿರುತ್ತವೆ. ಆದರೆ ವಾಸ್ತವ ಪೂರ್ತಿ ಬೇರೆಯೇ ಆಗಿರುತ್ತದೆ. ಪ್ರತಿದಿನದ ಬದುಕಿನಲ್ಲಿಯೂ ಮನೆಯಲ್ಲಿ ಹೆಣ್ಣುಮಕ್ಕಳಿಗಿಂತ ಹುಡುಗರಿಗೇ ಹೆಚ್ಚು ಸ್ವಾತಂತ್ರ್ಯವಿರುತ್ತದೆ. ಅದೊಂದು ಮನಸ್ಥಿತಿಯೇ ಆಗಿಹೋಗಿದೆ. ಇದಕ್ಕೆ ಅಪರೂಪಕ್ಕೆ ಕೆಲವು ಅಪವಾದಗಳೂ ದೊರಕಬಹುದು. ಆದರೆ ಒಟ್ಟಾರೆಯಾಗಿ ಪರಿಸ್ಥಿತಿ ಅಸಮತೋಲಿತವಾಗಿಯೇ ಇದೆ. ಯಾಕೆಂದರೆ ಪುರುಷ ಯಾವಾಗಲೂ ತಾನು ಶ್ರೇಷ್ಠ ಎಂದೇ ಭಾವಿಸುತ್ತಿರುತ್ತಾನೆ. ಮಹಿಳೆಯೇ ಇದರ ವಿರುದ್ಧ ಹೋರಾಡುವುದರ ಹೊರತಾಗಿ ಬೇರೆ ಯಾವ ದಾರಿಯೂ ಇಲ್ಲ. ಶೋಷಣೆಯನ್ನು ಸಹಿಸಿಕೊಂಡರೆ ಅದು ಇನ್ನಷ್ಟು ಹೆಚ್ಚುತ್ತದೆ. ಮಹಿಳೆಯರೇ ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು. ಇಷ್ಟೆಲ್ಲ ಆದರೂ ಪರಿಸ್ಥಿತಿ ಬದಲಾಗಿಬಿಡುತ್ತದೆಯೇ? ಈ ಪ್ರಶ್ನೆಗೆ ಉತ್ತರ ನನಗೂ ಗೊತ್ತಿಲ್ಲ. ನಾನು ನೋಡಿದಂತೆ ಸಿನಿಮಾರಂಗದಲ್ಲಿಯೂ ಪರಿಸ್ಥಿತಿ ಹೆಚ್ಚೆನೂ ಬದಲಾಗಿಲ್ಲ’ ಎಂದು ಸುದೀರ್ಘವಾಗಿಯೇ ವಿವರಿಸುವ ಅವರು ‘ಕನ್ನಡ, ಹಿಂದಿ ಚಿತ್ರರಂಗ ಅಷ್ಟೇ ಅಲ್ಲ, ಹಾಲಿವುಡ್‌ ಚಿತ್ರರಂಗದಲ್ಲಿಯೂ ಈ ಸಮಸ್ಯೆ ಇದೆ’ ಎಂದು ಹೇಳಲು ಮರೆಯುವುದಿಲ್ಲ.

‘ರಾಜರಥ’ ಸಿನಿಮಾದಲ್ಲಿ ಪೂರ್ತಿಯಾಗಿ ತೊಡಗಿಕೊಂಡಿದ್ದರಿಂದ ಆವಂತಿಕಾ ಬೇರಾವ ಸಿನಿಮಾಗಳಿಗೂ ಸಹಿ ಮಾಡಿಲ್ಲ. ಸದ್ಯ ಒಂದು ತೆಲುಗು ಚಿತ್ರದಲ್ಲಿ ನಟಿಸುವ ಅವಕಾಶ ಬಂದಿದ್ದು, ಚರ್ಚೆ ನಡೆಸುತ್ತಿದ್ದಾರೆ. ಹಾಗೆಯೇ ಕನ್ನಡದಲ್ಲಿಯೂ ಒಂದಿಷ್ಟು ಕಥೆಗಳನ್ನು ಕೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT