ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಧರ್ಮ ಏಕೆ ಮತ್ತು ಹೇಗೆ ಸ್ವತಂತ್ರ ಧರ್ಮ?

Last Updated 11 ಜನವರಿ 2018, 19:30 IST
ಅಕ್ಷರ ಗಾತ್ರ

ಲಿಂಗಾಯತ ಧರ್ಮವನ್ನು ಒಂದು ಸ್ವತಂತ್ರ ಧರ್ಮ ಎಂದು ಘೋಷಿಸಬೇಕು ಎಂದು ನಡೆಯುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಈ ಚರ್ಚೆ ಎತ್ತಲಾಗಿದೆ. ಲಿಂಗಾಯತ ಧರ್ಮ, ಯಾವತ್ತೂ ಒಂದು ಸ್ವತಂತ್ರ ಧರ್ಮವಾಗಿಯೇ ಇದ್ದುಕೊಂಡುಬಂದಿದೆ. ಅದನ್ನು ಯಾವುದೇ ಸಮುದಾಯ, ಸರ್ಕಾರ ಗುರುತಿಸದೇ ಇದ್ದಿರಬಹುದು ಅಷ್ಟೆ. ಹಾಗಾದರೆ ಅದು ಏಕೆ ಮತ್ತು ಹೇಗೆ ಒಂದು ಸ್ವತಂತ್ರ ಧರ್ಮ?

ಮೊದಲನೆಯದಾಗಿ, ಲಿಂಗಾಯತ ಧರ್ಮವು ಸಿಂಧೂ ನಾಗರಿಕತೆಯ ಕಾಲದಲ್ಲಿ ಕೃಷಿಕ ದ್ರಾವಿಡರ ಬದುಕಿನಂಗಳದಿಂದ ಹೊರಹೊಮ್ಮಿದ, ಮೂಲಪುರುಷರನ್ನುಳ್ಳ ಬೌದ್ಧ ಜೈನಾದಿ ಸಾಂಸ್ಥಿಕ ಸ್ವರೂಪದ ಧರ್ಮಗಳಿಗಿಂತ ವಿಭಿನ್ನವಾದ, ವಿಶ್ವಾತ್ಮಕ ಧರ್ಮಪರಂಪರೆಗಳಿಗೆ (Cosmic Religion) ಸೇರಿದ, ಲೋಕಾಯತ-ಶಾಕ್ತ- ಶೈವ ಪರಂಪರೆಯ ಒಂದು ಟಿಸಿಲು. ಇದು ದಕ್ಷಿಣ ಭಾರತದಲ್ಲಿ ವಚನಪೂರ್ವ ಹಾಗೂ ವಚನೋತ್ತರ ಯುಗಗಳುದ್ದಕ್ಕೂ ಅಸ್ತಿತ್ವದಲ್ಲಿದ್ದು, ಸ್ಪಷ್ಟವಾದ ಸ್ವತಂತ್ರ ಆಕೃತಿ ಪಡೆದು ಅರಳಿದೆ. ಡಾ.ಕಲಬುರ್ಗಿಯವರು ಸರಿಯಾಗಿಯೇ ಊಹಿಸಿದ್ದಂತೆ ನಿಜಕ್ಕೂ ಅದೊಂದು ಮತನಿರಸನ ಧರ್ಮ. ಅದಕ್ಕೆ ಯಾರೂ ಸಂಸ್ಥಾಪಕರೆಂಬುವವರು ಇಲ್ಲ.

ಅತಿ ಪ್ರಾಚೀನ ಭಾರತೀಯ ನಾಸ್ತಿಕ ಪರಂಪರೆಯಾದ ಲೋಕಾಯತದ ಜೀವಂತ ಕುರುಹೇ ಶಿವಲಿಂಗ. ಶಿವಲಿಂಗವು ದೇವರಲ್ಲ, ಅದೊಂದು ಸೃಷ್ಟಿತತ್ತ್ವ. ಹೆಣ್ಣು-ಗಂಡಿನ ಸಂಯೋಗದಿಂದ ಸೃಷ್ಟಿ ಎಂಬ ಉದಾತ್ತ ಕಲ್ಪನೆಯ ಕುರುಹು ಅದು. ಶಿವ– ಪಾರ್ವತಿಯರು ಅಂತಹ ತಾಂತ್ರಿಕಾಚಾರದ ಪೂಜಾರಿಗಳು. ಲಿಂಗಾಯತರು ಧರಿಸಿಕೊಳ್ಳುವ ಇಷ್ಟಲಿಂಗವು ಈ ಪೂಜಾರಿಗಳ ಅಂದರೆ ಶಿವ-ಪಾರ್ವತಿಯರ ಸಂಕೇತವಾದ ಶಿವಲಿಂಗಕ್ಕೆ ಸಂಬಂಧಿಸಿದುದೂ, ಮತ್ತೂ ಪಾರ್ವತಿಯ ತಾಂತ್ರಿಕ ಶಕ್ತಿಯ ಮೂಲವಾಗಿದ್ದುದೂ ಆದ ಚಂದ್ರನ ಕುರುಹು. ಆ ಇಷ್ಟಲಿಂಗವು ಸೂರ್ಯ ಅಥವಾ ಪರಬ್ರಹ್ಮದ ಸಂಕೇತವಲ್ಲ. ದ್ರಾವಿಡರು ಸೋಮಸಂಪ್ರದಾಯದವರೇ ಹೊರತು, ಸೂರ್ಯೋಪಾಸಕರಲ್ಲ. ಅಂತೆಯೇ, ಲಿಂಗಾಯತರು ಧರಿಸಿಕೊಳ್ಳುವ ತ್ರಿಪುಂಡ್ರವೂ ಕೂಡ ತಾಂತ್ರಿಕರು ಹಣೆ ಅಥವಾ ದೇಹದ ಮೇಲೆ ತೊಡೆದುಕೊಳ್ಳುತ್ತಿದ್ದ ಅರ್ಧ ಚಂದ್ರನ ಕುರುಹು. ಅರ್ಧಚಂದ್ರನು ತಾಂತ್ರಿಕ ಪಂಥದ ಕುರುಹು. ಲಿಂಗಾಯತರು ಲಿಂಗ ಪೂಜೆಮಾಡುವಾಗ ಅಂಗೈಯಲ್ಲಿ ವಿಭೂತಿಯಿಂದ ತ್ರಿಕೋನಾಕಾರದ ಪೀಠ ರಚಿಸಿ ಅದರ ಮೇಲೆ ಇಷ್ಟಲಿಂಗವನ್ನು ಇಟ್ಟು ಪೂಜಿಸುತ್ತಾರೆ. ಆ ತ್ರಿಕೋನವು ಮುದ್ರೆ, ಅರ್ಥಾತ್ ಪೀಠ ಅರ್ಥಾತ್ ಯೋನಿ. ಯೋನಿಯ ಮೇಲೆ ಶಿವಲಿಂಗವನ್ನು ಸ್ಥಾಪಿಸಿ ಧ್ಯಾನಿಸುವುದು ಎಂದರೆ ಶಿವ ಶಕ್ತಿಯರನ್ನು ಕೂಡಿ
ಸುವುದೆಂದೇ ಅರ್ಥ. ಶರಣರು ತಾಂತ್ರಿಕ ವಿರೋಧಿಗಳಾಗಿದ್ದರೂ ‘ಶರಣ ಸತಿ, ಲಿಂಗ ಪತಿ’ ಎಂಬುದನ್ನು ಒಪ್ಪಿಕೊಂಡಿದ್ದರು. ಅಂದರೆ, ಅವರು ತಾಂತ್ರಿಕ ಪರಂಪರೆಯ ಕೇಂದ್ರ ತತ್ತ್ವವಾದ ಸ್ತ್ರೀ ಪುರುಷರ ಸಮ್ಮಿಲನದಿಂದ ಸೃಷ್ಟಿ ಎಂಬುದನ್ನು ತಿರಸ್ಕರಿಸಿರಲಿಲ್ಲ. ಆದರೆ, ಈ ಕಲ್ಪನೆ ನೇಪಥ್ಯಕ್ಕೆ ಸರಿಸಿ, ಪರಬ್ರಹ್ಮದ ಕಲ್ಪನೆಯನ್ನು ಆ ಲಿಂಗಕ್ಕೆ ಬೆಸೆಯಲಾಯಿತು. ಇದೆಲ್ಲಾ ಆಗಿದ್ದು, ವೇದೋಪನಿಷತ್ತು ಯುಗದಲ್ಲಿ.

ಭಾರತೀಯ ಸಮಾಜದ ಸಾಂಸ್ಕೃತಿಕ ಚರಿತ್ರೆಯುದ್ದಕ್ಕೂ ಅನಾರ್ಯಪರಂಪರೆಗಳ ವೈದಿಕೀಕರಣ ಹಾಗೂ ಆರ್ಯ ಪರಂಪರೆಯ ಅನಾರ್ಯೀಕರಣ ನಡೆದಿದೆ. ಈ ರಸಾಯನದಲ್ಲಿ ಹುಟ್ಟಿಕೊಂಡದ್ದೇ ವ್ರಾತ್ಯಪರಂಪರೆ. ಆರ್ಯ- ಅನಾರ್ಯ ಅಥವಾ ವೈದಿಕ-ಅವೈದಿಕ ಎಂಬ ದ್ವಂದ್ವ ಲಕ್ಷಣದ ಈ ವ್ರಾತ್ಯಪರಂಪರೆಯ ಮುಖ್ಯ ಕವಲುಗಳಾಗಿ ಶೈವ, ಜೈನ ಹಾಗೂ ಬೌದ್ಧಗಳು ಹುಟ್ಟಿದವು. ಈ ಪರಂಪರೆಗಳಿಗೂ ವೈದಿಕರು ಲಗ್ಗೆಹಾಕದೇ ಬಿಡಲಿಲ್ಲ. ಜೈನ ಮುಖೇನ ಶಾಕ್ತ-ಶೈವಗಳಿಗೆ ಬಂದ ಜಿನಬ್ರಾಹ್ಮಣರ ಮೂಲದ ಲಕುಳೀಶನು ಶಿವನ 28ನೇ ಅವತಾರಿ ಎನ್ನಿಸಿಕೊಂಡ. ಈ ಮೊದಲೇ ವೇದಯುಗದಲ್ಲಿ ಶೈವಕ್ಕೆ ಬಂದವನೇ ಏಕವ್ರಾತ್ಯ ಎಂಬಭಿದಾನ ಪಡೆದ ರುದ್ರ. ಲಿಂಗಾಯತವನ್ನೂ ಒಳಗೊಂಡು, ಶಾಕ್ತ-ಶೈವ, ಜೈನ ಬೌದ್ಧಗಳೂ ಕೂಡ ಏಕೆ ವೈದಿಕ ಅಂಶಗಳಿಂದ ಅಳ್ಳಕಗೊಂಡವು ಎನ್ನಲು ಈ ತೆರನಾದ ವೈದಿಕರ ಪ್ರವೇಶಿಕೆ ಅಥವಾ ಸಾಂಸ್ಕೃತಿಕ ಅತಿಕ್ರಮಣ ಕಾರಣ!

ಈ ವೈದಿಕೀಕರಣ ಪ್ರಕ್ರಿಯೆಯು ಜನಪದ ಪರಂಪರೆಗಳಿಗೂ ವ್ಯಾಪಿಸಿತು. ಉದಾಹರಣೆಗೆ, ಊರವ್ವ- ದ್ಯಾಮವ್ವರುಗಳ ತವರುಮನೆ ಬ್ರಾಹ್ಮಣರು ಎನ್ನುವ ಸುತ್ತಲಿನ ಕಟ್ಟುಕತೆಗಳು.  ಇದರಿಂದ ಮೂಲ ನಾಸ್ತಿಕ ಪರಂಪರೆಗಳು ತಮ್ಮ ನಾಸ್ತಿಕ ಲಕ್ಷಣಗಳನ್ನು ಕಳೆದುಕೊಂಡವು. ಅಥವಾ ತಮಗೆ ವೈರುಧ್ಯಾತ್ಮಕವಾದ ಆಸ್ತಿಕ ಲಕ್ಷಣಗಳಿಂದ ಕಲಬೆರಕೆಯಾದವು. ತಂತ್ರಗಳಲ್ಲಿ ಈ ಅಂಶ ಎದ್ದುಕಾಣುತ್ತದೆ. ಭಾರತದಲ್ಲಿ ಬೌದ್ಧ ನಾಶವಾಗಿದ್ದು ಈ ಕಾರಣಕ್ಕೇ. ನಾಸ್ತಿಕ ತತ್ತ್ವಜ್ಞಾನಗಳಾದ ಸಾಂಖ್ಯ ವೈಶೇಷಿಕಗಳೂ ಆಸ್ತಿಕ ಲಕ್ಷಣ ಪಡೆದದ್ದೂ ಇದೇ ಕಾರಣಕ್ಕೆ.

ವೈದಿಕೀಕರಣದಿಂದಾಗಿ, ಶಾಕ್ತ ಶೈವಗಳಲ್ಲಿ ವಿಭಿನ್ನ ಬಗೆಯ ಪಂಥಗಳು ಹುಟ್ಟಿಕೊಂಡವು. ಶಾಕ್ತರಲ್ಲಿ ವೈದಿಕ ಶಾಕ್ತ, ಶೈವರಲ್ಲಿ ವೈದಿಕ ಶೈವ ತಲೆಯೆತ್ತಿ ಮೂಲ ಆರ್ಷೇಯ ಶಾಕ್ತ ಶೈವಗಳು ಕಡೆಗಣನೆಗೊಳಗಾದವು. ಲಿಂಗಾಯತ ಚರಿತ್ರೆಯೂ ಈ ಸಿಕ್ಕು-ತೊಡಕುಗಳಲ್ಲಿ  ನಲುಗಿತು.ಶಾಕ್ತ-ಶೈವವು ಕಾಪಾಲಿಕ, ಕೌಳ, ಕಾಳಾಮುಖ, ಲಾಕುಳ, ಸಿದ್ಧ- ನಾಥ, ಆಘೋರ ಎಂಬಂಥ ವಿಭಿನ್ನ ಪಂಥ- ಪರಂಪರೆಗಳಾಯಿತು ಮತ್ತು ಇವುಗಳಲ್ಲಿ ಕೆಲವು ವೈದಿಕೀಕರಣಗೊಂಡವು. ಹೀಗಾಗಿ ಲಿಂಗಾಯತದ ಮೂಲವು ಈ ಯಾವುದರಲ್ಲಿದೆ ಎಂಬ ಪ್ರಶ್ನೆಗೆ ಉತ್ತರ  ಸಿಗುವುದಿಲ್ಲ.

ರುದ್ರನ ಚರಿತ್ರೆಯನ್ನು ವೇದಗಳು ಕಟ್ಟಿಕೊಂಡಿವೆ. ವೇದಗಳಲ್ಲಿ ಆರ್ಯಮೂಲದ ರುದ್ರನು ವೇದಬಾಹಿರ- ವೇದವಿರೋಧೀ ವ್ರಾತ್ಯನಾಗಿ ಇದ್ದಾನೆ. ಅವನು ಬಲಗೊಂಡಂತೆ ವೈದಿಕರ ಇಂದ್ರನು ನೇಪಥ್ಯಕ್ಕೆ ಸರಿದ. ವೈದಿಕರು ರುದ್ರನಿಗೆ ಅನಿವಾರ್ಯ ಶರಣಾಗಬೇಕಾಯಿತು. ಅವನಿಗೆ ಹೆದರಿ, ‘ನಮ್ಮನ್ನೂ ನಮ್ಮ ಪಶುಗಳನ್ನೂ ಕೊಲ್ಲಬೇಡ’ಎಂದು ಪ್ರಾರ್ಥಿಸಬೇಕಾಯಿತು. ಬಹುಶಃ ವೈದಿಕರ ಶೈವೀಕರಣಕ್ಕೆ ರುದ್ರಪರಂಪರೆಯೇ ಕಾರಣವಿರಬೇಕು. ಶೈವೀಕರಣಗೊಳ್ಳದ ವೈದಿಕರು ವಿಷ್ಣುಪಂಥವನ್ನು ಬೆಳೆಸಿದರು. ಇಲ್ಲಿಂದಾಚೆಗೆ ಹರ ಮತ್ತು ಹರಿಗಳ ಸಂಘರ್ಷ ಹಾಗೂಸಮನ್ವಯದ ಚರಿತ್ರೆ ಪ್ರಾರಂಭ.

ಅದೇನೇ ಇರಲಿ, ರುದ್ರನದು ಪಾಶುಪತ. ಲಕುಳೀಶನದು ಅಭಿನವ ಪಾಶುಪತ. ಲಾಕುಳ, ಭೈರವನದು ಕಾಪಾಲಿಕ. ಕಾಳಾಮುಖರು ಈ ಕಾಪಾಲಿಕರಿಗೇ ಹೆಚ್ಚು ಹತ್ತಿರವಾದವರು. ರುದ್ರ, ಭೈರವ ಹಾಗೂ ಲಕುಳೀಶ ಇವರೆಲ್ಲಾ ಶಿವನ ಅವತಾರಗಳು. ಲಿಂಗಾಯತ ಧರ್ಮಕ್ಕೆ ವೈದಿಕರಿಂದ ಹೀಗಳೆಯುವಿಕೆಗೆ ಈ ಕಾಪಾಲಿಕಾದಿ ಆರ್ಷೇಯ ಶೈವ ಶಾಖೆಗಳೇ ಆಧಾರ. ಇವುಗಳಾಚೆ ಲಿಂಗಾಯತಕ್ಕೆ ಚರಿತ್ರೆ ಇಲ್ಲ. ಆ ಶೈವ ಶಾಖೆಗಳಿಗಾದರೋ, ಶಾಕ್ತವೇ ಆಧಾರ.  ಈ ಎಲ್ಲದಕ್ಕೆ ವೇದಗಳು ಪ್ರಮಾಣವೇ ಅಲ್ಲ.

ಹಿಂದೂ ಧರ್ಮ ಎಂದರೆ ವೇದ ಬ್ರಾಹ್ಮಣಗಳು ಮನುಸ್ಮೃತಿ ಮುಂತಾದ ವೈದಿಕ ಪ್ರಮಾಣಗಳನ್ನು ಒಪ್ಪಿಕೊಂಡ, ಪರಬ್ರಹ್ಮ- ಪರಪುರುಷಾದಿ ಆಸ್ತಿಕ ಕಲ್ಪನೆ, ವಿಷ್ಣು ಬ್ರಹ್ಮಾದಿ ಪುರುಷ ದೈವತಗಳನ್ನೂ ಅದಿತಿ, ಉಷೆ, ಲಕ್ಷ್ಮಿ, ಸರಸ್ವತಿ ಮುಂತಾದ ಸ್ತ್ರೀ ದೇವತೆಗಳನ್ನೂ ಒಪ್ಪಿಕೊಂಡು ಅವರಿಗೆ ಸಂಬಂಧಪಟ್ಟ ಆಚಾರ ವಿಚಾರಗಳನ್ನು ಅನುಷ್ಠಾನಗೊಳಿಸುವ ಹಾಗೂ ಜನಸಮುದಾಯವನ್ನು ಚತುವರ್ಣಗಳಲ್ಲಿ ವಿಭಾಗಿಸಿಕೊಂಡ ಧರ್ಮ ಎಂಬ ವ್ಯಾಖ್ಯಾನವನ್ನು ಒಪ್ಪುವುದಾದರೆ, ಅವುಗಳ ಪ್ರಾಮಣ್ಯವನ್ನು ಟೀಕಿಸಿದ ವೇದ ಬಾಹಿರ ಪರಂಪರೆಯಾಗಿ, ಊರವ್ವ-ದುರ್ಗೆ ಕಾಳಿ ಮುಂತಾದ ಶಕ್ತಿಯನ್ನೂ, ಕಾಪಾಲಿಕ ಭೈರವ, ಶಿವ, ರುದ್ರ, ವೀರಭದ್ರ ಮುಂತಾದ ಶಿವದೇವತೆಗಳಿಗೆ ಸಂಬಂಧಪಟ್ಟ ಆಚಾರ ವಿಚಾರಗಳನ್ನು ಅನುಷ್ಠಾನಗೊಳಿಸುವ ಜನರ ಧರ್ಮವಾದ ಶಾಕ್ತ ಶೈವಗಳು ಸಾರಭೂತವಾಗಿ ಹಿಂದೂ ಅಲ್ಲ. ಅಂತೆಯೇ, ಜೈನ, ಬೌದ್ಧಗಳ ಹಾಗೇ ಈ ಶಾಕ್ತ ಶೈವಗಳೂ ವೇದಬಾಹಿರ ಸ್ವತಂತ್ರ ಧರ್ಮಗಳೇ. ತತ್ಫಲವಾಗಿ, ಈ ವೇದಬಾಹಿರ ಪರಂಪರೆಗಳಲ್ಲಿ ತನ್ನ ಬೇರಿಟ್ಟುಕೊಂಡ ಲಿಂಗಾಯತವೂ ಸಹ ಹಿಂದೂ ಅಲ್ಲ. ಅದು ಈ ಶಾಕ್ತ ಹಾಗೂ ಶೈವಗಳ ಸೋದರ ಸಂಬಂಧೀ ಧರ್ಮ. ಈ ಲಿಂಗಾಯತ ಧರ್ಮವು ಶಾಕ್ತ ಶೈವ ಮೂಲದ್ದಾದರೂ ಅವುಗಳಿಗಿಂತ ಭಿನ್ನವಾಗುವುದು ಅದರ ದೈವತದಿಂದಲ್ಲ, ಬದಲಾಗಿ ಷಟ್‌ಸ್ಥಲಗಳಂತಹ ಅನುಷ್ಠಾನ ಮಾರ್ಗದಿಂದ ಮತ್ತು ಲಿಂಗಾಯತರ ವಿಶಿಷ್ಟ  ಜೀವನ ವಿಧಾನ ಹಾಗೂ ಆಚಾರ- ವಿಚಾರಗಳಿಂದ. ಇಂತಹ ಬಹುಮುಖ್ಯ ಅರ್ವಾಚೀನ ವೈಶಿಷ್ಟ್ಯವನ್ನು ವಚನಸಾಹಿತ್ಯ ವಿವರಿಸುತ್ತದೆ.

ವಚನಯುಗದಲ್ಲಿ ಪ್ರತಿಪಾದಿತವಾದ ಲಿಂಗಾಯತ ಧರ್ಮವು ಜಂಗಮಕೇಂದ್ರಿತ (ಗುರು ಅಲ್ಲ) ಇಷ್ಟಲಿಂಗ ಪೂಜಾ ಧರ್ಮವಾಗಿ ಹೊರಹೊಮ್ಮಿತು. ಈ ಜಂಗಮವು ಜಾತಿವಿರಹಿತ ಜಂಗಮ (ಇದೇನೂ ಶರಣಯುಗದ ಹೊಸ ಕೊಡುಗೆಯಲ್ಲ! ಶಿವನು ಮೂಲತಃ ಶೂದ್ರಜಂಗಮಾವತಾರಿ ಅರ್ಥಾತ್ ಕಾಪಾಲಿ! ಕಪಾಲ, ಚರ್ಮದುಡುಗೆ, ಕುರೂಪತನ, ರುಂಡಮಾಲೆ ಈ ಮೊದಲಾದ ಶಕ್ತಿಯ ಲಕ್ಷಣಗಳು ಶಿವನ ಮೂಲ ಲಕ್ಷಣಗಳು. ಇಲ್ಲಿ ಬ್ರಾಹ್ಮಣ್ಯವಿಲ್ಲ). ಈ ಹಂತದಲ್ಲಿ ಶ್ವಪಚರೆಲ್ಲಾ ಶಿವಭಕ್ತರಾದರು.
ಮಾತ್ರವೇಕೆ, ಶಿವಭಕ್ತ ಶ್ವಪಚರು ಶಿವಭಕ್ತರಲ್ಲದ ಬ್ರಾಹ್ಮಣರಿಗೂ ಶ್ರೇಷ್ಠ ಎಂದೆನ್ನಿಸಿದರು. ಸತ್ತದ್ದನ್ನು ತಂದು ಕೊಯ್ದು ತಿನ್ನುವವನು ಹೊಲೆಯ ಎಂಬುದನ್ನು ಅಲ್ಲಗಳೆದು ಬದುಕಿದ್ದನ್ನು ತಂದು ಯಜ್ಞಯಾಗಾದಿಗಳಿಗೆ ಬಲಿನೀಡಿ ತಿನ್ನುವವನು ಹೊಲೆಯ ಎಂದು ಶರಣರು ನಿರ್ಭಿಡೆಯಿಂದ ವಾದಿಸಿದರು. ಲಿಂಗಭೇದ, ಜಾತಿ ಭೇದ, ವರ್ಣ ಭೇದಗಳನ್ನು ಹೀಗಳೆದರು. ವೇದಗಳನ್ನೂ ವೈದಿಕರನ್ನೂ ಟೀಕಿಸಿದರು. ಹೀಗೆ, ಲಿಂಗಾಯತ ಧರ್ಮವು ತನ್ನದೇ  ಆಚಾರ-ವಿಚಾರ, ತನ್ನದೇ ಆದ ಧರ್ಮಶಾಸ್ತ್ರ- ಧರ್ಮಸಾಹಿತ್ಯ (ಆಗಮ- ನಿಗಮಾದಿ ವಚನ ಸಾಹಿತ್ಯದ ವರೆಗೆ), ಧರ್ಮ ತತ್ತ್ವ ಹೊಂದಿದ, ತನ್ನದೇ ಆದ ವಿಶಿಷ್ಠ ಕುಲಾಚಾರಗಳನ್ನು ಹೊಂದಿದ, ತನ್ನದೇ ಆದ ಜನಸಂಘಟನೆ ಹೊಂದಿದ ಧರ್ಮವಾಗಿದೆ.ಈ ಧರ್ಮಪರಂಪರೆಗೆ ಶೂದ್ರ ಶಾಕ್ತರು ಮಾತ್ರವೇಕೆ, ವೈದಿಕರೂ ಜೈನರೂ ಬೌದ್ಧರೂ ಸೇರಿ ಹೋಗಿದ್ದಾರೆ. ಹೀಗೆ ಇದು ಹಲವಾರು ಭಿನ್ನ ಸಂಪ್ರದಾಯಗಳ ಜನರಿಗೆ ತನ್ನ ದ್ವಾರವನ್ನು ತೆರೆದಿರುವ ಕಾರಣಕ್ಕೇ ಇದು ಮತನಿರಸನ ಧರ್ಮವಾಗಿದೆ.

ಶಿವನು ಪರವಸ್ತು ಎಂದದ್ದು ಈ ಧರ್ಮದ ಚರಿತ್ರೆಯಲ್ಲಿ ನಡೆದ ಒಂದು ತಾತ್ವಿಕ ಅವಘಡ! ಇದಕ್ಕೆ ಕಾರಣ, ಒಂದು ಹಂತದಲ್ಲಿ ತಂತ್ರ ಸಾಂಖ್ಯದ ಪರಿಧಿಯಿಂದ ಲಿಂಗಾಯತ ಧರ್ಮದರ್ಶನವು ವೈದಿಕರ ಧರ್ಮದರ್ಶನಗಳ ಪರಿಧಿಗೆ ವರ್ಗಾವಣೆಯಾಗಿದ್ದು. ಅಲ್ಲಿ ವೈದಿಕರ ದ್ವೈತಾದ್ವೈತಗಳ ಪ್ರಭಾವದಲ್ಲಿ-ತಾತ್ವಿಕ ಮುಖಾಮುಖಿಯಲ್ಲಿ, ವಿಶಿಷ್ಟಾದ್ವೈತವು ಶಕ್ತಿ ವಿಶಿಷ್ಟಾದ್ವೈತ ರೂಪ ತಾಳಿತು. ಆದರೆ, ವಸ್ತುತಃ ಶಿವನು ದೇವರಲ್ಲ, ಪರವಸ್ತುವಲ್ಲ, ಅವನು ಸೃಷ್ಟಿ ತತ್ವದ ಕುರುಹು. ಪಾರ್ವತಿಯೇ ಶಕ್ತಿ, ಶಿವನು ಪುರುಷ. ಇವರ ಸಂಯೋಗದಿಂದ ಈ ವಿಶ್ವ. ಈ ಸಂಯೋಗವೇ ಯೋಗ! ಈ ಯೋಗದ ಅನುಷ್ಠಾನವೇ ಶಿವಪೂಜೆ. ಈ ಕಾರಣಕ್ಕಾಗಿಯೇ ಅದು ಒಂದು ನಾಸ್ತಿಕ ಅಂದರೆ ಲೋಕಾಯತ ಪರಂಪರೆಯಾಗಿದೆ. ಶರಣಯುಗಕ್ಕೆ ಇದರ ಚರಿತ್ರೆ ಸೀಮಿತಗೊಳಿಸುವವರಿಂದಲಾಗಲೀ ಅಥವಾ ಕಾಲ್ಪನಿಕ ಪುರಾಣಪುರುಷರ ಯುಗಕ್ಕೆ ಗಂಟು ಹಾಕುವುದರಿಂದಲಾಗಲೀ ವೇದ ಬ್ರಾಹ್ಮಣಗಳಲ್ಲಿ ಇದರ ಚರಿತ್ರೆ ಹುಡುಕುವವರಿಂದಲಾಗಲೀ ಈ ಧರ್ಮದ ಚರಿತ್ರೆಗೆ ನ್ಯಾಯ ಸಿಗದು.

ಲಿಂಗಾಯತವು ಜೈನ, ಬೌದ್ಧದಷ್ಟು ಪ್ರಾಚೀನವಲ್ಲ ಎಂದು ಕೆಲವರು ಭಾವಿಸಿದ್ದಾರೆ. ಅದು ತಪ್ಪು. ಸಿಂಧೂಕೊಳ್ಳದ ನಾಗರಿಕತೆಯ ಆರಂಭದಲ್ಲಿ ವೈದಿಕವೂ ಇರಲಿಲ್ಲ, ಜೈನ ಬೌದ್ಧಗಳೂ ಇರಲಿಲ್ಲ. ಆದರೆ, ಆ ಕಾಲಕ್ಕೆ ಶಾಕ್ತ- ಶೈವ ಪರಂಪರೆಯು ಅದರ ಆರ್ಷೇಯ ಸ್ವರೂಪದಲ್ಲಿತ್ತು. ಆರ್ಯವೈದಿಕರು ಬಂದ ನಂತರವೇ ಈ ದೇಶದ ಮತ, ಪಂಥ ಪರಂಪರೆಗಳ ವಿಭಿನ್ನೀಕರಣ ಪ್ರಕ್ರಿಯೆ ಜರುಗಿರುವುದು. ಅಲ್ಲಿಂದೀಚೆಗೆ, ಜೈನ ಬೌದ್ಧಗಳು ಹುಟ್ಟಿದವು. ಜೈನ ಬೌದ್ಧ ಹಾಗೂ ‘ವ್ಯಾತ್ಯಶೈವಾ’ದಿಗಳನ್ನು ಬೆಸೆಯುವ ಋಷಭ ಪಂಥದ ಅಸ್ತಿತ್ವದ ಕುರುಹುಗಳು ಸಿಂಧೂಕೊಳ್ಳದಲ್ಲಿ ಬಹುಶಃ ಆರ್ಯರ ಆಗಮನದ ನಂತರ ಹುಟ್ಟಿಕೊಂಡಿರಬೇಕು. ರುದ್ರ-ಪಶುಪತಿ ಈ ಎರಡನೇ ಸ್ತರದ ಚಾರಿತ್ರಿಕ ಕಾಲದವನು. ಆನಂತರದ ಸಾಮ್ರಾಜ್ಯ ಸ್ಥಾಪನೋತ್ತರ ಯುಗದಲ್ಲಿ ಸಿಂಧೂಕೊಳ್ಳದ ಆ ಭೂಮಿಕೆಯಿಂದ ತಲೆಯೆತ್ತಿದ ಈ ವೈದಿಕ, ಜೈನ ಬೌದ್ಧಗಳೇ ರಾಜಧರ್ಮಗಳಾಗಿ ಮಾನ್ಯತೆಪಡೆದವು. ಇವುಗಳ ಹಾವಳಿಯಲ್ಲಿ  ತಾಂತ್ರಿಕ ಪಂಥಗಳಾದ ಶಾಕ್ತ-ಶೈವಗಳು ಕಡೆಗಣನೆಗೆ ಒಳಗಾದವು. ಶೈವವು ವೈದಿಕೀಕರಣಗೊಂಡ ನಂತರವಷ್ಟೇ, ಅಂದರೆ, ಅದು ತನ್ನ ಅತಿಮಾರ್ಗಿಕ ಭೀಭತ್ಸ ಆಚರಣೆಗಳಿಂದ ದೂರ ಸರಿದು ಸಾತ್ವಿಕಗೊಂಡ ನಂತರವಷ್ಟೇ ಪ್ರಭುತ್ವಗಳ ಮನ್ನಣೆ ಗಳಿಸುವಂತಾಯಿತು. ಲಿಂಗಾಯತವೂ ವೈದಿಕವೇ ಎನ್ನುವವರು ಈ ಕಾಲಘಟ್ಟವನ್ನು ಚರಿತ್ರೆಯ ಆರಂಭ ಬಿಂದುವಾಗಿ ಪರಿಗಣಿಸುತ್ತಾರೆ. ಇನ್ನೂ ಕೆಲವು ಲಿಂಗಾಯತವಾದಿಗಳು ಶರಣಯುಗವನ್ನೇ ಆರಂಭ ಬಿಂದುವೆಂದು ಪರಿಗಣಿಸಿ ಚರಿತ್ರೆ ನೋಡುತ್ತಾರೆ. ಇವೆರಡೂ ಅಸಮಂಜಸ ನಿಲುವುಗಳೇ!

ಒಟ್ಟಿನಲ್ಲಿ, ಲಿಂಗಾಯತದ ಚರಿತ್ರೆಯನ್ನು ಲೋಕಾಯತದ ಹಿನ್ನೆಲೆಯಲ್ಲಿ ಬಗೆದಾಗ ಮಾತ್ರ ಅದು ಒಂದು ಸ್ವತಂತ್ರ ಧರ್ಮ ಎಂದು ವಾದಿಸಲು ವಿಪುಲಾಧಾರಗಳಿವೆ.  ಹಾಗೆಯೇ, ‘ಲಿಂಗಾಯತ ಧರ್ಮವನ್ನು ಪುನರುತ್ಥಾನಗೊಳಿಸುತ್ತಿದ್ದೇವೆ’ ಎಂದು ಯಾರಾದರೂ ಭಾವಿಸಿದ್ದರೆ, ಆ ಪುನರುತ್ಥಾನವು ಲಿಂಗಾಯತಕ್ಕಂಟಿದ ವೈದಿಕತ್ವ ಕಳಚು
ವಂತೆ ಮಾಡಿ,  ತನ್ನ ಮಾತೃ ನೆಲೆಯ ಶೂದ್ರಶಾಕ್ತ ಪರಂಪರೆಗಳನ್ನು ಮತ್ತೆ ‘ಇವ ನಮ್ಮವ ಇವ ನಮ್ಮವ’ ಎಂದು ಆಪ್ತವಾಗಿ ತನ್ನತ್ತ ಸೆಳೆದುಕೊಳ್ಳುವಂತೆ ಮಾಡಬೇಕು. ಅದು, ‘ಉತ್ತಮ ಕುಲದಲ್ಲಿ ಹುಟ್ಟಿದ್ದನ್ನು ಶ್ರೇಷ್ಠ ಎಂದು ಬಗೆದವನು ಲಿಂಗಾಯತನಲ್ಲ, ಬದಲಾಗಿ ಉತ್ತಮಕುಲದ ಜನ್ಮವೇ ಕಷ್ಟದ ಹೊರೆ ಎಂದು ಭಾವಿಸಿದವನು ನಿಜವಾದ ಲಿಂಗಾಯತ’ ಎಂಬ ಶರಣ ಪ್ರಜ್ಞೆಯನ್ನು ಜನರಲ್ಲಿ ಮೂಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT