ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್‌ನ ಸಿಂಗಲ್ಸ್‌ ವಿಭಾಗದಲ್ಲಿ ಹೊಸ ನಿಯಮ: ಕಣದಿಂದ ನಿವೃತ್ತರಾದರೆ ಪಂದ್ಯ ಶುಲ್ಕವಿಲ್ಲ

Last Updated 11 ಜನವರಿ 2018, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್‌ (ಎಎಫ್‌ಪಿ): ಮೊದಲ ಸುತ್ತಿನ ಪಂದ್ಯದ ನಡುವೆ ನಿವೃತ್ತರಾದರೆ ಆಟಗಾರರು ಬಹುಮಾನ ಮೊತ್ತವನ್ನು ಕಳೆದುಕೊಳ್ಳಲಿರುವ ಹೊಸ ನಿಯಮ ಈ ಬಾರಿ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಜಾರಿಗೆ ಬರಲಿದೆ.

ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್‌ನ ಹೊಸ ನಿಯಮದ ‍ಪ್ರಕಾರ ಆಟಗಾರರು ಮೊದಲ ಸುತ್ತಿನ ಪಂದ್ಯದ ಆರಂಭಕ್ಕೆ ಮೊದಲೇ ಹಿಂದೆ ಸರಿದರೆ ಬಹುಮಾನ ಮೊತ್ತದ ಅರ್ಧದಷ್ಟನ್ನು ಪಡೆಯಲು ಅರ್ಹರಾಗಲಿದ್ದಾರೆ.

ಗ್ರಾನ್‌ಸ್ಲ್ಯಾಮ್ ಟೂರ್ನಿಗಳಲ್ಲಿ ಗಾಯದ ಸಮಸ್ಯೆಯ ಕಾರಣ ಹೇಳಿ ಮೊದಲ ಸುತ್ತಿನ ಪಂದ್ಯದ ನಡುವೆ ನಿವೃತ್ತರಾಗುವುದು ಟೂರ್ನಿ ಆಯೋಜಕರಿಗೆ ತಲೆನೋವಾಗಿತ್ತು. ಹೀಗಾಗಿ ‘ನಿವೃತ್ತಿ’ಗೆ ಕಡಿವಾಣ ಹಾಕಲು ಈ ನಿಯಮ ಜಾರಿಗೆ ತರಲಾಗಿದೆ.

ಮೊದಲ ಸುತ್ತಿನ ಒಂದು ಸೆಟ್ ಮಾತ್ರ ಆಡಿ ಭಾರಿ ಮೊತ್ತದ ಹಣ ಗಳಿಸಿ ವಾಪಸಾಗುವುದು ಕೆಲವರ ‘ಹವ್ಯಾಸ’ವಾಗಿತ್ತು. ಇದು ಕೆಲವೊಮ್ಮೆ ಸಂದೇಹಗಳಿಗೂ ಎಡೆಮಾಡಿಕೊಡುತ್ತಿತ್ತು. ಕಳೆದ ಬಾರಿ ಆಲ್‌ ಇಂಗ್ಲೆಂಡ್ ಕ್ಲಬ್‌ನಲ್ಲಿ ಎಂಟು ಆಟಗಾರರು ಮೊದಲ ಸುತ್ತಿನಲ್ಲೇ ನಿವೃತ್ತರಾಗಿದ್ದರು. ರೋಜರ್ ಫೆಡರರ್ ಮತ್ತು ನೊವಾಕ್ ಜಕೊವಿಚ್ ಅವರ ಎದುರಾಳಿಗಳು ಕೂಡ ಸೆಂಟರ್ ಕೋರ್ಟ್‌ನಲ್ಲಿ ಎರಡನೇ ಸೆಟ್‌ ವೇಳೆ ವಾಪಸಾಗಿದ್ದರು.

‘ಆಡಲು ಸಾಧ್ಯವಿಲ್ಲ ಎಂದು ತಿಳಿದಿ ದ್ದರೆ ಕಣಕ್ಕೆ ಇಳಿಯಲೇಬಾರದು. ಇಳಿ ದರೆ ಪಂದ್ಯ ಪೂರ್ಣಗೊಳಿಸಬೇಕು’ ಎಂದು ಫೆಡರರ್ ಅಂದು ಹೇಳಿದ್ದರು.

ತಡವಾದರೆ ದಂಡ: ಟಾಸ್ ಹಾಕುವ ಸಂದರ್ಭದಲ್ಲಿ ಆಟಗಾರ ಒಂದು ನಿಮಿಷ ತಡವಾಗಿ ಬಂದರೆ ದಂಡ ಹಾಕುವ ಮತ್ತು ಐದು ನಿಮಿಷಗಳ ವಾರ್ಮ್‌ ಅಪ್‌ಗೆ ಅವಕಾಶವಿಲ್ಲದ ಅಂಶವೂ ಹೊಸ ನಿಯಮದಲ್ಲಿದೆ.

ಫೆಡರರ್‌ಗೆ ಅಲ್ಜಾಜ್ ಎದುರಾಳಿ

ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ, ರೊಮೇನಿಯಾದ ಸಿಮೊನಾ ಹಲೆಪ್‌ ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ದೆಸ್ತನಿ ಐವಾ ಅವರನ್ನು ಎದುರಿಸುವರು. ಆಸ್ಟ್ರೇಲಿಯಾದ ದೆಸ್ತನಿ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದರು.

ಆಸ್ಟ್ರೇಲಿಯಾ ಓಪನ್‌ನಲ್ಲಿ ನಾಲ್ಕು ಬಾರಿ ಮೊದಲ ಸುತ್ತಿನಲ್ಲೇ ಹೊರಬಿದ್ದಿರುವ ಹಲೆಪ್‌ ಈ ಬಾರಿ ಈ ಸವಾಲನ್ನು ಮೆಟ್ಟಿ ನಿಂತರೆ ಮೊದಲ ಗ್ರ್ಯಾನ್‌ಸ್ಲ್ಯಾಮ್‌ ಪ್ರಶಸ್ತಿ ಗೆಲ್ಲುವತ್ತ ಹೆಜ್ಜೆ ಇರಿಸಬಹುದಾಗಿದೆ.

ಕಳೆದ ಬಾರಿಯ ಚಾಂಪಿಯನ್‌, ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್‌ ಸ್ಲೊವೇನಿಯಾದ ಅಲ್ಜಾಜ್ ಬೆಡೆನೆ ವಿರುದ್ಧ ಮೊದಲ ಸುತ್ತಿನಲ್ಲಿ ಸೆಣಸಲಿದ್ದಾರೆ. ಈ ಟೂರ್ನಿಯಲ್ಲಿ ಗೆದ್ದರೆ ಅವರು ದಾಖಲೆಯ 20ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT