ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ಸಿದ್ದರಾಮಯ್ಯ ನೀಡಿದ ‘ಉಗ್ರಗಾಮಿ’ ಹೇಳಿಕೆಗೆ ಆಕ್ರೋಶ: ಇಂದು ಬಿಜೆಪಿ ಜೈಲ್‌ಭರೋ

Last Updated 11 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು/ಮೈಸೂರು/ಹುಬ್ಬಳ್ಳಿ: ‘ಆರ್‌ಎಸ್‌ಎಸ್‌, ಬಜರಂಗದಳದವರು ಉಗ್ರಗಾಮಿಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಕೋಲಾಹಲ ಎಬ್ಬಿಸಿದೆ.

ಈ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಬಿಜೆಪಿ ಮುಖಂಡರು ಗುರುವಾರ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದಿದ್ದಾರೆ. ಹೇಳಿಕೆ ಖಂಡಿಸಿ, ‘ನಾನೂ ಉಗ್ರ–ನನ್ನನ್ನೂ ಬಂಧಿಸಿ’ ಎಂಬ ಘೋಷಣೆಯಡಿ ರಾಜ್ಯದಾದ್ಯಂತ ಶುಕ್ರವಾರ ಜೈಲ್‌ ಭರೋ ಚಳವಳಿ ನಡೆಸಲು ಬಿಜೆಪಿ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಇರುವುದರಿಂದ ಇಲ್ಲಿ ಶನಿವಾರ ಜೈಲ್‌ ಭರೋ ನಡೆಸಲು ಅದು ತೀರ್ಮಾನಿಸಿದೆ.

ಹೇಳಿಕೆ ಬಗೆಗಿನ ಚರ್ಚೆ ಕಾವೇರುತ್ತಿದ್ದಂತೆಯೇ ಸಿದ್ದರಾಮಯ್ಯ ತಮ್ಮ ಹೇಳಿಕೆ ಬದಲಿಸಿದರು. ‘ಉಗ್ರಗಾಮಿಗಳು ಎಂದಿಲ್ಲ, ಉಗ್ರವಾದಿಗಳು ಎಂದಿರುವೆ’ ಎಂದು ಸ್ಪಷ್ಟನೆ ನೀಡಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ‘ದೇಶಭಕ್ತ ಸಂಘಟನೆಗಳ ಕಾರ್ಯಕರ್ತರನ್ನು ಉಗ್ರಗಾಮಿಗಳು ಎಂದು ದೂಷಿಸುವುದಾದರೆ ಮೊದಲು ನಮ್ಮನ್ನೆಲ್ಲ ಬಂಧಿಸಲಿ’ ಎಂದು ಸವಾಲು ಹಾಕಿದರು.

‘ಈ ರೀತಿ ಹೇಳಿಕೆ ನೀಡಿದ ಮುಖ್ಯಮಂತ್ರಿ ಹಾಗೂ ದಿನೇಶ್ ಗುಂಡೂರಾವ್ ಬಹಿರಂಗ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.

‘ದಶಕಗಳಿಂದ ದೇಶಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಆರ್‌ಎಸ್‌ಎಸ್‌, ಅಟಲ್ ಬಿಹಾರಿ ವಾಜಪೇಯಿ ಅವರಂತಹ ಮಹಾನ್ ನಾಯಕರನ್ನು ಬೆಳೆಸಿದೆ. ಈ ಸಂಘಟನೆಗಳನ್ನು ಉಗ್ರವಾದಿಗಳು, ಜಿಹಾದಿಗಳು ಎಂದು ಹೇಳಿರುವುದು ಹೊಣೆಗೇಡಿತನದ ಪರಮಾವಧಿ’ ಎಂದು ಅವರು ಜರೆದರು.

‘ಕೇರಳಕ್ಕೆ ಸೀಮಿತವಾಗಿದ್ದ ರಕ್ತ ರಾಜಕಾರಣವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಸೋಶಿಯಲ್ ‌ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಮೂಲಕ ರಾಜ್ಯಕ್ಕೆ ತಂದವರು ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌. ಈ ಸಂಘಟನೆಗಳಿಂದಾಗಿ ಅಶಾಂತಿ ನಿರ್ಮಾಣವಾಗಿದೆ’ ಎಂದು ಆರೋಪಿಸಿದರು.

ಶೋಭೆ ತರದು: ಶಿರಾದಲ್ಲಿ ಪರಿವರ್ತನಾ ರ‍್ಯಾಲಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ‘ದೇಶದ 19 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ. ನಾಲ್ಕು ತಿಂಗಳು ಕಳೆದರೆ ರಾಜ್ಯದಲ್ಲೂ ಅಧಿಕಾರ ನಡೆಸಲಿದೆ. ಇಂತಹ ಪಕ್ಷವನ್ನು ‘ಉಗ್ರಗಾಮಿ’ ಎಂದು ಟೀಕಿಸಿರುವುದು ಸಿದ್ದರಾಮಯ್ಯ ಅವರಿಗೆ ಶೋಭೆ ತರುವಂತಹದ್ದಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನರೇಂದ್ರ ಮೋದಿ ಪ್ರಧಾನಿಯಾದಾಗ ಕೇವಲ 6 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಮೋದಿ ಅವರು ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಜನ ಮೆಚ್ಚಿದ್ದಾರೆ. ನೀವು (ಸಿದ್ದರಾಮಯ್ಯ) ಮಾತ್ರ ಬಿಜೆಪಿಯನ್ನು ಉಗ್ರಗಾಮಿ ಎಂದು ಟೀಕಿಸುತ್ತಿದ್ದೀರಿ’ ಎಂದರು.

ಮಾನಸಿಕ ಸ್ಥಿಮಿತ ಇಲ್ಲ: ‘ಬಿಜೆಪಿ, ಸಂಘ ಪರಿವಾರದ ಬಗ್ಗೆ ದಿನಕ್ಕೊಂದು ಟೀಕೆ, ಆರೋಪ ಮಾಡುವ ಮುಖ್ಯಮಂತ್ರಿ ಮಹಾಸುಳ್ಳುಗಾರ. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಹುಬ್ಬಳ್ಳಿಯಲ್ಲಿ ವಾಗ್ದಾಳಿ ನಡೆಸಿದರು.

ಉಗ್ರಗಾಮಿಗಳಲ್ಲ, ಉಗ್ರವಾದಿಗಳು: ಸಿ.ಎಂ

ಮೈಸೂರು/ ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಬಿಜೆಪಿಯವರನ್ನು ಉಗ್ರಗಾಮಿಗಳು ಎಂದು ಹೇಳಿಲ್ಲ. ಉಗ್ರವಾದಿಗಳು ಎಂದಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ಸಾವಿನ ಮನೆಯಲ್ಲಿ ರಾಜಕಾರಣ ಮಾಡುತ್ತಿರುವವರು ಯಾರು? ಹೆಣದ ಮೇಲೆ ರಾಜಕಾರಣ ಮಾಡುವವರನ್ನು ಉಗ್ರಗಾಮಿಗಳು ಎಂದೇ ಕರೆಯಬೇಕು’ ಎಂದರು.

‘ಬಿಜೆಪಿ ನಾಯಕರು ಹಿಂದುತ್ವದ ಹೆಸರಿನಲ್ಲಿ ಮತಗಳ ಧ್ರುವೀಕರಣ ಮಾಡಲು ನೋಡುತ್ತಿದ್ದಾರೆ. ಅದು ಫಲಿಸದು; ಬದಲಿಗೆ ಅದೇ ಅವರಿಗೆ ಮುಳುವಾಗಲಿದೆ’ ಎಂದು ವಾಗ್ದಾಳಿ ನಡೆಸಿದರು.

‘ಬಜರಂಗ ದಳದವರನ್ನು ನಿಷೇಧ ಮಾಡುವ ಆಲೋಚನೆ ಇಲ್ಲವೆಂದರೆ, ಈ ಸಂಘಟನೆಯನ್ನು ನಾವು ಬೆಂಬಲಿಸುತ್ತಿದ್ದೇವೆ ಎಂದರ್ಥವಲ್ಲ. ಕೋಮುಸೌಹಾರ್ದ ಕೆಡಿಸುವ, ಅಶಾಂತಿಗೆ ಕಾರಣವಾಗುವ ಯಾವುದೇ ಸಂಘಟನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT