ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋಮಲ ಮನಸ್ಸಿನ ಸಮತೂಕದ ಬರಹಗಳು’

ಭೂಮಿಕಾ ಸಂಕ್ರಾಂತಿ ಲಲಿತಪ್ರಬಂಧ ಸ್ಪರ್ಧೆ – 2018ರ ಫಲಿತಾಂಶ
Last Updated 12 ಜನವರಿ 2018, 19:30 IST
ಅಕ್ಷರ ಗಾತ್ರ

ವೈಯಕ್ತಿಕವಾಗಿ ನನಗೆ ಇದೊಂದು ಭಿನ್ನವಾದಂತಹ ಅನುಭವ. ತಮ್ಮ ಸ್ವಾನುಭವಕ್ಕೆ ಎಟಕುವ ವಿಷಯ ವಸ್ತುಗಳನ್ನು ಆಯ್ದು ಅದಕ್ಕೊಂದು ಆವರಣವನ್ನು ಸೃಷ್ಟಿಸಿಕೊಂಡು, ಕೋಮಲ ಮನಸ್ಸಿನಿಂದ ಸಮತೂಕದಲ್ಲಿ ಬರಹವನ್ನು ಕಟ್ಟುವ ನಮ್ಮ ಮಹಿಳೆಯರ ತನ್ಮಯತೆ ಮೆಚ್ಚುವಂಥದ್ದು. ಆಪ್ತವಾದದ್ದನ್ನು ಬರವಣಿಗೆಗೆ ತಂದಾಗಲೇ ಅದು ಎಷ್ಟೊಂದು ಪರಿಣಾಮಕಾರಿಯೂ ಆಗಿರಬಲ್ಲದು ಅನ್ನುವುದಕ್ಕೆ ಇಲ್ಲಿಯ ಪ್ರಬಂಧಗಳೇ ಸಾಕ್ಷಿ.

ಪ್ರಜಾವಾಣಿ ಭೂಮಿಕಾ ಬಳಗ ಅಂತಿಮ ಆಯ್ಕೆಗಾಗಿ ನೀಡಿದ ಇಪ್ಪತ್ತೊಂಬತ್ತು ಪ್ರಬಂಧಗಳೂ ಸಹ ಒಂದಿಲ್ಲೊಂದು ರೀತಿಯಲ್ಲಿ ನನ್ನನ್ನು ತಟ್ಟಿದವು. ಓದಿದ ಪ್ರಬಂಧವನ್ನೇ ಇನ್ನೊಮ್ಮೆ ಓದಿದಾಗ ಅದರಲ್ಲಿ ಇನ್ನೇನೋ ಮಹತ್ವವಾದದ್ದು ಕಾಣುತ್ತಿತ್ತು. ದೈನಿಕದ ಪ್ರತಿ ಗಳಿಗೆಯನ್ನೂ ಉತ್ಕಟವಾಗಿ ಅನುಭವಿಸುವ ಇಲ್ಲಿಯ ಲೇಖಕಿಯರು, ಬದುಕಿನಲ್ಲಿ ಎದುರಾಗುವ ಅತಿ ಸಾಮಾನ್ಯ ಸಂದರ್ಭಗಳನ್ನೂ ತಮ್ಮ ಮಾನಸಲೋಕದ ಅತ್ಯುನ್ನತ ಕ್ಷಣಗಳಾಗಿ ಹಿಡಿದಿಡುವ ಸಂಯಮ ಅಚ್ಚರಿ ಮೂಡಿಸುವಂಥದ್ದು.

ಸಾಕುಪ್ರಾಣಿಯ ಕುರಿತಾಗಿರುವ ಭಾವನಾತ್ಮಕ ಸಂಬಂಧವೊಂದು ಮನುಷ್ಯತ್ವದ ಪರಿಧಿಯನ್ನು ಹಿಗ್ಗಿಸುವ ಆಶಯ ಹೊಂದಿದ ಮೊದಲ ಬಹುಮಾನಕ್ಕೆ ಪಾತ್ರವಾದ ‘ಊರ ದನಗಳ ಕುರಿತ ನೂರೆಂಟು ನೆನಪು’ ಒಂದೇ ಒಂದು ಅನವಶ್ಯಕ ವಿವರವಿಲ್ಲದ ಒಂದು ಅತ್ಯುತ್ತಮ ಪ್ರಬಂಧವಾಗಿ ಕಂಡಿದೆ. ವಾರವಾದರೂ ಮನೆಗೆ ಹಿಂತಿರುಗದ ಲಚ್ಚುಮಿ ಎಂಬ ಗಬ್ಬದ ಹಸುವೊಂದು ಕಾಡಿನ ಗಿಡಗಳ ಮರೆಯಲ್ಲಿ ಪುಟ್ಟ ಕರುವೊಂದನ್ನು ಈಯ್ದು ನಿಂತು, ಅಂಬಾ ಎಂದು ಕರೆಯುತ್ತ ಚಳಿಯಲ್ಲಿ ನಡುಗುತ್ತ ತನ್ನ ಪುಟ್ಟ ಕರುವಿಗೆ ಮೊಲೆಯೂಡಿಸುತ್ತಿರುವ ಕರುಣಾಜನಕ ನೋಟವು ಪ್ರಬಂಧವನ್ನು ಮೀರಿ ಜೀವವೊಂದರ ಬಾಂಧವ್ಯದ ಘನತೆಯನ್ನು ಹೆಚ್ಚಿಸಿದೆ.

ಬೆಳಕಿನ ಮಾಲಿನ್ಯವೆಂಬ ಹೊಸ ರೂಪಕವನ್ನು ಕೊಟ್ಟ ‘ದೀಪವಿರದ ಮನೆಗಳು..’ ಪ್ರಬಂಧವು, ಕೋರೈಸುವ ಬೆಳಕಿನ ಗೋಳದಲ್ಲಿ ನಾವು ಮುಖವಾಡ ಧರಿಸಿ ಪ್ರತ್ಯಕ್ಷಗೊಳ್ಳಬೇಕಾದ ಅನಿವಾರ್ಯತೆಯನ್ನು ಹೇಳುತ್ತಲೇ ಹಳ್ಳಿ ಮನೆಗಳ ಮಾಯಕ ನಸುಗತ್ತಲು ಎಡೆ ಮಾಡಿಕೊಡುವ ಸಜಹ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಚಳಿಯ ರಾತ್ರಿಗಳಲ್ಲಿ ಕುಸುರೆಳ್ಳು ಮಾಡುವ ಸಂಭ್ರಮವನ್ನು ಆಪ್ತವಾಗಿ ಕಟ್ಟಿಕೊಡುವ ಅನುಭವ ನೈಜತೆ ಇಲ್ಲಿ ಎದ್ದು ಕಾಣುತ್ತದೆ.

ಬಳೆಗಳ ಕುರಿತಾದ ಕಥನಕವನವನ್ನು ಹೊಂದಿದ ‘ಕಿಂಕಿಣಿಸುವ ಕಂಕಣ’ ಪ್ರಬಂಧವು, ಬಳೆ ಚೂರುಗಳನ್ನು ದೀಪಕ್ಕೆ ಹಿಡಿದು ಎರಡೂ ತುದಿಗಳ ಸೇರಿಸಿ ಪೋಣಿಸುತ್ತ ಮನೆ ಬಾಗಿಲಿಗೆ ತೋರಣ ತೊಡಿಸುವ ಜನಪದದ ಮಹತ್ವವನ್ನು ಮನದಟ್ಟು ಮಾಡಿಸುತ್ತಲೇ, ಹೆಣ್ಣಿಗೆ ಇಷ್ಟವಾಗುವ ಸೂಕ್ಷ್ಮ ಸಂಗತಿಗಳನ್ನು ಅದಕ್ಕಿಂತ ನಾಜೂಕಾಗಿ ವಿವರಿಸುವ ಇಲ್ಲಿಯ ಕೌಶಲ ಮೆಚ್ಚಿಗೆಯಾಗುತ್ತದೆ.

‘ಕೈ ಮುರಿದುಕೊಂಡ ಶುಭ ಗಳಿಗೆ’ಯಲ್ಲಿ, ಅಪಘಾತಕ್ಕೆ ಸಿಲುಕಿ ಮನೆಯಲ್ಲಿ ಮಲಗಿದ ವ್ಯಕ್ತಿಗಳ ವೇದನಾಮಯ ದುಃಸ್ಥಿತಿಯ ದೈನಂದಿನ ಆಗುಹೋಗುಗಳು ಕೂಡ ವೈನೋದಿಕ ಶೈಲಿಯಲ್ಲಿ ನಿರೂಪಣೆಗೊಂಡು ಆಪ್ತವಾಗಿ ಓದಿಸಿಕೊಳ್ಳುತ್ತದೆ. ‘ಲಜ್ಜೆಯಿಲ್ಲದ ಗೆಜ್ಜೆನಾದ’ ಪ್ರಬಂಧದಲ್ಲಿ ಬಾವಿಯೊಳಗೆ ತಪಸ್ಸಿನ ಸ್ಥಿತಿಯಲ್ಲಿ ಕೂತಿರುವ ಕಪ್ಪೆಯ ಸಂಕೇತವಾಗಿ ಬರುವ ಮದುಮಗ, ತನ್ನ ಪಯಣದಲ್ಲಿ ತರುವ ಆಕಸ್ಮಿಕ ಅನುಬಂಧವನ್ನು ಲೇಖಕಿ ಅನುಭಾವದ ನೆಲೆಯಲ್ಲಿ ಹೇಳಲು ಯತ್ನಿಸಿದ್ದಾರೆ.

‘ಒಲೆಯ ಉರಿಯ ಮುಂದೆ’ ಬರಹದಲ್ಲಿ, ಉರಿವ ಒಲೆ ಅವಳ ಯೋಗ್ಯತೆಯನ್ನು ನಿರ್ಧರಿಸುವ ಕಾಲಘಟ್ಟದಲ್ಲಿ ಮಹಿಳೆಗಿರಬೇಕಾದ ಸಮಾನತೆಯ ಚಿಂತನೆಯೂ ಅಲ್ಲಲ್ಲಿ ಮೊಳೆತಿದೆ. ಹಿಂದಿನ ನಂಬಿಕೆಗಳಲ್ಲಿ ಸೇರಿಹೋದ ಅದೃಶ್ಯ ಅಡುಗೆಯ ಪ್ರಸ್ತಾಪವು ಬರಹಕ್ಕೆ ಲವಲವಿಕೆಯ ಸ್ಪರ್ಶವನ್ನು ನೀಡಿದೆ.

ಹೀಗೆ ಇಲ್ಲಿಯ ಒಂದೊಂದು ಪ್ರಬಂಧವೂ ಒಂದೊಳ್ಳೆಯ ಕಥನಶಕ್ತಿಯನ್ನು ಪಡೆದಿದೆ. ಇಂಥ ಸ್ಪರ್ಧೆಗಳು ಬರವಣಿಗೆಯ ಒತ್ತಡಕ್ಕೆ ಯಾವತ್ತೂ ಸ್ಫೂರ್ತಿದಾಯಕ. ಹಾಗೆಯೇ ಒಟ್ಟಾರೆ ಪ್ರಬಂಧಗಳಲ್ಲಿ ಅಲ್ಲಲ್ಲಿ ಇಣುಕಿದ ಯಜಮಾನ ಎಂಬ ಪದಕ್ಕೆ ಪರ್ಯಾಯವಾಗಿ ನಮ್ಮ ಸೋದರಿಯರು ಬಾಳ ಸಂಗಾತಿ ಎಂಬ ಪದ ಬಳಸಬೇಕೆಂಬುದು ನನ್ನ ಪ್ರೀತಿಯ ಒತ್ತಾಸೆಯಾಗಿದೆ.

ಹಿರಿಯರಾದ ಓ.ಎಲ್.ಎನ್‌.ರಂತಹ ವಿಮರ್ಶಕರ ಜೊತೆಯಾಗಿ ಈ ಪ್ರಬಂಧಗಳನ್ನು ಓದಿದ್ದು ಒಂದು ಹೊಸ ತಿಳಿವಳಿಕೆಯನ್ನು ನೀಡುವಂತಿತ್ತು. ಬಹುಮಾನಿತ ಸೋದರಿಯರಿಗೆಲ್ಲ ನನ್ನ ಮಮತೆಯ ಅಭಿನಂದನೆಗಳು ಹಾಗೂ ಓದಿನ ಖುಷಿ ನೀಡಿದ ಪ್ರಜಾವಾಣಿ ಬಂಧುಗಳಿಗೆ ನನ್ನ ಅಕ್ಕರೆಯ ನಮನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT