ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಲಿತಪ್ರಬಂಧಕ್ಕೆ ಕೊನೆಗಾಲ ಬಂದಿಲ್ಲ! ’

ಭೂಮಿಕಾ ಸಂಕ್ರಾಂತಿ ಲಲಿತಪ್ರಬಂಧ ಸ್ಪರ್ಧೆ – 2018ರ ಫಲಿತಾಂಶ
Last Updated 12 ಜನವರಿ 2018, 19:30 IST
ಅಕ್ಷರ ಗಾತ್ರ

ಸಂಗೀತದಲ್ಲಿ ಸುಗಮಸಂಗೀತ ಇದ್ದ ಹಾಗೆ ಸಾಹಿತ್ಯದಲ್ಲಿ ಲಲಿತಪ್ರಬಂಧ; ಕಥೆ, ಕವಿತೆ, ನಾಟಕ, ತತ್ವಚಿಂತನೆ - ಇಂಥ ಯಾವುದೇ ಪ್ರಕಾರದ ರೂಪವನ್ನು ಬೇಕಾದರೂ ಧರಿಸಬಲ್ಲ, ಆದರೆ ಹಾಗೆ ಯಾವೊಂದು ಪ್ರಕಾರದ ನಿರ್ದಿಷ್ಟ ರೂಪಕ್ಕೂ ಅಳವಡದ ಬರಹ. ‘ಇನ್-ಫಾರ್ಮಲ್’ ಅನ್ನುವ ಇಂಗ್ಲಿಷ್‌ ಮಾತನ್ನು ನಿರ್ದಿಷ್ಟರೂಪಕ್ಕೆ ಒಗ್ಗದ ಎಂದು ಅಕ್ಷರಶಃ ಅರ್ಥಮಾಡಿಕೊಂಡರೆ ಲಲಿತಪ್ರಬಂಧದ ವೈಶಿಷ್ಟ್ಯ ಗಮನಕ್ಕೆ ಬಂದೀತು. ಸುಗಮಸಂಗೀತ ಸಂಗೀತದ ಎಲ್ಲ ನಿಯಮ ಪಾಲಿಸಿಯೂ ಸಂಗೀತಕಛೇರಿ ಆಗುವುದಿಲ್ಲವಲ್ಲ, ಹಾಗೆಯೇ ಇದೂ ಕೂಡ. ಏನನ್ನು ಬೇಕಾದರೂ ಯಾವ ರೂಪದಲ್ಲಿ ಬೇಕಾದರೂ ಬರೆಯಬಹುದು ಅನ್ನುವ ಅಪಾರ ಸ್ವಾತಂತ್ರ್ಯವೇ ಕಷ್ಟಕೊಡುತ್ತದೆ: ಘನವಾಗಿರಬೇಕು, ಗಂಭೀರವಾಗಿರಬಾರದು; ವಿಚಾರವಿರಬೇಕು ಒಣ ತರ್ಕವಾಗಬಾರದು ಇಂಥ ಅನೇಕ ವಿರೋಧಗಳನ್ನು ಒಟ್ಟಿಗೆ ನಿಭಾಯಿಸಬೇಕು.

ಇದು ಪ್ರಬಂಧವಲ್ಲ, ಕಥೆ ಎಂದು ಓದುಗರಿಗೆ ಅನಿಸಿದರೆ ಅದು ಸೋಲು. ಒಂದೊಂದು ಪ್ರಬಂಧವೂ ತನ್ನದೇ ವಿಶಿಷ್ಟ ಅನಿಸುವಂಥ ರೂಪ ತಾಳುವ ಹಾಗೆ ಮಾಡುವುದು ಎಷ್ಟು ಕಷ್ಟ ಅನ್ನುವುದು ಗೊತ್ತಾಗಬೇಕಾದರೆ ಬರೆದೇ ನೋಡಬೇಕು! ಸ್ವಂತದ ಛಾಪು, ಇಂದ್ರಿಯ, ಭಾವನೆ, ಬುದ್ಧಿ, ಸಂವೇದನೆಗಳನ್ನು ಸ್ಪರ್ಶಿಸಿ ತಾವು ಕಂಡದ್ದು, ಅನುಭವಿಸಿದ್ದು ಎಲ್ಲವೂ ಓದುಗರ ಮನಸ್ಸಿನಲ್ಲೂ ಅಚ್ಚೊತ್ತುವ ಹಾಗೆ ಆದರೆ, ಆ ಎಲ್ಲ ಓದುಗರೂ ಇದು ತನಗಾಗಿಯೇ ಬರೆದದ್ದು ಅಂದುಕೊಳ್ಳುವಷ್ಟು ಆಪ್ತವಾಗಿ ಬರೆಯುತ್ತ ಬರೆಯುವಾಗಲೇ ಎಲ್ಲರ ಮನಸ್ಸನ್ನೂ ಹೊಗುವ ಹಾಗೆ ಅದರ ಆಕಾರವನ್ನೂ ನಿರ್ಮಿಸುತ್ತ ಸಾಗುವುದು ದೊಡ್ಡ ಸವಾಲು; ಆದ್ದರಿಂದಲೇ ದೊಡ್ಡ ಖುಷಿ ಕೂಡ. ಖುಷಿಯಿಲ್ಲದೆ ಲಲಿತಪ್ರಬಂಧವಿಲ್ಲ.

ಪರಿಶೀಲನೆಗೆ ಒದಗಿಸಿದ ಇಪ್ಪತ್ತೊಂಬತ್ತು ಪ್ರಬಂಧಗಳೂ ಸಾಮಾನ್ಯತೆಯ ಮಟ್ಟವನ್ನು ಮೀರಿದ್ದವು, ಪ್ರಾಮಾಣಿಕ ಬರಹಗಳಾಗಿದ್ದವು ಅನ್ನುವುದು ಸಂತೋಷದ ಸಂಗತಿ. ಕೊನೆಗೆ ಮನ್ನಣೆಗೆ ಅರ್ಹವೆಂದು ತೋರಿದ ಹತ್ತು ಪ್ರಬಂಧಗಳನ್ನು ತೀರ್ಪುಗಾರರು ಗುರುತು ಮಾಡಿಕೊಂಡು ಅದರಲ್ಲಿ ಅಂತಿಮ ಆಯ್ಕೆಯನ್ನು ಮಾಡಿದೆವು. ಈ ಪ್ರಬಂಧಗಳಲ್ಲಿ ಸಮಾನವಾದ ಕೆಲವು ಅಂಶಗಳು ಇದ್ದವು. ತಮ್ಮ ಬದುಕಿನಲ್ಲಿ ಕಳೆದು ಹೋದ ಕಾಲವನ್ನು ಮತ್ತೆ ಸೃಷ್ಟಿಸಿಕೊಳ್ಳುತ್ತಾ ವರ್ತಮಾನಕ್ಕಿಂತ ಅದೆಷ್ಟು ಬೇರೆಯ ಥರ ಇತ್ತು, ಚೆನ್ನಾಗಿತ್ತು, ಈಗ ಏನೆಲ್ಲ ಬದಲಾವಣೆಗಳಾಗಿವೆ ಅನ್ನುವುದನ್ನು ಇವೆಲ್ಲ ಪ್ರಬಂಧಗಳೂ ಬೇರೆ ಬೇರೆ ಪ್ರಮಾಣ, ರೀತಿಗಳಲ್ಲಿ ಹೇಳುತ್ತವೆ. ಎಳವೆಯಲ್ಲಿ ಬದುಕು ಸದಾ ಹೊಸತಾಗಿ, ಚೆಲುವಾಗಿ ಕಾಣುವುದರಿಂದ ನೆನಪಿನ ಭೂತಕಾಲ ಸದಾ ಸುಂದರ, ಪರಿಪೂರ್ಣ ಅನ್ನುವ ಹಾಗಿರುತ್ತದೆ. ವರ್ತಮಾನದಲ್ಲಿ ದೊರೆತಿರುವ ಬಿಡುಗಡೆಯೋ, ಸೌಲಭ್ಯವೋ, ಬದುಕನ್ನು ಕಾಣುವ ಹೊಸರೀತಿಯೋ ಪ್ರಬಂಧಗಳಲ್ಲಿ ಎದ್ದು ಕಾಣಲಿಲ್ಲ. ಒಲೆ, ಒಲೆಯ ಉರಿ, ಅಡುಗೆ, ಅಡುಗೆಮನೆ – ಇವು ಬಹಳಷ್ಟು ಬರಹಗಳಲ್ಲಿ ಒದಗಿ ಬಂದಿರುವ ರೂಪಕವಾಗಿದೆ. ದಿನದಿನದ ಬದುಕಿನ ಘಟನೆ, ಸಾಮಾನ್ಯವಾಗಿ ಎಲ್ಲರ ಕಣ್ಣಳತೆಯಲ್ಲಿರುವ ವಸ್ತು, ಇವುಗಳನ್ನು ಕಥನವಾಗಿಸುವ, ವರ್ಣಿಸುವ ಹಂಬಲ ಬಹುತೇಕ ಬರಹಗಳಲ್ಲಿದೆ. ಲಲಿತಪ್ರಬಂಧದಲ್ಲಿ ಇರಲೇಬೇಕಾದ ಸಲೀಸು ಓದಿಗೆ ಒದಗುವ ಗುಣಗಳೂ ಇವೆ.

ಇವೆಲ್ಲ ಗುಣಗಳಿದ್ದೂ ಸ್ವಲ್ಪ ಭಿನ್ನವೆನ್ನಿಸಿದ, ಹೊಸ ಅರ್ಥಗಳನ್ನು ಹೊಳೆಯಿಸುವ ಬರಹಗಳು ಮತ್ತು ಲಲಿತಪ್ರಬಂಧದ ವಿವಿಧ ಬಗೆಗಳನ್ನು ಸೂಚಿಸುವಂತಿರುವ ಬರಹಗಳನ್ನು ಆಯ್ಕೆಮಾಡುವುದು ಸೂಕ್ತ ಎಂದು ನಿರ್ಣಯಿಸಿಕೊಂಡೆವು.

‘ಊರ ದನಗಳನ್ನು ಕುರಿತ ನೂರೆಂಟು ನೆನಪು’ ಬರಹದಲ್ಲಿ ದನಗಳ ಮನಸ್ಸು, ವರ್ತನೆ, ಸಾಕುತಿದ್ದ ಕ್ರಮಗಳನ್ನು ಸುಮ್ಮನೆ ಹಾಗೇ ಹರಟೆಯ ಹಾಗೆ ಹೇಳುತ್ತ ಹೇಳುತ್ತ ನಮ್ಮ ಬದುಕಿನ ಕ್ರಮವೇ ಬದಲಾಗಿ ಹೋಗಿರುವುದನ್ನು ಸೂಚಿಸುತ್ತದೆ, ದನಕರುಗಳ ಒಡನಾಟದ ವಿವರಗಳಲ್ಲಿ ನಿರೂಪಕ ಪಾತ್ರವೂ ಸ್ಪಷ್ಟತೆ ಪಡೆಯುತ್ತದೆ, ನೆನಪುಗಳಲ್ಲಿ ಹಳಹಳಿಕೆಯ ಭಾವ ಎದ್ದು ಕಾಣುವುದಿಲ್ಲ.

‘ಕಿಂಕಿಣಿಸುವ ಕಂಕಣ’ ಬಳೆಯನ್ನು ಕೇಂದ್ರಮಾಡಿಕೊಂಡು ಕೆಲವು ಘಟನೆಗಳ ಮೂಲಕ ಬದಲಾದ ಕಾಲ ಮತ್ತು ಮನಸ್ಸಿನ ಧೋರಣೆಗಳನ್ನು ಸೂಚಿಸುತ್ತ, ಹಾಡನ್ನೂ ಬಳಸಿಕೊಳ್ಳುತ್ತ, ಹೊರ ವಿವರಣೆ, ವರ್ಣನೆ, ಮಾಹಿತಿಗಳ ಮೂಲಕವೇ ಭಾವಲೋಕವನ್ನು ಸೃಷ್ಟಿಸಲು ಯತ್ನಿಸುತ್ತದೆ. ನಿರೂಪಣೆಯ ಕ್ರಮ ಮತ್ತು ವಿಸ್ತಾರ ಗಮನ ಸೆಳೆಯುತ್ತದೆ.

‘ದೀಪವಿರದ ಮನೆಗಳು, ಉರಿಯುವ ಒಲೆಗಳು’ ಕತ್ತಲೆ ಮತ್ತು ಬೆಳಕನ್ನು, ಬೆಳಕು ಮತ್ತು ಉರಿಯನ್ನು ರೂಪಕಗಳಾಗಿ ಬಳಸಿಕೊಳ್ಳುತ್ತ ವರ್ತಮಾನದ ಆಧುನಿಕವೆನ್ನಬಹುದಾದ ಬದುಕು ಮತ್ತು ಹಲವು ದಶಕಗಳ ಹಿಂದಿನ ಕೌಟುಂಬಿಕ ಮತ್ತು ಸಾಮಾಜಿಕ ಬದುಕುಗಳ ವೈದೃಶ್ಯವನ್ನು ಚಿತ್ರಿಸುತ್ತದೆ. ರೂಪಕಗಳ ಬಳಕೆಯಿಂದಾಗಿ ಕವನದ ಹಲವು ಗುಣಗಳನ್ನು ಮೈಗೂಡಿಸಿಕೊಂಡಿದೆ.

‘ಕೈ ಮುರಿದುಕೊಂಡ ಶುಭ ಗಳಿಗೆ’ ಹಾಸ್ಯ, ಲಘು ಮನೋಧರ್ಮದ ನಿರೂಪಣೆಗಳ ಮೂಲಕ ನಿರೂಪಕ ಪಾತ್ರ ತನ್ನನ್ನೇ ನೋಡಿಕೊಂಡು ನಗುವ, ಇತರರ ಒಡನಾಟದ ಸ್ವರೂಪ ಬದಲಾಗುವುದನ್ನು ಕಂಡು ಅದೇನೂ ಮಹಾ ಅಲ್ಲ ಅನ್ನುವ ಹಾಗೆ ವಿವರಿಸುತ್ತಲೇ ‘ಹೌದಲ್ಲ’ ಅನ್ನುವ ಅಭಿಪ್ರಾಯವನ್ನೂ ಮೂಡಿಸುತ್ತದೆ. ಲಲಿತಪ್ರಬಂಧದ ‘ನಾನು’ ಮುಖ್ಯ; ಲಘು ನಿರೂಪಣೆಯ ಮಾದರಿ ಇದು.

‘ಲಜ್ಜೆ ಇಲ್ಲದ ಗೆಜ್ಜೆನಾದ’ ಕಲ್ಪನೆ, ವಾಸ್ತವ, ಕನಸುಗಳ ಬೆರಕೆಯಾಗುತ್ತ ಅತ್ತ ಇತ್ತ ತೂಗುತ್ತ ಹೆಣ್ಣು ಮನಸ್ಸಿನ ಲಹರಿಗಳನ್ನು ನಿರೂಪಣೆಯ ಅಲೆಗಳಲ್ಲಿ ತೇಲಿ ಬಿಟ್ಟಿರುವ ಕ್ರಮ ಇಷ್ಟವಾಯಿತು.

‘ಒಲೆಯ ಉರಿಯ ಮುಂದೆ’ ಬರಹದಲ್ಲಿ ಅಡುಗೆ, ಊಟಗಳನ್ನು ಕುರಿತು ಬಾಲ್ಯದಲ್ಲಿ ಕೇಳಿದ, ಬೆಳೆಸಿಕೊಂಡ ಕಲ್ಪನೆಗಳನ್ನು ನಿರೂಪಣೆಯ ನೇಯ್ಗೆಯಲ್ಲಿ ಬಳಸಿಕೊಂಡಿರುವ ಕ್ರಮ ಇಷ್ಟವಾಯಿತು. ಅಜ್ಜನ ಗಡ್ಡ ಎಂಬ ಹೆಸರಿನ ಬೀಜ ರಾಮದೇವರಿಗೆ ಊಟ ಒಯ್ಯುವ, ಭೂತದ ಅಡುಗೆಯ ತುಪ್ಪದ ವಾಸನೆಯನ್ನು ವಿವರಿಸುವ, ಗೃಹಿಣಿಯೊಬ್ಬಳು ನನಗೂ ಅಜ್ಜನ ಗಡ್ಡದಂಥದ್ದು ಊಟ ತಂದುಕೊಟ್ಟರೆ ಎಂದು ಬಯಸುವುದನ್ನು ಹೇಳಿರುವ ರೀತಿ ಇಷ್ಟವಾಯಿತು.

ಈ ಆರು ಪ್ರಬಂಧಗಳೂ ತೀರ್ಪುಗಾರರ ಗಮನವನ್ನು ಸಮಾನವಾಗಿ ಸೆಳೆದವು. ಬಹುಮಾನ, ಮೆಚ್ಚುಗೆ ಇವೆಲ್ಲ ಸ್ಪರ್ಧೆಯ ದೃಷ್ಟಿಯಿಂದ ಅನಿವಾರ್ಯ ವಿಂಗಡಣೆಗಳು. ಸ್ಮೃತಿತಂತುಗಳ ತೂಗು, ನೋಡಿ ಸ್ವಾಮಿ ನಾವಿರೋದೆ ಹೀಗೆ, ಋತುಬಂಧದ ರಗಳೆಗಳು – ಇವು ಕೂಡ ಗಮನ ಸೆಳೆದರೂ ಲಲಿತಪ್ರಬಂಧದ ಲಲಿತಗುಣವನ್ನು ಮೀರುವ ಅಥವಾ ಮುಟ್ಟದಿರುವ ಕಾರಣಕ್ಕೆ ಪಕ್ಕಕ್ಕೆ ಸರಿಸಬೇಕಾಯಿತು. ಎಷ್ಟೆಂದರೂ ವಿಮರ್ಶೆಯ ತೀರ್ಮಾನ ವೈಯಕ್ತಿಕ ಅಭಿರುಚಿಯನ್ನೇ ಆಧರಿಸಿದ್ದು. ನಾವು ಗಮನಿಸಿದ ಇಪ್ಪತ್ತೊಂಬತ್ತು ಪ್ರಬಂಧಗಳೂ ಕನ್ನಡದಲ್ಲಿ ಲಲಿತಪ್ರಬಂಧಕ್ಕೆ ತೀರ ಕೊನೆಗಾಲ ಬಂದಿಲ್ಲ ಅನ್ನುವುದನ್ನೇ ಸೂಚಿಸುತ್ತದೆ. ಆಳವಾದ ತಿಳಿವಳಿಕೆ, ಗಹನವಾದ ವಿಚಾರವನ್ನು ಲಲಿತವಾದ ರೀತಿಯಲ್ಲಿ ಓದುಗರಿಗೆ ರುಚಿಸುವಂತೆ ಬಡಿಸುವುದು ಹೇಗೆ ಅನ್ನುವುದಕ್ಕೆ ಫಾರ್ಮುಲಾಗಳಿಲ್ಲ. ಲೇಖಕರು ಅದನ್ನು ಪ್ರತಿ ಬರಹದಲ್ಲೂ ಹೊಸದಾಗಿ ಕಂಡುಕೊಳ್ಳಬೇಕು. ಅಡುಗೆ ದಿನ ನಿತ್ಯದ ಕಟ್ಟಳೆಯಾದ ಹಾಗೇ ಬರಹವೂ ದಿನ ನಿತ್ಯದ ಅನಿವಾರ್ಯವಾದಾಗ ಬರಹದ ರಹಸ್ಯಗಳು ಹೊಳೆದಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT