ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತ ವ್ಯರ್ಥವಾಗುವುದು ತಡೆಯುವ ಸವಾಲು...

ಸಂಗ್ರಹಿಸಿದ ರಕ್ತ ಪೂರ್ತಿ ಸದ್ಬಳಕೆ ಆಗುತ್ತಿಲ್ಲ ಏಕೆ?
Last Updated 12 ಜನವರಿ 2018, 19:30 IST
ಅಕ್ಷರ ಗಾತ್ರ

ದೇಶದಲ್ಲಿ ಪ್ರತಿವರ್ಷ ಸುಮಾರು 1.2 ಕೋಟಿ ಯೂನಿಟ್‌ಗಳಷ್ಟು ರಕ್ತದ ಅಗತ್ಯ ಇದ್ದರೂ ಒಂದು ಕೋಟಿ ಯೂನಿಟ್‌ಗಳಷ್ಟು ಮಾತ್ರ ರಕ್ತ ಸಂಗ್ರಹವಾಗುತ್ತಿದೆ. 20 ಲಕ್ಷ ಯೂನಿಟ್‌ನಷ್ಟು ರಕ್ತದ ಕೊರತೆ ನೀಗಿಸುವುದು ದೊಡ್ಡ ಸವಾಲು. ಆದರೆ, ಸಂಗ್ರಹಿಸಲಾದ ರಕ್ತದಲ್ಲಿ ವರ್ಷಕ್ಕೆ 10 ಲಕ್ಷ ಯೂನಿಟ್‌ಗಿಂತಲೂ ಹೆಚ್ಚು ರಕ್ತ ಹಾಳಾಗಿ ಹೋಗುತ್ತಿದೆ ಎಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ರಕ್ತದ ಕೊರತೆ ಮತ್ತು ಸಂಗ್ರಹಿಸಲಾದ ಅಮೂಲ್ಯ ರಕ್ತ ಹಾಳಾಗುತ್ತಿರುವುದರ ಬಗೆಗಿನ ಒಂದು ನೋಟ ಇಲ್ಲಿದೆ.

* ಸಂಗ್ರಹಿಸಲಾದ ರಕ್ತದ ಬಗ್ಗೆ ಸರಿಯಾದ ಕಾಳಜಿ ವಹಿಸುತ್ತಿಲ್ಲ ಎಂಬ ಅನುಮಾನ ಬರಲು ಕಾರಣವೇನು?
ರಕ್ತ ವ್ಯರ್ಥವಾಗುತ್ತಿದೆ ಎಂಬ ಸುದ್ದಿ ಕೇಂದ್ರದ ಆರೋಗ್ಯ ಸಚಿವರು ಲೋಕಸಭೆಗೆ ಮಾಹಿತಿ ನೀಡುವುದಕ್ಕೂ ಮೊದಲೇ ಬಹಿರಂಗವಾಗಿತ್ತು. ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆಯಲ್ಲಿ (ನ್ಯಾಕೊ) ಕೆಲಸ ಮಾಡುವ ಚೇತನ್‌ ಕೊಠಾರಿ ಅವರು ಮಾಹಿತಿ ಹಕ್ಕು ಅಡಿಯಲ್ಲಿ ಕಳೆದ ವರ್ಷ ಅರ್ಜಿ ಸಲ್ಲಿಸಿದ್ದರು. 2017ಕ್ಕೂ ಹಿಂದಿನ ಐದು ವರ್ಷಗಳಲ್ಲಿ ಒಟ್ಟು 28 ಲಕ್ಷ ಯೂನಿಟ್‌ ರಕ್ತ ಹಾಳಾಗಿ ಹೋಗಿತ್ತು ಎಂಬ ಮಾಹಿತಿಯನ್ನು ಅವರಿಗೆ ನೀಡಲಾಗಿತ್ತು. ಇದನ್ನು ಲೀಟರ್‌ಗಳಲ್ಲಿ ಅಳೆದರೆ ಅದು ಆರು ಲಕ್ಷ ಲೀಟರ್‌ಗಳಷ್ಟಾಗುತ್ತದೆ. ಟ್ಯಾಂಕರ್‌ಗಳಲ್ಲಿ ತುಂಬಿದರೆ 53 ಟ್ಯಾಂಕರ್‌ಗಳಷ್ಟಾಗುತ್ತದೆ.

* ರಕ್ತದ ಬಳಕೆ ಸಾಧ್ಯವಾಗದಿರುವುದು ಯಾಕೆ?
ಸಂಗ್ರಹಿಸಲಾದ ರಕ್ತದಲ್ಲಿ ಮಲೇರಿಯಾ, ಸಿಫಿಲಿಸ್‌, ಎಚ್‌ಐವಿ, ಹೆಪಟೈಟಿಸ್‌ನಂತಹ ಸೋಂಕುಗಳು ಪತ್ತೆಯಾದರೆ ಅಂತಹ ರಕ್ತವನ್ನು ವಿಸರ್ಜಿಸಲಾಗುತ್ತದೆ. ಪ್ಲೇಟ್‌ಲೆಟ್‌ಗಳನ್ನು ಐದು ದಿನ ಮಾತ್ರ ಬಳಸುವುದಕ್ಕೆ ಸಾಧ್ಯ. ಕೆಲವೊಮ್ಮೆ ಸಂಗ್ರಹದ ಸಮಸ್ಯೆಯಿಂದಾಗಿ ರಕ್ತವು ಬಣ್ಣಗೆಡುತ್ತದೆ, ರಕ್ತದಲ್ಲಿನ ಬಿಳಿ ರಕ್ತ ಕಣಗಳು ಬಿಡುಗಡೆಯಾಗಿ ಬಳಕೆಗೆ ಅಯೋಗ್ಯವಾಗುತ್ತದೆ ಮತ್ತು ಬ್ಯಾಕ್ಟೀರಿಯಾ ಕೂಡ ಕಾಣಿಸಿಕೊಳ್ಳುತ್ತದೆ. ಸಂಗ್ರಹದ ನಂತರ ಗುಣಮಟ್ಟದ ಮಾನದಂಡಗಳನ್ನು ಅನುಸರಿಸದೇ ಇರುವುದು ಕೂಡ ರಕ್ತ ವ್ಯರ್ಥವಾಗಲು ಕಾರಣ.

* ಹಾಳಾಗುವುದಕ್ಕೆ ಮೊದಲು ರಕ್ತದ ಕಣಗಳನ್ನು ಬೇರ್ಪಡಿಸಿ ಬಳಸಲು ಸಾಧ್ಯವಾಗುವುದಿಲ್ಲವೇ?
ರಕ್ತವನ್ನು ಕಣಗಳು, ಪ್ಲೇಟ್‌ಲೆಟ್, ಪ್ಲಾಸ್ಮಾ ಮತ್ತು ಪೂರ್ಣ ರಕ್ತದ ರೂಪದಲ್ಲಿ ಬಳಸಲಾಗುತ್ತಿದೆ. ಪೂರ್ಣ ರಕ್ತವನ್ನು 35 ದಿನ ಇರಿಸಿ ಬಳಸುವುದಕ್ಕೆ ಸಾಧ್ಯವಿದೆ. ಪ್ಲಾಸ್ಮಾವನ್ನು ಒಂದು ವರ್ಷದವರೆಗೆ ಸಂಗ್ರಹಿಸಿ ಇರಿಸಬಹುದು. ಆತಂಕಕಾರಿ ಅಂಶವೆಂದರೆ, ವ್ಯರ್ಥವಾಗುತ್ತಿರುವ ರಕ್ತದಲ್ಲಿ ಶೇ 50ಕ್ಕಿಂತ ಹೆಚ್ಚು ಪ್ಲಾಸ್ಮಾವೇ ಇದೆ. ಹಲವು ಔಷಧ ಕಂಪನಿಗಳು, ಘನೀಕರಿಸಿದ ಪ್ಲಾಸ್ಮಾವನ್ನು ಆಮದು ಮಾಡಿಕೊಳ್ಳುತ್ತಿವೆ. 2016–17ನೇ ವರ್ಷದಲ್ಲಿ ಭಾರತದಲ್ಲಿ ಹಾಳಾಗಿ ಹೋದ ಪ್ಲಾಸ್ಮಾ ಪ್ರಮಾಣವೇ ಮೂರು ಲಕ್ಷ ಯೂನಿಟ್‌ಗೂ ಹೆಚ್ಚು.

* ರಕ್ತ ನಿಧಿಗಳು ಮತ್ತು ಆಸ್ಪತ್ರೆಗಳ ನಡುವಣ ಸಮನ್ವಯ...
ರಕ್ತ ನಿಧಿಗಳು ಮತ್ತು ಆಸ್ಪತ್ರೆಗಳ ನಡುವೆ ರಕ್ತ ವಿನಿಮಯಕ್ಕೆ ಬೇಕಾದ ಸಮನ್ವಯ ಇಲ್ಲ. ಅದುವೇ ರಕ್ತ ಹಾಳಾಗಲು ಮುಖ್ಯ ಕಾರಣ ಎಂದು ಕೊಠಾರಿ ಆರೋಪಿಸಿದ್ದಾರೆ. ಸಂಘ ಸಂಸ್ಥೆಗಳು ಸರಿಯಾದ ಮಾರ್ಗದರ್ಶನ ಇಲ್ಲದೆ ರಕ್ತದಾನ ಶಿಬಿರಗಳನ್ನು ಏರ್ಪಡಿಸುವುದು ರಕ್ತ ಹಾಳಾಗುವುದಕ್ಕೆ ಒಂದು ಕಾರಣ. ಒಂದು ಶಿಬಿರದಲ್ಲಿ ಗರಿಷ್ಠ ಎಂದರೆ 500 ಯೂನಿಟ್‌ ರಕ್ತ ಸಂಗ್ರಹಿಸಬಹುದು. ಒಂದು ದಿನದಲ್ಲಿ ಅದಕ್ಕಿಂತ ಹೆಚ್ಚಿನ ರಕ್ತ ಸಂಗ್ರಹವಾದರೆ ಅದನ್ನು ಸಂಗ್ರಹಿಸಿಡಲು ಬೇಕಾದ ಮೂಲಸೌಕರ್ಯ ನಮ್ಮಲ್ಲಿ ಇಲ್ಲ. ಆದರೆ ಕೆಲವು ಶಿಬಿರಗಳಲ್ಲಿ ಸಾವಿರಕ್ಕೂ ಹೆಚ್ಚು ಯೂನಿಟ್‌ ರಕ್ತ ಸಂಗ್ರಹವಾಗುತ್ತದೆ.

* ದೇಶದಲ್ಲಿ ರಕ್ತದಾನ ನಿಯಂತ್ರಣ ವ್ಯವಸ್ಥೆಗಳೇನು?
ರಾಷ್ಟ್ರಮಟ್ಟದಲ್ಲಿ ಕೇಂದ್ರೀಕೃತ ರಕ್ತದಾನ ವ್ಯವಸ್ಥೆ ಇಲ್ಲ. ಆರೋಗ್ಯವು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿರುವುದರಿಂದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯ ರಕ್ತದಾನ ಮಂಡಳಿಗಳನ್ನು ಸ್ಥಾಪಿಸಲಾಗಿದೆ. ಸಂಗ್ರಹಗೊಂಡ ರಕ್ತ ವ್ಯರ್ಥವಾಗದಂತೆ ನೋಡಿಕೊಳ್ಳುವ ಹೊಣೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಮತ್ತು ರಾಜ್ಯಗಳ ಆಹಾರ ಮತ್ತು ಔಷಧ ಪ್ರಾಧಿಕಾರಗಳ ಮೇಲಿದೆ.

* ರಕ್ತ ವ್ಯರ್ಥವಾಗುವುದನ್ನು ತಡೆಯಲು ಸರ್ಕಾರ ಕೈಗೊಂಡ ನಿರ್ದಿಷ್ಟ ಕ್ರಮಗಳೇನು?
ಪರವಾನಗಿ ಹೊಂದಿರುವ ಎಲ್ಲ ರಕ್ತನಿಧಿಗಳು ಅಗತ್ಯ ಮತ್ತು ಬಳಕೆಯ ಸಾಮರ್ಥ್ಯಕ್ಕೆ ತಕ್ಕಷ್ಟು ರಕ್ತವನ್ನು ಮಾತ್ರ ಸಂಗ್ರಹಿಸಬೇಕು. ಇದನ್ನು ರಾಜ್ಯ ಆಹಾರ ಮತ್ತು ಔಷಧ ಪ್ರಾಧಿಕಾರ ನೋಡಿಕೊಳ್ಳಬೇಕು. 500 ಯೂನಿಟ್‌ಗಿಂತ ಹೆಚ್ಚು ರಕ್ತ ಸಂಗ್ರಹಿಸುವ ಸಂಘಟನೆಗಳು ರಾಜ್ಯ ಅಥವಾ ಕೇಂದ್ರದ ರಕ್ತದಾನ ಮಂಡಳಿಯ ಅನುಮತಿ ಪಡೆದುಕೊಳ್ಳಬೇಕು. ಸಂಗ್ರಹಿಸಲಾದ ರಕ್ತ ನಿರ್ವಹಣೆ ಸಾಧ್ಯವಾಗುವಂತೆ ಪರವಾನಗಿ ಪಡೆದಿರುವ ರಕ್ತನಿಧಿಗಳ ತಂಡಗಳನ್ನು ಈ ಮಂಡಳಿಯು ಅಲ್ಲಿ ನಿಯೋಜಿಸುತ್ತದೆ.

ಪರವಾನಗಿ ಹೊಂದಿರುವ ರಕ್ತನಿಧಿಗಳ ನಡುವೆ ರಕ್ತ ವಿನಿಮಯಕ್ಕೆ ಅವಕಾಶ ಇದೆ.  ಹೆಚ್ಚುವರಿ ರಕ್ತವನ್ನು ಪ್ಲಾಸ್ಮಾ ಪ್ರತ್ಯೇಕೀಕರಣಕ್ಕೆ ನೀಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ರಕ್ತದ ಲಭ್ಯತೆಯ ಮಾಹಿತಿಯನ್ನು ಇ–ರಕ್ತಕೋಶ ಆ್ಯಪ್‌ ಮೂಲಕ ಜನರಿಗೆ ತಲುಪಿಸಲು ಸೂಚಿಸಲಾಗಿದೆ.

ಮುಂಚೂಣಿಯಲ್ಲಿ ಮಹಾರಾಷ್ಟ್ರ

ವರ್ಷಕ್ಕೆ 10 ಲಕ್ಷ ಯೂನಿಟ್‌ಗೂ ಹೆಚ್ಚು ರಕ್ತ ಸಂಗ್ರಹಿಸುತ್ತಿರುವ ಏಕೈಕ ರಾಜ್ಯ ಮಹಾರಾಷ್ಟ್ರ. ರಕ್ತವನ್ನು ಅತಿಹೆಚ್ಚು ವ್ಯರ್ಥ ಮಾಡುತ್ತಿರುವ ರಾಜ್ಯಗಳಲ್ಲಿಯೂ ಅದು  ಮುಂಚೂಣಿಯಲ್ಲಿದೆ.

ನಂತರದ ಸ್ಥಾನದಲ್ಲಿ ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ಇವೆ. ಕೆಂಪು ರಕ್ತ ಕಣಗಳು ಹೆಚ್ಚಿನ ಪ್ರಮಾಣದಲ್ಲಿ ವ್ಯರ್ಥವಾಗುತ್ತಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ಕರ್ನಾಟಕ ಇವೆ. ಘನೀಕೃತ ಪ್ಲಾಸ್ಮಾಗಳು ಉತ್ತರಪ್ರದೇಶ ಮತ್ತು ಕರ್ನಾಟಕದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ವ್ಯರ್ಥವಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT