ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್‌ ಲಾಭ ಹೆಚ್ಚಳ

ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದ ಫಲಿತಾಂಶ
Last Updated 12 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಎರಡನೆ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆ ಇನ್ಫೊಸಿಸ್‌, ಮೂರನೇ ತ್ರೈಮಾಸಿಕದಲ್ಲಿ ಮಾರುಕಟ್ಟೆ ನಿರೀಕ್ಷೆ ತಲೆಕೆಳಗು ಮಾಡಿ ₹ 5,129 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ವರ್ಷದ ಹಿಂದಿನ ಇದೇ ಅವಧಿಯಲ್ಲಿನ ₹ 3,708 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ, ಈ ಬಾರಿ ಶೇ 38.3ರಷ್ಟು ಏರಿಕೆಯಾಗಿದೆ. ಅಕ್ಟೋಬರ್‌ – ಡಿಸೆಂಬರ್‌ ಅವಧಿಯಲ್ಲಿ ಸಂಸ್ಥೆಯ ವರಮಾನವು ವರ್ಷದ ಹಿಂದಿನ ₹ 17,273 ಕೋಟಿಗಳಿಗೆ ಹೋಲಿಸಿದರೆ ಈ ಬಾರಿ ಶೇ 3ರಷ್ಟು ಏರಿಕೆಯಾಗಿ ₹ 17,794 ಕೋಟಿಗಳಿಗೆ ತಲುಪಿದೆ. 2017–18ರ ವಹಿವಾಟು ಬೆಳವಣಿಗೆಯ ಮುನ್ನೋಟವು ಶೇ 5.5ರಿಂದ ಶೇ 6.5ರಷ್ಟು ಇರಲಿದೆ ಎಂದು ಸಂಸ್ಥೆ ಅಂದಾಜಿಸಿದೆ.

ಏಪ್ರಿಲ್‌ನಲ್ಲಿ ಭವಿಷ್ಯದ ಮುನ್ನೋಟ: ಸಂಸ್ಥೆಯ ವಹಿವಾಟಿನ ಆದ್ಯತೆಗಳನ್ನು ತಾವು ಏಪ್ರಿಲ್‌ ತಿಂಗಳಲ್ಲಿ ಪ್ರಕಟಿಸುವುದಾಗಿ ಹೊಸ ಸಿಇಒ ಸಲೀಲ್‌ ಪಾರೇಖ್‌ ಅವರು ಹೇಳಿದ್ದಾರೆ. ಅವರು ಇದೇ 2ರಂದು ಅಧಿಕಾರವಹಿಸಿಕೊಂಡಿದ್ದಾರೆ.

ಶುಕ್ರವಾರ ಇಲ್ಲಿ ಇದೇ ಮೊದಲ ಬಾರಿಗೆ ಮಾಧ್ಯಮದವರ ಜತೆ ಸಂವಾದ ನಡೆಸಿದ ಪಾರೇಖ್‌ ಅವರು, ‘ಸಂಸ್ಥೆಯ ಗ್ರಾಹಕರು ಮತ್ತು ಉದ್ಯೋಗಿಗಳ ಜತೆ ಸಂವಹನ ನಡೆಸುವುದು ನನ್ನ ಮೊದಲ ಆದ್ಯತೆ ಆಗಿದೆ. ಭವಿಷ್ಯದ ಮುನ್ನೋಟವನ್ನು ಏಪ್ರಿಲ್‌ನಲ್ಲಿ ಪ್ರಕಟಿಸುವೆ’ ಎಂದು ಹೇಳಿದರು.

‘ಸಂಸ್ಥೆಯ ನಿವ್ವಳ ಲಾಭವು ನಿರೀಕ್ಷೆಗಿಂತ ಹೆಚ್ಚಿಗೆ ಇದೆ. ಸಂಸ್ಥೆಯು ಅಮೆರಿಕದ ಟ್ರಂಪ್‌ ಆಡಳಿತ ಜತೆ ಮಾಡಿಕೊಂಡ ಒಪ್ಪಂದದಿಂದಾಗಿ  ಕಾಯ್ದಿರಿಸಿದ್ದ ₹ 1,434 ಕೋಟಿಗಳಷ್ಟು ತೆರಿಗೆ ಹಣವು ಸಂಸ್ಥೆಗೆ ವಾಪಸ್‌ ಬಂದಿದೆ. ಇದರಿಂದ ಪ್ರತಿ ಷೇರಿನ ಮೂಲ ಗಳಿಕೆಯು ₹ 6.29ರಷ್ಟು ಹೆಚ್ಚಳಗೊಂಡಿದೆ. ಲಾಭ ಏರಿಕೆಯಾಗಲು ಇದು ಕೂಡ ಕಾರಣವಾಗಿದೆ.

’ನಮ್ಮ ಡಿಸೆಂಬರ್‌ ತ್ರೈಮಾಸಿಕದ ಸಾಧನೆ ಉತ್ತಮವಾಗಿದೆ. ನಾವು ಸ್ಥಿರತೆಯತ್ತ ಸಾಗುತ್ತಿದ್ದೇವೆ. ನಮ್ಮ ಗ್ರಾಹಕರ ಹೊಸ ಬೇಡಿಕೆಗಳನ್ನು ಒದಗಿಸುವ ವಿಷಯದಲ್ಲಿ ನಾವು ಸಮರ್ಥರಾಗಿದ್ದೇವೆ.

‘ಸಂಸ್ಥೆಯ ಗ್ರಾಹಕರು ಎಲ್ಲೆಡೆ ಡಿಜಿಟಲ್‌ ಅಡಚಣೆ ಎದುರಿಸುತ್ತಿದ್ದಾರೆ. ಇದು ವಹಿವಾಟು ವಿಸ್ತರಿಸಲು ನಮಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಹೊಸ ಮಾರುಕಟ್ಟೆ ಅವಕಾಶಗಳು, ಗ್ರಾಹಕರ ಜತೆಗಿನ ಸಂಬಂಧ ಮತ್ತು ಸೇವೆಗಳ ಕುರಿತು ಸಂಸ್ಥೆಯ ಭವಿಷ್ಯದ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಮುಂದಿನ ಮೂರು ತಿಂಗಳ ಕಾಲ ನಾನು ಅನೇಕರ ಜತೆ ಚರ್ಚಿಸಿ ಸಂಸ್ಥೆಯ ಮುಂದಿರುವ ಸವಾಲುಗಳ ಕುರಿತು ಸಮಗ್ರ ನಿಲುವಿಗೆ ಬರುವೆ’ ಎಂದರು.

ಅಧ್ಯಕ್ಷ ರಾಜೀನಾಮೆ: ಸಂಸ್ಥೆಯ ಅಧ್ಯಕ್ಷ ರಾಜೇಶ್‌ ಕೆ. ಮೂರ್ತಿ ಅವರು ವೈಯಕ್ತಿಕ ಕಾರಣಗಳಿಗಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಮೂರ್ತಿ ಅವರು ಈ ತಿಂಗಳ 31ರವರೆಗೆ ಹುದ್ದೆಯಲ್ಲಿ ಇರಲಿದ್ದಾರೆ.
***
2,01,000
ಸಂಸ್ಥೆಯ ಒಟ್ಟು ಸಿಬ್ಬಂದಿ ಸಂಖ್ಯೆ
3,251
ಈ ತ್ರೈಮಾಸಿಕದಲ್ಲಿ ಸೇರ್ಪಡೆಯಾದ ಹೊಸ ಸಿಬ್ಬಂದಿ
ಶೇ 17.2 ರಿಂದ ಶೇ 15.8
ಸಂಸ್ಥೆ ತೊರೆಯುವವರ ಪ್ರಮಾಣದಲ್ಲಿನ ಇಳಿಕೆ
₹ 1,079
ಶುಕ್ರವಾರದ ವಹಿವಾಟಿನಲ್ಲಿ ಸಂಸ್ಥೆಯ ಷೇರಿನ ಬೆಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT