ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಹರಿಬಿಟ್ಟ ‘ಯೋಗಿ ರೆಸಿಪಿ’ ವಿಡಿಯೊ ವೈರಲ್‌

Last Updated 15 ಜನವರಿ 2018, 12:48 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧದ ಆರೋಪಗಳ ಪಟ್ಟಿ ಬಳಸಿಕೊಂಡು ಕಾಂಗ್ರೆಸ್ ಪಕ್ಷ ತಯಾರಿಸಿರುವ ‘ರೆಸಿಪಿ’ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಘಟಕವು ತನ್ನ ಫೇಸ್‌ಬುಕ್‌, ಟ್ವಿಟರ್‌ ಮತ್ತು ಯೂಟ್ಯೂಬ್‌ ಖಾತೆಗಳಲ್ಲಿ ಈ ವಿಡಿಯೊ ಬಿಡುಗಡೆ ಮಾಡಿದೆ. #RecipeforDisaster ಹ್ಯಾಷ್‌ಟ್ಯಾಗ್‌ ಜತೆಗೆ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ‘ಉತ್ತರ ಪ್ರದೇಶದಲ್ಲಿ ಕೋಮು ಸಾಮರಸ್ಯ ಹಾಳು ಮಾಡಿರುವ ಯೋಗಿ ಆದಿತ್ಯನಾಥ ಕರ್ನಾಟಕದಲ್ಲೂ ಕೋಮುದ್ವೇಷ ಬಿತ್ತಲು ಬರುತ್ತಿದ್ದಾರೆ’ ಎಂದು ವಿಡಿಯೊದಲ್ಲಿ ಆರೋಪಿಸಲಾಗಿದೆ.

‘ಅಪರಾಧ ಪ್ರಕರಣಗಳು– 1 ಕೆ.ಜಿ., ಕೇಸರಿ ನೀರು– 1 ಲೀಟರ್‌, ಮೊಸಳೆ ಕಣ್ಣೀರು– ಅರ್ಧ ಕಪ್, ಸಲಿಂಗಿಗಳ ವಿರುದ್ಧದ ಅಸಹಿಷ್ಣುತೆ– 1 ಕಪ್, ಮಹಿಳೆಯರ ಬಗೆಗಿನ ಪೂರ್ವಗ್ರಹ– 2 ಚಮಚ ಮತ್ತು ಅಭಿವೃದ್ಧಿ ಬಗೆಗಿನ ಗಮನ– ಶೂನ್ಯ, ಇವೆಲ್ಲವನ್ನೂ ಕೋಮು ಜ್ವಾಲೆಯಲ್ಲಿ ಬೇಯಿಸಿ ತಯಾರಿಸಿದ ವಿಕೋಪದ ಅಡುಗೆಯನ್ನು ದ್ವೇಷದೊಂದಿಗೆ ಕರ್ನಾಟಕದಲ್ಲೂ ಬಡಿಸಲಾಗುತ್ತದೆ’ ಎಂದು ವಿಡಿಯೊದಲ್ಲಿ ದೂರಲಾಗಿದೆ.

ಈ ವಿಡಿಯೊ ಅನ್ನು ಫೇಸ್‌ಬುಕ್‌ನಲ್ಲಿ 76 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 1,400ಕ್ಕೂ ಹೆಚ್ಚು ಮಂದಿ ಈ ವಿಡಿಯೊ ಶೇರ್ ಮಾಡಿದ್ದಾರೆ. 4,600ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ ಬಿಜೆಪಿಯ ತಾರಾ ಪ್ರಚಾರಕರಾಗಿರುವುದರಿಂದ ಕಾಂಗ್ರೆಸ್ ಈ ವಿಡಿಯೊ ಬಳಸಿಕೊಳ್ಳಲು ಮುಂದಾಗಿದೆ ಎಂದೂ ಹೇಳಲಾಗುತ್ತಿದೆ.

‘ಜೈಲಿಗೆ ಹೋಗಿಬಂದವರಿಂದ ಜೈಲ್ ಭರೋ’
ಕರ್ನಾಟಕ ಕಾಂಗ್ರೆಸ್‌ನ ಟ್ವಿಟರ್‌ ಖಾತೆಯಿಂದ ಟ್ವೀಟ್‌ ಮಾಡಿರುವ ‘ಜೈಲ್ ಭರೋ’ ಚಿತ್ರ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಜೈಲಿಗೆ ಹೋಗಿಬಂದವರಿಂದ ಜೈಲ್ ಭರೋ’ ಎಂಬ ಬರಹದೊಂದಿಗೆ ಈ ಚಿತ್ರವನ್ನು ಟ್ವೀಟ್ ಮಾಡಲಾಗಿದೆ. ಇದರಲ್ಲಿ ಬಿಜೆಪಿಯ ಹರತಾಳು ಹಾಲಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕಟ್ಟಾ ಜಗದೀಶ್, ಕೃಷ್ಣಯ್ಯ ಶೆಟ್ಟಿ, ಬಿ.ಎಸ್‌. ಯಡಿಯೂರಪ್ಪ, ಜನಾರ್ದನ ರೆಡ್ಡಿ, ವೈ. ಸಂಪಂಗಿ, ಸೋಮಶೇಖರ ರೆಡ್ಡಿ, ಆನಂದ ಸಿಂಗ್‌ ಮತ್ತು ಕಂಪ್ಲಿ ಸುರೇಶ್‌ ಬಾಬು ಅವರು ಕಂಬಿಗಳ ಹಿಂದೆ ಇರುವಂತೆ ಚಿತ್ರಿಸಲಾಗಿದೆ. ಇದರೊಂದಿಗೆ ಯೋಗಿ ಆದಿತ್ಯನಾಥ ಮತ್ತು ಬಿ.ಎಸ್. ಯಡಿಯೂರಪ್ಪ ಅವರು ಆರೋಪಗಳ ಸ್ಲೇಟ್‌ ಹಿಡಿದಿರುವಂತೆ ವಿನ್ಯಾಸ ಮಾಡಿರುವ ಚಿತ್ರಗಳನ್ನೂ ಟ್ವೀಟ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT