ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನಿಗ್ಧ ಸೌಂದರ್ಯದ ‘ಸೋರ್‌ತಾಲ್‌’

ಪ್ರವಾಸ ಕಥನ ಸೋರ್‌ ತಾಲ್‌ ಹಿಮಾಲಯ ಟ್ರೆಕ್ಕಿಂಗ್‌
Last Updated 13 ಜನವರಿ 2018, 19:30 IST
ಅಕ್ಷರ ಗಾತ್ರ

ಓಹೋ..!’

ಬಲಗೈ ಮುಷ್ಟಿಯನ್ನು ಆಕಾಶಕ್ಕೆ ಗುದ್ದುವಂತೆ ನೆಲದಿಂದ ಮೇಲಕ್ಕೆ ಹಾರಿ ಕೂಗುತ್ತಾ ಭುವನ್ ಸಂಭ್ರಮಿಸಿದ.

ಹಿಂದೆಯೇ ಇದ್ದ ಇತರರಲ್ಲೂ ಅಂತಹದೇ ಆನಂದತುಂದಿಲತೆ. ನಾವು ನಿಂತಿದ್ದ ಪರ್ವತ ಶೃಂಗದ ಇಳಿಜಾರು, ಮತ್ತೊಂದು ಪರ್ವತದ ಇಳಿಜಾರನ್ನು ಸಂಧಿಸುವೆಡೆ ‘ಸೋರ್‌ತಾಲ್‌’ನ ದರ್ಶನವಾಯ್ತು. ಅದೊಂದು ಪರ್ವತ ಪ್ರದೇಶದಲ್ಲಿ ರೂಪುಗೊಂಡಿದ್ದ ಪುಟ್ಟ ಕೊಳ. ಮೇ ತಿಂಗಳು ಎರಡನೇ ವಾರಕ್ಕೆ ಕಾಲಿಟ್ಟಿದ್ದರೂ, ಸಮುದ್ರಮಟ್ಟದಿಂದ ಹನ್ನೆರಡು ಸಾವಿರದ ನೂರೈವತ್ತು ಅಡಿ ಎತ್ತರದಲ್ಲಿದ್ದ ಸೋರ್‌ತಾಲ್‌‍ನ ಹೆಪ್ಪುಗಟ್ಟಿದ್ದ ಹಿಮವಿನ್ನೂ ಕರಗಿರಲಿಲ್ಲ. ಕೊಳದ ಮಧ್ಯಭಾಗದ ಹಿಮವೊಂದಿಷ್ಟು ಕರಗಿ ತೆಳುವಾಗಿ, ಆಂತರ್ಯದಲ್ಲಿ ನೀರಿರುವ ಸೂಚನೆಯನ್ನು ನೋಡುಗರಿಗೆ ನೀಡುತ್ತಿತ್ತು. ಘನ ಗಾಂಭೀರ್ಯದಲ್ಲಿ ಎದೆಸೆಟೆಸಿ ನಿಂತಿದ್ದ ಹಿಮಾಚ್ಛಾದಿತ ಪರ್ವತಗಳು 360 ಡಿಗ್ರಿ ಕೋನದಲ್ಲಿ ನಮ್ಮನ್ನೆಲ್ಲ ಸುತ್ತುವರೆದಿದ್ದವು. ಪ್ರಶಾಂತವಾದ ವಾತಾವರಣ ತನ್ನೆಲ್ಲ ನೈರ್ಮಲ್ಯದಿಂದ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿತ್ತು. ಆರು ದಿನಗಳ ನಿರಂತರ ಪರ್ವತಾರೋಹಣದ ಆಯಾಸವೆಲ್ಲ ಕ್ಷಣಾರ್ಧದಲ್ಲಿ ಕಣ್ಮರೆಯಾಗಿತ್ತು.

ಪೂರ್ವ ತಯಾರಿ

‘ಕರ್ನಾಟಕ ಮೌಂಟನೇರಿಂಗ್ ಅಸೋಸಿಯೇಷನ್’ ತನ್ನ 50ನೇ ವರ್ಷಾಚರಣೆಯ ಸಂಭ್ರಮಕ್ಕೆಂದು ವರ್ಷವಿಡೀ ಆಯೋಜಿಸಿದ್ದ ಪರ್ವತಾರೋಹಣಗಳಲ್ಲಿ ಹಿಮಾಲಯದ ‘ಸೋರ್‌ತಾಲ್‌’ ಚಾರಣವೂ ಒಂದು. ಟೀಮ್‌ ಲೀಡರ್ ಪೂರ್ಣಿಮಾ ಸೇರಿದಂತೆ ಒಟ್ಟು ನಲವತ್ತು ಜನರಿದ್ದ ತಂಡವದು. ಹನ್ನೆರಡರ ವಯಸ್ಸಿನ ಪೋರ ಪೋರಿಯರಿಂದ ಹಿಡಿದು, ಐವತ್ತೆಂಟು ದಾಟಿದ್ದ ಹಿರಿಯರೂ ಗುಂಪಿನಲ್ಲಿದ್ದರು. ಚಾರಣ ನಿಗದಿಯಾದ ಆರು ತಿಂಗಳು ಮೊದಲೇ ಎಲ್ಲಾ ಸದಸ್ಯರನ್ನು ಒಳಗೊಂಡ ವಾಟ್ಸ್‌ಆ್ಯಪ್‌ ಗುಂಪೊಂದನ್ನು ಆರಂಭಿಸಲಾಯಿತು. ಎಂಬತ್ತು ಕಿಲೋಮೀಟರಿಗೂ ಹೆಚ್ಚು ದಾರಿಯನ್ನು ಕ್ರಮಿಸಬೇಕಿದ್ದ ಚಾರಣದ ಪೂರ್ವಸಿದ್ಧತೆಗಳೆಲ್ಲ ವಾಟ್ಸ್‌ಆ್ಯಪ್‌ನಲ್ಲೇ ಚರ್ಚಿತವಾದವು. ಮಂಡಿಯ ರಕ್ಷಣೆಗೆ ತೊಡುವ ನೀ- ಕ್ಯಾಪ್‍ನಿಂದ ಹಿಡಿದು ಚಾರಣಕ್ಕೆ ಸೂಕ್ತವಾದ ಶೂ, ಬೆಚ್ಚನೆಯ ಉಡುಪುಗಳು, ಆರೋಗ್ಯ ರಕ್ಷಣೆ... ಹೀಗೆ ಪ್ರತಿಯೊಂದು ವಿಷಯಕ್ಕೂ ಆದ್ಯತೆ ನೀಡಲಾಯಿತು. ಬಹುತೇಕರಿಗಿದು ತಮ್ಮ ಮೊದಲ ಪರ್ವತಾರೋಹಣದ ಅನುಭವವಾದ್ದರಿಂದ ಆತಂಕಗಳು ಅನೇಕವಿದ್ದವು. ಹಾಗಾಗಿ, ಪ್ರಶ್ನೆಗಳೂ ಭರಪೂರ ಬಂದವು. ಎಂತಹದೇ ಪ್ರಶ್ನೆಗೂ ಪೂರ್ಣಿಮಾ ಅವರ ತಕ್ಷಣದ ಉತ್ತರವಿರುತ್ತಿತ್ತು.

ಮನಾಲಿಯ ಪ್ರಿನಿ ಎಂಬಲ್ಲಿದ್ದ ಬೇಸ್‌ ಕ್ಯಾಂಪಿನೆಡೆ ಪ್ರಯಾಣ ಬೆಳೆಸಲು ಬೆಂಗಳೂರಿನಿಂದ ದೆಹಲಿಗೆ ವಿಮಾನದಲ್ಲಿ ಹಾರಿ, ಹಿಮಾಚಲ ಭವನದ ಬಳಿ ಎಲ್ಲರೂ ಒಟ್ಟಾದೆವು. ದೆಹಲಿಯ ಮೇ ತಿಂಗಳ ಬಿರುಬಿಸಿಲಿನ ಬೇಗೆಗೆ ಬಳಲಿ, ಸಂಜೆ ನಾಲ್ಕಕ್ಕೆ ಹಿಮಾಚಲ ಸರ್ಕಾರದ ಐಷಾರಾಮಿ ಬಸ್ ಏರಿ ಹೊರಟ ನಾವು ಮರುದಿನ ಮುಂಜಾನೆ ನಾಲ್ಕಕ್ಕೆಲ್ಲ ಮನಾಲಿಯ ಮೈಕೊರೆಯುವ ಚಳಿಯಲ್ಲಿ ನಡುಗುತ್ತಾ ನಿಂತಿದ್ದೆವು. ಆರು ಸಾವಿರ ಅಡಿ ಎತ್ತರದಲ್ಲಿದ್ದ ಪ್ರಿನಿ ಬೇಸ್‍ಕ್ಯಾಂಪ್‍ನ ಟೆಂಟ್‍ಗಳಲ್ಲಿ ಪ್ರಯಾಣದ ಆಯಾಸ ಕಳೆಯಲು ಬೆಳಗಿನ ಉಲ್ಲಾಸಕರ ಬಿಸಿನೀರು ಸ್ನಾನದ ನಂತರ ವಿರಾಮಕ್ಕೆ ಅವಕಾಶವಿತ್ತು. ನಂತರ ಪರ್ವತಾರೋಹಣದ ನಿಯಮಗಳ ಬಗ್ಗೆ ವಿವರಣೆ ದೊರೆಯಿತು. ಸಮಯ ಪಾಲನೆಯ ಶಿಸ್ತಿನ ಬಗ್ಗೆ ಮತ್ತೆ ಮತ್ತೆ ಎಚ್ಚರಿಸಲಾಯಿತು. ನಾಲ್ವರು ಪರ್ವತಾರೋಹಿ ತಜ್ಞರು ನಮ್ಮ ಗುಂಪಿನ ಜೊತೆಗೂಡಿದರು. ಹೊಂದಾಣಿಕೆ ನಡಿಗೆ ಎಂದು ಆ ದಿನ ಪರ್ವತ ಗ್ರಾಮವೊಂದರ ಜಮದಗ್ನಿ ದೇವಾಲಯಕ್ಕೆ ಹೋಗಿ ಬಂದದ್ದಾಯಿತು. ಎರಡನೇ ದಿನದ್ದೂ ಮತ್ತಷ್ಟು ಕ್ಲಿಷ್ಟಕರವಾದ 7200 ಅಡಿ ಎತ್ತರಕ್ಕೇರಿ ಇಳಿವ ಪರ್ವತ ನಡಿಗೆಯೇ.

ಸೋರ್‌ತಾಲ್‌ ಕಡೆಗೆ...

ಮೂರನೇ ದಿನ ಸೋರ್‌ತಾಲ್‌ ಕಡೆಗಿನ ನಮ್ಮ ಪಯಣ ಪ್ರಿನಿ ಕ್ಯಾಂಪಿನಿಂದ ಬೆಳಗ್ಗೆ ಎಂಟಕ್ಕೆ ಆರಂಭಗೊಂಡಿತು. ಒಬ್ಬರ ಹಿಂದೆ ಒಬ್ಬರಂತೆ ಚಾರಣದ ಶಿಸ್ತಿನ ನಡಿಗೆಯಲ್ಲಿ ಹಲವು ಪರ್ವತಗ್ರಾಮಗಳನ್ನು ದಾಟಿ, ಬೃಹದಾಕಾರದ ಪೈನ್ ಮರಗಳ ಅರಣ್ಯವನ್ನು ಹೊಕ್ಕು, ಎತ್ತರ ಎತ್ತರವನ್ನು ಏರುತ್ತ, ಮಧ್ಯಾಹ್ನ ಒಂದರ ಸುಮಾರಿಗೆ ಮನುಷ್ಯ ಸಂಪರ್ಕದಿಂದ ದೂರವಿದ್ದ ಕ್ಲೌಂಟ್ ಎಂಬ ಕ್ಯಾಂಪ್ ಸೈಟಿಗೆ ಬಂದು ತಲುಪಿದೆವು. ಎರಡು ದಿನಗಳ ಹೊಂದಾಣಿಕೆ ನಡಿಗೆ ನಮ್ಮ ದೇಹವನ್ನಾಗಲೇ ಪರ್ವತಾರೋಹಣದ ಕಠಿಣ ಕ್ಷಣಗಳಿಗೆ ಅಣಿಗೊಳಿಸಿತ್ತು. ಹಲವರಿಗೆ ಪರ್ವತ ಪ್ರದೇಶದ ಸಹಜ ದೈಹಿಕ ತೊಂದರೆಗಳು ಕಾಣಿಸಿಕೊಂಡರೂ, ಸ್ನೇಹಿತರ ಉತ್ತೇಜನ, ಹುರಿದುಂಬಿಸುವಿಕೆಯಲ್ಲಿ 7315 ಅಡಿ ಎತ್ತರವನ್ನು ಎಲ್ಲರೂ ಕ್ರಮಿಸಿದರು. ಕ್ಯಾಂಪಿನ ಸಿಬ್ಬಂದಿ ತಂಪು ಪಾನೀಯ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಮಧ್ಯಾಹ್ನದ ಊಟಕ್ಕಾಗಲೇ ತಯಾರಿ ನಡೆಯುತ್ತಿತ್ತು. ರೋಟಿ ಸಬ್ಜಿಗಳ ಉತ್ತರ ಭಾರತೀಯ ಭೋಜನ. ಊಟದ ನಂತರ ಒಂದಿಷ್ಟು ವಿರಾಮ. ಸಂಜೆ ನಾಲ್ಕಕ್ಕೆ ಟೀ. ಗೈಡ್‍ಗಳು ಹತ್ತಿರದಲ್ಲೇ ಮರಗಳೆರೆಡನ್ನು ಗುರುತಿಸಿ, ನಡುವೆ ಹಗ್ಗವೊಂದನ್ನು ಬಿಗಿದಿದ್ದರು. ಹಗ್ಗದ ಮೇಲಿನ ನಡಿಗೆಯ ಆಟ ಶುರುವಾಯಿತು. ಮಕ್ಕಳಿಂದ ಆರಂಭಗೊಂಡ ಆಟ, ಉತ್ಸಾಹದ ಅಲೆಯೊಂದನ್ನು ಎಬ್ಬಿಸಿ, ಪ್ರತಿಯೊಬ್ಬರೂ ತಮ್ಮ ಪ್ರದರ್ಶನವನ್ನು ನೀಡಿಯೇ ಬಿಟ್ಟರು. ನಗು- ಕೇಕೆಗಳು ಪರ್ವತ ಪ್ರದೇಶದ ಕಣಿವೆಗಳನ್ನು ದಾಟಿ ಮಾರ್ದನಿಸಿದವು. ಉಲ್ಲಾಸ ಮನೆ ಮಾಡಿತು. ಬೆಳಕು ಕಳೆದು ಕತ್ತಲಾಗುತ್ತಿದ್ದಂತೆ, ಚಳಿ ಬೀಳತೊಡಗಿತು. ಬೆಚ್ಚನೆ ಉಡುಪಿನ ಮೊರೆ ಹೋಗುವಷ್ಟರಲ್ಲಿ ರಾತ್ರಿ ಊಟ ತಯಾರಾಗಿತ್ತು. ಊಟ ಮುಗಿಸಿ ಮೈಕೊರೆಯುವ ಚಳಿಯಲ್ಲಿ ತಟ್ಟೆಗಳನ್ನು ತೊಳೆಯುವ ಕೆಲಸವೇ ಚಾರಣದ ಬಹು ಕಠಿಣ ಕೆಲಸದಂತೆ ಕಂಡಿತು. ಅಂಗೈನ ಸ್ಪರ್ಶ ಸಂವೇದನೆಯನ್ನೇ ಕಳೆಯುತ್ತಿದ್ದ ಶೈತ್ಯ ನೀರು!

(ಕಣ್ಣಾಡಿಸಿದಷ್ಟೂ ದೂರ ಹಬ್ಬಿಕೊಂಡಿರುವ ಪರ್ವತದ ಮೇಲಿಂದ ಹಾಲಿನ ಹೊಳೆ ಹರಿಸಿದವರಾರು?)

ಪ್ರತಿದಿನ ಮುಂಜಾನೆ ಬೆಳಕು ಹರಿಯುವ ಮುನ್ನವೇ ಎದ್ದು, ನಿತ್ಯಕರ್ಮಗಳನ್ನು ಮುಗಿಸಿದ ಬಳಿಕ ವ್ಯಾಯಾಮ ಮೊದಲಾಗುತ್ತಿತ್ತು. ಉಪಾಹಾರದ ನಂತರ ಮುಂದಿನ ಹಾದಿಯ ಕ್ಲಿಷ್ಟತೆಯ ಬಗ್ಗೆ ಒಂದಿಷ್ಟು ಮಾಹಿತಿ. ಚಾರಣಕ್ಕೆ ಅಗತ್ಯವಿಲ್ಲದ ವಸ್ತುಗಳನ್ನೆಲ್ಲ ರಕ್‍ಸ್ಯಾಕ್‍ನಲ್ಲಿ ತುಂಬಿ ಅದನ್ನು ಮುಂದಿನ ಕ್ಯಾಂಪ್ ಸೈಟಿಗೆ ಹೊತ್ತು ತರಲು ಹೇಸರಗತ್ತೆಗಳ ಮಾಲೀಕನಿಗೆ ವರ್ಗಾಯಿಸಲಾಗುತ್ತಿತ್ತು. ಚಾರಣದ ತೃಷೆ ತಣಿಸಲು ಬೇಕಾದ ನೀರು ತುಂಬಿದ ಬಾಟಲ್, ಶಕ್ತಿ ನೀಡುವ ಚಾಕೊಲೇಟ್ಸ್, ಡ್ರೈ ಫ್ರೂಟ್ಸ್, ಕ್ಯಾಮೆರಾ, ಬಿಸಿಲಿನಿಂದ ರಕ್ಷಿಸುವ ಟೊಪ್ಪಿಗೆ, ಸನ್‍ಗ್ಲಾಸ್ ಇತ್ಯಾದಿಗಳೆಲ್ಲ ಬ್ಯಾಕ್‍ಪ್ಯಾಕ್ ಸೇರಿ ನಮ್ಮ ಹೆಗಲೇರುತ್ತಿದ್ದವು. ಕ್ಲೌಂಟ್‍ಗೆ ವಿದಾಯ ಹೇಳಿ ಹೊರಟವರಿಗೆ ಹಾದಿ ಸುಗಮವಾಗಿರುವಂತೆ ಕಂಡಿತು. ವಿಶಾಲ ಹುಲ್ಲುಗಾವಲುಗಳನ್ನು ದಾಟುವಾಗ ಬಗೆಬಗೆಯ ಬೆಟ್ಟದ ಹೂಗಳು ದಾರಿ ಉದ್ದಕ್ಕೂ ಅರಳಿನಿಂತು ಶುಭ ಕೋರುವಂತೆ ಕಂಡವು.

ಮಾರ್ಗ ಮಧ್ಯದಲ್ಲಿ ತನ್ನ ಪಹಾಡಿ ಕುರಿ ಮೇಕೆಗಳನ್ನು ಮೇಯಲು ಬಿಟ್ಟು, ಮರವೊಂದರ ನೆರಳಿನಲ್ಲಿ ವಿರಮಿಸುತ್ತಿದ್ದ ಕುರಿಗಾರನೊಬ್ಬನ ದರುಶನವಾಯ್ತು. ಗೈಡ್ ಠಾಕೂರ್, ಆತನ ಹಿಂಡಿನೊಂದಿಗೆ ಬಿಟ್ಟಿದ್ದ ತನ್ನ ಕುರಿಗಳ ಆರೋಗ್ಯದ ಬಗ್ಗೆ ವಿಚಾರಿಸಿದ. ಹೆಚ್ಚು ಏರಿಳಿತಗಳಿಲ್ಲದ ಹಾದಿಯಲ್ಲಿ ಹಾಗೆಯೇ ಮುಂದುವರೆದು, ಕೊನೆಯಲ್ಲಿ ಎದುರಾದ ಕಡಿದಾದ ಎತ್ತರವೊಂದನ್ನು ಕ್ರಮಿಸಿದಾಕ್ಷಣ ಕ್ಯಾಂಪ್ ಒಂದು ಗೋಚರಿಸಿತು. ಅದೇ 9000 ಅಡಿ ಎತ್ತರದಲ್ಲಿದ್ದ ‘ಡೂಡು-ಡಾಗ್ಹ್’.

ಅಂದು ಸಂಜೆ ಸುರಿದ ಮಳೆ, ಆಟದ ಕಾರ್ಯಕ್ರಮಕ್ಕೆ ಎಳ್ಳುನೀರು ಬಿಟ್ಟಿತು. ಮಳೆಮೋಡಗಳನ್ನೇ ಆಭರಣವಾಗಿ ಧರಿಸಿ ಕಂಗೊಳಿಸುತ್ತಿದ್ದ ಪೀರ್ ಪಂಜಾಲ್ ಪರ್ವತಸಾಲುಗಳ ಮನಮೋಹಕ ನೋಟ ನಮ್ಮೆದುರಿಗಿತ್ತು. ಮಳೆ ನಿಂತ ಮರುಗಳಿಗೆಯೇ ನಾವೆಲ್ಲರೂ ಸನಿಹದಲ್ಲೇ ಇದ್ದ ನಿಸರ್ಗ ನಿರ್ಮಿತ ಕಲ್ಲಿನ ಆಸನಗಳ ಮೇಲೆ ಕೂತು, ಕತ್ತಲು ಕವಿಯುವವರೆಗೂ ಪರ್ವತಗಳನ್ನೇ ದಿಟ್ಟಿಸುತ್ತ ಭಾವಪರವಶರಾದೆವು. ದೂರದ ಕಣಿವೆಯೊಂದರಿಂದ ಅದ್ಯಾವುದೊ ಗ್ರಾಮದ ದೇವಸ್ಥಾನದಲ್ಲಿ ಮೊಳಗುತ್ತಿದ್ದ ನಗಾರಿಯ ಸದ್ದು ಅಲೆಅಲೆಯಾಗಿ ತೇಲಿ ಬರುತ್ತಿತ್ತು. ಆಗೊಮ್ಮೆ ಹೀಗೊಮ್ಮೆ ದನಿ ಎತ್ತರಿಸಿ ಕೂಗುತಿದ್ದ ಹಕ್ಕಿಗಳ ಉಲಿತವೂ ಚೇತೋಹಾರಿಯಾಗಿತ್ತು. ಕಣಿವೆಯ ಆಳದಲ್ಲಿ ಹರಿವ ಬಿಯಾಸ್ ನದಿಯ ಜುಳು ಜುಳು ಜೋಗುಳದ ನಿರಂತರ ನಿನಾದ ಹಿನ್ನೆಲೆ ಸಂಗೀತದಂತೆ ಶ್ರುತಿ ಸೇರಿಸಿತ್ತು. ಮತ್ತೆಲ್ಲ ನಿಶ್ಯಬ್ದ! ನಮ್ಮದೇ ಉಸಿರಿನ ಸದ್ದೂ ನಿಚ್ಚಳವಾಗಿ ಕೇಳಿಸುತ್ತಿದ್ದ ಅಪ್ಯಾಯಮಾನ ಕ್ಷಣವದು.

ಐದನೇ ದಿನ ಡೂಡು-ಡಾಗ್ಹ್‍ನಿಂದ ಹನ್ನೊಂದು ಸಾವಿರ ಅಡಿ ಎತ್ತರದಲ್ಲಿದ್ದ ‘ಲಾಂಗ್ಹ’ ಕ್ಯಾಂಪ್ ಸೈಟಿಗೆ ಏರುವಾಗ ಹಿಮದ ದರ್ಶನವಾಯ್ತು. ಪರ್ವತದ ಕೊರಕಲುಗಳಲ್ಲಿ ದಪ್ಪ ಪದರಗಳಾಗಿ ಶೇಖರಗೊಂಡಿದ್ದ ಹಿಮ ಕರಗದೆ ಹಾಗೆಯೇ ಉಳಿದಿತ್ತು. ಪುಟಾಣಿಗಳಿಂದ ಮೊದಲ್ಗೊಂಡು ಗುಂಪಿನ ಎಲ್ಲರೂ ಹಿಮದೆಡೆಗೆ ಧಾವಿಸಿ, ಮುಷ್ಟಿಯಲ್ಲಿ ಎತ್ತಿ ಉಂಡೆ ಮಾಡಿ, ಇತರರೆಡೆಗೆ ಎಸೆಯುತ್ತ ಆಟದಲ್ಲಿ ತೊಡಗುತ್ತಿದ್ದರು. ಕಡಿದಾದ ದಾರಿಯಲ್ಲಿ ಇಂತಹ ಅನೇಕ ಕೊರಕಲುಗಳನ್ನು ದಾಟಿ ಕ್ಯಾಂಪ್ ಸೈಟಿಗೆ ಬಂದಾಗ ಆಶ್ಚರ್ಯವೊಂದು ಕಾದಿತ್ತು. ನಾವು ಉಳಿದುಕೊಳ್ಳಲು ಹಾಕಿದ್ದ ಟೆಂಟ್‌ಗಳನ್ನೇ ಸುತ್ತುವರೆದು ಹಿಮವು ರಾಶಿ ರಾಶಿಯಾಗಿ ಬಿದ್ದಿತ್ತು! ಹಿಮದ ರಾಶಿಯ ಮಧ್ಯೆಯೇ ಹಚ್ಚಹಸುರಿನ ಗಿಡಗಳ ಗುಂಪೊಂದು ಅಂಗೈ ಅಗಲದ ತಿಳಿನೇರಳೆ ಬಣ್ಣದ ಹೂಗಳನ್ನು ಗೊಂಚಲು ಗೊಂಚಲಾಗಿ ಅರಳಿಸಿ ನೋಡುಗರನ್ನು ತನ್ನತ್ತ ಸೆಳೆಯುತ್ತಿತ್ತು. ರೋಡೋಡೆಂಡ್ರಾನ್ ಎಂಬ ಹೂವೆಂದು ಗೈಡ್ ಗೋಪಾಲ್ ತಿಳಿಸುತ್ತಿದ್ದಂತೆ, ಚಾರಣಕ್ಕೆ ಹೊರಡುವ ಮುನ್ನ ಓದಿ ತಿಳಿದದ್ದ ವಿಷಯವೊಂದು ಥಟ್ಟನೆ ನೆನಪಾಗಿ ನಮ್ಮ ಮೊಗವೂ ಅರಳಿತು. ಈ ಹೂವು, ಪರ್ವತಗಳೇ ಜೀವಾಳವಾದ ಹಿಮಾಚಲ ಪ್ರದೇಶದ ‘ರಾಜ್ಯ ಹೂವು’ ಎಂಬ ಗೌರವಕ್ಕೆ ಪಾತ್ರವಾಗಿದ್ದ ಪರ್ವತ ಪುಷ್ಪವಾಗಿತ್ತು.

ಗುರಿ ತಲುಪಿದ ಧನ್ಯತಾಭಾವ.

ಆರನೇ ದಿನ ಮುಂಜಾನೆ ಸ್ಲೀಪಿಂಗ್ ಬೆಡ್‍ನ ಸುಖದಿಂದ ಎದ್ದು ಟೆಂಟ್‍ನಿಂದ ಹೊರಬಂದವರಿಗೆ ವರುಣದೇವ ತುಂತುರಿನ ಸಿಂಚನಗೈದು ಶುಭೋದಯ ಕೋರಿದ. ಮೂರ್ನಾಲ್ಕು ಪದರ ಬೆಚ್ಚನೆಯ ಉಡುಪುಗಳು ಮೈಮೇಲಿದ್ದರೂ ಕೆಳಗಿನ ಕುಲು ಕಣಿವೆಯಿಂದ ಬೀಸುತ್ತಿದ್ದ ಕುಳಿರ್ಗಾಳಿಗೆ ಕೆಳದವಡೆಯ ದಂತಗಳು ಮೇಲ್ದವಡೆಯ ಜೊತೆಗಾರರೊಂದಿಗೆ ಸೇರಿ ಸಂಗೀತ ಕಛೇರಿ ಆರಂಭಿಸಿದ್ದವು. ಬಿಟ್ಟ ಉಸಿರೆಲ್ಲ ಹೊಗೆಯಾಗಿ ಹತ್ತಿರದಲ್ಲೇ ಸುಳಿದಾಡುತ್ತಿತ್ತು. ಕಳೆದ ರಾತ್ರಿ ಹಿಮಾಚ್ಛಾದಿತ ಪರ್ವತ ಶ್ರೇಣಿಗಳ ನೆತ್ತಿಯಿಂದ ಆಚೆ ಬಂದು, ಶುಭ್ರ ಆಕಾಶದ ಹಿನ್ನೆಲೆಯಲ್ಲಿ ಕಂಗೊಳಿಸಿದ್ದ ಬುದ್ಧಪೂರ್ಣಿಮೆಯ ಚಂದ್ರ ಎಲ್ಲರನ್ನೂ ಪುಳಕಿತಗೊಳಿಸಿದ್ದ. ಅವನ ಕನವರಿಕೆಯಲ್ಲೇ ನಿದ್ದೆಗೆ ಜಾರಿದ್ದವರಿಗೆ, ಬೆಳಗಿನ ಬದಲಾದ ವಾತಾವರಣ ಕಂಡು ಗಾಬರಿಯಾಯಿತು. ಅಂದಿನ ಚಾರಣ ಸುದೀರ್ಘವಷ್ಷೇ ಅಲ್ಲದೆ ಕಷ್ಟಕರವೂ ಹೌದೆಂದು ಗೈಡ್‍ಗಳು ನೀಡಿದ್ದ ಮಾಹಿತಿ ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ನಮ್ಮ ಪರ್ವತಾರೋಹಣದ ಗುರಿಯಾಗಿದ್ದ ‘ಸೋರ್‌ತಾಲ್‌’ ಅನ್ನು ಅಂದು ತಲುಪಿ, ಬೇಸ್‍ಕ್ಯಾಂಪಿದ್ದ ಪ್ರಿನಿಯೆಡೆಗೆ ಮರುಪ್ರಯಾಣ ಬೆಳೆಸಬೇಕಿತ್ತು.

ಬೆಳಗ್ಗೆ ಏಳಕ್ಕೇ ಕ್ಯಾಂಪ್ ಸೈಟನ್ನು ಬಿಟ್ಟು ನಮ್ಮ ಅಂದಿನ ಪಯಣವನ್ನು ಆರಂಭಿಸುವುದೆಂದು ಮೊದಲೇ ನಿರ್ಧರಿಸಿಯಾಗಿತ್ತು. ಮಳೆ ಬಂದರೂ ಅದು ನಿಲ್ಲುವಂತಿರಲಿಲ್ಲ. ಅಷ್ಟು ದಿನ ನಮ್ಮನ್ನೆಲ್ಲೂ ಕಾಡದಿದ್ದ ವರುಣದೇವ ಅಂದೇಕೆ ನಮ್ಮ ಮೇಲೆ ಮುನಿದಿದ್ದಾನೆ ಎಂಬ ಭಾವ ಮನದಲ್ಲಿ ಸುಳಿದಾಡಿತು. ಕಳೆದ ದಿನದ ಶುಭ್ರ ಆಕಾಶದ ಆಹ್ಲಾದಕರ ವಾತಾವರಣದಲ್ಲಿ ಎದೆ ಸೆಟೆಸಿ ನಿಂತಂತಿದ್ದ ಪೀರ್ ಪಂಜಾಲ್ ಪರ್ವತ ಸಾಲುಗಳ ಇಂದ್ರಾಸನ, ಇಂದ್ರಕಿಲಾ, ದೇವ್‍ಡಿಬ್ಬ ಪರ್ವತಶ್ರೇಣಿಗಳೆಲ್ಲ ಮಳೆಮೋಡಗಳ ದಟೈಸುವಿಕೆಯಿಂದ ಮೋಡಗಳ ಮೇಲೆಯೇ ತೇಲುತ್ತಿರುವಂತೆ ಭಾಸವಾಗುತ್ತಿದ್ದವು. ಕೆಳಗಿನ ಕುಲು ಕಣಿವೆ ಗೋಚರಿಸದಷ್ಟು ದಟ್ಟು ಮಂಜು. ನೋಡುತ್ತಲೇ ನಿಂತಿರಬೇಕಂಬ ವಾಂಛೆ ಹುಟ್ಟಿಸುತ್ತಿದ್ದ ಕ್ಷಣವದು. ಅಷ್ಟರಲ್ಲಿ ಗೈಡ್ ಗೋಪಾಲ್ ಊದಿದ ಸೀಟಿ ಎಲ್ಲರನ್ನೂ ಎಚ್ಚರಿಸಿತು. ಮಳೆಯ ನಡುವೆಯೇ ಸೋರ್‌ತಾಲ್‌ ಕಡೆಗಿನ ನಮ್ಮ ಆರೋಹಣ ಆರಂಭಗೊಂಡಿತು. ಹಲವರು ಮಳೆಗೆ ಹೆದರಿ ಪಾಂಚೋ (ಮಳೆಯಿಂದ ರಕ್ಷಿಸುವ ಉಡುಪು) ಧರಿಸಿ ಬಂದರು. ವರುಣದೇವನಿಗೆ ನಮ್ಮ ದುಗುಡ ಅರ್ಥವಾಗಿರಬೇಕು! ಸ್ವಲ್ಪ ಸಮಯದಲ್ಲೇ ಮೋಡಗಳೆಲ್ಲ ಚೆದುರಿ, ಮಳೆ ನಿಂತಿತು.

ಅಂದಿನ ಹಾದಿ ಕಡಿದಾಗಿತ್ತು. ಹತ್ತು ಹೆಜ್ಜೆ ಹಾಕುವುದರಲ್ಲಿಯೇ ಉಸಿರು ಬಿರುಸಾಗುತ್ತಿತ್ತು. ತಂಪಾದ ವಾತಾವರಣದಲ್ಲೂ ಮೈ, ಮುಖಗಳಿಂದ ಬೆವರು ಧಾರಾಕಾರವಾಗಿ ಹರಿದು ಬಟ್ಟೆಯೆಲ್ಲ ಒದ್ದೆ. ಮೈಮೇಲಿನ ಜಾಕೆಟನ್ನು ಕಿತ್ತೊಗೆಯುವ ಮನಸ್ಸಾಯಿತು. ಕೆಳಗಿನ ಕಣಿವೆಯಿಂದ ಬೀಸುತಿದ್ದ ಮೈಕೊರೆವ ಶೀತಲಗಾಳಿ, ಬೆವರಿನಿಂದ ಒದ್ದೆಯಾದ ದೇಹವನ್ನು ಒಮ್ಮೆಲೆ ತಣ್ಣಗಾಗಿಸಿ ಘಾಸಿಗೊಳಿಸಬಹುದೆಂಬ ಭಯದಿಂದ ಹಾಗೆ ಮಾಡುವಂತೆಯೂ ಇರಲಿಲ್ಲ. ಬಾಟಲಿಯಲ್ಲಿದ್ದ ತಣ್ಣಗೆ ಕೊರೆಯುವ ನೀರಿನ ಗುಟುಕೊಂದನ್ನು ಬಾಯಿಯಲ್ಲಿ ತುಂಬಿ ಒಂದಿಷ್ಟು ಸಮಯ ಅದನ್ನಲ್ಲಿ ಬಿಸಿಯಾಗಿಸಿ, ಗಂಟಲಿನಲ್ಲಿ ಇಳಿಸಿದರೆ, ಆಹಾ... ಅಪ್ಯಾಯಮಾನ, ಎಂಥ ಸುಖವದು! ದಣಿವಾರಿಸಿಕೊಳ್ಳಲು ಒಂದಿಷ್ಟು ಹೊತ್ತು ಹಾಗೆಯೇ ನಿಂತದ್ದೇ, ಹಿಂದಿನಿಂದ ಗೈಡ್ ಠಾಕೂರ್, ‘ಹೊಂಡ... ಹೊಂಡ...’ಎಂದು ತನ್ನ ಕುಲ್ವಿ (ಕುಲು ಕಣಿವೆಯ ಭಾಷೆ) ಭಾಷೆಯಲ್ಲಿ ಹೊರಡುವಂತೆ ಸೂಚಿಸುತ್ತಿದ್ದ. ಅವನನ್ನು ಶಪಿಸುತ್ತಲೇ ಪಯಣವನ್ನು ಮುಂದುವರೆಸುತ್ತಿದ್ದವು. ಹಾದಿ ದುರ್ಗಮವಾಗುತ್ತಿತ್ತು.

ಕೆಲವು ಕಡೆಗಳಲ್ಲಂತೂ 90 ಡಿಗ್ರಿ ಕೋನದಲ್ಲಿರುವಂತೆ ಭಾಸವಾಗುತ್ತಿತ್ತು. ಹಿಂದೆ ನೋಡದೆ ಒಂದೊಂದೆ ಹೆಜ್ಜೆ ಮುಂದಿಡುತ್ತಾ ಜೀವ ಕೈಲಿಡಿದು ಮೇಲೇರುತ್ತಿದ್ದವರಿಗೆ ಧೈರ್ಯ ತುಂಬಲು ಪೂರ್ಣಿಮಾ ಮತ್ತವರ ಜೊತೆಗಾರ ತಜ್ಞರು ಅಲ್ಲಲ್ಲಿ ನಿಂತು, ಸುಸ್ತಾದವರನ್ನು ಅನಾಮತ್ತು ಎಳೆದು ಮೇಲಿನ ಸುರಕ್ಷಿತ ಸ್ಥಳಕ್ಕೆ ಸೇರಿಸುತ್ತಿದ್ದರು. ಅಂತಹ ಒಂದೊಂದು ಕಡಿದಾದ ದಾರಿಯನ್ನು ಕ್ರಮಿಸಿ ಹಿಂದಿರುಗಿ ನೋಡಿದಾಗ, ಸಾಗಿಬಂದ ಹಾದಿಯ ಕ್ಲಿಷ್ಟತೆ ಅರಿವಾಗಿ ಒಂದು ಕ್ಷಣ ಮೈ ನಡುಗುತ್ತಿತ್ತು. ಎತ್ತರೆತ್ತರಕ್ಕೆ ಏರಿದಂತೆ ಮರಗಿಡಗಳು ಇಲ್ಲವಾದವು. ವಿಶಾಲ ಪರ್ವತದ ಹಾದಿಯೆಲ್ಲ ಹಿಮದಿಂದ ಮುಚ್ಚಿ ಹೋಗಿತ್ತು. ಪ್ರಕೃತಿಯು ದೈವ ಸ್ವರೂಪಿಯಾಗಿ ಕಂಡಿತು. ಹಿಮದ ಮೇಲಿನ ನಡಿಗೆಯ ಕಷ್ಟಕ್ಕೆ ಹೊಂದಿಕೊಂಡು, ಜಾರದಂತೆ ಮೆಲ್ಲ ಮೆಲ್ಲನೆ ಮುಂದಡಿ ಇಡುತ್ತಲೇ ಕಣ್ಣ ಮುಂದಿನ ಬೆರಗನ್ನು ಆಸ್ವಾದಿಸುತ್ತಾ ಮೈಮರೆತವರಿಗೆ ಎಚ್ಚರಿಸಿದ್ದು, ಭುವನ್ ಮತ್ತು ಸಂಗಡಿಗರ ಆನಂದೋನ್ಮಾದ. ನಾವು ನಮ್ಮ ಗುರಿಯನ್ನು ಯಶಸ್ವಿಯಾಗಿ ತಲುಪಿಯಾಗಿತ್ತು.

ಸೋರ್‌ತಾಲ್‌‍ನ ಸೌಂದರ್ಯವನ್ನು ಮನದಣಿಯೆ ಕಣ್ತುಂಬಿಕೊಂಡ ನಂತರ ಪ್ರಿನಿಯೆಡೆಗಿನ ನಮ್ಮ ಅವರೋಹಣ ಶುರುವಾಯಿತು. ಅಪಾಯವಲ್ಲದ ಸ್ಥಳದಲ್ಲಿ ಹಿಮದ ಹಾಸಿನ ಮೇಲೆ ಜಾರಿ ಸಂಭ್ರಮಿಸಿ, ವಿಶಾಲ ಹುಲ್ಲಗಾವಲುಗಳನ್ನು ದಾಟಿ, ಒಟ್ಟು ಎಂಟು ಗಂಟೆಗಳ ಸುದೀರ್ಘ ಚಾರಣದ ನಂತರ ‘ಮಹಿಲಿ ತಾಚ್’ ಎಂಬ ಅತ್ಯಂತ ಸುಂದರ ಕ್ಯಾಂಪ್‍ನಲ್ಲಿ ಅಂದು ತಂಗಲಾಯಿತು. ಮುಂದಿನ ಎರಡು ದಿನದ ಅವರೋಹಣದಲ್ಲಿ ಜನವಸತಿಯಡೆ ಸಾಗಿ, ಸೇಬಿನ ತೋಟಗಳನ್ನು ಹಾದು ಮಾರ್ಗಮಧ್ಯದಲ್ಲಿ ಸಿಕ್ಕ ಸ್ಥಳೀಯರೊಂದಿಗೆ ಒಡನಾಡಿ, ಎಂಟನೆ ದಿನ ಮಧ್ಯಾಹ್ನ ಪ್ರಿನಿಯನ್ನು ತಲುಪಿದೆವು.

(ಹಿಮಪರ್ವತದ ಮರೆಯಿಂದ ಮುಖವೆತ್ತುತ್ತಿರುವ ಬುದ್ಧಪೂರ್ಣಿಮೆಯ ಚಂದ್ರಮ)

**

‘ಸೋರ್‌ತಾಲ್‌’ ಎಂಬ ಪವಿತ್ರ ಕೊಳ

ಪಶ್ಚಿಮ ಹಿಮಾಲಯದ ದೋಲಾಧರ್ ಪರ್ವತಶೇಣಿಯ ಪವಿತ್ರ ಕೊಳ ಈ ‘ಸೋರ್‌ತಾಲ್‌’. ಸ್ಥಳೀಯ ಕುಲ್ವಿ ಭಾಷೆಯ ಸೋರ್ ಎಂಬ ಪದ, ತಾಲ್ ಎಂಬ ಹಿಂದಿ ಪದದೊಂದಿಗೆ ಸೇರಿ ಸೋರ್‌ತಾಲ್‌ ಆಗಿದೆ. ಆದರೆ ಎರಡೂ ಪದಗಳು ‘ಕೊಳ/ಪುಷ್ಕರಣಿ’ ಎಂಬ ಆರ್ಥವನ್ನೇ ಸೂಚಿಸುತ್ತವೆ. ವರ್ಷದಲ್ಲಿ ಎರಡು ಬಾರಿ (ಜೂನ್ ಮತ್ತು ಸೆಪ್ಟಂಬರ್) ಪವಿತ್ರ ಸ್ನಾನಕ್ಕಾಗಿ ಸ್ಥಳೀಯರು ಸಾವಿರ ಸಾವಿರ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರತೀತಿ ಇದೆ. ಚರ್ಮರೋಗವನ್ನು ವಾಸಿ ಮಾಡುವ ಗುಣ ಈ ಕೊಳದ ನೀರಿಗಿದ್ದರೆ, ಮನೋಕ್ಲೇಶವನ್ನು ಕಳೆವ ಶಕ್ತಿ ಈ ಸ್ಥಳಕ್ಕಿದೆಯೆಂಬ ಬಲವಾದ ನಂಬಿಕೆ ಇಲ್ಲಿಯವರದು. ಸೋರ್‌ತಾಲ್‌‍ನ ಈ ಗುಣ ಬೆಳಕಿಗೆ ಬರಲು ಶಾಂಡಲ್ಯ ಋಷಿಯೇ ಕಾರಣ ಎಂಬುದು ಇಲ್ಲಿಯವರ ಅಂಬೋಣ. ಹಾಗಾಗಿಯೇ ಹತ್ತಿರದ ಗ್ರಾಮವೊಂದರಲ್ಲಿ ಈ ಮಹಾಮುನಿಯದೊಂದು ದೇವಾಲಯವಿದೆ.

ದೇಶದಾದ್ಯಂತ, ಇಂದು ಯುವಕ ಯುವತಿಯರಲ್ಲಿ ಚಾರಣದ ಬಗ್ಗೆ ಆಸಕ್ತಿ ಹೆಚ್ಚಿದೆ. ಪರ್ವತಾರೋಹಣದ ಆರಂಭದ ಪಾಠಗಳ ಅನುಭೂತಿಗೆ ಸೋರ್‌ತಾಲ್‌‍ನ ಹಾದಿ ಸೂಕ್ತವಾಗಿರುವುದರಿಂದ ಇಲ್ಲಿಗೆ ಭೇಟಿ ನೀಡುವ ಚಾರಣಿಗರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಶಿಸ್ತುಬದ್ಧ ಚಾರಣದ ಮೂಲಕ ಇಲ್ಲಿನ ಪವಿತ್ರ ವಾತಾವರಣವನ್ನು ಹಾಳುಗೆಡಹದಂತೆ ಎಚ್ಚರವಹಿಸಬೇಕೆಂಬುದು ಇಲ್ಲಿಯವರ ಕಳಕಳಿಯ ಮನವಿ. ಇದು ನಮ್ಮೆಲ್ಲರ ಜವಾಬ್ದಾರಿಯೂ ಹೌದು.

(ಗಿಡಗಂಟಿಗಳ ಚಿಗುರೆಲೆಗಳಿಗೂ ಗುಡ್ಡಗಳ ನೆತ್ತಿಗೂ ರವಿಕಿರಣ ಮಾಡಿ‌ದೆ ಹೊಳಪಿನ ಲೇಪ)

ಚಾರಣಿಗರ ಹೊರೆ ಹೊರುವ ಹೇಸರಗತ್ತೆಗಳು

ಪರ್ವತಾರೋಹಣದ ದುರ್ಗಮ ದಾರಿಗಳಲ್ಲಿ ಸಾಗುವಾಗ ಮೈಮೇಲಿನ ಭಾರ ತುಸು ಹೆಚ್ಚಾದರೂ ಹೆಬ್ಬಂಡೆಯೇ ಹೆಗಲೇರಿದಂತೆ ಭಾಸವಾಗುವುದು ಸಾಮಾನ್ಯ. ಹಾಗೆಂದು ರಾತ್ರಿ ಟೆಂಟ್‍ಗಳಲ್ಲಿ ತಂಗಲು ಬೇಕಾದ ಪರಿಕರಗಳನ್ನು ಬಿಟ್ಟು ಚಾರಣಕ್ಕೆ ಹೊರಡುವುದೂ ಮೂರ್ಖತನವಾಗುತ್ತದೆ. ಅಂತಹ ಸಮಯದಲ್ಲಿ ನಮ್ಮ ಸಹಾಯಕ್ಕೆ ಬರುವುದು ಪರ್ವತ ಪ್ರದೇಶದ ಹೇಸರಗತ್ತೆಗಳು. ಕುದುರೆ-ಕತ್ತೆಗಳ ಸಂಗಮದಿಂದ ಜನಿಸುವ ಹೇಸರಗತ್ತೆಗಳನ್ನು ಜೀವನೋಪಾಯಕ್ಕಾಗಿ ಸಾಕಿ ಸಲಹುವ ಪಂಗಡವೇ ಇಲ್ಲಿದೆ. ಒಬ್ಬೊಬ್ಬರ ಬಳಿಯಲ್ಲೂ ಆರರಿಂದ ಹತ್ತು ಹೇಸರಗತ್ತೆಗಳಿರುತ್ತವೆ. ಕ್ವಿಂಟಾಲ್ ಮಣಭಾರವನ್ನೂ ಹೊತ್ತು ಸಾಗುವ ಕ್ಷಮತೆಯುಳ್ಳ ಪ್ರತಿ ಹೇಸರಗತ್ತೆಯಿಂದ ದಿನಕ್ಕೆ 350-400 ರೂಪಾಯಿಗಳ ಸಂಪಾದನೆಯಾಗುತ್ತದೆ. ಚಾರಣದ ದಿನಗಳಲ್ಲಿ ತಿಂಗಳಿಗೆ ಅರವತ್ತರಿಂದ ಎಪ್ಪತ್ತು ಸಾವಿರ ರೂಪಾಯಿಗಳ ದುಡಿಮೆ. ಆಗಸ್ಟ್‌ನಿಂದ ಅಕ್ಟೋಬರ್‌ವರೆಗಿನ ಸೇಬಿನ ಸೀಸನ್‍ನಲ್ಲಿ ಹಣ್ಣಿನ ಸಾಗಾಣಿಕೆಗಾಗಿ ಇವುಗಳನ್ನು ಬಳಸಿಕೊಳ್ಳಲಾಗುತ್ತದೆ. ಎರಡೂವರೆ ವರ್ಷ ವಯಸ್ಸಿನ ಹೇಸರಗತ್ತೆಗಳನ್ನು ಕುಲುವಿನ ಸಂತೆಯಲ್ಲಿ 60-70 ಸಾವಿರ ರೂಪಾಯಿಗಳಿಗೆ ಖರೀದಿಸಲಾಗುತ್ತದೆ. ನಂತರ 30-35 ವರ್ಷ ವಯಸ್ಸು ತುಂಬುವವರೆಗೂ ಅವು ತಮ್ಮ ಮಾಲೀಕನಿಗಾಗಿ ದುಡಿಯುತ್ತವೆ. ದುಡಿಮೆಯ ಶಕ್ತಿ ಕರಗಿದ್ದೇ, ಮಾಲೀಕ ಅವನ್ನು ಸ್ವತಂತ್ರವಾಗಿಸುತ್ತಾನೆ. ಆಯಸ್ಸಿನ ಕೊನೆಯ ಎಂಟತ್ತು ವರ್ಷಗಳನ್ನು ಕಾಡುಮೇಡುಗಳಲ್ಲಿ ಆಹಾರ ಅರಸುತ್ತಾ ಕಳೆಯುವ ಅವು, ಪ್ರತಿ ವರ್ಷ ಇಡೀ ಪರ್ವತ ಪ್ರದೇಶವೇ ಹಿಮಾವೃತಗೊಳ್ಳುವ ಚಳಿಗಾಲದಲ್ಲಿ ಮಾಲೀಕನ ಮನೆಯಂಗಳಕ್ಕೆ ಬಂದು ತಂಗುತ್ತವೆ. ಅಕ್ಕರೆಯಿಂದಲೇ ಅವುಗಳಿಗೆ ಆಶ್ರಯ ನೀಡುವ ಆತ, ಅವುಗಳೆಡೆಗಿನ ತನ್ನ ಋಣಭಾರವನ್ನು ಕಡಿಮೆ ಮಾಡಿಕೊಳ್ಳಲು ಯತ್ನಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT