ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಲ್‌ಡಿಇಗೆ ಡೆಪ್ಯೂಟಿ ಹೈಕಮಿಷನರ್‌ ಭೇಟಿ

Last Updated 14 ಜನವರಿ 2018, 7:42 IST
ಅಕ್ಷರ ಗಾತ್ರ

ವಿಜಯಪುರ: ಇಲ್ಲಿನ ಪ್ರತಿಷ್ಠಿತ ಬಿಎಲ್‌ಡಿಇ ಸಂಸ್ಥೆಗೆ ಭಾರತದಲ್ಲಿನ ಬ್ರಿಟನ್‌ ಸರ್ಕಾರದ ಡೆಪ್ಯೂಟಿ ಹೈಕಮಿಷನರ್‌ ಡೊಮಿನಿಕ್‌ ಮ್ಯಾಕ್ಲಿಸ್ಟರ್‌ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿತು.

ಸಂಸ್ಥೆಯ ನಿರ್ದೇಶಕ ಬಸನಗೌಡ ಎಂ.ಪಾಟೀಲ ಬ್ರಿಟಿಷ್ ಅಧಿಕಾರಿಗಳ ತಂಡವನ್ನು ಸ್ವಾಗತಿಸಿ, ಬಿ.ಎಲ್.ಡಿ.ಇ. ಸಂಸ್ಥೆಯಿಂದ ಶೈಕ್ಷಣಿಕವಾಗಿ, ಆರೋಗ್ಯ ಕ್ಷೇತ್ರದಲ್ಲಿ ಕೈಗೊಂಡಿರುವ ಕಾರ್ಯಗಳನ್ನು ತಿಳಿಸಿದರು.

ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಸಚಿವರಾದ ಬಳಿಕ, ನಾಲ್ಕುವರೆ ವರ್ಷಗಳಲ್ಲಿ ಜಲ–-ವೃಕ್ಷ–-ಶಿಕ್ಷಣ ಅಭಿಯಾನದಡಿ ಈ ಭಾಗವನ್ನು ಸಂಪೂರ್ಣ ನೀರಾವರಿಗೆ ಒಳಪಡಿಸುವುದು, ಕೋಟಿ ವೃಕ್ಷಗಳನ್ನು ನೆಡಿಸಿ, ಹಸಿರೀಕರಣ ಗೊಳಿಸುವುದು. ಶಿಕ್ಷಣದಲ್ಲಿ ಉತ್ಕೃಷ್ಟತೆ ಸಾಧಿಸುವ ನಿಟ್ಟಿನಲ್ಲಿ ಅನೇಕ ಕಾರ್ಯ ಮಾಡಿದ್ದು, ಇದೀಗ ಈ ಕ್ಷೇತ್ರಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತಿದೆ ಎಂದು ಇದೇ ಸಂದರ್ಭ ಅಧಿಕಾರಿಗಳ ತಂಡಕ್ಕೆ ಮಾಹಿತಿ ನೀಡಿದರು.

ಸಂಸ್ಥೆಯ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಿಂದ ಬಸವಾದಿ ಶರಣರ ಸಾಹಿತ್ಯವನ್ನು ಹಾಗೂ ವಿಜಯಪುರವನ್ನು ಆಳಿದ ಆದಿಲ್‌ಶಾಹಿ ಅರಸರ ಕಾಲದಲ್ಲಿ ರಚಿತವಾದ ಸಾಹಿತ್ಯವನ್ನು ಕನ್ನಡ ಸೇರಿದಂತೆ ವಿವಿಧ ಭಾಷೆಗಳಿಗೆ ಅನುವಾದ ಮಾಡಿರುವ ಕುರಿತು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಬ್ರಿಟಿಷ್ ಹೈಕಮಿಷನರ್ ಇತಿಹಾಸವನ್ನು ಪ್ರೀತಿಸಬೇಕು, ರಕ್ಷಿಸಬೇಕು ಮತ್ತು ಮುಂದಿನ ಪೀಳಿಗೆವರೆಗೆ ಯಥಾವತ್ತಾಗಿ ತಿಳಿಸುವ ಕಾರ್ಯದಲ್ಲಿ ನಾವು ಮುನ್ನಡೆಯಬೇಕು ಎಂದು ಹೇಳಿದರು.

ನಗರದ ಐತಿಹಾಸಿಕ ಬಾವಡಿಗಳ ಪುನಶ್ಚೇತನಗೊಳಿಸಿರುವ ಕುರಿತು, ಟರ್ಕಿಯ ಇಸ್ತಾಂಬುಲ್‌ನಲ್ಲಿ ಕರೇಜ್ ವ್ಯವಸ್ಥೆಯಲ್ಲಿ ಈ ಕಾರ್ಯ ನಡೆದಿದ್ದು, ಅದರ ನಂತರ ವಿಜಯಪುರದಲ್ಲಿಯೇ ಈ ಕೆಲಸ ನಡೆದಿದೆ ಎಂದು ಡೊಮಿನಿಕ್ ಮ್ಯಾಕ್ಲಿಸ್ಟರ್ ಸಂತಸ ವ್ಯಕ್ತಪಡಿಸಿದರು.

ಶಾಸಕ ಪ್ರೊ.ರಾಜು ಆಲಗೂರ, ಬಿ.ಎಲ್.ಡಿ.ಇ. ವಿ.ವಿ.ಯ ಉಪ ಕುಲಪತಿ ಡಾ.ಎಂ.ಎಸ್.ಬಿರಾದಾರ, ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ.ಎಂ.ಎಸ್.ಮದಬಾವಿ, ಡಾ.ವಿ.ಡಿ.ಐಹೊಳ್ಳಿ, ಜಿ.ಎಂ.ದುದಗಿ, ಡಾ.ಮಹಾಂತೇಶ ಬಿರಾದಾರ, ರಾಘವೇಂದ್ರ ಕುಲಕರ್ಣಿ, ಅಜಯ ಪಾಟೀಲ ಗೂಗಿಹಾಳ ಬ್ರಿಟಿಷ್ ಅಧಿಕಾರಿಗಳ ತಂಡಕ್ಕೆ ಉತ್ತರ ಕರ್ನಾಟಕದ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು. ಬ್ರಿಟಿಷ್ ಹೈಕಮಿಷನ್‌ನ ರಾಜಕೀಯ ಮತ್ತು ಆರ್ಥಿಕ ಸಲಹೆಗಾರ ಮಂಜುನಾಥ ಕೆ.ಶ್ರೀಪತಿ ಉಪಸ್ಥಿತರಿದ್ದರು.

ಕ್ಯಾಲೆಂಡರ್‌ ಬಿಡುಗಡೆ: ನೂತನ ವರ್ಷದ ಕ್ಯಾಲೆಂಡರ್ ಬಬಲೇಶ್ವರ ದಿನದರ್ಶಿಕೆಯನ್ನು ಇದೇ ಸಂದರ್ಭ ಬ್ರಿಟಿಷ್ ಡೆಪ್ಯೂಟಿ ಹೈಕಮಿಷನರ್ ಡೊಮಿನಿಕ್ ಮ್ಯಾಕ್ಲಿಸ್ಟರ್ ಬಿಡುಗಡೆಗೊಳಿಸಿದರು

ಬಬಲೇಶ್ವರ ಭಾಗದ ಅಭಿವೃದ್ಧಿ ಕಾರ್ಯಗಳ, ವಿವಿಧ ಗ್ರಾಮಗಳ ಜಾತ್ರೆ ಸೇರಿದಂತೆ ಮತ್ತಿತರ ಎಲ್ಲ ಮಹತ್ವದ ಮಾಹಿತಿ ನೀಡುವ ಈ ದಿನದರ್ಶಿಕೆಯನ್ನು ಐದು ವರ್ಷಗಳಿಂದ ಪ್ರಕಟಿಸಲಾಗುತ್ತಿದೆ.

ರಸ್ತೆ ಕಾಮಗಾರಿಗೆ ಚಾಲನೆ ಇಂದು
ಬಬಲೇಶ್ವರ ವಿಧಾನ ಸಭಾ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಜ 14ರ ಭಾನುವಾರ ಪಾಲ್ಗೊಳ್ಳಲಿದ್ದಾರೆ. ಬಬಲೇಶ್ವರ, ನಿಡೋಣಿ, ನಾಗರಾಳ 8.4 ಕಿ.ಮೀ. ಉದ್ದದ ರಸ್ತೆಯನ್ನು ₹ 4.90 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮ ಗಾರಿಗೆ ಭಾನುವಾರ ಬೆಳಿಗ್ಗೆ 10 ಗಂಟೆಗೆ ನಿಡೋಣಿಯಲ್ಲಿ ಚಾಲನೆ ನೀಡಲಿದ್ದಾರೆ.

ಮಧ್ಯಾಹ್ನ 12ಕ್ಕೆ ಕಾರಜೋಳದಲ್ಲಿ ಕಾರಜೋಳ ಗ್ರಾಮಸ್ಥರು ಏರ್ಪಡಿಸಿರುವ ಮುಳವಾಡ ಏತ ನೀರಾವರಿ ಮಲಘಾಣ ಪಶ್ಚಿಮ ಕಾಲುವೆ, ಬಬಲೇಶ್ವರ ಶಾಖಾ ಕಾಲುವೆ, ಕಾರಜೋಳ ಕೆರೆಗೆ ಗಂಗಾಪೂಜೆ ಸಲ್ಲಿಸುವರು. ನಂತರ ಕಾರಜೋಳದ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡದ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT