ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ್ವಾಸ್ ವಿರಾಸತ್‌ನಲ್ಲಿ ಸಂಗೀತದ ವಿರಾಟ್‌ ರೂಪ

ಪುತ್ತಿಗೆಯಲ್ಲಿ ಸಂಗೀತ ಪ್ರಿಯರ ಸಮ್ಮಿಲನ: ಶಂಕರ್ ಎದೆಯಲ್ಲಿ ಹಿತವಾದ ಕಂಪನ
Last Updated 14 ಜನವರಿ 2018, 7:42 IST
ಅಕ್ಷರ ಗಾತ್ರ

ಮೂಡುಬಿದಿರೆ: ನಲವತ್ತು ಸಾವಿರ ಜನರು ಕೂರುವಷ್ಟು ವಿಶಾಲವಾದ ಬಯಲು. ಬಯಲಿನ ಒಂದು ತುದಿಯಲ್ಲಿ ವಿಶಾಲವಾದ ವೇದಿಕೆ. ಝಗಮಿಸುವ ವೇದಿಕೆಗೆ ಯಕ್ಷಗಾನ ಕಲೆಯ ಸ್ಪರ್ಶ, ಇದರಿಂದ ಇಡೀ ವೇದಿಕೆಗೆ ದೇಸಿ ಮೆರುಗು ಬಂದಿತ್ತು. ಬಯಲಿನ ಆಜುಬಾಜಿನ ತುಂಬೆಲ್ಲಾ ಬೆಳಕಿನ ದೀಪಗಳು ನಗು ತುಳುಕಿಸುತ್ತಿದ್ದವು. ಅಲ್ಲಿ ಕುಳಿತಿದ್ದ ಸಂಗೀತದ ಮನಸ್ಸುಗಳು ಗಾನ ಸುಧೆಯನ್ನು ಕಿವಿ ತುಂಬಿಸಿಕೊಳ್ಳಲು ಕಾತರಿಸುತ್ತಿದ್ದವು.

ಸಮಯ ಆಗ ಸಂಜೆ 6.10. ತಂಗಾಳಿ ಬೀಸುತ್ತಿತ್ತು. ಸಂಜೆಗೆಂಪು ಮೆತ್ತಿಕೊಂಡಿದ್ದ ಆಕಾಶದ ನಡುವೆ ಹಕ್ಕಿಗಳು ಗೂಡುಸೇರುವ ಧಾವಂತದಲ್ಲಿ ಸ್ಪರ್ಧೆಗೆ ಬಿದ್ದಂತೆ ಹಾರುತ್ತಿದ್ದವು. ಕ್ಷಣಹೊತ್ತು ಕಳೆಯಿತು. ವೇದಿಕೆಯ ಮೇಲಿದ್ದ ವಾದ್ಯವೊಂದು ನಕ್ಕಿತು. ಮತ್ತೊಂದು ನುಡಿಯಿತು. ಮಗದೊಂದು ಝೇಂಕರಿಸಿತು. ಇದ್ದಕ್ಕಿದ್ದಂತೆ ಎಲ್ಲವೂ ಮೌನ ತಾಳಿದವು. ಮತ್ತೆ ಕ್ಷಣ ಹೊತ್ತು ಕಳೆಯಿತು. ಏಕಕಾಲಕ್ಕೆ ಎಲ್ಲ ವಾದ್ಯಗಳಿಂದ ನಾದದಲೆ ಹೊಮ್ಮತೊಡಗಿತು. ಅಗ ಪ್ರೇಕ್ಷಕರ ಎದೆಯಲ್ಲಿ ಸಂಗೀತ ಆಸ್ವಾದನೆಯ ಕಿಡಿ ಹೊತ್ತಿಕೊಂಡಿತು. ಎಲ್ಲರೂ ಹುಚ್ಚೆದ್ದು ಕೂಗಿದರು, ನೆಚ್ಚಿನ ಗಾಯಕನನ್ನು ಕಣ್ತುಂಬಿಕೊಂಡು ಪರವಶಗೊಂಡರು...

ಇಂತಹ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದ್ದು ಮೂಡುಬಿದಿರೆಯ ಪುತ್ತಿಗೆಯಲ್ಲಿ ನಡೆಯುತ್ತಿರುವ 24ನೇ ವರ್ಷದ ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಎರಡನೇ ದಿನವಾದ ಶನಿವಾರ ನಡೆದ ಶಂಕರ್ ಮಹದೇವನ್, ಎಹಸಾನ್ ಮತ್ತು ಲಾಯ್ ಅವರ ಸುಮಧುರ ಸಂಗೀತ ಕಾರ್ಯಕ್ರಮ. ಅದಕ್ಕೆ ತಾವು (ಜಾಗ) ನೀಡಿದ್ದು ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆ.

ತಂಡದೊಂದಿಗೆ ವೇದಿಕೆ ಏರಿದ ಶಂಕರ್ ಮಹದೇವನ್ ‘ವಕ್ರತುಂಡ ಮಹಾಕಾಯ' ಗೀತೆಯ ಮೂಲಕ ರಸಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಣಪತಿ ಆರಾಧನೆ ಮಾಡಿ ಮುಗಿಸಿದ ನಂತರ ಶಂಕರ್ ಸಿರಿಕಂಠಕ್ಕೆ ಚಪ್ಪಾಳೆಯ ಸುರಿಮಳೆ ಆಯಿತು. ತಕ್ಷಣವೇ ಅವರು ‘ಗಣನಾಯಕಾಯ ಗಣವಂದಿತಾಯ' ಗೀತೆಗೆ ದನಿಯಾದರು. ಮತ್ತೇ ಪ್ರೇಕ್ಷಕಗಣದಿಂದ ಚಪ್ಪಾಳೆ ವೃಷ್ಟಿ ಆಯಿತು.

ಹಾಡು ಮುಗಿಸಿ ಒಂದು ಕ್ಷಣ ಮೌನಧಾರಣೆ ಮಾಡಿದ ಶಂಕರ್ ಪ್ರೇಕ್ಷಕರನ್ನು ಉದ್ದೇಶಿಸಿ ಹೇಳಿದ್ದು ಹೀಗೆ: ‘ಲವ್ ಯೂ ಮೂಡುಬಿದಿರೆ. ಇಷ್ಟು ವರ್ಷದ ಸಂಗೀತ ಪಯಣದಲ್ಲಿ ನಾನು ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದೇನೆ. ಆದರೆ, ಇಲ್ಲಿ ಸೇರಿರುವ ಜನರನ್ನು ನೋಡಿದರೆ ನನ್ನ ಹೃದಯ ತುಂಬಿ ಬರುತ್ತಿದೆ. ಇಷ್ಟೊಂದು ಜನರ ಮುಂದೆ ಹಾಡುವ ಅವಕಾಶ ಸಿಗುವುದು ತುಂಬ ಅಪರೂಪ. ಇಂತಹದ್ದೊಂದು ಅದ್ಭುತ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ಆಳ್ವಾಸ್ ಪ್ರತಿಷ್ಠಾನಕ್ಕೆ ಧನ್ಯವಾದ. ನಿಮ್ಮ ಮುಂದೆ ಹಾಡುವ ಅವಕಾಶ ಪಡೆದ ನಾನೇ ಧನ್ಯ'.

ತಂಡದ ಸದಸ್ಯರಾದ ರಮಣ್ ಮತ್ತು ಶ್ರೀನಿಧಿ ಘಟಾಟೆ ಜತೆಗೂಡಿ ‘ದಿಲ್ ಚಹ್ತಾ ಹೈ' ಸಿನಿಮಾದ ಗೀತೆ ಹಾಡಿದರು. ಹಾಡಿನ ಮಧ್ಯೆ ಕೆಲವು ಪ್ರೇಕ್ಷಕರು ತಲೆದೂಗುತ್ತಿದ್ದರು. ಮತ್ತೆ ಕೆಲವರು ಚಪ್ಪಾಳೆ ತಟ್ಟಿ ಗಾಯಕರನ್ನು ಪ್ರೋತ್ಸಾಹಿಸುತ್ತಿದ್ದರು. ಹಾಡು ಮುಗಿಸಿದ ಶಂಕರ್ ‘ಚಪ್ಪಾಳೆಯೇ ನನ್ನುಸಿರು. ವಿರಾಸತ್‌ನ ರಿದಂ ಇರುವುದು ಕೂಡ ಚಪ್ಪಾಳೆಯಲ್ಲೇ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ರಾಕ್‍ ಆನ್' ಚಿತ್ರಕ್ಕೆ ದನಿಯಾದ ಶಂಕರ್ ಹಾಡಿನ ಮಧ್ಯೆ ತಂಡದ ಸದಸ್ಯ ಲಾಯ್ ಅವರನ್ನು ಕಾಲೆಳೆದು ಪ್ರೇಕ್ಷಕರಿಗೆ ಮಜಾ ಕೊಟ್ಟರು. ಕೀಬೋರ್ಡ್ ನುಡಿಸುತ್ತಿದ್ದ ಲಾಯ್ ಆ ಕೆಲಸವನ್ನು ಬದಿಗಿಟ್ಟು ತಮ್ಮ ಶಾರೀರದಿಂದ ವಿಶಿಷ್ಟ ಧ್ವನಿಯೊಂದನ್ನು ಹೊರಹೊಮ್ಮಿಸಿದರು. ಆ ಧ್ವನಿಯ ಅರ್ಥವನ್ನು ಶಂಕರ್ ಹೇಳಿದರು. ಲಾಯ್ ‘ಹೃದಯ ಬಯಸಿದೆ, ಮಂಗಳೂರಿನ ಕೋರಿ ಗಸಿಯನ್ನು' ಎಂದಾಗ ಪ್ರೇಕ್ಷಕರು ಹೋ ಎಂದು ಚೀರಿ ಚಪ್ಪಾಳೆ ತಟ್ಟಿದರು.

‘ಇಲ್ಲಿ ಸೇರಿರುವ ಕ್ರೌಡ್ ನೋಡಿದರೆ ಹಾಡೇ ಮರೆತು ಹೋಗುತ್ತದೆ. ಇನ್ನು ಇಲ್ಲಿ ಸೇರಿರುವ ಯುವತಿಯರು, ಮಹಿಳೆಯರನ್ನು ಕಂಡಾಗ ಮನಸ್ಸು ಪುಳಕಗೊಳ್ಳುತ್ತದೆ. ಮಹಿಳೆಯರು ಈ ದೇಶದ ಶಕ್ತಿ. ಇಲ್ಲಿ ಸೇರಿರುವ ಎಲ್ಲ ಬ್ಯೂಟಿಫುಲ್ ಮಹಿಳೆಯರಿಗಾಗಿ ಈ ಗೀತೆ ಅರ್ಪಣೆ' ಎನ್ನುತ್ತಾ ಶಂಕರ್ ಮತ್ತು ಅವರ ತಂಡ ‘ಮೇನೆ ಜಿಸಿ ಅಭಿ ಅಭಿ ದೇಖಾ' ಗೀತೆ ಹಾಡಿ ಮಹಿಳೆಯರನ್ನು ರಂಜಿಸಿದರು. ನಂತರ ಶ್ರೀನಿಧಿ ಘಟಾಟೆ ಅವರ ಸಿರಿಕಂಠದಿಂದ ಹೊಮ್ಮಿದ ’ಸಜ್‍ದಾ' ಸಿನಿಮಾದ ’ರೋಮ್ ರೋಮ್ ತೇರಾ ನಾಮ್ ಪುಖಾರ್' ಗೀತೆ ಪ್ರೇಕ್ಷಕರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯಿತು.

ಅಲ್ಲೀವರೆಗೆ ಹಿಂದಿ ಹಾಡುಗಳನ್ನಷ್ಟೇ ಕೇಳಿ ಪುಳಕಗೊಂಡಿದ್ದ ಸಂಗೀತಾಸಕ್ತರನ್ನು ಕಂಡು ಶಂಕರ್ ‘ಕನ್ನಡ ಗೀತೆ ಹಾಡಬೇಕಾ' ಎಂದಾಗ ಹೌದು ಎನ್ನುವ ಉದ್ಘಾರ ಅಪ್ಪಳಿಸಿತು. ಪ್ರೇಕ್ಷಕರ ಸಂಗೀತೋತ್ಸಾಹ ಕಂಡು ಮತ್ತೊಮ್ಮೆ ಭಾವುಕರಾದ ಶಂಕರ್ ಹೀಗೆ ಹೇಳಿದರು: ’ನನ್ನ ಕಾನ್ಸರ್ಟ್‌ಗಳಿಗೆ ಸಾಕಷ್ಟು ಮಂದಿ ಸೇರುತ್ತಾರೆ. ಅವರೆಲ್ಲರೂ ಕೇಕೆ ಹಾಕುತ್ತಾರೆ. ನೃತ್ಯ ಮಾಡುತ್ತಾರೆ. ಆದರೆ, ಹಾಡನ್ನು ಕೇಳಿ ಎದೆಗೆ ಇಳಿಸಿಕೊಳ್ಳುವವರು ತುಂಬ ಕಡಿಮೆ. ಆಳ್ವಾಸ್ ವೇದಿಕೆಯಲ್ಲಿ ನಿಂತಾಗ ನನಗೆ ಡಿವೈನ್ ಫೀಲ್ ಆಗುತ್ತಿದೆ. ಏಕೆಂದರೆ, ಇಲ್ಲಿ ಸೇರಿರಿರುವ ನೀವೆಲ್ಲರೂ ನಮ್ಮ ಸಂಗೀತವನ್ನು ಮನಸಾರೆ ಆಸ್ವಾದಿಸುತ್ತಿದ್ದೀರಿ. ಈ ಸಂಗತಿಯೇ ನನಗೆ ಸಖತ್ ಮಜಾ ಕೊಡುತ್ತಿದೆ'.

ನಂತರ ಹಂಸಲೇಖ ಸಂಯೋಜನೆಯ ‘ಶ್ರೀ ಮಂಜುನಾಥ' ಚಿತ್ರದ ’ಓಂ ಮಹಾಪ್ರಾಣ ದೀಪಂ' ಗೀತೆ ಹಾಡಿದರು. ಹಾಡಿನ ಕೊನೆಯ ಸಾಲು ತಾರಕ್ಕೇರಿ ನಿಂತಾಗ ಅಲ್ಲಿ ನಿಶ್ಯಬ್ದ ಸೃಷ್ಟಿಯಾಗಿತ್ತು. ಅಲ್ಲೀವರೆಗೆ ಉಸಿರು ಬಿಗಿಹಿಡಿದು ಹಾಡು ಕೇಳುತ್ತಿದ್ದ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಗೈದರು.
***
ಇಂದ್ರಜಿತ್‌ಗೆ ಶಿಳ್ಳೆ; ಕಲಾವಿದರಿಗೆ ಪುಷ್ಪಾರ್ಚನೆ

ಆಳ್ವಾಸ್ ವಿರಾಸತ್‌ನ ಎರಡನೇ ದಿನ ಸುಮಧುರ ಸಂಗೀತ ಕಾರ್ಯಕ್ರಮ ಆರಂಭಕ್ಕೂ ಮುನ್ನ ದೀಪ ಪ್ರಜ್ವಲನ ಕಾರ್ಯಕ್ರಮ ನಡೆಯಿತು. ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಜಯರಾಮ್ ಭಟ್, ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸದಾನಂದ ಶೆಟ್ಟಿ ದೀಪ ಬೆಳಗಿಸಿದರು.

ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರನ್ನು ಕಂಡ ವಿದ್ಯಾರ್ಥಿಗಳು ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಸಂಗೀತ ಕಾರ್ಯಕ್ರಮ ನಡೆಸಿಕೊಡಲು ಬಂದಿದ್ದ ಶಂಕರ್ ಮಹದೇವನ್ ಮತ್ತು ತಂಡಕ್ಕೆ ಆಳ್ವಾಸ್ ವಿದ್ಯಾರ್ಥಿನಿಯರು ಹಣೆಗೆ ತಿಲಕ ಹಚ್ಚಿ, ಆರತಿ ಎತ್ತಿದರು. ನಂತರ, ಅವರಿಗೆ ರೋಸ್ ವಾಟರ್ ಪೂಸಿ ಪುಷ್ಪಾರ್ಚನೆ ಮಾಡಿ ವೇದಿಕೆಗೆ ಕಳುಹಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT