ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಳ್ಳು-ಬೆಲ್ಲಕ್ಕೂ ಆರೋಗ್ಯದ ನಂಟು

Last Updated 14 ಜನವರಿ 2018, 19:30 IST
ಅಕ್ಷರ ಗಾತ್ರ

‘ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೇ ಮಾತಾಡಿ...’ ಎನ್ನುವುದು ಮಕರ ಸಂಕ್ರಮಣದ ಮಹತ್ವಾಕಾಂಕ್ಷೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಎಳ್ಳು ಹಲವು ರೀತಿ ಸಹಕಾರಿ. ಆರೋಗ್ಯ ಸರಿ ಇದ್ದರೆ ಮನಸ್ಸು, ಮನಸ್ಸು ಸರಿ ಇದ್ದರೆ ಒಳ್ಳೆಯ ಮಾತು, ಯೋಚನೆ ಎಲ್ಲವೂ ಸಹಜ. ಹೀಗೆ ಒಳ್ಳೆಯ ಮಾತಿಗೂ ಎಳ್ಳಿನ ಸೇವನೆಗೂ ನಂಟು. ವೈಜ್ಞಾನಿಕವಾಗಿಯೂ ಸಂಕ್ರಾಂತಿ ಅವಧಿಯಲ್ಲಿ ಎಳ್ಳಿನ ಸೇವನೆ ಆರೋಗ್ಯಕ್ಕೆ ಅಗತ್ಯ.

ಚಳಿಗಾಲದಲ್ಲಿ ವಾತ, ಕಫ ಹೆಚ್ಚಿರುತ್ತದೆ. ನೆಗಡಿ ಕೆಮ್ಮು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಶ್ವಾಸಕೋಶದಲ್ಲಿ ಕಫದ ಅಂಶ ಇರುತ್ತದೆ. ದೇಹದಲ್ಲಿನ ಶೀತದ ಅಂಶವನ್ನು ಎಳ್ಳು ತೆಗೆದುಹಾಕುತ್ತದೆ. ತಾಮ್ರ, ಮ್ಯಾಂಗನೀಸ್, ಮೆಗ್ನೀಷಿಯಂ, ರಂಜಕ, ಕ್ಯಾಲ್ಷಿಯಂ, ವಿಟಮಿನ್ ಬಿ1, ಬಿ6 ಅಂಶಗಳನ್ನು ಹೊಂದಿರುವ ಎಳ್ಳಿಗೆ ಸತ್ವ ಗುಣ ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆ. ಎಳ್ಳು ಸೇವನೆಯಿಂದ ದೇಹದಲ್ಲಿನ ವಿಷದ ಅಂಶ ತೆಗೆದುಹಾಕಬಹುದು.

ನಮ್ಮಲ್ಲಿನ ಚೈತನ್ಯವೂ ವೃದ್ಧಿಯಾಗುತ್ತದೆ. ಮೂತ್ರಪಿಂಡದ ಸೋಂಕು, ಹೃದ್ರೋಗ ಬಾರದಂತೆ ತಡೆಯುವ ಸಾಮರ್ಥ್ಯ ಎಳ್ಳಿಗೆ ಇದೆ. ಇದು ಮೂಳೆಗಳಿಗೂ ಶಕ್ತಿಕೊಡುತ್ತದೆ. ಮಾಂಸಖಂಡಗಳ ಜೀವಕೋಶಗಳನ್ನು ಬಲಪಡಿಸುತ್ತದೆ. ಕಬ್ಬಿಣದ ಅಂಶ ಹೆಚ್ಚಿರುವ ಬೆಲ್ಲದ ಸೇವನೆಯಿಂದ ಗಂಟಲು, ಶ್ವಾಸಕೋಶದ ಸೋಂಕುಗಳನ್ನು ತಡೆಯಬಹುದು.

ಚಳಿಗಾಲದಲ್ಲಿ ನಮ್ಮಲ್ಲಿ ಆಹಾರ ಸೇವನೆ ಪ್ರಮಾಣ ಹೆಚ್ಚಿರುತ್ತದೆ. ಹಾಗಾಗಿ ದೇಹದಲ್ಲಿ ಕೊಬ್ಬಿನ ಅಂಶ ಸಂಗ್ರಹ ಅಧಿಕವಾಗಿರುತ್ತದೆ. ಈ ಕೊಬ್ಬು ಕರಗಿಸಲು ಎಳ್ಳು ಸೇವನೆ ಉಪಯುಕ್ತ. ಅಷ್ಟೇ ಅಲ್ಲದೆ ಮಲಬದ್ಧತೆ ತಡೆಯುವ, ಪಚನ ಕ್ರಿಯೆಗೆ ಸಹಕಾರಿಯಾಗುವ ಗುಣ ಇದರಲ್ಲಿದೆ.
ವಾತದ ಸಮಸ್ಯೆ ಹಾಗೇ ಉಳಿದರೆ ಸಂದಿಗಳಲ್ಲಿ, ಬೆನ್ನುಹುರಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದರ ಪರಿಹಾರಕ್ಕೂ ಎಳ್ಳು ಸೇವನೆ ಉತ್ತಮ.

ದೇಹಕ್ಕೆ ಅಗತ್ಯವಿರುವ ವಿಟಮಿನ್ ಇ ಪೋಷಕಾಂಶವನ್ನು ಎಳ್ಳು ಪೂರೈಸುತ್ತದೆ. ರಕ್ತದೊತ್ತಡ ನಿಯಂತ್ರಿಸಲು ಉಪಯುಕ್ತ. ಕರುಳಿನ ಆರೋಗ್ಯವನ್ನೂ ಕಾಪಾಡುತ್ತದೆ. ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುವ ಸಮಸ್ಯೆಯನ್ನು ತಡೆಗಟ್ಟಲು ಸಹ ಎಳ್ಳು ಸೇವನೆ ಸಹಕಾರಿ.

ಹಳೇ ಬೆಲ್ಲ ಬಳಸಿ: ಹೊಸ ಬೆಲ್ಲವು ಕಫ, ಕೆಮ್ಮು ಜಾಸ್ತಿ ಮಾಡುತ್ತದೆ. ಜಠರಾಗ್ನಿಯ ಸಾಮರ್ಥ್ಯ ಕಡಿಮೆ ಮಾಡುತ್ತದೆ. ಅಂದರೆ ಜೀರ್ಣಶಕ್ತಿ ಕುಂಠಿತಗೊಳಿಸುತ್ತದೆ. ಹಾಗಾಗಿ ಒಂದು ವರ್ಷ ಹಳತಾದ, ಮೂರು ವರ್ಷದ ಅವಧಿ ಮೀರದ ಬೆಲ್ಲ ಬಳಸುವುದು ಉತ್ತಮ. ನೋಡಲು ಚಂದ ಎಂದು, ಬೆಳ್ಳನೆಯ ಬೆಲ್ಲ ಉಪಯೋಗಿಸಬಾರದು. ಅವುಗಳಿಗೆ ರಾಸಾಯನಿಕಗಳನ್ನು ಸೇರಿಸಿರುತ್ತಾರೆ.

ಸಂಕ್ರಾಂತಿ ಕಾಳು ಬೇಡ: ಈಚಿನ ವರ್ಷಗಳಲ್ಲಿ ಎಳ್ಳು ಬೆಲ್ಲದ ಜತೆಗೆ ಸಂಕ್ರಾಂತಿ ಕಾಳುಗಳು ಎಂದು ಬಣ್ಣ ಬಣ್ಣದ ಕಾಳುಗಳನ್ನು (ಕುಸುರಿ) ಮಿಶ್ರಣ ಮಾಡಲಾಗುತ್ತಿದೆ. ಆದರೆ ಇದು ಆರೋಗ್ಯಕ್ಕೆ ಉತ್ತಮವಲ್ಲ. ಸಾಂಪ್ರದಾಯಿಕವಾಗಿ ಅನುಸರಿಸುತ್ತ ಬಂದಿರುವ ಎಳ್ಳು, ಬೆಲ್ಲ, ಕೊಬ್ಬರಿ, ಹುರಿಗಡಲೆ, ಕಡಲೆಬೀಜಗಳ ಮಿಶ್ರಣವೇ ಆಯುರ್ವೇದ ಪದ್ಧತಿಯ ಅನುಸಾರ ಆರೋಗ್ಯಕ್ಕೆ ಒಳಿತು.

ಮಿತಿಯಲ್ಲಿರಲಿ: ಎಳ್ಳಿನಿಂದ ಸಾಕಷ್ಟು ಉಪಯೋಗಗಳಿವೆ. ಹಾಗೆಂದು ಇದನ್ನು ಜಾಸ್ತಿ ತಿನ್ನಬಾರದು. ಉತ್ತರಾಯಣದ ಆರಂಭ ಕಾಲದಲ್ಲಿ ಮಾತ್ರ ಎಳ್ಳು ಸೇವಿಸಿದರೆ ಸಾಕು. ದಕ್ಷಿಣಾಯನದ ಚಳಿಯಿಂದ ಉತ್ತರಾಯಣದ ಉಷ್ಣ ವಾತಾವರಣಕ್ಕೆ ನಮ್ಮ ದೇಹ ಹೊಂದಿಕೊಳ್ಳಲು ಇದು ತಯಾರಿ. ನಂತರದಲ್ಲಿ ಈ ಪ್ರಮಾಣದಲ್ಲಿ ಎಳ್ಳಿನ ಸೇವನೆ ಅವಶ್ಯಕತೆ ಇಲ್ಲ. ರಥಸಪ್ತಮಿ ನಂತರದಲ್ಲಿ ಸೂರ್ಯನ ತೀಕ್ಷ್ಣತೆ ಹೆಚ್ಚುತ್ತ ಹೋಗುತ್ತದೆ. ಆಗ ಎಳ್ಳು ಸೇವನೆ ಮಿತಿಯಲ್ಲಿರಬೇಕು.


–ಡಾ. ಕೆ. ಜಯಲಕ್ಷ್ಮಿ,
(ಲೇಖಕರು ಶಿವನಗರದ ಮಾತೃ ಮೆಡಿಕೇರ್‌ನಲ್ಲಿ ವೈದ್ಯರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT