ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗದ ಬಿಕ್ಕಟ್ಟು ಬೇಗ ಪರಿಹಾರವಾಗಲಿ

Last Updated 14 ಜನವರಿ 2018, 19:30 IST
ಅಕ್ಷರ ಗಾತ್ರ

ನಮ್ಮ ದೇಶದಲ್ಲಿ ಸುಪ್ರೀಂ ಕೋರ್ಟ್ ಬಗ್ಗೆ ಪ್ರಜೆಗಳಿಗೆ ಬಹಳಷ್ಟು ನಂಬಿಕೆ ಇದೆ. ಅದು ತಮ್ಮ ಹಕ್ಕುಗಳ ಮತ್ತು ಒಟ್ಟಾರೆ ಜನತಂತ್ರದ ಸಂರಕ್ಷಕ ಎಂದೇ ಜನ ತಿಳಿದಿದ್ದಾರೆ. ಆದರೆ ಅವರ ಈ ವಿಶ್ವಾಸಕ್ಕೆ ಭಂಗ ತರುವಂತಹ ಅನಪೇಕ್ಷಿತ ಬೆಳವಣಿಗೆಗಳು ದುರದೃಷ್ಟಕರ. ಉನ್ನತ ನ್ಯಾಯಾಂಗದ ಒಳಗಿನ ಬಿರುಕು ಮುನ್ನೆಲೆಗೆ ಬಂದಿದೆ. ಮುಖ್ಯ ನ್ಯಾಯಮೂರ್ತಿ ವಿರುದ್ಧ ನಾಲ್ವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳು ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಸುಪ್ರೀಂ ಕೋರ್ಟ್‌ನ್ನು ರಕ್ಷಿಸುವ ಕ್ರಮಗಳ ಕುರಿತು ಮುಖ್ಯ ನ್ಯಾಯಮೂರ್ತಿಗೆ ಮನವರಿಕೆ ಮಾಡುವ ಪ್ರಯತ್ನಗಳು ವಿಫಲವಾಗಿದ್ದರಿಂದ ಅನಿವಾರ್ಯವಾಗಿ ದೇಶದ ಜನರ ಮುಂದೆ ಬಂದಿದ್ದಾಗಿ ಅವರು ಹೇಳಿದ್ದಾರೆ. ತಮ್ಮ ಅಸಮಾಧಾನ, ಅಳಲು ತೋಡಿಕೊಳ್ಳಲು ಈ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿದ್ದು ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲು.

ಹಿರಿತನದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನಂತರದ ಸ್ಥಾನದಲ್ಲಿರುವ ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್‌, ಕುರಿಯನ್‌ ಜೋಸೆಫ್‌, ಮದನ್‌ ಲೋಕೂರ್ ಮತ್ತು ರಂಜನ್‌ ಗೊಗೋಯ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಆಡಿದ ಮಾತುಗಳು ಮತ್ತು ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರದಲ್ಲಿನ ವಿಷಯಗಳು ಗಂಭೀರ ಪರಿಗಣನೆಗೆ ಅರ್ಹವಾದವು. ವಿವಿಧ ಪ್ರಕರಣಗಳ ವಿಚಾರಣೆಗಾಗಿ ಪೀಠಗಳ ನೇಮಕ ಮತ್ತು ಕರ್ತವ್ಯದ ಹಂಚಿಕೆ ಸಂದರ್ಭದಲ್ಲಿ ನ್ಯಾಯಾಲಯ ಹಿಂದಿನಿಂದ ಪಾಲಿಸಿಕೊಂಡ ಬಂದ ನಿಯಮಗಳನ್ನು ಕಡೆಗಣಿಸಲಾಗುತ್ತಿದೆ ಎಂಬುದು ಮುಖ್ಯ ದೂರು. ಇದು ಕೋರ್ಟ್‌ನ ಆಡಳಿತಾತ್ಮಕ ಮತ್ತು ಆಂತರಿಕ ವಿಷಯ.  ಹೀಗಿದ್ದೂ ಕೋರ್ಟ್‌ನ ನಾಲ್ಕು ಗೊಡೆಯ ಒಳಗೇ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗಿಲ್ಲ ಎಂಬುದು ಗಂಭೀರವಾದದ್ದು. ನ್ಯಾಯಾಂಗವನ್ನಷ್ಟೇ ಅಲ್ಲದೆ ಇಡೀ ದೇಶವನ್ನೇ ದಿಗ್ಮೂಢಗೊಳಿಸಿದ ಈ ಬೆಳವಣಿಗೆಗಳ ನಂತರ ವಕೀಲರ ಪ್ರಾತಿನಿಧಿಕ ಸಂಘಟನೆಗಳಾದ ಭಾರತೀಯ ವಕೀಲರ ಪರಿಷತ್ತು ಮತ್ತು ಸುಪ್ರೀಂ ಕೋರ್ಟ್‌ ವಕೀಲರ ಒಕ್ಕೂಟಗಳು ಈ ಬಿಕ್ಕಟ್ಟಿನ ಪರಿಹಾರಕ್ಕೆ ಮುಂದಾಗಿರುವುದು ಸಕಾರಾತ್ಮಕ ನಡೆ. ಸಂವಿಧಾನದಲ್ಲಿ ಉಲ್ಲೇಖಿಸಿರುವ ಮೂರು ಪ್ರಮುಖ ಅಂಗಗಳಲ್ಲಿ ಒಂದಾದ ನ್ಯಾಯಾಂಗದ ಸ್ವಾಯತ್ತತೆ ಕಾಪಾಡುವುದು ಬಹಳ ಮುಖ್ಯ. ಬಾಹ್ಯ ಹಸ್ತಕ್ಷೇಪಕ್ಕೆ ಒಮ್ಮೆ ಅವಕಾಶ ಸಿಕ್ಕರೂ ಅದು ನ್ಯಾಯಾಂಗದ ಸ್ವಾತಂತ್ರ್ಯವನ್ನು, ಆ ಮೂಲಕ ಇಡೀ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ನೂಕಬಲ್ಲದು.

ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್‌ನ ಉಳಿದೆಲ್ಲ ನ್ಯಾಯಮೂರ್ತಿಗಳು ಒಟ್ಟಾಗಿ ಈ ಬಿಕ್ಕಟ್ಟು ಪರಿಹರಿಸಿಕೊಳ್ಳಲು ಮುಂದಾಗುವುದು ಅವಶ್ಯ.  ಇಂತಹ ಪ್ರಕರಣಗಳು ತಮ್ಮ ಮುಂದೆ ಬಂದಾಗ ಕಕ್ಷಿದಾರರಿಗೆ ಕಿವಿಮಾತು ಹೇಳುವ, ನ್ಯಾಯ ನಿರ್ಣಯಿಸುವ ನ್ಯಾಯಮೂರ್ತಿಗಳು ಅದೇ ವಿಧಾನದಲ್ಲಿಯೇ ತಮ್ಮೊಳಗಿನ ಭಿನ್ನಾಭಿಪ್ರಾಯ, ತಪ್ಪುಗ್ರಹಿಕೆ ಪರಿಹರಿಸಿಕೊಳ್ಳಬೇಕು. ನ್ಯಾಯದಾನದ ಕರ್ತವ್ಯ ನಿಭಾಯಿಸುತ್ತ ಬಂದವರಿಗೆ ಇದೇನು ದೊಡ್ಡ ವಿಷಯವೂ ಅಲ್ಲ. ಬಹಿರಂಗವಾಗಿ ಅತೃಪ್ತಿ ಹೊರಹಾಕಿದ ನ್ಯಾಯಮೂರ್ತಿಗಳಲ್ಲಿ ಇಬ್ಬರು, ‘ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ಬಿಕ್ಕಟ್ಟಿಲ್ಲ’ ಎಂದಿರುವುದು, ‘ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ಸಮಸ್ಯೆಗಳಿದ್ದು ಅವನ್ನು ಸರಿಪಡಿಸಬಹುದು’ ಎಂದು ಹೇಳಿರುವುದು ಆಶಾದಾಯಕ ಬೆಳವಣಿಗೆ. ಚರ್ಚೆ, ಮಾತುಕತೆಯಿಂದ ಬಗೆಹರಿಯಲಾಗದ ವಿಷಯ ಯಾವುದೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT