ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೋಷಿತರು ಎಚ್ಚೆತ್ತುಕೊಳ್ಳದಿದ್ದರೆ ಗಂಡಾಂತರ’

ಕೋರೆಗಾಂವ್ ವಿಜಯೋತ್ಸವ; ದಲಿತರ ಕ್ರೀಡಾಕೂಟ
Last Updated 15 ಜನವರಿ 2018, 4:56 IST
ಅಕ್ಷರ ಗಾತ್ರ

ಬೆಳ್ತಂಗಡಿ: ’ದೇಶದಲ್ಲಿ ಸಂವಿಧಾನವೇ ಅಪಾಯದಲ್ಲಿದೆ, ಜಾತ್ಯತೀತ ಮೌಲ್ಯಗಳಿಗೂ ಧಕ್ಕೆಯಾಗುತ್ತಿದೆ. ದಲಿತ, ಶೋಷಿತ ಸಮುದಾಯಗಳು ಎಚ್ಚೆತ್ತುಕೊಳ್ಳದಿದ್ದರೆ ಇಂಥ ಇನ್ನಷ್ಟು ಗಂಡಾಂತರಗಳು ಬರಲಿವೆ’ ಎಂದು ಜಿಲ್ಲಾಪಂಚಾಯಿತಿ ಸದಸ್ಯ ಶೇಖರ್ ಕುಕ್ಕೇಡಿ ಆತಂಕ ವ್ಯಕ್ತಪಡಿಸಿದರು.

ಬಂದಾರು ಗ್ರಾಮದ ನಂದಾದೀಪ ಫ್ರೆಂಡ್ಸ್, ನೇರೋಲ್ದಪಲ್ಕೆ ಇದರ ವತಿಯಿಂದ ಇಲ್ಲಿನ ಕ್ರೀಡಾಂಗಣದಲ್ಲಿ ಕೋರೆಗಾಂವ್ ದಲಿತ ಸೈನಿಕರ ವಿಜಯೋತ್ಸವ ದಿನಾಚರಣೆ ಪ್ರಯಕ್ತ ಜರಗಿದ 7ನೇ ವರ್ಷದ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ತಾಲ್ಲೂಕಿನ ದಲಿತರ ಕ್ರೀಡಾಕೂಟದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಶೋಷಿತರ ಬದುಕು ಸಂವಿಧಾನದ ಮೇಲೆ ನಿಂತಿದೆ, ಅಪಾಯದಲ್ಲಿರುವ ಸಂವಿಧಾನವನ್ನು ಎಷ್ಟೇ ತ್ಯಾಗ, ಬಲಿದಾನಗಳು ಎದುರಾದರೂ ಶೋಷಿತ ವರ್ಗಗಳು ಮಾತೃ ಹೃದಯಿ ಸಂವಿಧಾನವನ್ನು ಕಾಪಾಡಬೇಕಾಗಿದೆ’ ಎಂದರು.

ಉಪ್ಪಿನಂಗಡಿ ಉಪವಲಯ ಅರಣ್ಯಾಧಿಕಾರಿ ಆನಂದ ರಾಥೋಡ್ ಮುಖ್ಯ ಅತಿಥಿಯಾಗಿ ಮಾತನಾಡಿ ‘ದಲಿತ ಸಮುದಾಯವು ಶಿಕ್ಷಣದ ಮಹತ್ವವನ್ನು ಅರಿತು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಸ್ವಾಭಿಮಾನ ಸ್ವಾವಲಂಬನೆಯಿಂದ ಬದುಕಿದಾಗ ಮಾತ್ರ ಏಳಿಗೆ ಸಾಧ್ಯ’ ಎಂದರು.

ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜಾ, ಉಪಾಧ್ಯಕ್ಷ ಯಶವಂತ್ ಬೆಳಾಲು, ನಿವೃತ್ತ ಶಿಕ್ಷಕಿ ಬಿ. ಕಾಂಚನ ಮಾಲ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಶುಭಹಾರೈಸಿದರು. ನಂದಾದೀಪ ಫ್ರೆಂಡ್ಸ್ ಅಧ್ಯಕ್ಷ ವಿನಾಯಕ ಸಭಾಧ್ಯಕ್ಷತೆ ವಹಿಸಿದ್ದರು.
ಕ್ರೀಡಾಕೂಟವನ್ನು ಸುಂದರ ಸಾಲ್ಯಾನ್ ಉದ್ಘಾಟಿಸಿದರು. ಪತ್ರಕರ್ತ ಅಚುಶ್ರೀ ಬಾಂಗೇರು ಪ್ರಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಅಚ್ಯುತ ಪೂಜಾರಿ ಕುರುಡಂಗೆ, ಸತ್ಯಸಾರಮಾಣಿ ಯುವ ವೇದಿಕೆಯ ಅಧ್ಯಕ್ಷ ತನಿಯಪ್ಪ ಪುದ್ದೊಟ್ಟು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಜ್ಯೋತಿ, ಅರಣ್ಯಾಧಿಕಾರಿ ಜಗದೀಶ್, ಅರಣ್ಯ ವೀಕ್ಷಕ ಪ್ರತಾಪ್ ಉಪಸ್ಥಿತರಿದ್ದರು.

ಕ್ರೀಡಾಕೂಟದ ತೀರ್ಪುಗಾರರಾಗಿ ಮೋಹನ್ ಮಾಚಾರ್ ಮತ್ತು ನಿತಿನ್ ಸಹಕರಿಸಿದರು. ಕಾರ್ಯದರ್ಶಿ ಪ್ರಸನ್ನ, ಕೋಶಾಧಿಕಾರಿ ರಮೇಶ್ ಇದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಬಿ.ಕಾಂಚನ ಮಾಲ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಾಂಸ್ಕೃತಿಕ ವೈವಿಧ್ಯಗಳು ನೆರವೇರಿದವು. ಸಂಪತ್ ಕಕ್ಕೆಪದವು  ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT