ಯಂತ್ರದ ಮೊರೆಹೋದ ಮಧ್ಯಮ ವರ್ಗದ ಮಹಿಳೆಯರು

ಜೋಳದ ರೊಟ್ಟಿ ತಯಾರಿಸಲೂ ಬಂತು ಯಂತ್ರ

ರೊಟ್ಟಿ ಮಾಡಲು ಬಾರದ ಹೆಣ್ಣುಮಕ್ಕಳು ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲಕರವಾಗಿರುವುದರಿಂದ ಯಂತ್ರದ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ಕಡಿಮೆ ಅವಧಿಯಲ್ಲಿ (ನಿಮಿಷಕ್ಕೆ ಒಂದು ರೊಟ್ಟಿ) ಹೆಚ್ಚು ರೊಟ್ಟಿ ಸಿದ್ಧಪಡಿಸಲು ಅನುಕೂಲಕರವಾಗಿದೆ.

ರೊಟ್ಟಿ ತಯಾರಿಸುವ ಯಂತ್ರ

ಕಲಬುರ್ಗಿ: ಯಾಂತ್ರೀಕರಣ ವಾಗುತ್ತಿರುವ ಜೀವನ ಪದ್ಧತಿಗೆ ಅನುಗುಣವಾಗಿ ಹೊಸ ಹೊಸ ಯಂತ್ರಗಳ ಆವಿಷ್ಕಾರ ನಿರಂತರವಾಗಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಮಾರುಕಟ್ಟೆಗೆ ಬಂದಿರುವ ರೊಟ್ಟಿ ತಯಾರಿಕೆ ಯಂತ್ರ ಇದೀಗ ಕಲಬುರ್ಗಿಯಲ್ಲೂ ಬಳಕೆಗೆ ಬಂದಿದೆ. ದೈನಂದಿನ ಕೆಲಸದ ಒತ್ತಡದಲ್ಲಿ ಬದುಕುವ ಮಧ್ಯಮ ವರ್ಗದ ಜನರು ಈ ಯಂತ್ರದತ್ತ ಮುಖಮಾಡುತ್ತಿದ್ದಾರೆ.

ರೊಟ್ಟಿ ಮಾಡಲು ಬಾರದ ಹೆಣ್ಣುಮಕ್ಕಳು ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲಕರವಾಗಿರುವುದರಿಂದ ಯಂತ್ರದ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ಕಡಿಮೆ ಅವಧಿಯಲ್ಲಿ (ನಿಮಿಷಕ್ಕೆ ಒಂದು ರೊಟ್ಟಿ) ಹೆಚ್ಚು ರೊಟ್ಟಿ ಸಿದ್ಧಪಡಿಸಲು ಅನುಕೂಲಕರವಾಗಿದೆ. ರೊಟ್ಟಿ ಮಾಡುವ ವೇಳೆ ಉಂಟಾಗುವ ಶಬ್ದದ ಕಿರಿಕಿರಿಯನ್ನು ತಪ್ಪಿಸಲು ಅನೇಕರು ಈ ಯಂತ್ರ ಬಳಕೆಗೆ ಮುಂದಾಗಿದ್ದಾರೆ. ಬಹುಪಯೋಗಿ ತಿನಿಸು ಮಾಡಲು ಅನುಕೂಲ ಇರುವುದು ಇದರ ಖರೀದಿಗೆ ಇರುವ ಮತ್ತೊಂದು ಕಾರಣ.

ಬಹುಪಯೋಗಿ ಯಂತ್ರ: ಈ ಯಂತ್ರದಲ್ಲಿ ಜೋಳದ ರೊಟ್ಟಿ ಮಾತ್ರವಲ್ಲದೇ ಸಜ್ಜೆ ರೊಟ್ಟಿ, ರಾಗಿ ರೊಟ್ಟಿ, ಚಪಾತಿ, ಹೋಳಿಗೆ, ಪೂರಿ, ಹಪ್ಪಳ ಹಾಗೂ ಆಲೂ ಪರಾಟ ತಯಾರಿಸಬಹುದು. ರೊಟ್ಟಿ ಹೊರತುಪಡಿಸಿ ಉಳಿದ ತಿಂಡಿಯನ್ನು ಸಿದ್ಧಪಡಿಸುವಾಗ ತೆಳುವಾದ ಪಿವಿಸಿ ಹಾಳೆಯನ್ನು ಬಳಸಬೇಕು.

ಯಂತ್ರದಲ್ಲಿ ರೊಟ್ಟಿ ಮಾಡುವ ವಿಧಾನ: ಅಗತ್ಯಕ್ಕೆ ತಕ್ಕಂತೆ ಜೋಳದ ಹಿಟ್ಟನ್ನು ಬಿಸಿ ನೀರಿನಲ್ಲಿ ಹಾಕಿ ಹದ ಮಾಡಿಕೊಂಡು ಉಂಡೆಗಳಾಗಿ ಸಿದ್ಧಪಡಿಸಿಕೊಳ್ಳಬೇಕು. ನಂತರ ಯಂತ್ರದ ಮೇಲೆ ಉಂಡೆಗಳನ್ನು ಇಟ್ಟು ಯಂತ್ರದಲ್ಲಿನ ರೋಲರ್‌ ಹಾಗೂ ಹ್ಯಾಂಡಲ್‌ ಒತ್ತಿ ಹಿಡಿದರೆ ಕೆಲ ಕ್ಷಣಗಳಲ್ಲಿ ರೊಟ್ಟಿ ಸಿದ್ಧಗೊಳ್ಳುತ್ತದೆ. ನಮಗೆ ಬೇಕಾದ ಗಾತ್ರಕ್ಕೆ ಸಿದ್ಧವಾದ ರೊಟ್ಟಿಯನ್ನು ಯಂತ್ರದಿಂದ ಹೊರ ತೆಗೆದು ಒಲೆಯ ಮೇಲೆ ಇಟ್ಟು ಬೇಯಿಸಿಕೊಳ್ಳಬೇಕು.

‘ಗೃಹ ಬಳಕೆಯ ರೊಟ್ಟಿ ಯಂತ್ರದ ಮಾರುಕಟ್ಟೆ ಬೆಲೆ ₹6,500. ನಮ್ಮ ಅಂಗಡಿಯಲ್ಲಿ ಗೃಹಬಳಕೆ ಹಾಗೂ ವ್ಯಾಪಾರ ಉದ್ದೇಶದ ಯಂತ್ರಗಳು ಲಭ್ಯವಿದೆ. ವ್ಯಾಪಾರ ದೃಷ್ಟಿಯಿಂದ ಅಭಿವೃದ್ಧಿಪಡಿಸಲಾಗಿರುವ ಯಂತ್ರದಲ್ಲಿ ಗಂಟೆಗೆ 60–100 ರೊಟ್ಟಿಗಳನ್ನು ತಯಾರಿಸಬಹುದು. ತಿಂಗಳಿಗೆ 10 ರಿಂದ 15 ಯಂತ್ರಗಳು ಮಾರಾಟವಾಗುತ್ತಿವೆ‘ ಎನ್ನುತ್ತಾರೆ  ಇಲ್ಲಿಯ ಮೋದಿ ಟ್ರೇಡರ್ಸ್‌ನ ಮಾಲೀಕ ಸಿದ್ದಣ್ಣ ಮೋದಿ.

‘ಅಡುಗೆ ಮನೆಯಲ್ಲಿ ಎಲ್ಲದಕ್ಕೂ ಯಂತ್ರಗಳು ಬಂದಿವೆ. ಆದರೆ ಈ ಭಾಗದಲ್ಲಿ ರೊಟ್ಟಿಯನ್ನು ಹೆಚ್ಚಾಗಿ ಬಳಸುವ ಜನರಿಗೆ ರೊಟ್ಟಿ ಮಾಡಲು ಯಂತ್ರ ಇಲ್ಲ ಎಂಬ ಕೊರಗು ಇತ್ತು. ಈ ಕೊರಗು ನಿವಾರಿಸುವ ನಿಟ್ಟಿನಲ್ಲಿ ಈ ಯಂತ್ರ ಆವಿಷ್ಕರಿಸಿರುವುದರಿಂದ ರೊಟ್ಟಿ ಮಾಡಲು ಕಷ್ಟಪಡಬೇಕಿಲ್ಲ. ಒತ್ತಡದ ಬದುಕಿನಲ್ಲಿ ಜೀವನ
ಸಾಗಿಸುವ ಮಂದಿಗೆ ಇದು ಬಹಳ ನೆರವಾಗಲಿದೆ. ಅಲ್ಲದೆ ರೊಟ್ಟಿ ಮಾಡುವುದನ್ನು ಕಲಿಯಲು ಅನುಕೂಲವಾಗಿದೆ’ ಎನ್ನುತ್ತಾರೆ ಗೃಹಿಣಿ ಸುನೀತಾ.
***
ಇಂದಿನ ದಿನಗಳಲ್ಲಿ ಬಹುತೇಕ ಜನರು ಕೈಯಲ್ಲಿ ರೊಟ್ಟಿ ಮಾಡಲು ಇಷ್ಟಪಡುವುದಿಲ್ಲ. ಹಾಗಾಗಿ ಯಂತ್ರ ಬಳಕೆ ಅನಿವಾರ್ಯ. ನಿತ್ಯ ಹೆಚ್ಚು ರೊಟ್ಟಿ ಬಳಸುವ ಜನರಿಗೆ ಇದು ಅನುಕೂಲ
-ಹೇಮಾವತಿ, ಗೃಹಿಣಿ

Comments
ಈ ವಿಭಾಗದಿಂದ ಇನ್ನಷ್ಟು

ಅಫಜಲಪುರ
ಅವೈಜ್ಞಾನಿಕ ಗೇಟ್: ಬ್ಯಾರೇಜ್‌ ಖಾಲಿ

ಅಫಜಲಪುರ ತಾಲ್ಲೂಕಿನ ದಿಕ್ಸಂಗಾ(ಕೆ) ಗ್ರಾಮದ ಹತ್ತಿರ ಅಮರ್ಜಾ ಬೋರಿ ಹಳ್ಳಕ್ಕೆ ನಿರ್ಮಿಸಿರುವ ಬ್ಯಾರೇಜ್‌ಗೆ ಅವೈಜ್ಞಾನಿಕ ಗೇಟ್ ಅಳವಡಿಸಿದ್ದರಿಂದ ಬ್ಯಾರೇಜ್‌ ಸಂಪೂರ್ಣ ಖಾಲಿಯಾಗಿದೆ. ಈ ಭಾಗದ...

27 May, 2018
ಮಕ್ಕಳ ಮೋಜಿಗಾಗಿ ‘ಸೆನ್ಸರ್‌ ಕಾರಂಜಿ’

ಕಲಬುರ್ಗಿ
ಮಕ್ಕಳ ಮೋಜಿಗಾಗಿ ‘ಸೆನ್ಸರ್‌ ಕಾರಂಜಿ’

27 May, 2018
ಬೇಸಿಗೆಯಲ್ಲೂ ಬತ್ತದ ಪಂಚಲಿಂಗೇಶ್ವರ ಬುಗ್ಗೆ

ಚಿಂಚೋಳಿ
ಬೇಸಿಗೆಯಲ್ಲೂ ಬತ್ತದ ಪಂಚಲಿಂಗೇಶ್ವರ ಬುಗ್ಗೆ

27 May, 2018

ಕಲಬುರ್ಗಿ
ಮತದಾರರ ಪಟ್ಟಿ ಸಿದ್ಧಪಡಿಸಿಕೊಳ್ಳಲು ಸೂಚನೆ

ಜಿಲ್ಲೆಯಲ್ಲಿ 15 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 28ರೊಳಗಾಗಿ ವಿಧಾನಸಭಾ ಮತಕ್ಷೇತ್ರದ ಡಾಟಾಬೇಸ್ ಅನುಗುಣವಾಗಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ತಹಶೀಲ್ದಾರರಿಗೆ...

27 May, 2018

ಕಲಬುರ್ಗಿ
ಮತಗಟ್ಟೆಗಳಿಗೆ ಮೂಲಸೌಕರ್ಯ: ತಾಕೀತು

‘ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಯ ಮತಗಟ್ಟೆಗಳನ್ನು ಆಯಾ ತಾಲ್ಲೂಕಿನ ತಹಶೀಲ್ದಾರರು ಖುದ್ದಾಗಿ ಪರಿಶೀಲಿಸಬೇಕು. ಕನಿಷ್ಠ ಮೂಲಸೌಕರ್ಯ ಒದಗಿಸಿದ ಬಗ್ಗೆ ಎರಡು ದಿನದೊಳಗಾಗಿ ವರದಿ ಸಲ್ಲಿಸಬೇಕು’...

27 May, 2018